ನವದೆಹಲಿ: ಪುಲ್ವಾಮಾ ಭಯೋತ್ಪಾದಕರ ದಾಳಿಯಲ್ಲಿ ಸುಮಾರು 40 ಸಿಆರ್ಪಿಎಫ್ ಸೈನಿಕರು ಮೃತಪಟ್ಟ ಹಿನ್ನಲೆಯಲ್ಲಿ ಈಗ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈಗ ಭಯೋತ್ಪಾದಕರು ಹಾಗೂ ಅವರ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆನ್ನುವ ಕೂಗು ಸಹ ದೇಶದೆಲ್ಲೆಡೆ ವ್ಯಕ್ತವಾಗಿದೆ.


COMMERCIAL BREAK
SCROLL TO CONTINUE READING

ಈಗ ಉಗ್ರರ ದಾಳಿಯಲ್ಲಿ ಬಲಿಯಾದ ಹುತಾತ್ಮ ಸೈನಿಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಜೀ ನ್ಯೂಸ್ ದೇಶದ ಎಲ್ಲ ನಾಗರಿಕರಿಗೆ ಫೆಬ್ರುವರಿ 19 ರಂದು 3 ಗಂಟೆಗೆ ಎರಡು ನಿಮಿಷ ಮೌನಾಚರಣೆ ಸಲ್ಲಿಸಲು ಮನವಿ ಮಾಡಿಕೊಂಡಿದೆ. ಆ ಮೂಲಕ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ನಮನ ಸಲ್ಲಿಸುವ ನಿರ್ಣಯ ಕೈಗೊಂಡಿದೆ. ಈಗಾಗಲೇ ದೇಶಾದ್ಯಂತ ಪ್ರತಿಭಟನೆಯ ಮೂಲಕ ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಕೂಡ ಭಾರತವು ಒಗ್ಗಟ್ಟನ್ನು ಪ್ರದರ್ಶಿಸಿದೆ. ಇದೆ ವೇಳೆ ದೇಶದ ಎಲ್ಲ ನಾಗರಿಕರು ಸರ್ಕಾರಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಒತ್ತಾಯಿಸುತ್ತಿದ್ದಾರೆ.


ಫೆಬ್ರುವರಿ 14ರಂದು ಪುಲ್ವಾಮಾ ದಾಳಿ ದಶಕಗಳ ನಂತರ ನಡೆದ ಭೀಕರ ಉಗ್ರರ ದಾಳಿಯಾಗಿದೆ. ಅಂದು 78 ಬಸ್ ಗಳಲ್ಲಿ 2547 ಸಿಆರ್ಪಿಎಫ್ ಸೈನಿಕರು ಜಮ್ಮುದಿಂದ ಶ್ರೀನಗರಕ್ಕೆ ಸಾಗುತ್ತಿದ್ದಾಗ ಐಇಡಿ ಸ್ಪೋಟಗೊಂಡ ಪರಿಣಾಮವಾಗಿ ಈ ದಾಳಿಯಲ್ಲಿ ಸುಮಾರು 40 ಸೈನಿಕರು ಮೃತಪಟ್ಟಿದ್ದಾರೆ. ಈ ದಾಳಿಯ ವಿಚಾರವಾಗಿ ಗುಪ್ತಚರ ಇಲಾಖೆ ಮೊದಲೇ ಮುನ್ಸೂಚನೆ ನೀಡಿತ್ತು. ಆದರೆ ಇದನ್ನು ಗಂಭೀರವಾಗಿ ತಗೆದುಕೊಳ್ಳದೆ ಇದ್ದುದರಿಂದ ಇಂತಹ ದುರ್ಘಟನೆ ಸಂಭವಿಸಿದೆ. ಈ ದಾಳಿಯ ಹೊಣೆಯನ್ನು ಪಾಕ್ ಮೂಲದ ಜೈಶ್-ಇ-ಮೊಹಮ್ಮದ್ ಸಂಘಟನೆ ಹೊತ್ತಿದೆ.


ಈ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೋಮವಾರದಂದು ಕಾರ್ಯಾಚರಣೆಗೆ ಇಳಿದ ಭದ್ರತಾ ಪಡೆಗಳು ಎನ್ಕೌಂಟರ್ ಮೂಲಕ ಪುಲ್ವಾಮಾ ಆತ್ಮಹತ್ಯೆ ಬಾಂಬ್ ದಾಳಿಯ ರೂವಾರಿಯಾಗಿದ್ದ ಜೈಶ್-ಎ-ಮೊಹಮ್ಮದ್ ನ ಕಮರಾನ್ ಮತ್ತು ಘಜಿ ಸೇರಿದಂತೆ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಮೇಜರ್ ಸೇರಿದಂತೆ ನಾಲ್ವರು ಸೈನಿಕರು ಕೂಡಾ ಸಾವನ್ನಪ್ಪಿದ್ದಾರೆ ಎಂದು ಆರ್ಮಿ ತಿಳಿಸಿದೆ. ಆ ಮೂಲಕ ಕಾಶ್ಮೀರದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಕನಿಷ್ಠ 45 ಭದ್ರತಾ ಸಿಬ್ಬಂದಿಗಳು ತಮ್ಮ ಜೀವವನ್ನು ಕಳೆದುಕೊಂಡಂತಾಗಿದೆ.


ಇನ್ನು ಈ ಉಗ್ರರ ದಾಳಿಯ ನಂತರ ಮಾತನಾಡಿದ ಪ್ರಧಾನಿ ಮೋದಿ ಕಣ್ಣಿರಿನ ಒಂದು ಹನಿಯೂ ಕೂಡ ವ್ಯರ್ಥವಾಗುವುದಿಲ್ಲ. ಭಾರತದ ಸೈನ್ಯಕ್ಕೆ ಎಲ್ಲ ರೀತಿಯ ಸಂಪೂರ್ಣ ಸ್ವಾತಂತ್ರವನ್ನು ನೀಡಲಾಗಿದೆ ಎಂದು ಹೇಳಿದರು. ದಾಳಿಯ ಬೆನ್ನಲ್ಲೇ ಭಾರತವು ಪಾಕ್ ಗೆ ನೀಡಿರುವ ಆಪ್ತ ರಾಷ್ಟ್ರ ಸ್ಥಾನಮಾನವನ್ನು ಹಿಂತೆಗೆದುಕೊಂಡಿದೆ. ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಹಲವು ರಾಜತಾಂತ್ರಿಕ ಮಾರ್ಗಗಳಿಂದ ಪಾಕ್ ನ್ನು ಕಟ್ಟಿ ಹಾಕುವ ಪ್ರಯತ್ನವನ್ನು ಭಾರತ ಮುಂದುವರೆಸಿದೆ.