ನವದೆಹಲಿ: ಭಾರತೀಯ ವಾಯುಪಡೆಯ ಯುದ್ಧ ವಿಮಾನ ಮಿರಾಜ್ 2000 ಎಲ್ಒಸಿ ದಾಟಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿದ್ದ ಉಗ್ರಗಾಮಿ ಶಿಬಿರವನ್ನು ಗುರಿಯಾಗಿರಿಸಿ ಬಾಲಾಕೋಟ್, ಮುಜಫರಾಬಾದ್ ಮತ್ತು ಚಕೋಟಿಗಳಲ್ಲಿ ಬಾಂಬ್ ದಾಳಿ ನಡೆಸಿದೆ. ಮತ್ತೊಂದು ಆತ್ಮಾಹುತಿ ದಾಳಿಗೆ ತರಬೇತಿ ನಡೆಸುತ್ತಿದ್ದ ಜೈಶ್ ಉಗ್ರ ಸಂಘಟನೆಯ ಅಡಗುತಾಣವಾಗಿದ್ದ ಬಾಲಾಕೋಟ್‌ನ ಉಗ್ರರ ಕ್ಯಾಂಪ್‌ನ ಮೇಲೆ ವಾಯು ಸೇನೆ ದಾಳಿ ನಡೆಸಿದ್ದು, ಬಾಲಕೋಟ್ ಜೈಶ್ ಎ ಮೊಹಮ್ಮದ್ ಕ್ಯಾಂಪ್ ಸಂಪೂರ್ಣವಾಗಿ ಧ್ವಂಸವಾಗಿದೆ ಎಂದು ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


COMMERCIAL BREAK
SCROLL TO CONTINUE READING

ಬಾಲಾಕೋಟ್, ಮುಜಫರಾಬಾದ್ ಮತ್ತು ಚಕೋಟಿಗಳಲ್ಲಿ ಯೋಜಿತ ದಾಳಿಯ ಅಡಿಯಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಉಗ್ರರ ಶಿಬಿರಗಳನ್ನು ನಿರ್ನಾಮ ಮಾಡಿವೆ. 


IAF ನ ಈ ದಾಳಿಯ ಬಳಿಕ ಹಲವರಲ್ಲಿ ಭಾರತೀಯ ವಾಯುಸೇನೆ ಬಾಲಾಕೋಟ್‌ನಲ್ಲೇ ಬಾಂಬ್ ದಾಳಿ ನಡೆಸಲು ಕಾರಣ ಏನು ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ. ಬಾಲಾಕೋಟ್ ಬಾಂಬ್ ದಾಳಿಯ ಹಿಂದಿನ ನೈಜ ಕಾರಣಗಳೇನು ಎಂಬುದನ್ನು ಮುಂದೆ ಓದಿ...


ವಾಯುಸೇನೆ ಬಾಲಾಕೋಟ್‌ನಲ್ಲೇ ಬಾಂಬ್ ದಾಳಿ ನಡೆಸಲು ಇದು ಪ್ರಮುಖ ಕಾರಣ:
ತಾಲಿಬಾನ್ ಅಂತ್ಯದ ನಂತರ, ಜೈಶ್-ಎ-ಮೊಹಮ್ಮದ್ ತನ್ನ ಶಿಬಿರವನ್ನು ಬಾಲಾಕೋಟ್‌ಗೆ ಸ್ಥಳಾಂತರಿಸಿತು. 2000 ಮತ್ತು 2001 ರ ನಡುವೆ, ಜೆಮ್ ಬಾಲಾಕೋಟ್ನಲ್ಲಿ ತರಬೇತಿ ಶಿಬಿರಗಳನ್ನು ರಚಿಸಿದ್ದರು. ಅಲ್ಹ್ ರೆಹಮಾನ್ ಟ್ರಸ್ಟ್ ಹೆಸರಿನಲ್ಲಿ ಜೈಶ್ ನ ಇನ್ನೊಂದು ಸಂಘಟನೆ ಕಾರ್ಯ ನಿರ್ವಹಿಸುತ್ತಿತ್ತು. ಮೌಲಾನ ಯೂಸುಫ್‌ ಅಜರ್‌ ಅದರ ನೇತೃತ್ವ ವಹಿಸಿದ್ದನು.


ಇದಲ್ಲದೆ, ಬಾಲಾಕೋಟ್‌ನಿಂದ ಒಂದೂವರೆ-ಎರಡು ಕಿಲೋ ಮೀಟರ್ ಅಂತರದಲ್ಲಿರುವ ಪೇಷಾವರದಲ್ಲಿ ಜೈಶ್ ಅಡಗುದಾಣವಿದೆ. ಬಾಲಾಕೋಟ್‌ನಿಂದ 40 ಕಿಲೋಮೀಟರ್ ದೂರದಲ್ಲಿರುವ ಪೋಕ್ ನ ಮುಜಫರಾಬಾದ್ ನಲ್ಲೂ ಕೂಡ ಜೈಶ್ ಶಿಬಿರಗಳಿವೆ. ಅಮೆರಿಕ ಕೂಡ ಬಾಲಕೋಟ್‌ ಮೇಲೆ ತನ್ನ ಹದ್ದಿನ ಕಣ್ಣು ಇರಿಸಿದೆ.


ಬೆಟ್ಟಗುಡ್ಡ, ಪರ್ವತ ಪ್ರದೇಶಗಳು ಹೆಚ್ಚಾಗಿ ಇರುವುದರಿಂದ ಬಾಲಾಕೋಟ್‌ನ್ನು ಜೈಶ್ ಸಂಘಟನೆ ತನ್ನ ಪ್ರಮುಖ ನೆಲೆಯನ್ನಾಗಿ ಮಾಡಿಕೊಂಡಿತ್ತು. ಕಾಶ್ಮೀರ ಸೇರಿದಂತೆ ದೇಶದ ಇತರ ಭಾಗಗಳಿಂದ ಜೈಶ್ ಸಂಘಟನೆಗೆ ಕರೆತರಲಾಗುತ್ತಿದ್ದ ಯುವಕರಿಗೆ ಇಲ್ಲಿ ತರಬೇತಿ ನೀಡಲಾಗುತ್ತಿತ್ತು. ಅಲ್ಲದೆ ಅವರನ್ನು ಆತ್ಮಾಹುತಿ ಬಾಂಬರ್ ಗಳನ್ನಾಗಿ ಮಾಡಲಾಗುತ್ತಿತ್ತು.  ಈ ಹಿನ್ನೆಲೆಯಲ್ಲಿ ಜೈಶ್ ಸಂಘಟನೆಯ ನೆಲೆಯನ್ನು ಕಿತ್ತು ಹಾಕುವ ಸಲುವಾಗಿ ಭಾರತೀಯ ವಾಯುಸೇನೆ ಬಾಲಾಕೋಟ್‌ನಲ್ಲೇ ಬಾಂಬ್ ದಾಳಿ ನಡೆಸಿದೆ.


ಜೈಶ್ ಸಂಘಟನೆಯ ಮಸೂದ್ ಅಜರ್‌ ಸಂಬಂಧಿ ಮೌಲಾನ ಯೂಸುಫ್‌ ಅಜರ್‌ ಬಾಲಾಕೋಟ್‌ನಲ್ಲಿ ವಾಯುಪಡೆ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಮ್ಮ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.