ನವದೆಹಲಿ: 2019 ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪ್ರಧಾನಮಂತ್ರಿ ಅಭ್ಯರ್ಥಿಯಾದರೆ ಅದನ್ನು ಸ್ವಾಗತಿಸುವುದಾಗಿ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.



COMMERCIAL BREAK
SCROLL TO CONTINUE READING

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಪ್ರಧಾನಮಂತ್ರಿ ಹುದ್ದೆಗೆ ಬಿಂಬಿಸಿದರೆ ಅದನ್ನು ಸ್ವಾಗತಿಸುತ್ತೇನೆ ಎಂದು ದೇವೇಗೌಡ ತಿಳಿಸಿದ್ದಾರೆ. ದೇಶದಲ್ಲಿ ಇಂದಿರಾ ಗಾಂಧಿ 17 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದರು. ಪುರುಷರಷ್ಟೇ ಏಕೆ ಪ್ರಧಾನಮಂತ್ರಿಯಾಗಬೇಕು? ಮಮತಾ ಬ್ಯಾನರ್ಜಿ ಅಥವಾ ಮಾಯಾವತಿ ಏಕೆ ಪ್ರಧಾನಿಯಾಗಬಾರದು ಎನ್ನುವ ಮೂಲಕ ಮಹಿಳಾ ಪ್ರಧಾನಿ ಪ್ರಸ್ತಾವಕ್ಕೆ ತಾವು ವಿರೋಧಿಯಲ್ಲ ಎಂಬುದನ್ನು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.


ಕರ್ನಾಟಕದಲ್ಲಿ ಕಾಂಗ್ರೆಸ್ ಜೊತೆಗೂಡಿ ಸರ್ಕಾರ ನಡೆಸುತ್ತಿದ್ದು, ಇದೀಗ ಪ್ರಧಾನಿ ಹುದ್ದೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬದಲಿಗೆ ಮಮತಾ ಪರ ಮಾತನಾಡುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.


ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಜೊತೆಗೂಡಿ ಲೋಕಸಭೆ ಚುನಾವಣೆಯನ್ನು ಎದುರಿಸಲಿದೆ. ಚುನಾವಣೆಗೂ ಮೊದಲೇ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆಸಿದರೆ ಬಿಜೆಪಿ ವಿರುದ್ಧ ರಚಿಸಲಾಗುತ್ತಿರುವ ಮಹಾಘಟಬಂಧನದ ಒಗ್ಗಟ್ಟಿಗೆ ಹೊಡೆತ ಬೀಳಲಿದೆ ಎಂಬುದು ಕಾಂಗ್ರೇಸ್ ಲೆಕ್ಕಾಚಾರವಾಗಿದೆ. ಹಾಗಾಗಿ ಆ ಬಗ್ಗೆ ಚುನಾವಣೆ ನಂತರ ನಿರ್ಧರಿಸಲು ಕಾಂಗ್ರೆಸ್ ಹಾಗೂ ಇನ್ನಿತರೆ ಪ್ರತಿಪಕ್ಷಗಳು ಒಲವು ತೋರಿವೆ. 


ದೇಶದಲ್ಲಿಂದು ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಉತ್ತರ ಪ್ರದೇಶ, ಬಿಹಾರ ಹಾಗೂ ಗುಜರಾತ್ ಗಳಂತಹ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಉಸಿರುಗಟ್ಟಿಸುವ ವಾತಾವರಣವಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಬಲಿಷ್ಠ ಪ್ರತಿಪಕ್ಷ ಮೈತ್ರಿಕೂಟ ಅಗತ್ಯವಾಗಿದೆ. ಬಿಜೆಪಿಗೆ ರಾಜಕೀಯ ಪರ್ಯಾಯ ಬೇಕು ಎಂಬ ಕೂತು ಕ್ರಮೇಣ ಶಕ್ತಿ ಪಡೆದುಕೊಳ್ಳಲಿದೆ. ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಕೂಡ ಈ ಪ್ರಯತ್ನದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ದೇವೇಗೌಡರು ಹೇಳಿದರು.


ಬಿಜೆಪಿ, ಆರ್ ಎಸ್ ಎಸ್ ಬೆಂಬಲವಿಲ್ಲದ ಪ್ರತಿಪಕ್ಷಗಳ ಮೈತ್ರಿ ಕೂಟದ ಯಾವುದೇ ಪಕ್ಷದ ನಾಯಕರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದಕ್ಕೆ ತನ್ನ ಅಭ್ಯಂತರವಿಲ್ಲ ಎಂದು ಕಾಂಗ್ರೇಸ್ ಪಕ್ಷ ಈಗಾಗಲೇ ತಿಳಿಸಿದೆ.