ಥಾಣೆ ರೈಲ್ವೆ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
ಪೂಜಾ ಚೌಹಾನ್(20) ಎಂಬ ಮಹಿಳೆಗೆ ಶನಿವಾರ ಮುಂಜಾನೆಯೇ ರೈಲಿನಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು.
ಥಾಣೆ: ಕೊಂಕಣ್ ಕನ್ಯಾ ಎಕ್ಸ್ ಪ್ರೆಸ್ ರೈಲಿನಲ್ಲಿ ಮುಂಬೈಗೆ ಚಲಿಸುತ್ತಿದ್ದ ಮಹಿಳೆಯೊಬ್ಬರಿಗೆ ಥಾಣೆ ರೈಲ್ವೆ ನಿಲ್ದಾಣದ ಕ್ಲಿನಿಕ್ ನಲ್ಲಿ ಹೆರಿಗೆಯಾದ ಘಟನೆ ಶನಿವಾರ ನಡೆದಿದೆ.
ಪೂಜಾ ಚೌಹಾನ್(20) ಎಂಬ ಮಹಿಳೆಗೆ ಶನಿವಾರ ಮುಂಜಾನೆಯೇ ರೈಲಿನಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಬಳಿಕ ರೈಲ್ವೆ ಅಧಿಕಾರಿಗಳು ಥಾಣೆ ಸ್ಟೇಷನ್ ಮ್ಯಾನೇಜರ್'ಗೆ ವಿಷಯ ತಿಳಿಸಿ ಹೆರಿಗೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ್ದರು ಎನ್ನಲಾಗಿದೆ.
ಬಳಿಕ ಥಾಣೆ ರೈಲ್ವೆ ನಿಲ್ದಾಣದ 1 ರೂ. ಕ್ಲಿನಿಕ್ ಗೆ ಮಹಿಳೆಯನ್ನು ಸ್ಟ್ರೆಚರ್ ನಲ್ಲಿ ಕರೆದೊಯ್ದಿದ್ದಾರೆ. ಕೂಡಲೇ ಅಲ್ಲಿನ ವೈದ್ಯರು ಪರಿಶೀಲಿಸಿ ಆಕೆ ಹೆರಿಗೆಯನ್ನು ಸುಸೂತ್ರವಾಗಿ ನೆರವೇರಿಸಿದ್ದು, ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು 1 ರೂ. ಕ್ಲಿನಿಕ್ ನ ವೈದ್ಯರು ತಿಳಿಸಿದ್ದಾರೆ.