ಶಬರಿಮಲೆ ವಿವಾದ: ದೇವಸ್ಥಾನ ಖಾಸಗಿ ಸ್ವತ್ತಲ್ಲ; ಮಹಿಳೆಯರೂ ಪ್ರವೇಶಿಸಬಹುದು- ಸುಪ್ರೀಂ ಕೋರ್ಟ್
ನವದೆಹಲಿ: ಕೇರಳ ರಾಜ್ಯದಲ್ಲಿರುವ ಸುಪ್ರಸಿದ್ಧ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರೂ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಿರುವುದಕ್ಕೆ ಸಂಬಂಧಿಸಿದಂತೆ ಬುಧವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಾಧೀಶರಾದ ಆರ್.ಎಫ್.ನಾರಿಮನ್, ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ ಅವರಿದ್ದ ಸಂವಿಧಾನ ಪೀಠ, ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧಿಸುವುದು ಸಂವಿಧಾನಕ್ಕೆ ವಿರುದ್ಧವಾದುದು. ಪುರುಷರಂತೆಯೇ ಮಹಿಳೆಯರಿಗೂ ಪ್ರಾರ್ಥನೆ ಮಾಡಲು ಸಮಾನ ಹಕ್ಕಿದೆ ಎಂದು ಅಭಿಪ್ರಾಯಪಟ್ಟಿದೆ.
ದೇವಾಲಯದಲ್ಲಿ ಮಹಿಳೆಯರ ಪ್ರವೇಶ ನಿರ್ಬಂಧಿಸುವ ಮೂಲಕ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಅರ್ಜಿ ವಿಚಾರಣೆಯನ್ನು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆಸಿದ್ದ ಸುಪ್ರೀಂಕೋರ್ಟ್, ಮಹತ್ವದ ಐದು ಪ್ರಶ್ನೆಗಳನ್ನು ರಚಿಸಿ ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು.
ಈ ಸಂಬಂಧದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮಹಿಳೆಯರಿಗೆ ದೇವಾಲಯ ಪ್ರವೇಶ ಅವಕಾಶ ಕಲ್ಪಿಸಿ ತೀರ್ಪು ನೀಡಿದೆ.