ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಡೊನಾಲ್ಡ್ ಟ್ರಂಪ್?
ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ
ನವದೆಹಲಿ: 2019ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಆಹ್ವಾನಕ್ಕೆ ಡೊನಾಲ್ಡ್ ಟ್ರಂಪ್ ಸಮ್ಮತಿ ಸೂಚಿಸಿದ್ದಾರೋ, ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ.
ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಮಾ ಅವರನ್ನು ಹೊರತುಪಡಿಸಿದರೆ ಇದುವರೆಗೂ ಐವರು ಅಮೆರಿಕಾ ಅಧ್ಯಕ್ಷರು ಭಾರತಕ್ಕೆ ಬಂದಿದ್ದಾರೆ. ಈ ಪೈಕಿ 1959,1969,1978, 2000ದಲ್ಲಿ ಬಿಲ್ ಕ್ಲಿಂಟನ್ ಮತ್ತು 2006ರಲ್ಲಿ ಜಾರ್ಜ್ ಬುಷ್ ಭಾರತಕ್ಕೆ ಆಗಮಿಸಿದ್ದರು. ಆದರೆ ಇವರ್ಯಾರೂ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದವರಲ್ಲ. ಆದರೆ ಈ ಬಾರಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಡೊನಾಲ್ಡ್ ಟ್ರಂಪ್ ಅವರಿಗೆ ಆಹ್ವಾನ ನೀಡಲಾಗಿದೆ. ಸದ್ಯ ಅಮೆರಿಕದ ವಿದೇಶಾಂಗ ಇಲಾಖೆಯ ಪ್ರತಿಕ್ರಿಯೆಯನ್ನು ಭಾರತ ನಿರೀಕ್ಷಿಸುತ್ತಿದೆ.
ಒಂದು ವೇಳೆ, ಭಾರತದ ಆಹ್ವಾನಕ್ಕೆ ಒಪ್ಪಿ ಟ್ರಂಪ್ ಗಣರಾಜ್ಯೋತ್ಸವಕ್ಕೆ ಆಗಮಿಸಿದ್ದೇ ಆದಲ್ಲಿ, ಉಭಯ ರಾಷ್ಟ್ರಗಳ ವಿದೇಶಾಂಗ ನೀತಿಯಲ್ಲಿ ಇದೊಂದು ಮಹತ್ತರ ಬೆಳವಣಿಗೆಯಾಗಲಿದೆ.