ಕಾರಿಗೆ ಬೆಂಕಿ: ಮಹಿಳೆ, ಇಬ್ಬರು ಪುತ್ರಿಯರು ಸಜೀವ ದಹನ
ಕಾರಿನಲ್ಲಿದ್ದ ಸಿಎನ್ ಜಿ ಸೋರಿಕೆಯಿಂದಾಗಿ ಈ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖಾ ವರದಿಯಿಂದ ತಿಳಿದುಬಂದಿದೆ.
ದೆಹಲಿ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಪರಿಣಾಮ ಕಾರಿನಲ್ಲಿದ್ದ ಮಹಿಳೆ ಹಾಗೂ ಇಬ್ಬರು ಪುತ್ರಿಯರು ಸಚಿವ ದಹನವಾದ ದಾರುಣ ಘಟನೆ ಭಾನುವಾರ ಸಂಜೆ ದೆಹಲಿಯಲ್ಲಿ ನಡೆದಿದೆ.
ಭಾನುವಾರ ಸಂಜೆ 6.30ರ ಸಮಯದಲ್ಲಿ ದೆಹಲಿಯ ಅಕ್ಷರಧಾಮ ಫ್ಲೈ ಓವರ್ ನಲ್ಲಿ ಚಲಿಸುತ್ತಿದ್ದ ಡ್ಯಾಟ್ಸನ್ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲಿದ್ದ 35 ವರ್ಷದ ಮಹಿಳೆ ರಂಜನಾ ಮಿಶ್ರಾ ಹಾಗೂ ಇಬ್ಬರು ಹೆಣ್ಣು ಮಕ್ಕಳಾದ ರಿಧಿ ಮತ್ತು ನಿಕ್ಕಿ ಸಜೀವ ದಹನವಾಗಿದ್ದಾರೆ. ಆದರೆ ಪತಿ ಹಾಗೂ ಮೂರನೆ ಪುತ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಕಾರಿನಲ್ಲಿದ್ದ ಸಿಎನ್ ಜಿ ಸೋರಿಕೆಯಿಂದಾಗಿ ಈ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖಾ ವರದಿಯಿಂದ ತಿಳಿದುಬಂದಿದೆ. ಘಟನೆ ವೇಳೆ ರಂಜನಾ ಮಿಶ್ರಾ ಪತಿ ಉಪೇಂದ್ರ ಮಿಶ್ರಾ ಕಾರು ಚಲಾಯಿಸುತ್ತಿದ್ದರು. ಬೆಂಕಿ ಹೊತ್ತಿಕೊಂಡ ತಕ್ಷಣ ಒಬ್ಬ ಮಗಳನ್ನು ಎತ್ತಿಕೊಂಡು ಕಾರಿನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮೂವರು ಗುರುತಿಸಲಾಗದಂತೆ ಸುಟ್ಟು ಕರಕಲಾಗಿದ್ದಾರೆ ಎನ್ನಲಾಗಿದೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಪೂರ್ವ ವಿಭಾಗದ ಡಿಸಿಪಿ ಜಸ್ಮೀತ್ ಸಿಂಗ್, ಈ ಬಗ್ಗೆ ಹೆಚ್ಚಿನ ತನಿಖೆಗೆ ಆದೇಶಿಸಲಾಗುವುದು ಎಂದಿದ್ದಾರೆ.