ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಭುಗಿಲೆದ್ದ ಕೋಲಾಹಲ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಇತ್ತ ಪಶ್ಚಿಮ ಬಂಗಾಳ, ಪಂಜಾಬ್ ಹಾಗೂ ಕೇರಳದಂತಹ ರಾಜ್ಯಗಳ ಸರ್ಕಾರಗಳು ತಮ್ಮ ರಾಜ್ಯದಲ್ಲಿ ಈ ಕಾನೂನನ್ನು ಜಾರಿಗೊಳಿಸಲು ನಿರಾಕರಿಸಿವೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಂಜಾಬ ಮುಖ್ಯಮಂತ್ರಿ, ತಾವು ತಮ್ಮ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಅನುಮತಿಸುವುದಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳು ಈ ಕಾನೂನನ್ನು ಜಾರಿಗೊಳಿಸುವುದರಿಂದ ಹಿಂದೆ ಸರೆಯುವ ಪ್ರಶ್ನೆಯೇ ಇಲ್ಲ ಎಂದಿದೆ. ಗೃಹ ಸಚಿವಾಲಯದ ಮೂಲಗಳು ಈ ಮಾಹಿತಿ ನೀಡಿವೆ. ಈ ಕಾಯ್ದೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸುಪ್ರೀಂ ಕೋರ್ಟ್ ಮೊರೆಹೋಗಿದೆ. ಈ ಕಾನೂನು ಸಮಾನತೆಯ ಅಧಿಕಾರವನ್ನು ಮೊಟಕುಗೊಳಿಸಲಿದೆ ಎಂದು ಪಕ್ಷ ತನ್ನ ಅರ್ಜಿಯಲ್ಲಿ ವಾದಿಸಿದೆ.


COMMERCIAL BREAK
SCROLL TO CONTINUE READING

ಪೌರತ್ವ ಮಸೂದೆ ಕುರಿತು ಪೂರ್ವೋತ್ತರ ರಾಜ್ಯಗಳಲ್ಲಿ ಹಿಂಸಾಚಾರ
ಅತ್ತ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಪೂರ್ವೋತ್ತರದ ರಾಜ್ಯಗಳಲ್ಲಿ ಹಿಂಸಾಚಾರ ಮುಂದುವರೆದಿದೆ. ಅಸ್ಸಾಂನಲ್ಲಿ AASU ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ಮುಂದುವರೆದಿದೆ. ಈ ಪೌರತ್ವ ತಿದ್ದುಪಡಿ ಕಾನೂನನ್ನು ಹಿಂಪಡೆಯುವಂತೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಿಎಂ ಸರ್ವಾನಂದ್ ಸೋನೋವಾಲ್, ಹಿಂಸಾಚಾರಕ್ಕೆ ಮುಂದಾಗಿರುವ ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಇನ್ನೊಂದೆಡೆ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಅಸ್ಸಾಂ ಗವರ್ನರ್ ಜನತೆಯಲ್ಲಿ ಮನವಿ ಮಾಡಿದ್ದಾರೆ. ಈ ಮಸೂದೆ 'ಅಸ್ಸಾಂ ಒಪ್ಪಂದ'ಕ್ಕೆ ಮಾರಕವಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ವಾದ ಮಂಡಿಸಿದ್ದಾರೆ. ಈ ಮಸೂದೆ 'ಅಸ್ಸಾಂ ಒಪ್ಪಂದ'ದ 6ನೇ ಅನುಚ್ಛೇದದ ಉಲ್ಲಂಘನೆಯಾಗಿದ್ದು, 6ನೇ ಅನುಚ್ಚೆದದಲ್ಲಿ ರಾಜ್ಯದ ಸಂಸ್ಕೃತಿ, ಭಾಷೆಯ ಅಸ್ತಿತ್ವದ ರಕ್ಷಣೆ ಮಾಡುವ ಭರವಸೆ ನೀಡಲಾಗಿದೆ ಎಂದಿದ್ದಾರೆ. 


ಸದ್ಯ ರಾಜ್ಯದ ಒಟ್ಟು ಹತ್ತು ಜಿಲ್ಲೆಗಳಲ್ಲಿ ಹಿಂಸಾಚಾರದ ಘಟನೆಗಳು ನಡೆದಿದ್ದು, ಕರ್ಫ್ಯೂ ಜಾರಿಗೊಳಿಸಲಾಗಿದೆ. ಗುವಾಹಾಟಿ ಮತ್ತು ದಿಬ್ರುಗಡ್ ಜಿಲ್ಲೆಗಳಲ್ಲಿ ಕರ್ಫ್ಯೂನಲ್ಲಿ ಸಡಿಲಿಕೆ ನೀಡಲಾಗಿದೆ. ಆ ಬಳಿಕ ಸಾರ್ವಜನಿಕರು ಅಗತ್ಯವಿರುವ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ. ಅಸ್ಸಾಂನಲ್ಲಿ ನಡೆದ ಹಿಂಸಾಚಾರದಲ್ಲಿ ಇದುವರೆಗೆ ನಾಲ್ವರು ಮೃತಪಟ್ಟಿದ್ದಾರೆ. ಡಿಸೆಂಬರ್ 22ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಸ್ಸಾಂನ ಒಟ್ಟು 10 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಯನ್ನೂ ಕೂಡ ಸ್ಥಗಿತಗೊಳಿಸಲಾಗಿದೆ. ಮೇಘಾಲಯದಲ್ಲಿಯೂ ಕೂಡ ಇಂಟರ್ನೆಟ್ ಬಳಕೆಯ ಮೇಲೆ ನಿಷೇಧ ಹೇರಲಾಗಿದೆ. ಶಿಲಾಂಗ್ ನ ಕೆಲ ಪ್ರಾಂತ್ಯಗಳಲ್ಲಿಯೂ ಕೂಡ ಕರ್ಫ್ಯೂ ಜಾರಿಗೊಳಿಸಲಾಗಿದೆ.