ವೈಎಸ್ಆರ್ ಕಾಂಗ್ರೆಸ್ ನಾಯಕ ವೈ.ಎಸ್.ವಿವೇಕಾನಂದ ರೆಡ್ಡಿ ನಿಧನ; ಕೊಲೆ ಶಂಕೆ
ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ವೈ.ಎಸ್.ವಿವೇಕಾನಂದ ರೆಡ್ಡಿ(68) ಅವರು ಕಡಪ ಜಿಲ್ಲೆಯ ತಮ್ಮ ನಿವಾಸದಲ್ಲಿ ಶುಕ್ರವಾರ ನಿಧನರಾಗಿದ್ದಾರೆ.
ಅಮರಾವತಿ: ಮಾಜಿ ಮುಖ್ಯಮಂತ್ರಿ ದಿ.ವೈ.ಎಸ್.ರಾಜಶೇಖರ್ ರೆಡ್ಡಿ ತಮ್ಮ ಹಾಗೂ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ವೈ.ಎಸ್.ವಿವೇಕಾನಂದ ರೆಡ್ಡಿ(68) ಅವರು ಕಡಪ ಜಿಲ್ಲೆಯ ತಮ್ಮ ನಿವಾಸದಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಆದರೆ, ವಿವೇಕಾನಂದ ರೆಡ್ಡಿ ಅವರ ಸಾವಿನ ಸ್ವರೂಪದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರ ಆಪ್ತ ಸಹಾಯಕ ಎಂ.ವಿ.ಕೃಷ್ಣ ರೆಡ್ಡಿ, ಇದು ಸಹಜ ಸಾವಲ್ಲ ಕೊಲೆ ಇರಬಹುದು. ಏಕೆಂದರೆ ವಿವೇಕಾನಂದರ ಮಲಗುವ ಕೋಣೆ ಮತ್ತು ಸ್ನಾನದ ಕೋಣೆಯಲ್ಲಿ ರಕ್ತದ ಕಲೆಗಳು ಕಂಡುಬಂದಿದೆ. ಅಷ್ಟೇ ಅಲ್ಲದೆ, ಅವರ ತಲೆಯಲ್ಲಿಯೂ ಎರಡು ಕಡೆ ಗಾಯಗಳಾಗಿದೆ. ಇದನ್ನೆಲ್ಲಾ ಗಮನಿಸಿದರೆ ಸಾವು ಅನುಮಾನಾಸ್ಪದವಾಗಿದೆ ಎಂದು ವಿವರಿಸಿ ಪುಲಿವೆಂಡುಲಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
"ವಿವೇಕಾನಂದ ರೆಡ್ಡಿ ಅವರ ತಲೆಯ ಮೇಲೆ ಎರಡು ಗಾಯದ ಗುರುತುಗಳಿವೆ. ಒಂದು ಮುಂದೆ ಮತ್ತೊಂದು ಹಿಂಭಾಗದಲ್ಲಿ. ಹೀಗಾಗಿ ಅವರ ಸಾವಿನ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಯಬೇಕಿದೆ. ಯಾರೋ ಪಿತೂರಿ ನಡೆಸಿ ಕೊಲೆ ಮಾಡಿದ್ದಾರೆ ಎಂಬ ಅನುಮಾನ ವುಅಕ್ತವಾಗಿದೆ. ಆದರಿಂದ ತನಿಖೆ ನಡೆಯಲೇಬೇಕು" ಎಂದು ಎಂ.ವಿ.ಕೃಷ್ಣ ರೆಡ್ಡಿ ಒತ್ತಾಯಿಸಿದ್ದಾರೆ.
ಗುರುವಾರ ಜಮ್ಮಲಮಡುಗು, ಚಪಡು ಮುಂತಾದೆಡೆ ಚುನಾವಣಾ ಪ್ರಚಾರ ನಡೆಸಿದ್ದ ವಿವೇಕಾನಂದ ರೆಡ್ಡಿ ಅವರು ರಾತ್ರಿ 11.30ರವರೆಗೆ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಬಳಿಕ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಬೆಳಿಗ್ಗೆ ಮನೆಗೆಲಸದವರು ಬಂದಾಗ ಅವರು ಮೃತಪಟ್ಟಿರುವುದು ಕಂಡುಬಂದಿದೆ.
ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದ್ದು ಮೃತದೇಹವನ್ನು ಪುಲಿವೆಂಡುಲಾ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಪೋಲಿಸ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.