ನವದೆಹಲಿ: ಸಮಾಜವಾದಿ ಪಕ್ಷದ ರಾಂಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಜಂ ಖಾನ್ ಭಾನುವಾರ ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, "ನಾನು ರಾಂಪುರ ವಿಧಾನಸಭಾ ಕ್ಷೇತ್ರದಿಂದ 9 ಬಾರಿ ಶಾಸಕನಾಗಿ ಆಯ್ಕೆಯಾಗಿ, ಸಚಿವನೂ ಆಗಿದ್ದೇನೆ. ನನಗೆ ಏನು ಮಾತನಾಡಬೇಕೆಂಬ ಪ್ರಜ್ಞೆ ಇದೆ. ನಾನು ನನ್ನ ಹೇಳಿಕೆಯಲ್ಲಿ ಯಾವುದೇ ವ್ಯಕ್ತಿಗೆ ಅವಮಾನ ಮಾಡಿದ್ದರೆ, ಯಾರಾದರೂ ಅದನ್ನು ಸಾಬೀತು ಪಡಿಸಿ ತೋರಿಸಿದರೆ, ನಾನು ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ" ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಅಜಂ ಖಾನ್ ವಿವಾದಾತ್ಮಕ ಹೇಳಿಕೆ ಬಗ್ಗೆ ಮಾತನಾಡಿದ್ದ ಜಯಪ್ರದಾ, ಅಜಂ ಖಾನ್ ನನ್ನ ಮೇಲೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಹೆಣ್ಣು ಮಕ್ಕಳ ದಬ್ಬಾಳಿಕೆ ವಿರುದ್ಧ ಹೋರಾಡಬೇಕು, ಅಜಂ ಖಾನ್ ಗೆ ಒಂದು ಮತವೂ ಹೋಗಬಾರದು ಎಂದಿದ್ದರು. ಈ ವೇಳೆ ಅಖಿಲೇಶ್ ಯಾದವ್ ಬಗ್ಗೆಯೂ ಮಾತನಾಡಿದ್ದ ಜಯಾ, ಅಖಿಲೇಶ್ ನಿಮ್ಮೊಳಗಿನ ಸಂಸ್ಕಾರ ಎಲ್ಲಿ ಹೋಯಿತು. ನಿಮ್ಮೊಂದಿಗಿರುವ ನಾಯಕರ ಜೊತೆಗಿನ ಒಡನಾಟದಿಂದಾಗಿ ನಿಮ್ಮ ಮನಸ್ಸೂ ಕೂಡ ಹಾಳಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದರು.


ಜನ ನನ್ನನ್ನು ಏಕೆ ವಿರೋಧಿಸುತ್ತಾರೆಂಬುದು ನನಗೆ ಗೊತ್ತಿಲ್ಲ. ಅವರು ನನ್ನ ಬಗ್ಗೆ ಆಕ್ಷೇಪಾರ್ಹ ಪದಗಳನ್ನಾಡಿದ್ದಾರೆ. ಓರ್ವ ಮಹಿಳೆಯಾಗಿ ನನ್ನಿಂದ ಆ ಪದಗಳ ಬಳಕೆ ಸಾಧ್ಯವಿಲ್ಲ. ನೀವು ಆ ವಿಡಿಯೋವನ್ನು ನೋಡಬೇಕು. ನೀವೂ ಸಹೋದರರಾಗಿದ್ದರೆ, ನಿಮ್ಮ ಮನೆಯಲ್ಲೂ ನಿಮ್ಮ ಅಕ್ಕ-ತಂಗಿಯರಿದ್ದಾರೆ, ತಾಯಿಯಿದ್ದಾರೆ, ಹೆಣ್ಣು ಮಕ್ಕಳಿದ್ದಾರೆ. ನಿಮ್ಮ ಸಹೋದರಿಯರಿಗೆ ಅಥವಾ ನಿಮ್ಮ ಮಕ್ಕಳ ಬಗ್ಗೆ ಆಕ್ಷೇಪಾರ್ಹ ಪದಗಳ ಬಳಕೆ ಮಾಡಿದ್ದೇ ಆದರೆ ನೀವೂ ಸುಮ್ಮನಿರುತ್ತಿದ್ದಿರೆ ಎಂದು ಪ್ರಶ್ನಿಸಿದ್ದರು.


ಮುಂದುವರೆದು ಮಾತನಾಡಿದ್ದ ಜಯಪ್ರದಾ ನನ್ನ ತಾಯಿ ನನಗೆ ಸಂಸ್ಕಾರ ಕಲಿಸಿದ್ದಾರೆ. ಹಾಗಾಗಿ ಅಂತಹ ಕೊಳಕು ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ಇದು ಮಿತಿ ಮೀರಿದೆ. ನೀವೂ ನನ್ನನ್ನು ನಿಮ್ಮ ಮನೆ ಮಗಳು, ನಿಮ್ಮ ಸಹೋದರಿ ಎಂದು ಭಾವಿಸಿದ್ದೆ ಆದರೆ ಹೆಣ್ಣು ಮಕ್ಕಳ ದಬ್ಬಾಳಿಕೆಯ ವಿರುದ್ಧ ನೀವೂ ಹೋರಾಡಬೇಕೆಂದು ಮನವಿ ಮಾಡಿದ್ದರು.