CORONAVIRUS: ಕೊರೊನಾ ವೈರಸ್ ಸೋಂಕಿನಿಂದ ದೂರವಿರಲು ಈ 5 ಉಪಾಯ ಅನುಸರಿಸಿ
ಈ ಕೆಳಗೆ ಸೂಚಿಸಲಾಗಿರುವ ಐದು ಉಪಾಯಗಳನ್ನು ಅನುಸರಿಸಿ ನೀವು ಕೊರೊನಾ ವೈರಸ್ ಸೋಂಕಿನಿಂದ ದೂರವಿರಬಹುದು.
ನವದೆಹಲಿ: ಮಹಾಮಾರಕ ರೋಗವಾಗಿ ಪರಿಣಮಿಸುತ್ತಿರುವ ವುಹಾನ್ ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕಿತ ಪ್ರಕರಣಗಳು ಇದೀಗ ಭಾರತದಲ್ಲಿಯೂ ಕೂಡ ಕಂಡುಬರಲಾರಂಭಿಸಿವೆ. ಸದ್ಯ ಆರೋಗ್ಯ ಇಲಾಖೆ ಈ ಪ್ರಕರಣಗಳ ಕುರಿತು ಅಧ್ಯಯನ ಮುಂದುವರೆಸಿದೆ. ಆದರೆ, ಇದುವರೆಗೆ ಯಾವುದೇ ನಿಶ್ಚಿತ ಪ್ರಕರಣ ಭಾರತದಲ್ಲಿ ಬೆಳಕಿಗೆ ಬಂದಿಲ್ಲ. ಆದರೂ ಸಹಿತ ಈ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಡಾ. ಮೊಹಸೀನ್ ವಾಲಿ ಕೆಲ ಉಪಾಯಗಳನ್ನು ಸೂಚಿಸಿದ್ದಾರೆ. ನೀವೂ ಕೂಡ ಈ ಉಪಾಯಗಳನ್ನು ಅನುಸರಿಸಿ ಮುಂಜಾಗ್ರತೆ ವಹಿಸಿಕೊಳ್ಳಿ.
ಕೈಗಳನ್ನು ಹೀಗೆ ಸ್ವಚ್ಛಗೊಳಿಸಿ
ಶಾಸ್ತ್ರಜ್ಞರ ಪ್ರಕಾರ ಚಳಿಗಾಲದಲ್ಲಿ ಈ ವೈರಸ್ ಸೋಂಕು ವ್ಯಾಪಕ ಪ್ರಮಾಣದಲ್ಲಿ ಹರಡುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಈ ಸೋಂಕಿನಿಂದ ದೂರ ಉಳಿಯಲು ಆದಷ್ಟು ಹೆಚ್ಚು ಬಾರಿ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ. ಒಮ್ಮೆ ಕೈತೊಳೆಯುವಾಗ ಕನಿಷ್ಠ 20 ಸೆಕೆಂಡ್ ಕೈತೊಳೆಯಿರಿ. ಒಂದು ವೇಳೆ ನಿಮಗೆ ಸಾಬೂನು ಸಿಗದೆ ಹೋದಲ್ಲಿ, ಯಾವುದಾದರೊಂದು ಅಲ್ಕೋಹಾಲ್ ಅಂಶವಿರುವ ಸ್ಯಾನಿಟೈಸರ್ ನ ಬಳಕೆ ಮಾಡಿ.
ಕಣ್ಣು, ಮೂಗು ಹಾಗೂ ಬಾಯಿಯನ್ನು ಆದಷ್ಟು ಕಡಿಮೆ ಸ್ಪರ್ಶಿಸಿ
ಯಾವುದೇ ರೀತಿಯ ಕೆಮ್ಮು-ಶೀತ ಅಥವಾ ಜ್ವರ ಬಂದರೆ, ನಿಮ್ಮ ಕಣ್ಣು, ಮೂಗು ಹಾಗೂ ಬಾಯಿಯನ್ನು ಹೆಚ್ಚು ಸ್ಪರ್ಶಿಸಬೇಡಿ. ನಿಮ್ಮ ಕುಟುಂಬದಲ್ಲಿ ಯಾವುದೇ ಸದಸ್ಯ ಕೆಮ್ಮು, ಶೀತ ಹಾಗೂ ಜ್ವರದಿಂದ ಬಳಲುತ್ತಿದ್ದರೂ ಕೂಡ ನೀವು ನಿಮ್ಮ ಕಣ್ಣು, ಮೂಗು ಹಾಗೂ ಬಾಯಿಯನ್ನು ಹೆಚ್ಚು ಸ್ಪರ್ಶಿಸಬೇಡಿ.
ಕಾಯಿಲೆಯಿಂದ ಬಳಲುತ್ತಿರುವವರಿಂದ ದೂರ ಇರಿ
ಶೀತದಿಂದ ಬಳಲುತ್ತಿರುವ, ಶರೀರದಲ್ಲಿ ನಡುಕ ಅನುಭವಿಸುತ್ತಿರುವ ಅಥವಾ ನೆಗಡಿ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳಿಂದ ದೂರವಿರಿ. ಅಷ್ಟೇ ಅಲ್ಲ ಸೋಂಕಿಗೆ ಗುರಿಯಾದವರೂ ಕೂಡ ಶೀನುವಾಗ ಕರವಸ್ತ್ರದ ಬಳಕೆ ಮಾಡಿ, ಸಾಮಾನ್ಯ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಕೈಕುಲುಕುವುದು ಹಾಗು ತಬ್ಬಿಕೊಳ್ಳುವುದರಿಂದ ದೂರ ಇರಿ
ದಿನದಲ್ಲಿ ಮೊದಲ ಬಾರಿಗೆ ಭೇಟಿಯಾದಾಗ ಜನರು ಕೈಕುಲುಕುವುದು ಹಾಗೂ ತಬ್ಬಿಕೊಳ್ಳುವುದು ಒಂದು ಸಾಮಾನ್ಯ ಪ್ರಕ್ರಿಯೆ. ಈ ಸೋಂಕು ವ್ಯಾಪಕ ಪ್ರಮಾಣದಲ್ಲಿ ಹರಡಲು ಸ್ಪರ್ಶ ಒಂದು ದೊಡ್ಡ ಕಾರಣವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಒಂದು ಪ್ರವಾಸದಿಂದ ಬರುವ ಪ್ರಯಾಣಿಕರಿಂದ ಅಂತರ ಕಾಯ್ದುಕೊಳ್ಳಿ ಎಂದು ವೈದ್ಯರು ಹೇಳಿದ್ದಾರೆ.
ಮೇಲಿಂದ ಮೇಲೆ ಬಳಕೆಯಾಗುವ ವಸ್ತುಗಳನ್ನು ಶುಚಿಯಾಗಿಡಿ
ಬಾಗಿಲು ಕೊಂಡಿ, ಟಾಯ್ಲೆಟ್ ನಲ್ಲಿ ಹಾಗೂ ಟಿವಿ ರಿಮೋಟ್ ಗಳಂತಹ ವಸ್ತುಗಳು ಮನೆಯಲ್ಲಿ ಮೇಲಿಂದ ಮೇಲೆ ಬಳಸಲಾಗುತ್ತದೆ. ಆದ್ದರಿಂದ, ಕಾಲ ಕಾಲಕ್ಕೆ ತಕ್ಕಂತೆ ಈ ವಸ್ತುಗಳನ್ನು ಶುಚಿಯಾಗಿಡುವುದು ಅಗತ್ಯವಾಗಿದೆ. ಇವುಗಳಿಂದಲೂ ಕೂಡ ಸೋಂಕು ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕೇಂದ್ರ ಆರೋಗ್ಯ ಇಲಾಖೆ ಕೆಮ್ಮು, ಜ್ವರ ಅಥವಾ ನಿಮೋನಿಯಾ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಲು ಸಾರ್ವಜನಿಕರಿಗೆ ಸೂಚನೆ ನೀಡಿದೆ.