ನವದೆಹಲಿ: ವಿದೇಶದಲ್ಲಿ ಫಿಲಂ ಶೂಟ್ ಮಾಡಬೇಕು ಅಂತ ಅನ್ನಿಸಿದ್ರೂ ಬಜೆಟ್ ಸಾಕಾಗಲ್ಲ. ಇಂತಹ ಸಂದರ್ಭದಲ್ಲಿ ಭಾರತೀಯ ಚಿತ್ರ ನಿರ್ಮಾಪಕರು ಮಾಡೋದೇನು ಗೊತ್ತೇ? ದೇಶದೊಳಗೆ ಇರುವ ವಿದೇಶದಂತಹ ಪ್ರಕೃತಿ ಸೌಂದರ್ಯ ಹೊಂದಿರುವ ಸ್ಥಳಗಳನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಭಾರತದಲ್ಲಿ ಅಂತಹ ಸುಂದರವಾದ ರಾಜ್ಯ ಯಾವುದು ಗೊತ್ತೇ? ಅದೇ ಮಧ್ಯಪ್ರದೇಶ!


COMMERCIAL BREAK
SCROLL TO CONTINUE READING

ಇತ್ತೀಚೆಗೆ ಮಾಹಿತಿ ಮತ್ತು ಪ್ರಸಾರ ಇಲಾಖೆ ನೀಡುವ 'ಮೋಸ್ಟ್ ಫಿಲಂ ಫ್ರೆಂಡ್ಲಿ ಅವಾರ್ಡ್ 2017' ಪ್ರಶಸ್ತಿಯನ್ನು ಮಧ್ಯಪ್ರದೇಶ ತನ್ನದಾಗಿಸಿಕೊಂಡಿದೆ. ಭಾರತದ ರಾಜ್ಯಗಳಲ್ಲಿ ಮಧ್ಯಪ್ರದೇಶವು ಚಲನಚಿತ್ರ ನಿರ್ಮಾಪಕರಿಗೆ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಅನುಕೂಲಕರವಾದ ವಾತಾವರಣವನ್ನು ಹೊಂದಿರುವುದಾಗಿ ಸಚಿವಾಲಯ ಹೇಳಿದೆ. 


"ಈ ಪ್ರಶಸ್ತಿಗಾಗಿ 16 ರಾಜ್ಯಗಳು ಸ್ಪರ್ಧಿಸಿದ್ದವು. ಆದರೆ ಈ ವರ್ಷ ಮಧ್ಯಪ್ರದೇಶದಲ್ಲಿ ಬಹಳಷ್ಟು ಚಲನಚಿತ್ರಗಳು ಚಿತ್ರೀಕರಣಗೊಂಡಿವೆ. ಈ ರಾಜ್ಯದಲ್ಲಿ ಚಿತ್ರೀಕರಣಕ್ಕೆ ಅಗತ್ಯವಾದ ವಾತಾವರಣ, ಮೂಲಭೂತ ಸೌಕರ್ಯಗಳನ್ನು ಹೊಂದಿರುವುದರಿಂದ ಈ ಪ್ರಶಸ್ತಿ ಗಳಿಸಿದೆ" ಎಂದು ತೀರ್ಪುಗಾರರದ ಹಿರಿಯ ನಿರ್ದೇಶಕ ರಮೇಶ್ ಸಿಪ್ಪಿ ಹೇಳಿದರು.


ಉತ್ತರ ಪ್ರದೇಶ ಮತ್ತು ಗುಜರಾತ್ ಕೂಡ ಚಲನಚಿತ್ರ-ಸ್ನೇಹಿ ರಾಜ್ಯಗಳಾಗಿವೆ ಎಂದೂ ತೀರ್ಪುಗಾರರು ಪರಿಗಣಿಸಿದ್ದಾರೆ. ಅಲ್ಲದೆ, ಚಲನಚಿತ್ರ ಸ್ನೇಹಿ ವಾತಾವರಣವನ್ನು ನಿರ್ಮಿಸುವಲ್ಲಿ ರಾಜ್ಯದ ಪ್ರಯತ್ನವನ್ನು ಗುರುತಿಸಿ ಉತ್ತರಾಖಂಡ್ ರಾಜ್ಯಕ್ಕೆ "ವಿಶೇಷ ಪ್ರಮಾಣಪತ್ರ" ನೀಡಲಾಗಿದೆ. 


ಈ ಸ್ಪರ್ಧೆಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದೆಹಲಿ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಿಜೋರಾಮ್, ಒಡಿಶಾ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತೆಲಂಗಾಣ, ಮತ್ತು ತ್ರಿಪುರಾ ರಾಜ್ಯಗಳೂ ಭಾಗಿಯಾಗಿದ್ದವು. 


ದೆಹಲಿಯಲ್ಲಿ ಮೇ 3 ರಂದು ನಡೆಯಲಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪ್ರಶಸ್ತಿ ವಿತರಣೆ ಮಾಡಲಿದ್ದಾರೆ.