ನವದೆಹಲಿ: ಮಾರಕ ಕೊರೊನಾ ವೈರಸ್ ಪ್ರಕೋಪ ಹಾಗೂ ಯಸ್ ಬ್ಯಾಂಕ್ ಸಂಕಷ್ಟದ ಪ್ರಭಾವ ಇದೀಗ ಷೇರು ಮಾರುಕಟ್ಟೆಯಲ್ಲಿ ಗೋಚರಿಸಲಾರಂಭಿಸಿದೆ. ಸೋಮವಾರ ಈ ಸುನಾಮಿ ಮಾರುಕಟ್ಟೆಗೆ ಅಪ್ಪಳಿಸಿದ್ದು, ಸೆನ್ಸೆಕ್ಸ್ 1129 ಅಂಕಗಳ ಕುಸಿತ ಕಂಡು ತನ್ನ ಇಂದಿನ ವಹಿವಾಟನ್ನು 36,476 ಅಂಕಗಳಿಂದ ಆರಂಭಿಸಿದೆ. ಇದೆ ರೀತಿ ನಿಫ್ಟಿ ಸೂಚ್ಯಂಕದಲ್ಲಿಯೂ ಕೂಡ ಭಾರಿ ಕುಸಿತ ಕಂಡು ಬಂದಿದೆ. ನಿಫ್ಟಿ ಒಟ್ಟು 317 ಅಂಕಗಳ ಕುಸಿತ ಕಂಡು ತನ್ನ ವಹಿವಾಟನ್ನು 10672 ಅಂಕಗಳಿಂದ ಆರಂಭಿಸಿದೆ. ಆರ್ಥಿಕ ಹಿಂಜರಿತದ ಭೀತಿ ಹಾಗೂ ಯಸ್ ಬ್ಯಾಂಕ್ ಸಂಕಷ್ಟದ ಹಿನ್ನೆಲೆ ಹೂಡಿಕೆದಾರರಲ್ಲಿ ನಿರಾಶಾದಾಯಕ ವಾತವಾರಣ ಸೃಷ್ಟಿಯಾಗಿರುವುದೇ ಇದಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಶುಕ್ರವಾರ ಕೂಡ ಕೋಲಾಹಲ ಸೃಷ್ಟಿಯಾಗಿತ್ತು
ಕಳೆದ ಶುಕ್ರವಾರ ಕೂಡ ಮಾರುಕಟ್ಟೆಗೆ ಸುನಾಮಿ ಅಪ್ಪಳಿಸಿದ್ದು ಮಾರುಕಟ್ಟೆ ಭಾರಿ ಕುಸಿತ ಕಂಡಿತ್ತು. ಪ್ರಮುಖ ಸೂಚ್ಯಂಕವಾಗಿರುವ ಸೆನ್ಸೆಕ್ಸ್   893.99 ಅಂಕಗಳ ಕುಸಿತದೊಂದಿಗೆ 37,576.62 ಅಂಕಗಳು ಹಾಗೂ 289.45 ಅಂಕಗಳ ಕುಸಿತದೊಂದಿಗೆ ನಿಫ್ಟಿ 10,979.55 ಅಂಕಗಳಿಗೆ ತನ್ನ ದಿನದ ವಹಿವಾಟನ್ನು ಸ್ಥಗಿತಗೊಳಿಸಿದ್ದವು. ಈ ವೇಳೆ ಯಸ್ ಬ್ಯಾಂಕ್ ಷೇರುಗಳಲ್ಲಿ ಶೇ.56 ರಷ್ಟು ಕುಸಿತವಾಗಿರುವುದು ಇಲ್ಲಿ ಉಲ್ಲೇಖನೀಯ. ಬೆಳಗ್ಗೆ ದಿನದ ವಹಿವಾಟು ಆರಂಭಗೊಳ್ಳುತ್ತಲೇ ಮಾರುಕಟ್ಟೆಯಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು.


ಯಸ್ ಬ್ಯಾಂಕ್ ನಿಂದ ತಲೆದೋರಿರುವ ಸಂಕಷ್ಟದ ಹಿನ್ನೆಲೆ ಹೇಳಿಕೆ ನೀಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, "ನಿಮ್ಮ ಹಣ ಸುರಕ್ಷಿತವಾಗಿರಲಿದೆ. ಈ ಕುರಿತು ಭರವಸೆಯನ್ನು ನೀಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್, ಶೀಘ್ರವೇ ಇದಕ್ಕೆ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದ್ದಾರೆ. ಬ್ಯಾಂಕ್ ಖಾತೆದಾರರಿಗೆ ಯಾವುದೇ ರೀತಿಯ ನಷ್ಟ ಉಂಟಾಗುವುದಿಲ್ಲ" ಎಂದು ಹೇಳಿದ್ದಾರೆ.