ಕನ್ಸಾಸ್ ಘಟನೆ; ಮೃತ ವಿದ್ಯಾರ್ಥಿ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಸುಷ್ಮಾ ಸ್ವರಾಜ್ ಭರವಸೆ
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮೃತನ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ನವದೆಹಲಿ: ಅಮೆರಿಕದ ಕನ್ಸಾಸ್ ನಗರದಲ್ಲಿ ದರೋಡೆಕೋರರ ಗುಂಡಿಗೆ ಬಲಿಯಾದ ಭಾರತೀಯ ವಿದ್ಯಾರ್ಥಿಯ ಸಾವಿಗೆ ಸಂತಾಪ ವ್ಯಕ್ತಪಡಿಸಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮೃತನ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಅಮೇರಿಕಾದ ಕನ್ಸಾಸ್'ನಲ್ಲಿ ತೆಲಂಗಾಣ ವಿದ್ಯಾರ್ಥಿ ಹತ್ಯೆ
"ಕಾನ್ಸಾಸ್ ಘಟನೆಗೆ ಸಂಬಂಧಿಸಿದಂತೆ ಪೋಲಿಸ್ ತನಿಖೆ ನಡೆಸಲಾಗುವುದು ಮತ್ತು ಮೃತ ವಿದ್ಯಾರ್ಥಿ ಕುಟುಂಬಕ್ಕೆ ಅಗತ್ಯವಾದ ಎಲ್ಲಾ ನೆರವನ್ನೂ ನೀಡುತ್ತೇವೆ" ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಕನ್ಸಾಸ್ನಲ್ಲಿನ ಅಧಿಕಾರಿಗಳ ಪ್ರಕಾರ, ಮೃತ ವಿದ್ಯಾರ್ಥಿಯನ್ನು ತೆಲಂಗಾಣದ ವಾರಂಗಲ್ ಮೂಲದ ಶರತ್ ಕೊಪ್ಪು(26) ಎಂದು ಗುರುತಿಸಲಾಗಿದ್ದು, ಮಿಸೌರಿ ಯುನಿವರ್ಸಿಟಿಯಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಓದಿನ ಜೊತೆ ಜೇಸ್ ಫಿಶ್ ಅಂಡ್ ಚಿಕನ್ ಮಾರ್ಕೆಟ್ ರೆಸ್ಟೋರೆಂಟ್'ನಲ್ಲಿ ಕೆಲಸ ಮಾಡುತ್ತಿದ್ದರು. ಎಂಜಿನಿಯರಿಂಗ್ ಪದವಿ ಬಳಿಕ ಹೈದ್ರಾಬಾದ್'ನ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಶರತ್, ಇದೇ ವರ್ಷ ಹೆಚ್ಚಿನ ವ್ಯಾಸಂಗಕ್ಕಾಗಿ ಅಮೆರಿಕಾಗೆ ತೆರಳಿದ್ದರು ಎನ್ನಲಾಗಿದೆ.
ಆರೋಪಿಯನ್ನು ದರೋಡೆಕೋರ ಎಂದು ಶಂಕಿಸಿರುವ ಕನ್ಸಾಸ್ ಪೊಲೀಸರು, ಆತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಸಾವಿರ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.