ಅಗಲಿದ ಅದಮ್ಯ ಚೇತನ ಅನಂತ್ ಕುಮಾರ್ಗೆ ಪ್ರಧಾನಿ ಮೋದಿ ಅಂತಿಮ ನಮನ
ಅನಂತ್ ಕುಮಾರ್ ಅಂತಿಮ ಸಂಸ್ಕಾರ ಇಂದು ನಡೆಯಲಿದೆ. ಬೆಳಗ್ಗೆ 8ಗಂಟೆಯಿಂದ 9-30ರವರೆಗೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯ ನೆಲಮಹಡಿಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ.
ಬೆಂಗಳೂರು: ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ನೇಹಜೀವಿ, ಸದಾ ಕ್ರಿಯಾಶೀಲ ವ್ಯಕ್ತಿಯಾಗಿದ್ದ ಕೇಂದ್ರ ಸಚಿವ ಅನಂತಕುಮಾರ್ ಅವರು ನವೆಂಬರ್ 12ರಂದು ಇಹಲೋಕ ತ್ಯಜಿಸಿದ್ದಾರೆ. ಅನಂತಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು.
ವಿಶೇಷ ವಿಮಾನದ ಮೂಲಕ ಇಂದು ರಾತ್ರಿ 8.30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಬರಮಾಡಿಕೊಂಡರು. ಬಳಿಕ ನೇರವಾಗಿ ಬಸವನಗುಡಿಯಲ್ಲಿರುವ ಅನಂತ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಬಹುಕಾಲದ ಗೆಳೆಯನ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಕಂಬನಿ ಮಿಡಿದ ಮೋದಿ ಅವರು ಕಣ್ಣೀರ ವಿದಾಯ ಹೇಳಿದರು.
ಅನಂತ್ ಕುಮಾರ್ ಮನೆಯವರಿಗೆ ಪ್ರಧಾನಿ ಮೋದಿ ಸಾಂತ್ವನ ಹೇಳಿ ಬಳಿಕ ನವದೆಹಲಿಗೆ ವಾಪಸಾಗಿದ್ದಾರೆ.
ಅಗಲಿದ ಅದಮ್ಯ ಚೇತನ ಅನಂತ್ ಕುಮಾರ್ ಅವರ ಅಂತಿಮ ಸಂಸ್ಕಾರ ಇಂದು ನಡೆಯಲಿದೆ. ಬೆಳಗ್ಗೆ 8ಗಂಟೆಯಿಂದ 9-30ರವರೆಗೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯ ನೆಲಮಹಡಿಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. 10 ಗಂಟೆ ಬಳಿಕ ನ್ಯಾಷನಲ್ ಕಾಲೇಜು ಮೈದಾನಕ್ಕೆ ಪಾರ್ಥಿವ ಶರೀರವನ್ನು ರವಾನಿಸಲಾಗುವುದು. ಅಲ್ಲಿ 1 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಂತರ ಚಾಮರಾಜಪೇಟೆ ಚಿತಾಗಾರಕ್ಕೆ ಮೆರವಣಿಗೆ ತಂದು, ಅಂತಿಮ ವಿಧಿ ವಿಧಾನ ನೆರವೇರಿಸಲಾಗುವುದು.
ಬಿಜೆಪಿ ಕಚೇರಿ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಡಿವೈಎಸ್ಪಿ, ಐವರು ಇನ್ಸ್ಪೆಕ್ಟರ್, 6 ಪಿಎಸ್ಐಗಳು, 220 ಪೊಲೀಸ್ ಪೇದೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.