ನವದೆಹಲಿ: ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ದೇವಾಲಯಗಳ ಭೇಟಿ ಮತ್ತು ಇತ್ತೀಚೆಗೆ ಗೋತ್ರದ ಬಗ್ಗೆ ಅವರು ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ, ಸಂಸದ ಶಶಿ ತರೂರ್ ವಿವರಣೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಭಾನುವಾರ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಟೈಮ್ಸ್ ಲಿಟ್ ಫೆಸ್ಟ್‌ನಲ್ಲಿ ಭಾಗವಹಿಸಿದ್ದ ಶಶಿ ತರೂರ್ ಅವರು, ತಾವು ಬರೆದಿರುವ "The Paradoxical Prime Minister" ಬಗ್ಗೆ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಪ್ರಸ್ತುತ ಕಾಂಗ್ರೆಸ್ ಹಿಂದುತ್ವ, ವಿಶ್ವಾಸ, ಸರಕಾರ ಮತ್ತು ಶಾಸನದಂತ ವಿಷಯಗಳಲ್ಲಿ ಹೇಗೆ ಯೋಚಿಸುತ್ತದೆ ಎಂಬ ಬಗ್ಗೆ ಮೂಡಿದ ಪ್ರಶ್ನೆಗೆ ಉತ್ತರಿಸುತ್ತಾ, "ಕಾಂಗ್ರೆಸ್ ಹೀಗೆ ಮಾಡುವುದರ ಅನಿವಾರ್ಯತೆ ಸೃಷ್ಟಿಸಿದ್ದು ಬಿಜೆಪಿ. ಬಿಜೆಪಿ ನಿಜವಾದ ಹಿಂದೂಗಳು ಮತ್ತು ನಾಸ್ತಿಕ- ಧರ್ಮನಿರಪೇಕ್ಷರು ಎಂದು ವಿಭಾಗಿಸಿ ಕದನ ಹುಟ್ಟಿಸಿದೆ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ತಮ್ಮ ವಾಸ್ತವ ಜೀವನವನ್ನು ಸಾರ್ವಜನಿಕವಾಗಿ ಬಿಚ್ಚಿಡಬೇಕಿದೆ" ಎಂದರು.


ಮುಂದುವರೆದು ರಾಹುಲ್ ಗಾಂಧಿ ಅವರು ಇತ್ತೀಚಿನ ದಿನಗಳಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದರ ಔಚಿತ್ಯದ ಬಗ್ಗೆ ಸಮರ್ಥನೆ ನೀಡಿದ ಸಂಸದ ಶಶಿ ತರೂರ್, "ರಾಹುಲ್ ತಮ್ಮನ್ನು ಶಿವಭಕ್ತ ಎಂದು ಹೇಳಿಕೊಳ್ಳುತ್ತಾರೆ. ಅವರೇನು ಮಾತನಾಡುತ್ತಾರೆಂದು ಅವರಿಗೆ ಗೊತ್ತಿದೆ. ಆಧ್ಯಾತ್ಮದಲ್ಲಿ ರಾಹುಲ್‌ಗೆ ಆಳವಾದ ಜ್ಞಾನವಿದೆ. ಧರ್ಮ ಮತ್ತು ಆಧ್ಯಾತ್ಮದ ಬಗ್ಗೆ ಅತಿ ಹೆಚ್ಚು ತಿಳಿದುಕೊಂಡಿರುವ ಮತ್ತು ಈ ವಿಷಯದಲ್ಲಿ ಅತ್ಯಂತ ಚಿಂತನಶೀಲರಾಗಿರುವ ಭಾರತದ ರಾಜಕಾರಣಿಗಳಲ್ಲಿ ರಾಹುಲ್ ಕೂಡ ಒಬ್ಬರು" ಎಂದು ಹೇಳಿದ್ದಾರೆ.


ಇತ್ತೀಚೆಗಷ್ಟೇ ರಾಜಸ್ಥಾನ ವಿಧಾನಸಭೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪುಷ್ಕರ ನಗರದಲ್ಲಿ ಬ್ರಹ್ಮ ದೇವಾಲಯಕ್ಕೆ ಭೇಟಿ ನೀಡಿದ್ದ ರಾಹುಲ್, ತಮ್ಮದು ದತ್ತಾತ್ರೇಯ ಗೋತ್ರ ಹಾಗೂ ಕೌಲ ಬ್ರಾಹ್ಮಣಕ್ಕೆ ಸೇರಿದವರೆಂದು ಹೇಳಿದ್ದರು. ಈ ವಿಚಾರ ರಾಜಕೀಯ ವಲಯದಲ್ಲಿ ಮತ್ತು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.