ಏನಿದು ಸುಕನ್ಯಾ ಸಮೃದ್ಧಿ ಯೋಜನೆ!
ಈ ಯೋಜನೆಯಡಿ, ನೀವು ವರ್ಷಕ್ಕೆ ಕನಿಷ್ಠ ರೂ. 250 ರಿಂದ ಗರಿಷ್ಠ 1.5 ಲಕ್ಷದವರೆಗೆ ಡಿಪಾಸಿಟ್ ಮಾಡಬಹುದು.
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ 2015ರ ಜನವರಿಯಲ್ಲಿ 'ಸುಕನ್ಯಾ ಸಮೃದ್ಧಿ ಯೋಜನೆ'ಯನ್ನು ಪರಿಚಯಿಸಿದರು. ಈ ಯೋಜನೆಯಡಿ, 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವ ಮೂಲಕ ಆಕೆಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದು.
ಈ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಮಗಳ ಭವಿಷ್ಯವು ಸುರಕ್ಷಿತವಾಗಿರುತ್ತದೆ. ಅಷ್ಟೇ ಅಲ್ಲ ಸುಕನ್ಯಾ ಸಮೃದ್ಧಿ ಯೋಜನೆಯಡಿ ಮಾಡಲಾಗುವ ಹೂಡಿಕೆಗೆ ಶೇಕಡಾ 8.1 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಜೊತೆಗೆ ತೆರಿಗೆ ಲಾಭವೂ ಲಭ್ಯವಿದೆ.
ಈ ಯೋಜನೆ ಮತ್ತಷ್ಟು ಜನರಿಗೆ, ಅದರಲ್ಲೂ ತೀರಾ ಕಡಿಮೆ ಆದಾಯ ಹೊಂದಿರುವವರಿಗೆ ಕೈಗೆಟುಕುವಂತೆ ಮಾಡಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಈ ಯೋಜನೆಯಡಿ, ನೀವು ವರ್ಷಕ್ಕೆ ಕನಿಷ್ಠ ರೂ. 250 ರಿಂದ ಗರಿಷ್ಠ 1.5 ಲಕ್ಷದವರೆಗೆ ಡಿಪಾಸಿಟ್ ಮಾಡಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಮುಖ ಅಂಶಗಳ ಬಗ್ಗೆ ತಿಳಿಯಿರಿ:
1. ಅಂಚೆ ಕಚೇರಿಯಲ್ಲಿ ಅಥವಾ ಯಾವುದೇ ಬ್ಯಾಂಕಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆಯನ್ನು ತೆರೆಯಬಹುದು.
2. ನವಜಾತ ಶಿಶುವಿನಿಂದ 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ 'ಸುಕನ್ಯಾ ಸಮೃದ್ಧಿ' ಉಳಿತಾಯ ಖಾತೆಯನ್ನು ತೆರೆಯಬಹುದಾಗಿದೆ.
3. ಇದೊಂದು ದೀರ್ಘಕಾಲಿನ ಉಳಿತಾಯ ಖಾತೆಯಾಗಿದೆ. ಈ ಖಾತೆ ಆರಂಭಗೊಂಡ ದಿನದಿಂದ 21 ವರ್ಷಗಳವರೆಗೆ ಚಾಲ್ತಿಯಲ್ಲಿ ಇರುತ್ತದೆ.
4. ಯಾವ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆ ತೆರೆಯಲಾಗಿದೆಯೋ ಆಕೆಗೆ 18 ವರ್ಷ ಪೂರ್ಣಗೊಂಡ ನಂತರ, ಆಕೆಯು ತನ್ನ ಖಾತೆಯಲ್ಲಿ ಜಮಾ ಆದ ಹಣದಲ್ಲಿ ಅರ್ಧ ಭಾಗವನ್ನು ಉನ್ನತ ಶಿಕ್ಷಣ, ಮದುವೆಯ ಉದ್ದೇಶಕ್ಕೆ ಬಳಸಬಹುದು.
5. ಒಂದು ಮಗುವಿನ ಹೆಸರಿನಲ್ಲಿ ಕೇವಲ ಒಂದು ಸುಕನ್ಯಾ ಸಮೃದ್ಧಿ ಯೋಜನಾ ಖಾತೆಯನ್ನು ಮಾತ್ರ ತೆರೆಯಬಹುದು.
6. ಆರ್ಥಿಕ ವರ್ಷದಲ್ಲಿ ಕನಿಷ್ಠ 250 ರೂಪಾಯಿ ಮತ್ತು ಗರಿಷ್ಠ 1.5 ಲಕ್ಷ ರೂಪಾಯಿಗಳನ್ನು ಈ ಖಾತೆಯಲ್ಲಿ ಜಮಾ ಮಾಡಬಹುದು.
7. ಎನ್‌ಆರ್‌ಐ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಖಾತೆಯನ್ನು ತೆರೆಯಲಾಗುವುದಿಲ್ಲ.
8. ಈ ಖಾತೆಯಲ್ಲಿ ಠೇವಣಿ ಇರಿಸಿದ ಮೊತ್ತಕ್ಕೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.