ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮುಂಬರುವ ಚಂದ್ರ ಅನ್ವೇಷಣಾ ಯೋಜ‌ನೆಯಾದ ಚಂದ್ರಯಾನ - 3ರ ಲ್ಯಾಂಡರ್ ಮತ್ತು ರೋವರ್‌ಗಳಿಗೆ ಚಂದ್ರಯಾನ 2ರ ರೋವರ್ ಮತ್ತು ಲ್ಯಾಂಡರ್‌ಗಳ ಹೆಸರನ್ನೇ ಇಡುವುದಾಗಿ ಘೋಷಿಸಿತ್ತು. ಈ ಲ್ಯಾಂಡರ್‌ಗೆ ವಿಕ್ರಮ್ ಎಂದು ಹೆಸರಿಡಲಾಗಿದ್ದು, ರೋವರ್‌ಗೆ ಪ್ರಗ್ಯಾನ್ ಎಂದು ಹೆಸರಿಡಲಾಗಿದೆ.


COMMERCIAL BREAK
SCROLL TO CONTINUE READING

ಇಸ್ರೋ ಅಧ್ಯಕ್ಷರಾದ ಎಸ್ ಸೋಮನಾಥ್ ಅವರು ಜೂನ್ 29ರ ಗುರುವಾರದಂದು, ವಿಕ್ರಮ್ ಮತ್ತು ಪ್ರಗ್ಯಾನ್ ಹೆಸರುಗಳೇ ಚಂದ್ರಯಾನ-3 ಯೋಜನೆಯ ಭಾಗವಾಗಿರಲಿವೆ ಎಂದಿದ್ದಾರೆ. ಭಾರತ 2019ರಲ್ಲಿ ನಡೆಸಿದ, ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸುವ ಭಾರತದ ಮೊದಲ, ಆದರೆ ವಿಫಲವಾದ, ಚಂದ್ರಯಾನ 2 ಯೋಜನೆಯನ್ನು ನೆನಪಿಸಲು, ಗೌರವಿಸಲು ಅದೇ ಹೆಸರನ್ನು ಮುಂದುವರಿಸಲಾಗಿದೆ. ಲ್ಯಾಂಡರ್ ವಿಕ್ರಮ್‌ಗೆ ಭಾರತೀಯ ಬಾಹ್ಯಾಕಾಶ ಯೋಜನೆಗಳ ಪಿತಾಮಹ ವಿಕ್ರಮ್ ಸಾರಾಭಾಯಿ ಅವರ ನೆನಪಿಗಾಗಿ ಈ ಹೆಸರಿಡಲಾಗಿದ್ದರೆ, ರೋವರ್‌ಗೆ ಪ್ರಗ್ಯಾನ್ ಎಂದು ಹೆಸರಿಡಲಾಗಿದ್ದು, ಅದಕ್ಕೆ ಸಂಸ್ಕೃತದಲ್ಲಿ 'ಬುದ್ಧಿ' ಎಂಬ ಅರ್ಥವಿದೆ.


ಚಂದ್ರಯಾನ - 3 ಯೋಜನೆ : ಚಂದ್ರಯಾನ 3 ಯೋಜನೆಯು ಈ ಹಿಂದಿನ ಚಂದ್ರಯಾನ 2ರ ಮುಂದುವರಿದ ಯೋಜನೆಯಾಗಿದೆ. ಚಂದ್ರಯಾನ 3 ಯೋಜನೆ ಚಂದ್ರನ ಮೇಲ್ಮೈಯಲ್ಲಿ ರೋವರ್ ಇಳಿಸಿ, ಅಲ್ಲಿ ಕಾರ್ಯಾಚರಣೆ ನಡೆಸುವ ಉದ್ದೇಶ ಹೊಂದಿದೆ.


ಚಂದ್ರಯಾನ 3 ಯೋಜನೆಯು ದೇಶೀಯವಾಗಿ ನಿರ್ಮಿಸಲಾದ ಲ್ಯಾಂಡರ್ ಮತ್ತು ರೋವರ್‌ಗಳನ್ನು ಒಳಗೊಂಡಿದೆ. ರೋವರ್ ಚಂದ್ರನ ಮೇಲ್ಮೈಯಲ್ಲಿ ಇಳಿಯುವುದಕ್ಕೆ ಲ್ಯಾಂಡರ್ ಜವಾಬ್ದಾರನಾಗಿದ್ದರೆ, ರೋವರ್ ಚಂದ್ರನ ಮೇಲ್ಮೈಯಲ್ಲಿ ಅನ್ವೇಷಣೆ ನಡೆಸುವ ಜವಾಬ್ದಾರಿ ಹೊಂದಿದೆ. ಚಂದ್ರಯಾನ ಯೋಜನೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಲ್‌ವಿಎಂ3 ರಾಕೆಟ್ ಮೂಲಕ ಉಡಾವಣೆಗೊಳಿಸಲಾಗುತ್ತದೆ.


ಪ್ರೊಪಲ್ಷನ್ ಮಾಡ್ಯುಲ್ ಎನ್ನುವುದು ಚಂದ್ರಯಾನ 3 ಯೋಜನೆಯ ಹೃದಯವಾಗಿದೆ. ಇದು ಲ್ಯಾಂಡರ್ ಮತ್ತು ರೋವರ್‌ಗಳನ್ನು 100 ಕಿಲೋಮೀಟರ್ ಚಂದ್ರನ ಕಕ್ಷೆಗೆ ಒಯ್ಯುವ ಜವಾಬ್ದಾರಿ ಹೊಂದಿದೆ. ಒಂದು ಬಾರಿ ಚಂದ್ರನ ಕಕ್ಷೆಯನ್ನು ತಲುಪಿದ ಬಳಿಕ, ಲ್ಯಾಂಡರ್ ಪ್ರೊಪಲ್ಷನ್ ಮಾಡ್ಯುಲ್‌ನಿಂದ ಬೇರ್ಪಟ್ಟು, ಚಂದ್ರನ ಕಡೆಗೆ ಇಳಿಯತೊಡಗುತ್ತದೆ. ಬಳಿಕ ರೋವರ್ ಚಂದ್ರನ ಮೇಲ್ಮೈಯನ್ನು ಅನ್ವೇಷಿಸಲು ಆರಂಭಿಸುತ್ತದೆ. ಪ್ರೊಪಲ್ಷನ್ ಮಾಡ್ಯುಲ್ ಒಂದು ಮಹತ್ವದ ಅಂಗವಾಗಿದ್ದು, ಚಂದ್ರಯಾನ 3ರ ಯಶಸ್ಸಿಗೆ ಇದು ಅತ್ಯವಶ್ಯಕವಾಗಿದೆ.


ಚಂದ್ರ ಭೂಮಿಯಿಂದ ಅಂದಾಜು 384,400 ಕಿಲೋಮೀಟರ್ ದೂರದಲ್ಲಿದೆ. 100 ಕಿಲೋಮೀಟರ್‌ಗಳ ಚಂದ್ರನ ಕಕ್ಷೆ ತುಂಬಾ ಕೆಳಗಿನ ಕಕ್ಷೆಯಾಗಿದೆ. ಅಂದರೆ, ಅದು ಚಂದ್ರನ ಮೇಲ್ಮೈಗೆ ಸಾಕಷ್ಟು ಹತ್ತಿರದಲ್ಲಿದೆ. ಇದನ್ನು ಇನ್ನಷ್ಟು ವಿವರಿಸಬೇಕೆಂದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಭೂಮಿಯನ್ನು 400 ಕಿಲೋಮೀಟರ್‌ಗಳ ಎತ್ತರದಲ್ಲಿ ಸುತ್ತುತ್ತದೆ. ಆದ್ದರಿಂದ, 100 ಕಿಲೋಮೀಟರ್‌ಗಳ ಚಂದ್ರನ ಕಕ್ಷೆ ಐಎಸ್ಎಸ್‌ನ ನಾಲ್ಕನೇ ಒಂದು ಅಂತರ ಹೊಂದಿದೆ.


ಚಂದ್ರಯಾನ 3ರ ಪ್ರೊಪಲ್ಷನ್ ಮಾಡ್ಯುಲ್ ಸ್ಪೆಕ್ಟ್ರೋ - ಪೋಲಾರಿಮೆಟ್ರಿ ಆಫ್ ಹ್ಯಾಬಿಟೇಬಲ್ ಪ್ಲಾನೆಟ್ ಅರ್ತ್ (SHaPE) ಎಂಬ ಪೇಲೋಡ್ ಹೊಂದಿದೆ. ಈ ಪೇಲೋಡ್ ಚಂದ್ರನ ಕಕ್ಷೆಯಿಂದ ಭೂಮಿಯ ಸ್ಪೆಕ್ಟ್ರಲ್ ಮತ್ತು ಪೋಲಾರಿಮೆಟ್ರಿಕ್ ಅಳತೆಯನ್ನು ಅಧ್ಯಯನ ನಡೆಸಲಿದೆ. ಸ್ಪೆಕ್ಟ್ರಲ್ ಅಳತೆಗಳು ಯಾವುದೇ ಮೂಲದಿಂದ, ಬೇರೆ ಬೇರೆ ತರಂಗಾಂತರಗಳಲ್ಲಿ ಎಷ್ಟು ಬೆಳಕು ಬರುತ್ತದೆ ಎಂಬುದನ್ನು ತಿಳಿಸಿದರೆ, ಪೋಲಾರಿಮೆಟ್ರಿಕ್ ಅಳತೆಗಳು ಬೆಳಕಿನ ಅಲೆಗಳ ದಿಕ್ಕನ್ನು ವಿವರಿಸುತ್ತವೆ. ಈ ಅಳತೆಗಳು ಚಂದ್ರನ ಕಕ್ಷೆಯಿಂದ ಭೂಮಿಯ ವಾತಾವರಣ ಮತ್ತು ಮೇಲ್ಮೈಯನ್ನು ಅಧ್ಯಯನ ನಡೆಸುತ್ತವೆ.


ಚಂದ್ರಯಾನ 2ರ ಯಶಸ್ಸು ಮತ್ತು ಸವಾಲುಗಳ ಮೇಲೆ ಅಭಿವೃದ್ಧಿ ಹೊಂದಿದೆ ಚಂದ್ರಯಾನ 3 : ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ಗಳು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸಲು ವಿಫಲವಾದ್ದರಿಂದ ಚಂದ್ರಯಾನ 2 ಯೋಜನೆಗೆ ಹಿನ್ನಡೆಯಾಯಿತು. ತಮ್ಮ ಪೇಲೋಡ್‌ಗಳೊಂದಿಗೆ ಲ್ಯಾಂಡರ್ ಮತ್ತು ರೋವರ್‌ಗಳು ಕಳೆದು ಹೋದದ್ದು ಇಸ್ರೋಗೆ ಸಾಕಷ್ಟು ನಿರಾಶೆ ತಲೆದೋರುವಂತೆ ಮಾಡಿತು. ಆದರೆ, ಇಸ್ರೋ ಈ ಹಿನ್ನಡೆಯಿಂದ ಪಾಠ ಕಲಿತಿದ್ದು, ಚಂದ್ರಯಾನ 3 ಯೋಜನೆ ಯಶಸ್ವಿಯಾಗಲಿದೆ ಎಂಬ ಆತ್ಮವಿಶ್ವಾಸ ಹೊಂದಿದೆ.


ಚಂದ್ರನ ಮೇಲ್ಮೈ ಮತ್ತು ವಾತಾವರಣದ ಅನ್ವೇಷಣೆ: ಯೋಜನಾ ವಿವರಗಳು


ಚಂದ್ರಯಾನ 3 ಒಂದು 3,900 ಕೆಜಿಯ ಸ್ಪೇಸ್ ಕ್ರಾಫ್ಟ್ ಆಗಿದ್ದು, 43.5 ಮೀಟರ್ ಉದ್ದವಿರುವ ಜಿಎಸ್ಎಲ್‌ವಿ ಮಾರ್ಕ್ - 3 ಅಥವಾ ಎಲ್ಎಂವಿ3 ರಾಕೆಟ್ ಮೂಲಕ ಉಡಾವಣೆಗೊಳಿಸಲಾಗುತ್ತದೆ. ಈ ರಾಕೆಟ್ ಅನ್ನು 'ಬಾಹುಬಲಿ' ಎಂದೂ ಕರೆಯಲಾಗುತ್ತದೆ. ಈ ಉಡಾವಣೆ ಶ್ರೀಹರಿಕೋಟಾದಿಂದ ನಡೆಯಲಿದ್ದು, ಪ್ರೊಪಲ್ಷನ್ ಮಾಡ್ಯುಲ್ ಸ್ಪೇಸ್ ಕ್ರಾಫ್ಟ್ ಚಂದ್ರನೆಡೆಗೆ ತಲುಪುವಂತೆ ನೋಡಿಕೊಳ್ಳುತ್ತದೆ.


ಜಿಎಸ್ಎಲ್‌ವಿ ಎಂಕೆ 3 ಒಂದು ಮೂರು ಹಂತಗಳ ರಾಕೆಟ್ ಆಗಿದ್ದು, ಉಪಗ್ರಹಗಳನ್ನು ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್‌ಗಳು (ಜಿಟಿಓ) ಹಾಗೂ ಲೋ ಅರ್ತ್ ಆರ್ಬಿಟ್ (ಎಲ್ಇಒ) ಗಳಿಗೆ ಕೊಂಡೊಯ್ಯಬಲ್ಲದು. ಇದರ ಹಾರಾಟ ತೂಕ 640 ಟನ್ ಆಗಿದ್ದು, 4 ಟನ್ ವರ್ಗದ ಉಪಗ್ರಹವನ್ನು ಜಿಟಿಒಗೆ ಮತ್ತು 8,000 ಕೆಜಿಗಳಷ್ಟು ತೂಕದ ಪೇಲೋಡನ್ನು ಎಲ್ಇಒಗೆ ಒಯ್ಯಬಲ್ಲದು. ಈ ರಾಕೆಟ್‌ಗೆ ಎರಡು ಘನ ಸ್ಟ್ರಾಪ್ ಆನ್ ಬೂಸ್ಟರ್‌ಗಳು ಶಕ್ತಿ ನೀಡುತ್ತವೆ. ಇದು ಒಂದು ಲಿಕ್ವಿಡ್ ಕೋರ್ ಹಂತ ಮತ್ತು ಒಂದು ಹೈ ಥ್ರಸ್ಟ್ ಕ್ರಯೋಜೆನಿಕ್ ಅಪ್ಪರ್ ಸ್ಟೇಜ್ ಹೊಂದಿದೆ.


ವಿಕ್ರಮ್ ಲ್ಯಾಂಡರ್ (1,752 ಕೆಜಿ ಮತ್ತು 738 ವ್ಯಾಟ್ ಶಕ್ತಿ ಉತ್ಪಾದನಾ ಸಾಮರ್ಥ್ಯ) ಮತ್ತು ಪ್ರಗ್ಯಾನ್ ರೋವರ್‌ಗಳನ್ನು (26 ಕೆಜಿ ಮತ್ತು 50 ವ್ಯಾಟ್ ಶಕ್ತಿ ಉತ್ಪಾದನಾ ಸಾಮರ್ಥ್ಯ) ಒಳಗೊಂಡಿರುವ ಲ್ಯಾಂಡರ್ - ರೋವರ್ ಕಾನ್‌ಫಿಗರೇಶನ್ ಅನ್ನು ಪ್ರೊಪಲ್ಷನ್ ಮಾಡ್ಯುಲ್ (2,148 ಕೆಜಿ, 758 ವ್ಯಾಟ್ ಶಕ್ತಿ ಉತ್ಪಾದನಾ ಸಾಮರ್ಥ್ಯ) ಚಂದ್ರನ 100 ಕಿಲೋಮೀಟರ್ ಕಕ್ಷೆಗೆ ಸೇರಿಸುತ್ತದೆ. ಪ್ರೊಪಲ್ಷನ್ ಮಾಡ್ಯುಲ್ ಒಂದು ಬೇರೆಯೇ ಸ್ಪೇಸ್ ಕ್ರಾಫ್ಟ್ ಆಗಿದ್ದು, ಇದನ್ನು ಉಡಾವಣಾ ಸಂದರ್ಭದಲ್ಲಿ ಲ್ಯಾಂಡರ್ - ರೋವರ್ ಕಾನ್ಫಿಗರೇಶನ್ನಿಗೆ ಅಳವಡಿಸಲಾಗುತ್ತದೆ.


ಒಂದು ಬಾರಿ ಪ್ರೊಪಲ್ಷನ್ ಮಾಡ್ಯುಲ್ ಲ್ಯಾಂಡರ್ - ರೋವರ್ ಕಾನ್‌ಫಿಗರೇಶನ್ನನ್ನು ಚಂದ್ರನ ಕಕ್ಷೆಗೆ ತಲುಪಿಸಿದ ಬಳಿಕ ಮಾಡ್ಯುಲ್ ಬೇರ್ಪಡುತ್ತದೆ. ಲ್ಯಾಂಡರ್ - ರೋವರ್ ಕಾನ್ಫಿಗರೇಶನ್ ತನ್ನ ಪಾಡಿಗೆ ತಾನು ಚಂದ್ರನ ಮೇಲ್ಮೈಯೆಡೆಗೆ ಚಲಿಸುತ್ತದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇದು ಚಂದ್ರ ಸ್ಪರ್ಶ ನಡೆಸಲು ಪ್ರಯತ್ನಿಸುತ್ತದೆ.


ಲ್ಯಾಂಡರ್ ಮಾಡ್ಯುಲ್ ವಿಕ್ರಮ್ ರೋವರ್ ಪ್ರಗ್ಯಾನ್ ಅನ್ನು ಹೊರ ಬಿಟ್ಟ ಬಳಿಕ, ಪ್ರಗ್ಯಾನ್ ಚಂದ್ರನ ಮೇಲ್ಮೈಯಲ್ಲಿ ಇನ್ ಸಿತು ರಾಸಾಯನಿಕ ವಿಶ್ಲೇಷಣೆ ನಡೆಸಲಿದೆ. ಅಂದರೆ, ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯಿಂದ ಯಾವುದೇ ಮಾದರಿಗಳನ್ನು ಭೂಮಿಗೆ ತಾರದೆ, ಅಲ್ಲಿಯೇ ಅದರ ರಾಸಾಯನಿಕ ಸಂಯೋಜನೆಗಳನ್ನು ವಿಶ್ಲೇಷಿಸುತ್ತದೆ. ಇದರಿಂದಾಗಿ ವಿಜ್ಞಾನಿಗಳಿಗೆ ಚಂದ್ರನ ಉಗಮ ಮತ್ತು ಚಂದ್ರ ಹೇಗೆ ನಿರ್ಮಾಣವಾಯಿತು ಎಂದು ತಿಳಿಯಲು ನೆರವಾಗುತ್ತದೆ.


ಚಂದ್ರನನ್ನು ತಿಳಿಯುವ ಪ್ರಯತ್ನಗಳು: ಯೋಜನೆಯ ವೈಜ್ಞಾನಿಕ ಪೇಲೋಡ್‌ಗಳು


ಎ. ಲ್ಯಾಂಡರ್‌ನಲ್ಲಿರುವ ವೈಜ್ಞಾನಿಕ ಪೇಲೋಡ್‌ಗಳು


1. ರೇಡಿಯೋ ಅನಾಟಮಿ ಆಫ್ ಮೂನ್ ಬೌಂಡ್ ಹೈಪರ್ ಸೆನ್ಸಿಟಿವ್ ಲೋನೋಸ್ಫಿಯರ್ ಆ್ಯಂಡ್ ಅಟ್ಮಾಸ್ಫಿಯರ್ (ಆರ್‌ಎಎಂಬಿಎಚ್ಎ): ಇದು ಚಂದ್ರನ ವಾತಾವರಣ ಮತ್ತು ಅಯಾನೋಸ್ಫಿಯರ್ ಅನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸುವ ಉಪಕರಣವಾಗಿದೆ. ಅಯನೋಸ್ಫಿಯರ್ ಎನ್ನುವುದು ಚಂದ್ರನ ಸುತ್ತಲಿನ ಕಣಗಳಾದರೆ, ವಾತಾವರಣ ಎನ್ನುವುದು ಚಂದ್ರನ ಸುತ್ತಲೂ ಇರುವ ಅನಿಲಗಳ ತೆಳ್ಳನೆಯ ಪದರವಾಗಿದೆ. ರಂಭಾ ಪ್ರಯೋಗ ಚಂದ್ರನ ವಾತಾವರಣ ಮತ್ತು ಅಯನೋಸ್ಫಿಯರ್ ಅನ್ನು ಅಧ್ಯಯನ ಮಾಡಲು ರೇಡಿಯೋ ತರಂಗಗಳನ್ನು ಬಳಸುತ್ತದೆ. ಇದು ಚಂದ್ರನ ವಾತಾವರಣವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ.


2. ಚಂದ್ರಾಸ್ ಸರ್ಫೇಸ್ ಥರ್ಮೋ - ಫಿಸಿಕಲ್ ಎಕ್ಸ್‌ಪರಿಮೆಂಟ್ (ChaSTE): ಇದು ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳನ್ನು ಅಧ್ಯಯನ ನಡೆಸುವ ವೈಜ್ಞಾನಿಕ ಉಪಕರಣವಾಗಿದೆ. ಯಾವುದೇ ಮೇಲ್ಮೈಯ ಉಷ್ಣತೆಯ ಗುಣಲಕ್ಷಣಗಳೆಂದರೆ ಅದು ಉಷ್ಣವನ್ನು ಹೇಗೆ ಹೀರಿಕೊಳ್ಳುತ್ತದೆ, ಸಂಗ್ರಹಿಸುತ್ತದೆ ಮತ್ತು ಬಿಡುಗಡೆಗೊಳಿಸುತ್ತದೆ ಎನ್ನುವುದಾಗಿದೆ. ಈ ಚಾಸ್ಟ್ ಪ್ರಯೋಗ ಬೇರೆ ಬೇರೆ ಕಡೆ ಚಂದ್ರನ ಮೇಲ್ಮೈ ತಾಪಮಾನ ಹೇಗಿರುತ್ತದೆ ಎಂದು ತಿಳಿಯಲು ನೆರವಾಗುತ್ತದೆ. ಅದರೊಡನೆ, ಉಷ್ಣದ ವಿಚಾರದಲ್ಲಿ ಚಂದ್ರನ ಮೇಲ್ಮೈ ಹೇಗೆ ವರ್ತಿಸುತ್ತದೆ ಎಂದು ತಿಳಿಯಲಾಗುತ್ತದೆ.


3. ಇನ್ಸ್ಟ್ರುಮೆಂಟ್ ಫಾರ್ ಲೂನಾರ್ ಸೀಸ್ಮಿಕ್ ಆ್ಯಕ್ಟಿವಿಟಿ (ಐಎಲ್ಎಸ್ಎ): ಈ ವೈಜ್ಞಾನಿಕ ಉಪಕರಣ ಚಂದ್ರನಲ್ಲಿನ ಕಂಪನಗಳನ್ನು ಕುರಿತು ಅಧ್ಯಯನ ಮಾಡುತ್ತದೆ. ಸೀಸ್ಮಿಕ್ ಎಂದು ಕರೆಯಲ್ಪಡುವ ಈ ಕಂಪನಗಳು ಭೂಕಂಪದ (ಚಂದ್ರನ ಮೇಲಾಗಿರುವುದರಿಂದ ಚಂದ್ರ ಕಂಪನ ಅಥವಾ ಮೂನ್ ಕ್ವೇಕ್ ಎನ್ನಬಹುದು) ಪರಿಣಾಮವಾಗಿ ಚಂದ್ರನ ಮೇಲ್ಮೈ ಕಂಪಿಸುವುದಾಗಿದೆ. ಅದರೊಡನೆ ಉಲ್ಕೆಗಳ ಪತನವೂ ಇದಕ್ಕೆ ಕಾರಣವಾಗುತ್ತದೆ. ಐಎಲ್ಎಸ್ಎ ಒಂದು ಸೀಸ್ಮೋಮೀಟರ್ ಸಹಾಯದಿಂದ ಚಂದ್ರನ ಮೇಲ್ಮೈಯ ಕಂಪನಗಳನ್ನು ಅಳೆಯುತ್ತದೆ. ಇದು ಚಂದ್ರನ ಒಳಮೈ ಮತ್ತು ಚಂದ್ರ ಕಂಪನಗಳ ಇತಿಹಾಸವನ್ನು ತಿಳಿಯಲು ನೆರವಾಗುತ್ತದೆ.


4. ಲೇಸರ್ ರೆಟ್ರೋಫ್ಲೆಕ್ಟರ್ ಅರೇ (ಎಲ್ಆರ್‌ಎ): ಅಮೆರಿಕಾದ ನಾಸಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಈ ಉಪಕರಣ ಚಂದ್ರ ಮತ್ತು ಭೂಮಿಯ ನಡುವಿನ ಅಂತರವನ್ನು ಅತ್ಯಂತ ನಿಖರವಾಗಿ ಅಳೆಯಲು ನೆರವಾಗುತ್ತದೆ. ಎಲ್ಆರ್‌ಎ ಎನ್ನುವುದು ಸಣ್ಣ ಕನ್ನಡಿಗಳ ಸಂಗ್ರಹವಾಗಿದ್ದು, ಇದು ಭೂಮಿಗೆ ಲೇಸರ್ ಕಿರಣಗಳನ್ನು ಪ್ರತಿಫಲಿಸುತ್ತದೆ. ಲೇಸರ್ ಕಿರಣಗಳು ಮರಳಿ ಭೂಮಿಗೆ ತೆರಳಲು ತೆಗೆದುಕೊಳ್ಳುವ ಸಮಯದ ಆಧಾರದಲ್ಲಿ, ನಾವು ಭೂಮಿ ಮತ್ತು ಚಂದ್ರರ ನಡುವಿನ ಅಂತರವನ್ನು ಲೆಕ್ಕಾಚಾರ ಮಾಡಬಹುದು.


ಬಿ. ರೋವರ್‌ನಲ್ಲಿರುವ ವೈಜ್ಞಾನಿಕ ಉಪಕರಣಗಳು


1. ಆಲ್ಫಾ ಪಾರ್ಟಿಕಲ್ ಎಕ್ಸ್ ರೇ ಸ್ಪೆಕ್ಟ್ರೋಮೀಟರ್ (ಎಪಿಎಕ್ಸ್ಎಸ್): ಎಪಿಎಕ್ಸ್ಎಸ್ ಚಂದ್ರನ ಮೇಲ್ಮೈನ ಧಾತುಗಳ ಸಂಯೋಜನೆಯನ್ನು ವಿಶ್ಲೇಷಿಸಲು ಪೂರಕವಾಗಿದೆ. ಎಪಿಎಕ್ಸ್ಎಸ್ ಉಪಕರಣ ಚಂದ್ರನ ಮೇಲ್ಮೈಗೆ ಆಲ್ಫಾ ಧಾತುಗಳನ್ನು ಪ್ರಯೋಗಿಸುತ್ತದೆ. ಈ ಧಾತುಗಳು ಚಂದ್ರನ ಮೇಲ್ಮೈಯೊಡನೆ ಹೇಗೆ ವರ್ತಿಸುತ್ತವೆ ಎನ್ನುವುದರ ಆಧಾರದಲ್ಲಿ ನಮಗೆ ಚಂದ್ರನಲ್ಲಿ ಯಾವ ಯಾವ ಧಾತುಗಳಿವೆ ಎಂದು ತಿಳಿಯುತ್ತದೆ. ಈ ಮಾಹಿತಿಗಳು ನಮಗೆ ಚಂದ್ರನ ರಚನೆ ಮತ್ತು ಅಭಿವೃದ್ಧಿಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ.


2. ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (ಎಲ್ಐಬಿಎಸ್): ಈ ವೈಜ್ಞಾನಿಕ ಉಪಕರಣ ನಮಗೆ ಚಂದ್ರನ ಬಂಡೆಗಳ ಧಾತುಗಳ ಸಂಯೋಜನೆ ಮತ್ತು ಗುಣಲಕ್ಷಣಗಳನ್ನು ತಿಳಿಯಲು ನೆರವಾಗುತ್ತದೆ. ಎಲ್ಐಬಿಎಸ್ ಉಪಕರಣ ಲೇಸರ್ ಅನ್ನು ಬಳಸಿಕೊಂಡು ಬಂಡೆಯ ಸಣ್ಣ ಪಾಲನ್ನು ಆವಿಯಾಗುವಂತೆ ಮಾಡುತ್ತದೆ. ಬಳಿಕ ಆವಿಯಾದ ಬಂಡೆಯ ಭಾಗದಿಂದ ಹೊರಬರುವ ಬೆಳಕನ್ನು ವಿಶ್ಲೇಷಿಸುತ್ತದೆ. ಈ ಮಾಹಿತಿಗಳು ನಮಗೆ ಆ ಬಂಡೆಯಲ್ಲಿ ಯಾವ ಯಾವ ಧಾತುಗಳಿವೆ ಮತ್ತು ಅವುಗಳು ಯಾವ ರೀತಿಯಲ್ಲಿ ಹಂಚಿಕೆಯಾಗಿವೆ ಎನ್ನುವುದನ್ನು ತಿಳಿಸುತ್ತವೆ. ಇದರ ಮೂಲಕ ನಾವು ಚಂದ್ರನ ಭೂವಿಜ್ಞಾನ ಮತ್ತು ಉಗಮವನ್ನು ಅರ್ಥ ಮಾಡಿಕೊಳ್ಳಬಹುದು.


ಸಿ. ಪ್ರೊಪಲ್ಷನ್ ಮಾಡ್ಯುಲ್‌ನಲ್ಲಿರುವ ಪೇಲೋಡ್


1. ಸ್ಪೆಕ್ಟ್ರೋ ಪೋಲಾರಿಮೆಟ್ರಿ ಆಫ್ ಹ್ಯಾಬಿಟೇಬಲ್ ಪ್ಲಾನೆಟ್ ಅರ್ತ್ (SHaPE): ಶೇಪ್ ಒಂದು ವೈಜ್ಞಾನಿಕ ಉಪಕರಣವಾಗಿದ್ದು, ಇದು ಭೂಮಿಯಿಂದ ಚಂದ್ರನ ಕಕ್ಷೆಯೆಡೆಗೆ ಬರುವ ಬೆಳಕನ್ನು ಅಧ್ಯಯನ ಮಾಡುತ್ತದೆ. ಇದು ಬೆಳಕು ಹೇಗೆ ಪೋಲಾರೈಸ್ಡ್ ಆಗಿದೆ ಎಂದು ತಿಳಿಯುವ ಮೂಲಕ, ವಾತಾವರಣದ ಅಂಶಗಳ ಕುರಿತು ಮಾಹಿತಿ ನೀಡುತ್ತದೆ. ಈ ಮಾಹಿತಿಗಳು ಭೂಮಿಯ ಹವಾಮಾನ ಮತ್ತು ವಾತಾವರಣವನ್ನು ತಿಳಿಯಲು ನೆರವಾಗುತ್ತದೆ ಮತ್ತು ಇತರ ವಾಸಯೋಗ್ಯ ಗ್ರಹಗಳನ್ನು ಹುಡುಕಲು ನೆರವಾಗುತ್ತದೆ.


(ಪೋಲರೈಸೇಷನ್ ಅಥವಾ ಧ್ರುವೀಕರಣ ಎನ್ನುವುದು ಬೆಳಕಿನ ಒಂದು ಲಕ್ಷಣವಾಗಿದ್ದು, ವಸ್ತುಗಳ ಗುಣಗಳನ್ನು ತಿಳಿಯಲು ನೆರವಾಗುತ್ತದೆ. ಉದಾಹರಣೆಗೆ, ವಾತಾವರಣವು ಬೆಳಕನ್ನು ಅದರ ದ್ರುವೀಕರಣಕ್ಕೆ ಅನುಗುಣವಾಗಿ ಹರಡುತ್ತದೆ. ಆದ್ದರಿಂದ ಇದನ್ನು ಭೂಮಿಯ ವಾತಾವರಣವದ ಅಧ್ಯಯನ ನಡೆಸಲು ಬಳಸಬಹುದಾಗಿದೆ. ಬೇರೆ ಬೇರೆ ವಸ್ತುಗಳು ಬೆಳಕನ್ನು ಹೀರಿಕೊಳ್ಳುವ ಅಥವಾ ಹೊರಬಿಡುವ ಪ್ರಮಾಣ ಭಿನ್ನವಾಗಿರುವುದರಿಂದ, ಬೆಳಕಿನ ಧ್ರುವೀಕರಣದ ಮೂಲಕ ವಸ್ತುಗಳ ಆಕಾರವನ್ನು ಕುರಿತು ತಿಳಿಯಲು ಸಾಧ್ಯವಾಗುತ್ತದೆ. ಇಲ್ಲಿ ಪೋಲರೈಸ್ಡ್ ಅಥವಾ ಧ್ರುವೀಕರಣ ಎಂದರೆ, ಬೆಳಕಿನ ತರಂಗಗಳ ವಿದ್ಯುತ್ ಕ್ಷೇತ್ರ ಒಂದೇ ದಿಕ್ಕಿನಲ್ಲಿ ಕಂಪಿಸುತ್ತವೆ. ಇದು ಅನ್ ಪೋಲರೈಸ್ಡ್ ಬೆಳಕಿಗೆ ಹೋಲಿಸಿದರೆ ಭಿನ್ನವಾಗಿದ್ದು, ಇಲ್ಲಿ ವಿದ್ಯುತ್ ಕ್ಷೇತ್ರ ಎಲ್ಲ ದಿಕ್ಕುಗಳಿಗೂ ಕಂಪಿಸುತ್ತದೆ. ಬೆಳಕನ್ನು ಪೋಲರೈಸಿಂಗ್ ಫಿಲ್ಟರ್ ಮೂಲಕ ಹಾಯಿಸುವುದರಿಂದ ಪೋಲರೈಸ್ಡ್ ಬೆಳಕನ್ನು ನಿರ್ಮಿಸಬಹುದು. ಇದರಿಂದಾಗಿ ಬೆಳಕನ್ನು ನಿರ್ದಿಷ್ಟ ದಿಕ್ಕಿನಲ್ಲಿ ಹಾಯುವಂತೆ ಮಾಡಬಹುದು).


ಚಂದ್ರಯಾನ 2: ವೈಫಲ್ಯಕ್ಕೆ ಹಾದಿ ಮಾಡಿದ ಸಾಫ್ಟ್‌ವೇರ್ ದೋಷ


ಭಾರತದ ಮೊತ್ತಮೊದಲ ಲ್ಯಾಂಡರ್ ಯೋಜನೆಯಾದ ಚಂದ್ರಯಾನ 2 ಚಂದ್ರನ ದಕ್ಷಿಣ ಧ್ರುವದಲ್ಲಿ ಮೊತ್ತ ಮೊದಲ ಬಾರಿಗೆ ಇಳಿಯುವ ಉದ್ದೇಶ ಹೊಂದಿತ್ತು. ಆದರೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಕೇವಲ 2.1 ಕಿಲೋಮೀಟರ್ ದೂರದಲ್ಲಿದ್ದಾಗ ಭೂಮಿಯೊಡನೆ ಸಂವಹನ ಕಳೆದುಕೊಂಡಿತು. ಸೆಪ್ಟೆಂಬರ್ 7, 2019ರಂದು ಲ್ಯಾಂಡರ್ ಜೋರಾಗಿ ಚಂದ್ರನ ಮೇಲೆ ಪತನಗೊಂಡಿತು. ಇದರಿಂದಾಗಿ ಮೊದಲ ಪ್ರಯತ್ನದಲ್ಲೇ ಚಂದ್ರನ ಮೇಲಿಳಿಯುವ ಸಾಧನೆ ಮಾಡಬೇಕೆಂಬ ಭಾರತದ ಕನಸು ಛಿದ್ರಗೊಂಡಿತ್ತು.


ಚಂದ್ರನ ಮೇಲೆ ಇಳಿಯುವ ಪ್ರಯತ್ನ ನಡೆಸಿದ ಭಾರತದ ಮೊದಲ ಪ್ರಯೋಗವಾದ ಚಂದ್ರಯಾನ 2 ಜುಲೈ 22, 2019ರಂದು ಉಡಾವಣೆಗೊಂಡಿತು. ಹಲವು ಆರ್ಬಿಟಲ್ ಮನೂವರ್‌ಗಳನ್ನು ನಡೆಸಿದ ಬಳಿಕ, ವಿಕ್ರಮ್ ಲ್ಯಾಂಡರ್ ಆಗಸ್ಟ್ 20, 2019ರಂದು ಚಂದ್ರನ ಕಕ್ಷೆಗೆ ಪ್ರವೇಶಿಸಿತು. ಸೆಪ್ಟೆಂಬರ್ 6, 2019ರಂದು ವಿಕ್ರಮ್ ಮುಖ್ಯ ಬಸ್ ಆರ್ಬಿಟರ್‌ನಿಂದ ಬೇರ್ಪಟ್ಟು, ಚಂದ್ರನೆಡೆಗೆ ಇಳಿಯಲು ಆರಂಭಿಸಿತು. ಇನ್ನೇನು ಚಂದ್ರನ ಮೇಲ್ಮೈಗೆ ಕೇವಲ 2.1 ಕಿಲೋಮೀಟರ್ ಇದೆ ಎನ್ನುವಷ್ಟರಲ್ಲಿ, ಸೆಪ್ಟೆಂಬರ್ 7, 2019ರ ಮಧ್ಯರಾತ್ರಿ 1:53ರ ವೇಳೆಗೆ ಸಂವಹನ ಕಡಿತಗೊಂಡು, ಚಂದ್ರನ ಮೇಲ್ಮೈಗೆ ಬಿದ್ದು ಹೋಯಿತು. ವರದಿಗಳ ಪ್ರಕಾರ, ಈ ವೈಫಲ್ಯ ಒಂದು ಸಾಫ್ಟ್‌ವೇರ್ ವೈಫಲ್ಯದ ಕಾರಣದಿಂದಾಗಿತ್ತು.


ಪಥ ಯಾಕೆ ಬದಲಾಯಿತು?


ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈನಿಂದ 2.2 ಕಿಲೋಮೀಟರ್ ಎತ್ತರದಲ್ಲಿರುವ ತನಕವೂ ಲ್ಯಾಂಡರ್ ನಿಗದಿತ ಪಥದಲ್ಲೇ ಸಾಗಿತ್ತು. ಆದರೆ, 2.1 ಕಿಲೋಮೀಟರ್ ಇರುವಾಗ, ಲ್ಯಾಂಡರ್‌ನ ಪಥ ನಿರೀಕ್ಷಿತ ಪಥದಿಂದ ಬದಲಾಗಿತ್ತು. ಇದರ ಪರಿಣಾಮವಾಗಿ, ಲ್ಯಾಂಡರ್ ಭೂಮಿಯೊಡನೆ ಸಂವಹನ ಕಳೆದುಕೊಂಡು, ಯೋಜನೆ ಯಾವ ಹಂತದಲ್ಲಿದೆ ಎನ್ನುವುದು ತಿಳಿಯದಾಯಿತು. ಈ ಪಥ ಬದಲಾವಣೆ ಚಂದ್ರನ ಮೇಲ್ಮೈಯ 2.1 ಕಿಲೋಮೀಟರ್ ಮತ್ತು 0.2 ಕಿಲೋಮೀಟರ್ ಮಧ್ಯದಲ್ಲಾಗಿತ್ತು.


ಯೋಜನಾ ವೈಫಲ್ಯದ ವಿಶ್ಲೇಷಣೆ


ಫೈಲ್ಯೂರ್ ಅನಾಲಿಸಿಸ್ ಕಮಿಟಿ (ಎಫ್ಎಸಿ) ತನ್ನ ಅಂತಿಮ ವರದಿಯಲ್ಲಿ ಚಂದ್ರಯಾನ 2ರ ವೈಫಲ್ಯಕ್ಕೆ ಸಾಫ್ಟ್‌ವೇರ್ ದೋಷವೇ ಪ್ರಮುಖ ಕಾರಣವಾಗಿತ್ತು. ಅದರಿಂದಲೇ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ನಡೆಸಲು ಸಾಧ್ಯವಾಗಲಿಲ್ಲ ಎಂದಿತು. ಈ ಸಾಫ್ಟ್‌ವೇರ್ ವೈಫಲ್ಯದ ಕಾರಣದಿಂದಾಗಿ ಲ್ಯಾಂಡರ್ ಚಂದ್ರನ ಮೇಲ್ಮೈನಿಂದ ಕೊಂಚವೇ ದೂರದಲ್ಲಿ ನಿಯಂತ್ರಣ ತಪ್ಪಿ, ಪತನಗೊಂಡಿತು. ಲ್ಯಾಂಡರ್‌ನ ವೇಗವೂ ಉದ್ದೇಶಿತ ವೇಗಕ್ಕಿಂತ ಸಾಕಷ್ಟು ಹೆಚ್ಚಾಗಿದ್ದು, ಎತ್ತರದ ಲೆಕ್ಕಾಚಾರದಲ್ಲೂ ತಪ್ಪಾಗಿರುವ ಸಾಧ್ಯತೆಗಳಿವೆ.


ಚಂದ್ರಯಾನ 2ರ ಸಫಲತೆಗಳು


ಚಂದ್ರಯಾನ 2 ಯೋಜನೆ ಅದರ ಮೂಲ ಉದ್ದೇಶವಾದ, ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸುವುದನ್ನು ಸಾಧಿಸಲು ಸಾಧ್ಯವಾಗದಿದ್ದರೂ, ಅದರ ಆರ್ಬಿಟರ್ ಯಶಸ್ವಿಯಾಗಿ ಕಾರ್ಯಾಚರಿಸಲು ಆರಂಭಿಸಿತು. ಆ ಬಳಿಕ ಆರ್ಬಿಟರ್ ಚಂದ್ರನ ಮೇಲ್ಮೈ ಹಾಗೂ ವಾತಾವರಣದ ಕುರಿತು ಸಾಕಷ್ಟು ಮಾಹಿತಿಗಳನ್ನು ಒದಗಿಸತೊಡಗಿತು.


ಈ ಆರ್ಬಿಟರ್ ಗರಿಷ್ಠ ಏಳು ವರ್ಷಗಳ ಕಾರ್ಯಾವಧಿ ಹೊಂದಿದೆ. ಈ ಕಾರಣದಿಂದಲೇ ಚಂದ್ರಯಾನ 3 ಕೇವಲ ರೋವರ್ ಮತ್ತು ಲ್ಯಾಂಡರ್‌ಗಳನ್ನು ಒಯ್ಯಲಿದೆ.


ಈ ಆರ್ಬಿಟರ್ ಹೊಂದಿರುವ 9 ಇನ್ ಸಿತು ವೈಜ್ಞಾನಿಕ ಉಪಕರಣಗಳು ಚಂದ್ರನ ಸ್ಥಳಾಕೃತಿ ಚಿತ್ರಿಸಲು, ಖನಿಜಶಾಸ್ತ್ರ ಅಧ್ಯಯನ ನಡೆಸಲು ಮತ್ತು ಚಂದ್ರನಲ್ಲಿರುವ ಧಾತುಗಳ ಕುರಿತು ತಿಳಿಯಲು, ಚಂದ್ರನ ಮೇಲೆ ಮಂಜುಗಡ್ಡೆಯ ರೂಪದಲ್ಲಿರುವ ನೀರಿನ ಕುರಿತು ಅರಿಯಲು ಸಹಾಯಕವಾಗುತ್ತದೆ. ಇದು ಒದಗಿಸಿರುವ ಮಾಹಿತಿಗಳು ನಮಗೆ ಚಂದ್ರ ಮತ್ತದರ ಇತಿಹಾಸವನ್ನು ಅರಿಯಲು ನೆರವಾಗಿದ್ದು, ಮುಂದಿನ ವರ್ಷಗಳಲ್ಲೂ ವಿಜ್ಞಾನಿಗಳಿಗೆ ಮಾಹಿತಿ ಒದಗಿಸಲಿದೆ. ಚಂದ್ರಯಾನ 3ರ ಸಂವಹನ ಮತ್ತು ಚಂದ್ರನ ಮೇಲ್ಮೈ ಪ್ರದೇಶದ ಮ್ಯಾಪಿಂಗ್ ನಡೆಸಲೂ ಇದೇ ಆರ್ಬಿಟರ್ ಬಳಕೆಯಾಗಲಿದೆ.


ಆರ್ಬಿಟರ್‌‌ನ ಪ್ರಮುಖ ಕಾರ್ಯಗಳು:


• ಚಂದ್ರನ ಸ್ಥಳಾಕೃತಿ ಚಿತ್ರಣ
• ಚಂದ್ರನ ಖನಿಜ ಶಾಸ್ತ್ರೀಯ ಅಧ್ಯಯನ ಮತ್ತು ಚಂದ್ರನಲ್ಲಿರುವ ಧಾತುಗಳ ಪತ್ತೆ
• ಮಂಜುಗಡ್ಡೆಯ ರೂಪದಲ್ಲಿರುವ ನೀರಿಗಾಗಿ ಹುಡುಕಾಟ
• ಚಂದ್ರನ ಎಕ್ಸೋಸ್ಪಿಯರ್ ಅಧ್ಯಯನ
• ಚಂದ್ರನ ಮೇಲ್ಮೈ ವಾತಾವರಣದ ಅಧ್ಯಯನ
• ಚಂದ್ರನ ಗುರುತ್ವಾಕರ್ಷಣಾ ವಲಯದ ಅಧ್ಯಯನ
• ಚಂದ್ರನ ವಾತಾವರಣವನ್ನು ಗಮನಿಸುವುದು


ಚಂದ್ರಯಾನ 2ರ ವೈಫಲ್ಯದಿಂದ ಕಲಿತ ಪಾಠಗಳು


ಲ್ಯಾಂಡರ್ ಹಜಾ಼ರ್ಡ್ ಡಿಟೆಕ್ಷನ್ & ಅವಾಯ್ಡೆನ್ಸ್ ಕ್ಯಾಮರಾಗಳು (ಎಲ್ಎಚ್‌ಡಿಎಸಿ): ಚಂದ್ರಯಾನ 3 ಯೋಜನೆಯಲ್ಲಿ ಎರಡು ಲ್ಯಾಂಡರ್ ಹಜಾ಼ರ್ಡ್ ಡಿಟೆಕ್ಷನ್ & ಅವಾಯ್ಡೆನ್ಸ್ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಅವುಗಳು ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಇಳಿಯಲು ನೆರವಾಗುತ್ತವೆ. ಎಲ್ಎಚ್‌ಡಿಎಸಿಗಳು ಆರ್ಬಿಟರ್ ಮತ್ತು ನಿಯಂತ್ರಣ ಕೇಂದ್ರದೊಂದಿಗೆ ಸಮನ್ವಯ ಹೊಂದಿ ಕೆಲಸ ಮಾಡುತ್ತಾ, ಸಂಭಾವ್ಯ ಅಪಾಯಗಳಾದ ಕಲ್ಲುಗಳು, ಕುಳಿಗಳು ಹಾಗೂ ಇತರ ಅಡೆತಡೆಗಳನ್ನು ಗುರುತಿಸಿ, ನಿವಾರಿಸಲು ನೆರವಾಗುತ್ತವೆ. ಚಂದ್ರಯಾನ 2ರಲ್ಲಿ ಒಂದು ಎಲ್ಎಚ್‌ಡಿಎಸಿ ಅಳವಡಿಸಲಾಗಿತ್ತು. ಈ ಬಾರಿ 2 ಕ್ಯಾಮರಾಗಳನ್ನು ಅಳವಡಿಸಿರುವುದರಿಂದ, ಅವುಗಳು ಚಂದ್ರಯಾನ 3 ಸುರಕ್ಷಿತವಾಗಿ ಇಳಿಯಲು ನೆರವಾಗುತ್ತವೆ.


ಎಲ್‌ಡಿವಿ ಸೆನ್ಸರ್: ಬಾಹ್ಯಾಕಾಶದಲ್ಲಿ ವೇಗ ಅಳೆಯಲು ಪ್ರಮುಖ ಸಾಧನ


ಲೇಸರ್ ಡಾಪ್ಲರ್ ವೆಲಾಸಿಟಿ (ಎಲ್‌ಡಿವಿ) ಸೆನ್ಸರ್ ಒಂದು ಪ್ರಮುಖ ಉಪಕರಣವಾಗಿದ್ದು, ಎಲ್ಲ ಮೂರು ಅಕ್ಷಗಳಲ್ಲಿ, ಅತ್ಯಂತ ವೇಗವಾಗಿ ಚಲಿಸುವ ವಸ್ತುಗಳ ವೇಗವನ್ನು ಅಳೆಯಲು ನೆರವಾಗುತ್ತದೆ. ಅತ್ಯಂತ ನಿಖರವಾಗಿ ಅಳೆಯುವ ಈ ಸೆನ್ಸರ್ ಅನ್ನು ಚಂದ್ರಯಾನ 2ಗಾಗಿ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ ಇದು ಪರೀಕ್ಷೆಗಳಲ್ಲಿ ಸರಿಯಾಗಿ ಕಾರ್ಯಾಚರಿಸದ ಕಾರಣ ಅಂತಿಮ ಹಂತದಲ್ಲಿ ಯೋಜನೆ ಇದನ್ನು ಒಳಗೊಂಡಿರಲಿಲ್ಲ. ಆದರೆ, ಎಲ್‌ಡಿವಿ ಸೆನ್ಸರ್‌ಗಳು ಅಂದಾಜು 20 ಕಿಲೋಮೀಟರ್‌ಗಳ ಎತ್ತರದಿಂದ ವೇಗವನ್ನು ಅಳೆಯಲು ನೆರವಾಗುತ್ತವೆ.


ಬೆಂಗಳೂರು ಮೂಲದ, ಇಸ್ರೋ ಸಂಸ್ಥೆಯ ಅಂಗವಾದ ಎಲ್ಇಒಎಸ್ ಲ್ಯಾಬ್ ಈ ಎಲ್‌ಡಿವಿ ಸೆನ್ಸರ್ ಅನ್ನು ಅಭಿವೃದ್ಧಿಪಡಿಸಿದೆ. ಈ ಸೆನ್ಸರ್ ಲೇಸರ್ ಕಿರಣದ ಮೂಲಕ ಚಲಿಸುತ್ತಿರುವ ವಸ್ತುವಿನಲ್ಲಿ ಪ್ರತಿಫಲಿಸಿದ ಬೆಳಕಿನ ಡಾಪ್ಲರ್ ಶಿಫ್ಟ್ ಲೆಕ್ಕಾಚಾರ ಮಾಡುತ್ತದೆ. ಈ ಮಾಹಿತಿಯನ್ನು ಬಳಸಿ, ಆ ವಸ್ತುವಿನ ವೇಗವನ್ನು ಅಳೆಯಬಹುದು. ಎಲ್‌ಡಿವಿ ಸೆನ್ಸರ್ ಅಭಿವೃದ್ಧಿ ಬಾಹ್ಯಾಕಾಶ ಸಂಶೋಧನಾ ವಲಯದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.


ಚಂದ್ರಯಾನ 3 ಯೋಜನೆಯ ಪ್ರಮುಖ ವೈಶಿಷ್ಟ್ಯಗಳು


ಚಂದ್ರಯಾನ 3 ಯೋಜನೆಯನ್ನು ಒಂದು ಚಂದ್ರನ ದಿನವನ್ನು ಪೂರೈಸುವಂತೆ ವಿನ್ಯಾಸಗೊಳಿಸಲಾಗಿದೆ. ಅಂದರೆ, ಇದು ಭೂಮಿಯ ಲೆಕ್ಕಾಚಾರದಲ್ಲಿ ಹದಿನಾಲ್ಕು ದಿನಗಳಾಗಿವೆ. ಲ್ಯಾಂಡರ್ ಮತ್ತು ರೋವರ್‌ಗಳು ವೈಜ್ಞಾನಿಕ ಉಪಕರಣಗಳನ್ನು ಹೊಂದಿದ್ದು, ಈ ಅವಧಿಯಲ್ಲಿ ಚಂದ್ರನ ಮೇಲ್ಮೈಯಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ನೆರವಾಗುತ್ತವೆ. ಈ ಯೋಜನೆ 14 ದಿನಗಳಿಗಿಂತ ಹೆಚ್ಚು ಕಾಲ ನಡೆಯಬಹುದಾದರೂ, ಅದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ.


ಈ ಯೋಜನೆಯ ಮೊತ್ತವೆಷ್ಟು?


ಇಸ್ರೋ ಚಂದ್ರಯಾನ 3 ಯೋಜನೆಗೆ ಅಂದಾಜು 615 ಕೋಟಿ ರೂಪಾಯಿ (77 ಮಿಲಿಯನ್ ಡಾಲರ್) ವೆಚ್ಚವಾಗಬಹುದು ಎಂದು ಅಂದಾಜಿಸಿದೆ. ಇದು ಗಗನನೌಕೆಯ ವೆಚ್ಚ, ಉಡಾವಣಾ ವಾಹನ ಮತ್ತು ನೆಲದಿಂದ ಒದಗಿಸುವ ಬೆಂಬಲದ ಮೂಲಭೂತ ವ್ಯವಸ್ಥೆಗಳ ವೆಚ್ಚವನ್ನು ಒಳಗೊಂಡಿದೆ. ಚಂದ್ರಯಾನ 3ಕ್ಕೆ ತಗಲುವ ವೆಚ್ಚ, ಚಂದ್ರಯಾನ 2 ಯೋಜನೆಗೆ ಹೋಲಿಸಿದರೆ ಒಂದಷ್ಟು ಕಡಿಮೆಯಾಗಿದೆ. ಚಂದ್ರಯಾನ 2 ಯೋಜನೆಗೆ 970 ಕೋಟಿ ರೂಪಾಯಿ (141 ಮಿಲಿಯನ್ ಡಾಲರ್) ವೆಚ್ಚ ತಗುಲಿತ್ತು. ಚಂದ್ರಯಾನ 3 ಕೇವಲ ರೋವರ್ ಮತ್ತು ಲ್ಯಾಂಡರ್‌ಗಳನ್ನು ಒಯ್ಯಲಿದ್ದು, ಚಂದ್ರಯಾನ 2ರ ಆರ್ಬಿಟರ್ ಅನ್ನೇ ಬಳಸಿಕೊಳ್ಳಲಿದೆ. ಇದು ಯೋಜನಾ ವೆಚ್ಚವನ್ನು ಸಾಕಷ್ಟು ಕಡಿಮೆಗೊಳಿಸಲು ನೆರವಾಗಿದೆ.


ಚಂದ್ರನ ಮೇಲ್ಮೈಯನ್ನು ತಲುಪಲು ಬೇಕಾಗುವ ಸಮಯ


1969ರ ಮಾನವ ಸಹಿತ ಚಂದ್ರಯಾನವಾದ ಅಪೋಲೋ 11 (ಇದರಲ್ಲಿ ಮೂವರು ಅಮೆರಿಕಾದ ಗಗನಯಾತ್ರಿಗಳಿದ್ದು, ನೀಲ್ ಆರ್ಮ್‌ಸ್ಟ್ರಾಂಗ್ ಮುಖ್ಯಸ್ಥರಾಗಿದ್ದರು) ಚಂದ್ರನಲ್ಲಿಗೆ ತಲುಪಲು ನಾಲ್ಕು ದಿನಗಳ ಕಾಲಾವಧಿ ತೆಗೆದುಕೊಂಡಿತು. ಆದರೆ ಚಂದ್ರಯಾನ 2 ಯೋಜನೆ 40 ದಿನಗಳ ಅವಧಿ ತೆಗೆದುಕೊಂಡಿತು. ಈ ವ್ಯತ್ಯಾಸಕ್ಕೆ ಯೋಜನೆಗಳಲ್ಲಿ ವಿಭಿನ್ನ ರಾಕೆಟ್‌ಗಳನ್ನು ಬಳಸಿದ್ದು, ಲಭ್ಯವಿದ್ದ ಇಂಧನ ಹಾಗೂ ವಿಭಿನ್ನ ಪಥಗಳನ್ನು ಅನುಸರಿಸಿದ್ದು ಕಾರಣವಾಗಿತ್ತು. ಅಪೋಲೋ 11 ಯೋಜನೆ ಸ್ಯಾಟರ್ನ್ 5 ರಾಕೆಟ್ ಬಳಸಿಕೊಂಡರೆ, ಚಂದ್ರಯಾನ 2 ಜಿಎಸ್ಎಲ್‌ವಿ ಎಂಕೆ 3 ರಾಕೆಟನ್ನು ಬಳಸಿತ್ತು. ಸ್ಯಾಟರ್ನ್ 5 ಹೆಚ್ಚು ಶಕ್ತಿಶಾಲಿ ರಾಕೆಟ್ ಆಗಿದ್ದು, ಅಪೋಲೋ 11 ಸ್ಪೇಸ್ ಕ್ರಾಫ್ಟನ್ನು ಹೆಚ್ಚು ವೇಗವಾಗಿ ಮೇಲೊಯ್ದು, ಕೇವಲ ನಾಲ್ಕು ದಿನಗಳಲ್ಲಿ ಚಂದ್ರನನ್ನು ತಲುಪುವಂತೆ ಮಾಡಿತು. ಚಂದ್ರಯಾನ 2 ಹೆಚ್ಚು ಪರೋಕ್ಷವಾದ ಮಾರ್ಗವನ್ನು ಅನುಸರಿಸಿತು. ಇದು ಹೆಚ್ಚು ಸಮಯ ತೆಗೆದುಕೊಂಡರೂ, ಇಂಧನ ಉಳಿಸಲು ನೆರವಾಗಿತ್ತು.


ಇದರೊಡನೆ, ಚಂದ್ರಯಾನ 2 ಯೋಜನೆ ಲ್ಯಾಂಡರ್ ಮತ್ತು ರೋವರ್‌ಗಳನ್ನು ಹೊಂದಿ, ಅಪೋಲೋ 11 ಯೋಜನೆಗಿಂತ ಹೆಚ್ಚು ಮಹತ್ವಾಕಾಂಕ್ಷಿಯಾಗಿತ್ತು. ಚಂದ್ರಯಾನ್ 2 ಯೋಜನೆ ಅಪೋಲೋ 11 ಯೋಜನೆಗಿಂತಲೂ ಕಡಿಮೆ ವೆಚ್ಚದಾಯಕವೂ ಆಗಿತ್ತು. ಅಪೋಲೋ 11 ಯೋಜನೆಗೆ 20 ಬಿಲಿಯನ್ ಡಾಲರ್ ವೆಚ್ಚವಾಗಿದ್ದರೆ, ಚಂದ್ರಯಾನ 2 ಯೋಜನೆ ಕೇವಲ 1 ಬಿಲಿಯನ್ ಡಾಲರ್ ಮೊತ್ತದಲ್ಲಿ ನೆರವೇರಿತ್ತು. ಚಂದ್ರಯಾನ 2ರಲ್ಲಿ, ಸ್ಪೇಸ್ ಕ್ರಾಫ್ಟ್ ಹಲವು ಪರಿಭ್ರಮಣೆ ನಡೆಸಿ, ಭೂಮಿಯ ಗುರುತ್ವಾಕರ್ಷಣಾ ಎಳೆತವನ್ನು ಮೀರಲು ಹೆಚ್ಚಿನ ವೇಗವನ್ನು ಗಳಿಸಿಕೊಂಡು, ಬಳಿಕ ಚಂದ್ರನೆಡೆಗೆ ಸಾಗಿತು. ಆದರೆ ಮಾನವ ಸಹಿತ ಯೋಜನೆಗಳು ಹೆಚ್ಚು ದಿನ ನಡೆಯುವುದು ಅಪಾಯಕಾರಿಯಾಗಿರುವುದರಿಂದ ಈ ವಿಧಾನವನ್ನು ಅನುಸರಿಸಲು ಸಾಧ್ಯವಾಗುವುದಿಲ್ಲ.


ಎರಡೂ ಯೋಜನೆಗಳು ತಮ್ಮ ಗುರಿಗಳನ್ನು ತಲುಪುವಲ್ಲಿ ಯಶಸ್ವಿಯಾಗಿದ್ದವು. ಚಂದ್ರಯಾನ 2 ಯೋಜನೆಯಂತೂ ಭಾರತದ ಪಾಲಿಗೆ ಮಹತ್ವದ ಸಾಧನೆಯಾಗಿತ್ತು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.