ಗುರುತನ್ನು ಮರೆಮಾಚಲು `Made In India` ಬೋರ್ಡ್ ಹಾಕಲು ಮುಂದಾದ ಚೈನಾ ಕಂಪನಿ
ಸ್ಮಾರ್ಟ್ ಫೋನ್ ತಯಾರಕ ಕಂಪನಿ ಶಾವೋಮಿ ತನ್ನ ರಿಟೇಲ್ ಅಂಗಡಿಗಳ ಮೇಲಿನ ಸೈನ್ ಬೋರ್ಡ್ ಹಾಗೂ ತನ್ನ ಲೋಗೋ ಎರಡನ್ನೂ ಕೂಡ `ಮೇಡ್ ಇನ್ ಇಂಡಿಯಾ` ಬರೆದ ಮರೆಮಾಚುವ ಯತ್ನದಲ್ಲಿ ತೊಡಗಿದೆ.
ನವದೆಹಲಿ:ಸ್ಮಾರ್ಟ್ ಫೋನ್ ತಯಾರಕ ಕಂಪನಿ ಶಾವೋಮಿ ತನ್ನ ರಿಟೇಲ್ ಅಂಗಡಿಗಳ ಮೇಲಿನ ಸೈನ್ ಬೋರ್ಡ್ ಹಾಗೂ ತನ್ನ ಲೋಗೋ ಎರಡನ್ನೂ ಕೂಡ 'ಮೇಡ್ ಇನ್ ಇಂಡಿಯಾ' ಬರೆದ ಮರೆಮಾಚುವ ಯತ್ನದಲ್ಲಿ ತೊಡಗಿದೆ. ಭಾರತ ಹಾಗೂ ಚೀನಾ ದೇಶಗಳ ನಡುವೆ ಏರ್ಪಟ್ಟಿರುವ ಬಿಕ್ಕಟ್ಟು ಹಾಗೂ ನಂತರದ ಕಾಲದಲ್ಲಿ ಚೀನಾ ಸರಕುಗಳ ಪ್ರತಿ ನಾಗರಿಕರಲ್ಲಿ ಉಂಟಾಗಿರುವ ಚೀನಾ ವಿರೋಧಿ ಭಾವನೆಯ ಹಿನ್ನೆಲೆ ಚೀನಾ ಮೊಬೈಲ್ ತಯಾರಕ ಕಂಪನಿ ತಮ್ಮ ಮೊಬೈಲ್ ಅಂಗಡಿಗಳ ಹೊರಗಿನ ತನ್ನ ಅಧಿಕೃತ ಲೋಗೋಗಳ ಮೇಲೆ ಬಿಳಿ ಬಣ್ಣದ ಅಕ್ಷರಗಳಲ್ಲಿ ಮೇಡ್ ಇನ್ ಇಂಡಿಯಾ ಬರೆಯುವ ಮೂಲಕ ಲೋಗೋ ಮರೆಮಾಚಲು ಆರಂಭಿಸಿದೆ. ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಗುರುವಾರ ಈ ಮಾಹಿತಿ ನೀಡಿದೆ.
ಈ ಕುರಿತು ಚೈನೀಸ್ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳಿಗೆ ಪತ್ರ ಬರೆದಿರುವ AIMRA, ಅಂಗಡಿಗಳು ಹಾಗೂ ಉತ್ಪನ್ನಗಳಿಗೆ ಸಿಗುತ್ತಿರುವ ಬೆದರಿಕೆಗಳ ಹಿನ್ನೆಲೆ ಕಂಪನಿಗಳು ತಮ್ಮ ಬ್ರಾಂಡಿಂಗ್ ಅನ್ನು ಮರೆಮಾಚಬೇಕು ಅಥವಾ ತೆಗೆದುಹಾಕಬೇಕು ಎಂದು ಸೂಚಿಸಲಾಗಿದೆ. ಹೀಗಾಗಿ ಕಂಪನಿಗಳು ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ. ಲಡಾಖ್ ನ ಗಾಲ್ವನ್ ಕಣಿವೆಯಲ್ಲಿ ಜೂನ್ 15ರ ರಾತ್ರಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಜೊತೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇದಾದ ಬಳಿದ ಭಾರತದಲ್ಲಿ ಜನಸಾಮಾನ್ಯರಲ್ಲಿ ಚೀನಾ ವಿರೋಧಿ ಭಾವನೆ ಮೂಡಿದೆ.
ಇದಕ್ಕೆ ಸಂಬಂಧಿಸಿದಂತೆ ಗುರುವಾರ ಮಾಹಿತಿ ನೀಡಿರುವ AIMRA ರಾಷ್ಟ್ರೀಯ ಅಧ್ಯಕ್ಷ ಅರವಿಂದ್ ಖುರಾನಾ "MI(ಶಾವೊಮಿ) ತನ್ನ ಬೋರ್ಡ್ ಗಳ ಮೇಲೆ ಬಿಳಿ ಬಣ್ಣದ ಅಕ್ಷರಗಳಲ್ಲಿ 'ಮೇಡ್ ಇನ್ ಇಂಡಿಯಾ' ಬ್ಯಾನರ್ ತೂಗುಹಾಕಲು ಆರಂಭಿಸಿದೆ" ಎಂದಿದ್ದಾರೆ. ಆದರೆ, ಈ ಕುರಿತು ಶಾವೊಮಿ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಚೀನೀ ಕಂಪನಿಗಳಿಗೆ ಬರೆದ ಪತ್ರದಲ್ಲಿ AIMRA ತನ್ನ ಎಲ್ಲಾ ಚಿಲ್ಲರೆ ಮಾರಾಟಗಾರರಿಗೆ ತಮ್ಮ ಅಂಗಡಿಗಳ ಮೇಲಿನ ಪ್ಲೆಕ್ಸ್ ಅಥವಾ ಬ್ಯಾನರ್ ಗಳ ಮೇಲಿನ ಸಂಕೇತಗಳನ್ನು ಕೆಲ ತಿಂಗಳುಗಳ ಕಾಲ ಮರೆಮಾಚಲು ಹಾಗೂ ತಮ್ಮ ಅಂಗಡಿಗಳಿಂದ ಚೈನೀಸ್ ಬ್ರಾಂಡ್ ಗಳನ್ನು ತೆಗೆದುಹಾಕಲು ಸೂಚಿಸಬೇಕು ಎಂದು ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಮೊಬೈಲ್ ಮಾರಾಟಗಾರರ ಸಂಘ ಇತ್ತೀಚಿಗೆ ಕೆಲ ಕಿಡಿಗೇಡಿಗಳು ಮುಂಬೈ, ಆಗ್ರಾ ಜಬಲ್ಪುರ್ ಹಾಗೂ ಪಟ್ನಾ ಮಾರುಕಟ್ಟೆಗಳಲ್ಲಿರುವ ಹಲವು ಅಂಗಡಿಗಳ ಮೇಲಿನ ಚೈನಾ ಬ್ರಾಂಡ್ ಸಂಕೇತಗಳಿಗೆ ಹಾನಿ ತಲುಪಿಸಿದ್ದಾರೆ ಎಂದು ಹೇಳಿದೆ.