VIDEO: ರಸ್ತೆ ಸೌಲಭ್ಯ ಇಲ್ಲದೆ ಬಿದಿರಿಗೆ ಬಟ್ಟೆ ಕಟ್ಟಿ ಗರ್ಭಿಣಿಯನ್ನು ಹೊತ್ತೊಯ್ದ ಕುಟುಂಬ
ಸಕಾಲಕ್ಕೆ ಆಸ್ಪತ್ರೆಗೆ ತಲುಪಲಾಗದ ತುಂಬು ಗರ್ಭಿಣಿಯೊಬ್ಬಳು ಮಾರ್ಗಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆ ತೆಲಂಗಾಣದ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ಹೈದರಾಬಾದ್: ರಸ್ತೆ ಸೌಕರ್ಯ ಇಲ್ಲದ ಕಾರಣ ಸಕಾಲಕ್ಕೆ ಆಸ್ಪತ್ರೆಗೆ ತಲುಪಲಾಗದ ತುಂಬು ಗರ್ಭಿಣಿಯೊಬ್ಬಳು ಮಾರ್ಗಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆ ತೆಲಂಗಾಣದ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮಸಾಕಾ ಗ್ರಾಮದ ತುಂಬು ಗರ್ಭಿಣಿಯೋಬ್ಬಳಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬದವರು ಆಕೆಯನ್ನು ಒಂದು ಬೊಂಬಿಗೆ ಬಟ್ಟೆ ಕತ್ತಿ, ಅದರಲಿ ಆಕೆಯನ್ನು ಕೂರಿಸಿಕೊಂಡು ಹೊತ್ತೊಯ್ದಿದ್ದಾರೆ. ಆದರೆ ಗ್ರಾಮದಿಂದ ಆಸ್ಪತ್ರೆಗೆ 7 ಕಿ.ಮೀ. ದೂರವಿದ್ದು, ಆಕೆಯನ್ನು ಕಾಡಿನಿಂದ ಮುಖ್ಯ ರಸ್ತೆಯವರೆಗೆ ಅಂದರೆ, 4 ಕಿ.ಮೀ. ವರೆಗೆ ಹೊತ್ತೊಯ್ದಿದ್ದಾರೆ.
ಆದರೆ, ಮಾರ್ಗಮಧ್ಯದಲ್ಲೇ ಹೆರಿಗೆ ನೋವು ಹೆಚ್ಚಾಗಿ ಆಕೆ, ಅರ್ಧ ದಾರಿಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ ಎನ್ನಲಾಗಿದೆ. ನಂತರ ಮಗುವಿನೊಂದಿಗೆ ಆಕೆಯನ್ನು ಮನೆಗೆ ಕರೆತರಲಾಗಿದೆ.
ಈ ಘಟನೆ ನಂತರ ಗ್ರಾಮಸ್ಥರು ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇಂದಿಗೂ ದೇಶದಲ್ಲಿ ಹಲವು ಗ್ರಾಮಗಳು ರಸ್ತೆ ಸೌಲಭ್ಯದಿಂದ ವಂಚಿತವಾಗಿವೆ ಎಂಬುದಕ್ಕೆ ಇಂತಹ ಘಟನೆಗಳೇ ನಿದರ್ಶನಗಳಾಗಿವೆ. ಇನ್ನಾದರೂ ನಮ್ಮ ರಾಜಕೀಯ ನಾಯಕರು, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುತ್ತಾರೆಯೇ ಎಂದು ಕಾದುನೋಡಬೇಕಿದೆ.