ಲಕ್ನೋ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿ ಬಳಿಕ ನಡೆಸಲಾದ ಕ್ಷಿಪ್ರ ಕಾರ್ಯಚರನೆಯಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿರುವುದಾಗಿ ಉತ್ತರ ಪ್ರದೇಶ ಉಗ್ರ ನಿಗ್ರಹ ದಳ ಶುಕ್ರವಾರ ಘೋಷಿಸಿದೆ.


COMMERCIAL BREAK
SCROLL TO CONTINUE READING

ಉತ್ತರ ಪ್ರದೇಶ ಪೊಲೀಸರು ಮತ್ತು ಉಗ್ರ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಸಹರನಪುರ ಜಿಲ್ಲೆಯ ದೇವಬಂದ್‌ನಲ್ಲಿ ಶಹನಾವಾಜ್ ಮತ್ತು ಅಕಿಬ್ ಎಂಬ ಇಬ್ಬರು ಉಗ್ರರನ್ನು ಬಂಧಿಸಿರುವುದಾಗಿ ಡಿಜಿಪಿ ಒ.ಪಿ.ಸಿಂಗ್‌ ಹೇಳಿದ್ದಾರೆ. ಬಂಧಿತ ಶಹನವಾಜ್‌ ಕುಲಗಾಮ್‌ ಪ್ರದೇಶದವನು ಹಾಗೂ ಅಕಿಬ್‌ ಪುಲ್ವಾಮಾದವನಾಗಿದ್ದು, ಶಸ್ತ್ರಾಸ್ತ್ರಗಳು, ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.


ಗುಪ್ತಚರ ಮಾಹಿತಿ ಖಚಿತ ಪಡಿಸಿಕೊಂಡ ನಂತರವೇ ಉಗ್ರ ನಿಗ್ರಹ ದಳ ಕಾರ್ಯಾಚರಣೆ ನಡೆಸಿದೆ. ಶಂಕಿತ ಉಗ್ರರಿಂದ ವಿಡಿಯೊ ತುಣುಕುಗಳು, ಮೊಬೈಲ್‌ನಲ್ಲಿನ ಸಂದೇಶಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. 


ಈ ಇಬ್ಬರೂ ಉಗ್ರರು ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು, ಸಂಘಟನೆಯಲ್ಲಿ ಗ್ರೆನೇಡ್ ಎಕ್ಸ್ ಪರ್ಟ್ ಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 


ಪೊಲೀಸರ ಪ್ರಕಾರ, ಈ ಇಬ್ಬರೂ ಜೈಷ್‌-ಎ-ಮೊಹಮ್ಮದ್‌ ಸಂಘಟನೆಗೆ ಹೊಸ ಯುವಕರನ್ನು ನೇಮಕ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದರು.


ಏತನ್ಮಧ್ಯೆ ಜೆಇಎಂನ ಬಂಧಿತ ಸದಸ್ಯರು ಪುಲ್ವಾಮಾ ದಾಳಿಗೂ ಮುನ್ನವೇ ಉತ್ತರಪ್ರದೇಶಕ್ಕೆ ಬಂದಿದ್ದಾರೋ ಅಥವಾ ನಂತರವೋ ಎಂಬುದನ್ನು ಖಚಿತಪಡಿಸುವುದು ಕಷ್ಟ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.