ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ರಾಜಕೀಯ ಬಿಕ್ಕಟ್ಟಿನಿಂದಾಗಿ ಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿರುವ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನಾನ್ಯಾಕೆ ರಾಜೀನಾಮೆ ನೀಡಬೇಕು? ಅದರ ಅಗತ್ಯವಾದರೂ ಏನಿದೆ? ಎಂದು ಪ್ರಶ್ನಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನೀಗ ರಾಜೀನಾಮೆ ನೀಡುವ ಅವಶ್ಯಕತೆ ಏನಿದೆ? 2009-10ರಲ್ಲಿ ಯಡಿಯೂರಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ 18 ಶಾಸಕರು ಅವರನ್ನು ವಿರೋಧಿಸಿದ್ದರು. ಆದರೆ ಅಂತಿಮವಾಗಿ ಏನಾಯಿತು?" ಎಂದು ಪ್ರಶ್ನಿಸಿದರು.


ಇದೇ ವೇಳೆ, ಬಂಡಾಯ ಶಾಸಕರ ಜೊತೆ ಚರ್ಚೆ ಮಾಡಲು ಸಾಧ್ಯ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಿಎಂ ಕುಮಾರಸ್ವಾಮಿ ಅವರು, ಶಾಸಕ ಆನಂದ್ ಸಿಂಗ್ ರಾಜೀನಾಮೆ ವಾಪಾಸ್ ಪಡೆಯುತ್ತಾರೆ. ನಾನು ಅವರ ಮನವೊಲಿಕೆ ಮಾಡಿದ್ದೇನೆ. ಇಂದು ಸಂಜೆ ಎಲ್ಲ ಬಂಡಾಯ ಶಾಸಕರು ಬೆಂಗಳೂರಿಗೆ ಬರುತ್ತಿದ್ದು, ಅಂತಿಮ ಕ್ಷಣದವರೆಗೂ ಪ್ರಯತ್ನಿಸುವುದಾಗಿ ಸಿಎಂ ಹೇಳಿದರು. 


ಬುಧವಾರ ರಾಜ್ಯಪಾಲರನ್ನು ಭೇಟಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಿಯೋಗ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಶಾಸಕರ ಬೆಂಬಲವಿಲ್ಲ. ಆದ್ದರಿಂದ ಕುಮಾರಸ್ವಾಮಿ ಅವರಿಗೆ ಸಿಎಂ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ನೈತಿಕ ಹಕ್ಕಿಲ್ಲ. ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದರು.