ನವದೆಹಲಿ: ಯಮುನಾದಲ್ಲಿ ನೀರಿನ ಮಟ್ಟ ಏರುತ್ತಿರುವುದರಿಂದ ಉಂಟಾಗುವ ಪರಿಸ್ಥಿತಿಯನ್ನು ಪರಿಶೀಲಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ತುರ್ತು ಸಭೆ ನಡೆಸಿದರು. ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಮತ್ತು ಇಲಾಖೆಗಳು ಜಾಗರೂಕರಾಗಿರುತ್ತವೆ ಮತ್ತು ಪ್ರವಾಹದಂತಹ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿವೆ ಎಂದು ಭರವಸೆ ನೀಡಿದ ಅವರು, ಹರಿಯಾಣದ ಹಟ್ನಿ ಕುಂಡ್ ಬ್ಯಾರೇಜ್‌ನಿಂದ ಹೊರಬಿಟ್ಟಿರುವ ನೀರು ಬುಧವಾರದೊಳಗೆ ಹೆಚ್ಚು ನೀರು ದೆಹಲಿಯನ್ನು ತಲುಪಲಿದೆ. ಇದರಿಂದಾಗಿ ಯಮುನಾ ನದಿಯ ನೀರಿನ ಮಟ್ಟ ಇನ್ನೂ ಹೆಚ್ಚಾಗಲಿದೆ ಎಂದು ಹೇಳಿದರು.


COMMERCIAL BREAK
SCROLL TO CONTINUE READING

ಹಟ್ನಿ ಕುಂಡ್ ಬ್ಯಾರೇಜ್‌ನಿಂದ ಹರಿಯಾಣ ನೀರು ಬಿಡುಗಡೆ ಮಾಡಿರುವ ಕಾರಣ, ರಾಷ್ಟ್ರೀಯ ರಾಜಧಾನಿ  ದೆಹಲಿಗೆ ಕುಡಿಯುವ ನೀರೊದಗಿಸುವ ಯಮುನಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರಿಸಲಾಗುತ್ತಿದ್ದು, ತುರ್ತು ಸೇವೆಗಳನ್ನು ಸಿದ್ಧಪಡಿಸಲಾಗಿದೆ. 


"ಸೋಮವಾರ ಸಂಜೆ ವೇಳೆಗೆ ನೀರಿನ ಮಟ್ಟ (ಯಮುನಾ ನದಿಯ) ಅಪಾಯದ ಮಟ್ಟವನ್ನು ದಾಟುವ ನಿರೀಕ್ಷೆಯಿದೆ. ಮುಂದಿನ ಎರಡು ದಿನಗಳಲ್ಲಿ ಅಧಿಕ ನೀರು ದೆಹಲಿಗೆ ತಲುಪಬಹುದು" ಎಂದು ಕೇಜ್ರಿವಾಲ್ ಹೇಳಿದರು. "ನಮ್ಮ ಎಲ್ಲಾ ಅಧಿಕಾರಿಗಳು ಮತ್ತು ಮಂತ್ರಿಗಳು 24x7 ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ" ಎಂದು ಸಿಎಂ ಮಾಹಿತಿ ನೀಡಿದರು.


ರಾಜಧಾನಿಯ ಕುಡಿಯುವ ನೀರಿನ ಮುಖ್ಯ ಮೂಲವಾದ ಬ್ಯಾರೇಜ್‌ನಿಂದ ಬಿಡುಗಡೆಯಾದ ನೀರು ಸಾಮಾನ್ಯವಾಗಿ ದೆಹಲಿಯನ್ನು ತಲುಪಲು ಸುಮಾರು 72 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಸೋಮವಾರ ಮಧ್ಯಾಹ್ನದ ಹೊತ್ತಿಗೆ 8 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.


ನದಿಯ ಗರಿಷ್ಠ ನೀರಿನ ಮಟ್ಟ 204.50 ಮೀಟರ್. ಸೋಮವಾರ ಮಧ್ಯಾಹ್ನ ಇದು 205 ಮೀಟರ್ ತಲುಪಿದಾಗ ದೆಹಲಿಯ ಲೋಹಾ ಪುಲ್‌ನಾದ್ಯಂತ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ನಾಗರಿಕ ರಕ್ಷಣಾ ಸ್ವಯಂಸೇವಕರನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.


1978 ರಲ್ಲಿ ದೆಹಲಿಯು ಅತ್ಯಂತ ಭೀಕರ ಪ್ರವಾಹಕ್ಕೆ ಸಾಕ್ಷಿಯಾಯಿತು, ಆ ವೇಳೆ ನದಿಯ ಮಟ್ಟವು 207.49 ಮೀಟರ್ ದಾಖಲೆಯನ್ನು ಮುಟ್ಟಿತು.