ನವದೆಹಲಿ: ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡಲು ಚೆಕ್ ಹಿಡಿದು ಸರತಿ ಸಾಲಿನಲ್ಲಿ ನಿಂತು ಬೇಸತ್ತಿದ್ದರೆ,  ಅದಕ್ಕೀಗ ವಿದಾಯ ಹೇಳುವ ಸಮಯ. ಯಾಕೆ ಅಂತ ಯೋಚಿಸ್ತಿದ್ದೀರಾ? ಅದಕ್ಕೆ ಕಾರಣವೂ ಇದೆ. ಎಟಿಎಂ ಅಲ್ಲಿ ಚೆಕ್ ಹಾಕಿ ಹಣ ಡ್ರಾ ಮಾಡುವ ನೂತನ ಯಂತ್ರವೊಂದು ಬಿಡುಗಡೆಗೆ ಸಿದ್ಧವಾಗಿದೆ. 


COMMERCIAL BREAK
SCROLL TO CONTINUE READING

ಹೌದು, ಎಟಿಎಂ ತಯಾರಿಕೆಯ ದಿಗ್ಗಜ ಎನ್ಸಿಆರ್ ಕಾರ್ಪೋರೇಶನ್ ಇದೀಗ ಇಂತಹ ಒಂದು ಅದ್ಭುತ ಎಟಿಎಂ ಅನ್ನು ಸಿದ್ಧಪಡಿಸಿದೆ. ಈ ಯಂತ್ರದಲ್ಲಿ ನೀವು ಚೆಕ್ ಹಾಕುವ ಮೂಲಕ ಹಣ ಡ್ರಾ ಮಾಡಿಕೊಳ್ಳಬಹುದು. ಅದೂ ಒಂದೇ ಒಂದು ನಿಮಿಷದಲ್ಲಿ!!! ಈ ವಿಶೇಷ ಎಟಿಎಂ ಅನ್ನು ಮುಂಬೈ, ಬೆಂಗಳೂರು, ಪುಣೆ, ಗುರುಗ್ರಾಮ ನಗರಗಳಲ್ಲಿ ಪೈಲೆಟ್ ಯೋಜನೆಯಡಿ ಅಳವಡಿಸಲು ಎರಡು ಖಾಸಗಿ ಬ್ಯಾಂಕುಗಳು ಚಿಂತನೆ ನಡೆಸಿವೆ.


ಈ ಎಟಿಎಂ ಹೇಗೆ ಕೆಲಸ ಮಾಡುತ್ತದೆ?
ಮೊದಲು ನೀವು ಎಟಿಎಂ ಒಳಗೆ ಪ್ರವೇಶಿಸುತ್ತಿದ್ದಂತೆ ಲೈವ್ ಟೆಲ್ಲರ್(Live teller)ಗೆ ಕನೆಕ್ಟ್ ಆಗಬೇಕು. ಒಂದೇ ಒಂದು ಕ್ಲಿಕ್ ನಲ್ಲಿ ಕನೆಕ್ಟ್ ಆಗಬಹುದು. ನಂತರ ಭಾಷೆಯನ್ನು ಬದಲಾಯಿಸಿದ ನಂತರ ಬ್ಯಾಂಕ್ ಪ್ರತಿನಿಧಿಯೊಂದಿಗೆ ನೀವು ನೇರವಾಗಿ ಸಂಪರ್ಕ ಹೊಂದುತ್ತೀರಿ. ಸಂಪರ್ಕ ಪಡೆದ ನಂತರ ಎಟಿಎಂ ಅನ್ನು ಸಂಪೂರ್ಣವಾಗಿ ಬ್ಯಾಂಕ್ ಪ್ರತಿನಿಧಿ ನಿರ್ವಹಿಸುತ್ತಾರೆ. ಬಳಿಕ ಇಡೀ ಪ್ರಕ್ರಿಯೆ ಬಗ್ಗೆ ನಿಮಗೆ ವಿವರಣೆ ನೀಡುತ್ತಾರೆ. ಸೂಕ್ತ ಸ್ಥಳದಲ್ಲಿ ಚೆಕ್ ಹಾಕಿದ ಬಳಿಕ ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಆಗ ನೀವು ನಿಮ್ಮ ದಾಖಲೆಯನ್ನು ಎಟಿಎಂ ನಲ್ಲೆ ಸ್ಕ್ಯಾನ್ ಮಾಡಬಹುದು. ನಂತರ ನಿಮ್ಮ ಸಹಿಯನ್ನು ಅಲ್ಲೇ ಸ್ಕ್ರೀನ್ ಮೇಲೆ ಮಾಡಬೇಕಾಗುತ್ತದೆ. ನಿಮ್ಮ ಸಹಿ ಮತ್ತು ದಾಖಲೆ ಪರಿಶೀಲನೆ ಬಳಿಕ ಕೂಡಲೇ ಹಣ ನಿಮ್ಮ ಕೈ ಸೇರಲಿದೆ. ಹಣ ಡ್ರಾ ಮಾಡುವ ಸಂದರ್ಭದಲ್ಲಿ ನಿಮಗೆ ಅಗತ್ಯವಾದ ಮುಖಬೆಲೆಯ ನೋಟನ್ನು ಆಯ್ಕೆ ಮಾಡಿಕೊಳ್ಳಬಹುದು. 


ಎಲ್ಲಾ ಬ್ರಾಂಚ್'ಗಳ ಚೆಕ್ ಬಳಸಿ ಒಂದೇ ಎಟಿಎಂ ನಲ್ಲಿ ಹಣ ಪಡೆಯಿರಿ
ಕೇವಲ ಸ್ಥಳೀಯ ಚೆಕ್ ಗಳಷ್ಟೇ ಅಲ್ಲದೆ, ಅದೇ ಬ್ಯಾಂಕಿನ ಇತರ ಬ್ರಾಂಚ್ ಗಳ ಖಾತೆದಾರರೂ ಸಹ ಒಂದೇ ಎಟಿಎಂನಲ್ಲಿ ಚೆಕ್ ಬಳಸಿ ಹಣ ಡ್ರಾ ಮಾಡಿಕೊಳ್ಳಬಹುದು. ಈ ಸೇವೆಯಾ ಮತ್ತೊಂದು ಉಪಯೋಗವೆಂದರೆ ಇದು ವಾರದ ಏಳೂ ದಿನಗಳೂ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. 


ಆಧಾರ್ ಸಂಖ್ಯೆ ಬಳಸಿಯೂ ಹಣ ಡ್ರಾ ಮಾಡಬಹುದು
ಈ ಎಟಿಎಂ ಗಳಲ್ಲಿ ಚೆಕ್ ಮೂಲಕ ಅಷ್ಟೇ ಅಲ್ಲದೆ, ಡೆಬಿಟ್ ಕಾರ್ಡ್ ಬಳಸದೆ ಕೇವಲ ಆಧಾರ್ ಸಂಖ್ಯೆ ಬಳಸಿಯೂ ಹಣ ಡ್ರಾ ಮಾಡಬಹುದು. ಅದಕ್ಕಾಗಿ ನೀವು ನಿಮ್ಮ ಆಧಾರ್ ಸಂಖ್ಯೆ ಹಾಕಿದ ಬಳಿಕ ಬಯೋಮೆಟ್ರಿಕ್ ದೃಢೀಕರಣವನ್ನು ಮಾಡಬೇಕಾಗುತ್ತದೆ. ನಗದು ಠೇವಣಿ ಮತ್ತು ಕೆವೈಸಿ ಅಪ್ಡೇಟ್ ಕಾರ್ಯ ಕೂಡ ಅದೇ ಎಟಿಎಂ ನಲ್ಲಿ ಮಾಡಬಹುದು. ಒಟ್ಟಾರೆಯಾಗಿ, ಈ ಎಟಿಎಂ ಎಲ್ಲೆಡೆ ಸ್ಥಾಪನೆಯಾದರೆ ಸಾಕಷ್ಟು ಕೆಲಸಗಳನ್ನು ನಿರ್ವಹಿಸಲಿದೆ.