ನವದೆಹಲಿ: "ಪ್ರತಿಕಾರದ ಹಾಗೂ ಕ್ರೂರ ರಾಜಕೀಯ ವಾತಾವರಣವಿದೆ. ಆದರೆ ನನಗೆ ಗೊತ್ತು, ಜನರ ಸೇವೆ ಮಾಡಬೇಕಾಗಿರುವುದು ಆಕೆಯ ಕರ್ತ್ಯವ್ಯ, ಈಗ ಆಕೆಯನ್ನು ನಾವು ಜನರ ಕೈಗೆ ನೀಡುತ್ತಿದ್ದೇವೆ. ದಯವಿಟ್ಟು ಆಕೆಯನ್ನು ಸುರಕ್ಷಿತವಾಗಿಡಿ" ಎಂದು ಪತ್ನಿ ಪ್ರಿಯಾಂಕ ಗಾಂಧಿಯವರ ರಾಜಕೀಯ ಪ್ರವೇಶದ ಬಳಿಕ ಭಾವನಾತ್ಮಕ ಪತ್ರ ಬರದಿದ್ದ ರಾಬರ್ಟ್ ವಾದ್ರಾ, ನನ್ನ ಹೆಸರು ಎಲ್ಲಾ ವಿಚಾರಣೆಯಿಂದ ಮುಕ್ತವಾದ ನಂತರವಷ್ಟೇ ರಾಜಕೀಯ ಪ್ರವೇಶಿಸುತ್ತೇನೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

"ನಾನು ಏನನ್ನೂ ಮರೆಮಾಡಲು ಬಯಸುವುದಿಲ್ಲ. ನನ್ನ ಕೆಲಸವು ಕಾನೂನಿನ ಚೌಕಟ್ಟಿನೊಳಗಿದೆ. ನಾನು ಕಾನೂನನ್ನು ಪಾಲಿಸುತ್ತೇನೆ. ನಾನೆಂದೂ ಈ ದೇಶವನ್ನು ಬಿಟ್ಟು ಹೋಗುವುದಿಲ್ಲ, ನನ್ನ ಹೆಸರು ಎಲ್ಲಾ ವಿಚಾರಣೆಯಿಂದ ಮುಕ್ತವಾದ ನಂತರವಷ್ಟೇ ರಾಜಕೀಯಕ್ಕೆ ಬರುತ್ತೇನೆ" ಎಂದು ವಾದ್ರಾ ಹೇಳಿದರು.


ನಾನು ದೇಶದಲ್ಲೇ ಇದ್ದೇನೆ. ಈ ದೇಶದಲ್ಲಿ ಅದೆಷ್ಟೋ ವಾಣಿಜ್ಯೋದ್ಯಮಿಗಳು ಲೂಟಿ ಮಾಡಿ ಪಲಾಯನಗೈದಿದ್ದಾರೆ. ಅವರನ್ನು ದೇಶಕ್ಕೆ ವಾಪಸ್ ಕರೆತರುವ ಕೆಲಸ ಎಲ್ಲಿಯ ತನಕ ಬಂತು ಎಂದು ವಾದ್ರಾ ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.


ಫೆಬ್ರವರಿ 28 ರಂದು ರಾಬರ್ಟ್ ವಾದ್ರಾ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹ ಹಬ್ಬಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವಾದ್ರಾ, ನನಗೆ ಯಾವುದೇ ಆತುರವಿಲ್ಲ. ರಾಜಕೀಯ ಪ್ರವೇಶಕ್ಕೆ ಸಮಯ ಇನ್ನು ಕೂಡಿ ಬಂದಿಲ್ಲ ಎಂದಿದ್ದರು.


ಕಳೆದ ಡಿಸೆಂಬರ್ 7 ರಂದು ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್‌ ವಾದ್ರಾ ಅವರ ಮೇಲೆ ಐಟಿ ಮತ್ತು ಇಡಿ ದಾಳಿ ನಡೆದಿತ್ತು. ತನಿಖೆ ನಂತರ ಇಡಿಯು ವಾದ್ರಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿತ್ತು. ಲಂಡನ್‌ ಮೂಲದ ಸಂಸ್ಥೆಗೆ 17.77 ಕೋಟಿ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ರಾಬರ್ಟ್‌ ವಾದ್ರಾ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ. ರಾಬರ್ಟ್‌ ವಾದ್ರಾ ಲಂಡನ್‌ನಲ್ಲಿ ಮಿಲಿಯನ್ ಪೌಂಡ್ ಮೌಲ್ಯದ ಎಂಟು ಆಸ್ತಿಗಳ ಒಡೆತನ ಹೊಂದಿದ್ದಾರೆ ಎಂದು ಇಡಿ ಹೇಳಿದೆ.