ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಒಂದು ಕ್ಷೇತ್ರದಿಂದ ಒಂದು ಇವಿಎಂನಲ್ಲಿ ಒಂದು ವಿವಿಪ್ಯಾಟ್ ಬದಲಾಗಿ 5 ಇವಿಯಂಗಳಿಂದ ವಿವಿಪ್ಯಾಟ್ ರಶೀದಿಯನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಜಾರಿಗೆ ತರಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ. 


COMMERCIAL BREAK
SCROLL TO CONTINUE READING

"ಭಾರತದ ಚುನಾವಣಾ ಆಯೋಗವು ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಕಾರ್ಯಗತಗೊಳಿಸಲು ಮತ್ತು ಕಾರ್ಯರೂಪಕ್ಕೆ ತರಲು ಎಲ್ಲ ಪ್ರಯತ್ನಗಳನ್ನು ನಡೆಸಲಿದೆ" ಎಂದು ಚುನಾವಣಾ ಸಮಿತಿಯ ಅಧಿಕೃತ ವಕ್ತಾರರು ತಿಳಿಸಿದ್ದಾರೆ.


ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ನಿಖರತೆ ಮತ್ತು ವಂಚನೆ ನಡೆಯದಂತೆ ಕ್ರಮ ವಹಿಸಲು, ಒಂದು ಕ್ಷೇತ್ರದ ಒಂದು ಇವಿಎಂನಲ್ಲಿ 1 ವಿವಿಪ್ಯಾಟ್ ಬದಲಾಗಿ 5 ಇವಿಎಂಗಳಿಂದ ವಿವಿಪ್ಯಾಟ್ ಚೀಟಿಗಳನ್ನು ಪರಿಶೀಲನೆಗೊಳಪಡಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಬೆಳಿಗ್ಗೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.


ಶೇ.50ರಷ್ಟು ವಿವಿ ಪ್ಯಾಟ್‌ಗಳ ಚೀಟಿಗಳನ್ನು ಎಣಿಸುವುದರಿಂದ ಫಲಿತಾಂಶ ಘೋಷಣೆಯಲ್ಲಿ 5.2 ದಿನ ವಿಳಂಬವಾಗಲಿದೆ ಎಂದು ಚುನಾವಣಾ ಆಯೋಗ ನೀಡಿದ್ದ ಸ್ಪಷ್ಟನೆಯನ್ನು ಒಪ್ಪದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ನೇತೃತ್ವದ 21 ಪ್ರತಿಪಕ್ಷಗಳು, ಲೋಕಸಭಾ ಚುನಾವಣೆಯ ಮತ ಎಣಿಕೆಯಲ್ಲಿ ವಿಳಂಬವಾದರೂ ಪರವಾಗಿಲ್ಲ, ಶೇ.50ರಷ್ಟು ವಿವಿ ಪ್ಯಾಟ್‌ಗಳ ಚೀಟಿಗಳ ಎಣಿಕೆ ನಡೆಯಲೇಬೇಕು ಎಂದು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದವು.