ಶಿವಸೇನೆ ಕೆಣಕಿದ್ರೆ 20 ಅಡಿ ಆಳ ಭೂಮಿಯಲ್ಲಿ ಹೂತುಹೋಗ್ತಾರೆ: ಸಂಜಯ್ ರಾವತ್ ಎಚ್ಚರಿಕೆ
‘ಶಿವಸೇನೆ’ ಮತ್ತು ‘ಮಾತೋಶ್ರೀ’ ಜೊತೆ ಆಟವಾಡಬೇಡಿ. ಶಿವಸೈನಿಕರ ತಾಳ್ಮೆಯನ್ನು ಪರೀಕ್ಷಿಸಬೇಡಿ. ತಾಳ್ಮೆ ಪರೀಕ್ಷಿಸಿದರೆ ನಾವು ಏನು ಅನ್ನೋದನ್ನು ತೋರಿಸಬೇಕಾಗುತ್ತದೆ ಎಂದು ರಾವತ್ ಕಿಡಿಕಾರಿದ್ದಾರೆ.
ನಾಗ್ಪುರ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸ ಮಾತ್ರೋಶ್ರೀ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದ ಬಿಜೆಪಿ ಸಂಸದೆ ನವನೀತ್ ಕೌರ್ ರಾಣಾ ಮತ್ತು ಅವರ ಪತಿ, ಶಾಸಕ ರವಿ ರಾಣಾಗೆ ಶಿವಸೇನಾ ಸಂಸದ ಸಂಜಯ್ ರಾವತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಮರಾವತಿ ಲೋಕಸಭಾ ಕ್ಷೇತ್ರದಿಂದ ಮತ್ತೊಮ್ಮೆ ಆಯ್ಕೆಯಾಗಿ ತೋರಿಸಿ ಎಂದು ಸವಾಲು ಹಾಕಿರುವ ರಾವತ್, ತಮ್ಮ ಪಕ್ಷದ ತಾಳ್ಮೆ ಪರೀಕ್ಷಿಸಲು ಪ್ರಯತ್ನಿಸುವವರು 20 ಅಡಿ ಆಳದ ಭೂಮಿಯಲ್ಲಿ ಹೂತು ಹೋಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇಂದು ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ಮೋದಿ ಭೇಟಿ : ಎಲ್ಲೆಡೆ ಕಟ್ಟೆಚ್ಚರ
ಮಹಾರಾಷ್ಟ್ರ ಸಿಎಂ ಮತ್ತು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆಯವರ ಮುಂಬೈ ನಿವಾಸ ಮಾತೋಶ್ರೀ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ನವನೀತ್ ರಾಣಾ ಮತ್ತು ಅವರ ಪತಿ ರವಿ ರಾಣಾ ಹೇಳಿದ್ದರು. ಇದನ್ನು ವಿರೋಧಿಸಿ ಶಿವಸೇನಾ ಕಾರ್ಯಕರ್ತರು ದಂತಿಯ ಖಾರಾ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ಭಾನುವಾರ ಮುಂಬೈನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮವಿರುವ ಹಿನ್ನೆಲೆ ಹನುಮಾನ್ ಚಾಲೀಸಾ ಪಠಣ ಮಾಡುವುದಿಲ್ಲವೆಂದು ದಂಪತಿ ಹೇಳಿದ್ದರು. ಆದರೆ, ದಂಪತಿ ಮನೆಗೆ ಆಗಮಿಸಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದರು.
ನಾಗ್ಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ರಾವತ್, ‘ತಮ್ಮ ಪಕ್ಷಕ್ಕೆ ಅಧಿಕಾರ ಕಳೆದುಕೊಳ್ಳುವ ಭಯವಿಲ್ಲ. ಆದರೆ, ಯಾರಾದರೂ ಮಾತೋಶ್ರೀಯನ್ನು ಗುರಿಯಾಗಿಸಿಕೊಂಡರೆ ಅವರು ತಮ್ಮ ಹಳ್ಳವನ್ನು ತಾವೇ ತೋಡಿಕೊಂಡಂತಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. ‘ಶಿವಸೇನೆ ಹಾದಿಯನ್ನು ದಾಟಿ ಯಾರೂ ಮಾತೋಶ್ರೀಯನ್ನು ಗುರಿಯಾಗಿಸಿಕೊಳ್ಳಬಾರದು. ನಾನು ಇದನ್ನು ದಾಖಲೆ ಸಮೇತ ಹೇಳುತ್ತಿದ್ದೇನೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ. ನೀವು (ರಾಣಾ ದಂಪತಿ) ಹಿಂದುತ್ವವನ್ನು ಮಾಡುತ್ತಿಲ್ಲ, ಆದರೆ ದ್ವೇಷದ ವಿಷವನ್ನು ಹರಡುತ್ತಿದ್ದೀರಿ. ಇಂತಹ ಚಟುವಟಿಕೆಗಳನ್ನು ಹತ್ತಿಕ್ಕುವ ಛಲ ನಮಗಿದೆ’ ಎಂದು ರಾವತ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ರ್ಯಾಲಿ ಸ್ಥಳದಿಂದ ಸ್ವಲ್ಪ ದೂರದಲ್ಲೇ ಸಂಭವಿಸಿತು ಸ್ಫೋಟ!
‘ಕೆಲವು ಬೋಗಸ್ ಜನರು ರಾಜ್ಯದ ವಾತಾವರಣ ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ. ಇಂತವರಿಗೆ ಬಿಜೆಪಿ ಬೆಂಬಲ ನೀಡುತ್ತಿದೆ. ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಹೇಳುವವರು ಹಿಂದೊಮ್ಮೆ ಹಿಂದುತ್ವ ಮತ್ತು ಅಯೋಧ್ಯೆ ರಾಮಮಂದಿರ ಚಳವಳಿಯನ್ನು ವಿರೋಧಿಸಿದ್ದರು ಎಂದು ರಾಣಾ ದಂಪತಿಯ ಹೆಸರು ಹೇಳದೆ ರಾವತ್ ಟೀಕಿಸಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.