ಅಹಮದಾಬಾದ್: ಒಂದು ವೇಳೆ ಸೋಹ್ರಾಬುದ್ದೀನ್ ಎನ್ಕೌಂಟರ್ ಆಗದೆ ಇದ್ದಿದ್ದರೆ ಅಂದಿನ ಗುಜರಾತ್ ಮುಖಮಂತ್ರಿ, ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನ ಹತ್ಯೆ ಮಾಡುತ್ತಿತ್ತು ಎಂಬ ಸ್ಫೋಟಕ ಮಾಹಿತಿಯೊಂದನ್ನು ಗುಜರಾತ್ ನಿವೃತ್ತ ಐಪಿಎಸ್ ಅಧಿಕಾರಿ ಡಿ.ಜಿ.ವಂಜಾರ ಬಹಿರಂಗಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಸೋಹ್ರಾಬುದ್ದೀನ್ ತುಳಸಿರಾಮ್ ಪ್ರಜಾಪತಿ ಪ್ರಕರಣದಲ್ಲಿ ಸಿಬಿಐ ಕೋರ್ಟ್ ತೀರ್ಪು ಪ್ರಕಟಿಸಿದ ಬಳಿಕ ಹೇಳಿಕೆ ನೀಡಿರುವ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ನಿವೃತ್ತ ಪೋಲಿಸ್ ಅಧಿಕಾರಿ ಡಿ.ಜೆ.ವಂಜಾರ ಅವರು, ಗುಜರಾತ್ ಪೊಲೀಸರು ಸೋಹ್ರಾಬುದ್ದೀನ್ ಅನ್ನು ಎನ್ಕೌಂಟರ್ ಮಾಡದೇ ಇದ್ದಿದ್ದರೆ ಗುಜರಾತ್ ಅನ್ನು ಮತ್ತೊಂದು ಕಾಶ್ಮೀರವನ್ನಾಗಿ ಮಾಡುವುದಕ್ಕೆ ಪಾಕಿಸ್ತಾನ ಸಂಚು ರೂಪಿಸಿ ಮೋದಿ ಅವರನ್ನು ಹತ್ಯೆ ಮಾಡಲು ಹವಣಿಸುತ್ತಿತ್ತು. ಕೇಂದ್ರದಲ್ಲಿದ್ದ ಯುಪಿಎ ಮತ್ತು ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ನಡುವಿನ ರಾಜಕೀಯ ಯುದ್ಧದಲ್ಲಿ ಗುಜರಾತ್, ರಾಜಸ್ಥಾನ ಹಾಗೂ ಆಂಧ್ರ ಪ್ರದೇಶದ ಪೊಲೀಸ್ ಅಧಿಕಾರಿಗಳನ್ನು ಬಲಿಪಶುಗಳನ್ನಾಗಿ ಮಾಡಲಾಯಿತು ಎಂದು ಹೇಳಿದ್ದಾರೆ. 


ಸೊಹ್ರಾಬುದ್ದೀನ್ ಎನ್ಕೌಂಟರ್ ಗೆ ಸಂಬಂಧಿಸಿದಂತೆ ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಎಲ್ಲಾ 22 ಆರೋಪಿಗಳನ್ನೂ ಖುಲಾಸೆಗೊಳಿಸಿತ್ತು. ಹತ್ಯೆಗೀಡಾದವರ ಸಾವಿನಿಂದ ಬೇಜಾರಾಗಿದೆ, ಸಾಕ್ಷ್ಯವಿಲ್ಲದಿದ್ದರಿಂದ ಎಲ್ಲ ಆರೋಪಿಗಳನ್ನು ಖುಲಾಸೆ ಮಾಡಬೇಕಾಯಿತು ಎಂದು ನ್ಯಾಯಾಧೀಶ ಎಸ್.ಜೆ.ಶರ್ಮಾ ವಿಷಾದ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ವಂಜಾರ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.