ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ 'ರೇಪ್ ಇನ್ ಇಂಡಿಯಾ' ಕುರಿತಾದ ಹೇಳಿಕೆಗೆ ಕೆನರಾ ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿದಂತೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಸೀತಾರಾಮನ್, ರಾಹುಲ್ ಗಾಂಧಿ ಅವರ ಈ ಹೇಳಿಕೆ ಮಹಿಳೆಯರ ಗೌರವ ಹಾಗು ಘನತೆಗೆ ಭಾರಿ ಪೆಟ್ಟು ನೀಡಿದೆ ಎಂದಿದ್ದಾರೆ. ಕಾಂಗ್ರೆಸ್ ನ ಹಿರಿಯ ನಾಯಕರು ಮಾತನಾಡುವಾಗ ಮಹಿಳೆಯರ ಘನತೆ ಮರೆತು ಈ ರೀತಿ ಹೇಳಿಕೆ ನೀಡುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ. ಇದಕ್ಕೂ ಮೊದಲು ಸದನದಲ್ಲಿ ಮಾತನಾಡಿದ್ದ ಬಿಜೆಪಿ ಸಂಸದೆ ಸ್ಮೃತಿ ಇರಾನಿ, ರಾಹುಲ್ ಗಾಂಧಿ ಅವರ 'ರೇಪ್ ಇನ್ ಇಂಡಿಯಾ' ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಮುಖಂಡರು ಅತ್ಯಾಚಾರದಂತಹ ವಿಷಯಗಳನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಜೊತೆಗೆ ರಾಹುಲ್ ಅವರ ತಾಯಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಹುಲ್ ಅವರಿಗೆ ಸಲಹೆ ನೀಡಿ ಮಾರ್ಗದರ್ಶನ ಮಾಡುವಂತೆ ಆಗ್ರಹಿಸಿದ್ದಾರೆ. ಮಾಜಿ ಕಾಂಗ್ರೆಸ್ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆಯೂ ಕೂಡ ಆಗ್ರಹಿಸಿದ್ದಾರೆ.  ಗುರುವಾರ ಝಾರ್ಖಂಡ್ ನಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ 'ಮೇಕ್ ಇನ್ ಇಂಡಿಯಾ' ಕುರಿತು ಲೇವಡಿ ಮಾಡಿದ್ದು, ಮೊದಲು 'ಮೆಕ್ ಇನ್ ಇಂಡಿಯಾ' ಇದ್ದ ಹೇಳಿದೆ ಇದೀಗ 'ರೇಪ್ ಇನ್ ಇಂಡಿಯಾ' ಆಗಿದೆ ಎಂದಿದ್ದರು.


COMMERCIAL BREAK
SCROLL TO CONTINUE READING

ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ, ಸರ್ಕಾರ ಸಾರ್ವಜನಿಕರ ದಾರಿತಪ್ಪಿಸುತ್ತಿದೆ: ರಾಹುಲ್
ತಾವು ಝಾರ್ಖಂಡ್ ನಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನೀಡಿದ್ದ 'ರೇಪ್ ಇನ್ ಇಂಡಿಯಾ' ಹೇಳಿಕೆಗೆ ಕ್ಷಮೆಯಾಚಿಸಲು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ನಿರಾಕರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಬಿಜೆಪಿ ಸರ್ಕಾರ ಪ್ರಮುಖ ವಿಷಯದಿಂದ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದು, ತಮ್ಮ ಹೇಳಿಕೆ ಕೇವಲ ಒಂದು ನೆಪವಾಗಿ ಪರಿಣಮಿಸಿದೆ ಎಂದಿದ್ದಾರೆ. ಸಂಸತ್ತಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿರುವ ಅವರು, ಪ್ರಧಾನಿಗಳು ಯಾವಾಗಲು 'ಮೆಕ್ ಇನ್ ಇಂಡಿಯಾ' ಕುರಿತು ಹೇಳಿಕೆಗಳನ್ನು ನೀಡುತ್ತಾರೆ. ಆದರೆ, ಇಂದು ಸುದ್ದಿಗಳನ್ನು ಓದಲು ವೃತ್ತಪತ್ರಗಳನ್ನು ತೆರೆದಾಗ, ಸಂಪೂರ್ಣ ಭಾರತದಲ್ಲಿ ನಮಗೆ 'ರೇಪ್' ಕುರಿತು ಓದಲು ಸಿಗುತ್ತದೆ. ಬಿಜೆಪಿ ಆಡಳಿತವಿರುವ ಪ್ರತಿ ರಾಜ್ಯದಲ್ಲಿ ರೇಪ್ ಗೆ ಸಂಬಂಧಿಸಿದ ಸುದ್ದಿಗಳಿವೆ ಎಂಬುದನ್ನು ಮಾತ್ರ ಉಲ್ಲೇಖಿಸಿರುವುದಾಗಿ ರಾಹುಲ್ ಹೇಳಿದ್ದಾರೆ.


'ರೇಪ್ ಇನ್ ಇಂಡಿಯಾ' ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂಬ ಬೇಡಿಕೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ, 'ತಾವು ಕ್ಷಮೆಯಾಚಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಪೂರ್ವೋತ್ತರ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು  ಪ್ರಯತ್ನಿಸುತ್ತಿದೆ' ಎಂದು ಆರೋಪಿಸಿದ್ದಾರೆ.