ಕಲಬುರಗಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮೇ 10ರಂದು ನಡೆಯುವ ಮತದಾನಕ್ಕೆ ಮಹಿಳೆಯರು, ವಿಶೇಷಚೇತನರು ಹಾಗೂ ಯುವ ಸಮೂಹವನ್ನು ಮತಗಟ್ಟೆಯತ್ತ ಆಕರ್ಷಿಸಲು ವಿವಿಧ ಬಣ್ಣ, ಚಿತ್ರಕಲೆಗಳಿಂದ ಸಿಂಗಾರಗೊಳಿಸಿರುವ ಜಿಲ್ಲೆಯಾದ್ಯಂತ 72 ವೈವಿಧ್ಯಮಯ ಮತಗಟ್ಟೆಗಳು ಸ್ಥಾಪಿಸಲಾಗಿದ್ದು, ಮತದಾರರನ್ನು ಮತದಾನಕ್ಕೆ ಕೈಬೀಸಿ ಕರೆಯುತ್ತಿವೆ.


COMMERCIAL BREAK
SCROLL TO CONTINUE READING

ಚಿತ್ರಕಲಾ ಶಿಕ್ಷಕ ರಾಜೇಶ ನೀಲಹಳ್ಳಿ ಸೇರಿದಂತೆ ಸುಮಾರು 40 ಸರ್ಕಾರಿ ಮತ್ತು ಖಾಸಗಿ ಚಿತ್ರಕಲೆ ಶಿಕ್ಷಕರು ಈ ಮತಗಟ್ಟೆಗಳಿಗೆ ಬಣ್ಣ-ಬಣ್ಣದ ಚಿತ್ರಗಳು, ರಂಗು ತುಂಬಿದ್ದು, ಇದೀಗ ಇವು ಆಕರ್ಷಣೀಯ ಕೇಂದ್ರವಾಗಿವೆ.


ವಿಶೇಷವಾಗಿ ಮಹಿಳಾ ಮತದಾರರನ್ನು ಆಕರ್ಷಿಸಲು ಪ್ರತಿ ವಿಧಾನಸಬಾ ಕ್ಷೇತ್ರಕ್ಕೆ 5 ರಂತೆ ಜಿಲ್ಲೆಯಾದ್ಯಂತ 45 ಮಹಿಳಾ ಸಖಿ ಪಿಂಕ್ ಬೂತ್ ಸ್ಥಾಪಿಸಲಾಗಿದ್ದು, ಮತಕೇಂದ್ರದ ಬಾಗಿಲುಗಳನ್ನು ಪಿಂಕ್ ಬಲೂನುಗಳಿಂದ ಕಮಾನು ಮಾಡಿ ಅಲಂಕರಿಸಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಇರಲಿದ್ದಾರೆ. ಎಲ್ಲರೂ ಪಿಂಕ್ ಯೂನಿಫಾರ್ಮ ಹಾಕಿಕೊಂಡು ಕಾರ್ಯನಿರ್ವಹಿಸಲಿದ್ದಾರೆ. ಇಲ್ಲಿ ಸುಗಮ ಮತದಾನಕ್ಕೆ ನೆರವಾಗುವ ರಕ್ಷಣೆಗೆ ಮಹಿಳಾ ಭದ್ರತಾ ಸಿಬ್ಬಂದಿಯನ್ನೇ ನಿಯೋಜಿಸಲಾಗಿದೆ.


ಬಲೂನ್ ಮತ್ತು ಪಿಂಕ್ ಬಣ್ಣದಿಂದ ಮತಗಟ್ಟೆ ಕಂಗೊಳಿಸುತ್ತಿದೆ. ಕೊಠಡಿ, ಮೇಜು, ಬಾಗಿಲು ಎಲ್ಲವು ಗುಲಾಬಿಮಯವಾಗಿದೆ. ಮಹಿಳೆಯರನ್ನು ಮತಗಟ್ಟೆಗೆ ಆಕರ್ಷಿಸುವ ವಿಶಿಷ್ಟ ಪ್ರಯತ್ನವಾಗಿದ್ದು, ಅಷ್ಟೇ ಅಲ್ಲ ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸುವ ಯೋಜನೆ ಇದಾಗಿದೆ.


ತಲಾ 9 ಯುವ ಮತ್ತು ವಿಶೇಷಚೇತನರ ಬೂತ್: ಇದಲ್ಲದೆ ಯುವಕ ಯುವತಿಯರು ಮತು ನೂತನ ಮತದಾರರ ಪಟ್ಟಿಗೆ ಹೆಸರು ಸೇರಿಸಿದ ಯುವ ಮತದಾರರಿಗೆ ಮತದಾನದತ್ತ ಆಕರ್ಷಿಸಲು ಮತ್ತು ಮತದಾನದ ಬಗ್ಗೆ ಜಾಗೃತಿ ಮೂಡಿಸಲೆಂದೇ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರದಲ್ಲಿ ತಲಾ 1 ಯುವ ಬೂತ್ ಸ್ಥಾಪಿಸಿದ್ದು, ಯುವ ಮತ್ತು ಮದ್ಯ ವಯಸ್ಸಿನ ಸಿಬ್ಬಂದಿಗಳನ್ನು ಇಲ್ಲಿ ಕಾಣಬಹುದಾಗಿದೆ. ಅದೇ ರೀತಿ ವಿಶೇಷಚೇತನರಲ್ಲಿ ಜೀವನೋತ್ಸಾಹ ತುಂಬಲು ಕ್ಷೇತ್ರಕ್ಕೆ ಒಂದರಂತೆ 9 ವಿಶೇಷಚೇತನ ಬೂತ್ ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳ ಗೋಡೆಗಳ ಮೇಲೆ ವ್ಹೀಲ್ ಚೇರ್, ಊರುಗೋಲು, ರ್ಯಾಂಪ್, ವಿಶೇಷಚೇತನರಿಗೆ ಮತಗಟ್ಟೆಯಲ್ಲಿ ಕಲ್ಪಿಸಿರುವ ಸೌಕರ್ಯಗಳ ಕುರಿತು ಆಕರ್ಷಕವಾಗಿ ಚಿತ್ರ ಬಿಡಿಸಲಾಗಿದೆ.


9 ಥೀಮ್ ಬೂತ್: ಇನ್ನು ಜಿಲ್ಲೆಯ ಸ್ಥಳೀಯ ಇತಿಹಾಸ, ಮಹಿಮೆ ಸಾರುವ ಕ್ಷೇತ್ರದಲ್ಲಿ ತಲಾ ಒಂದರಂತೆ 9 ವಿಷಯಾಧಾರಿತ ಬೂತ್‍ಗಳು ಸ್ಥಾಪಿಸಿದ್ದು, ಇವು ಈ ಬಾರಿ ಚುನಾವಣೆಯ ಪ್ರಮುಖ ಆಕರ್ಷಣಿಯ ಮತಗಟ್ಟೆಗಳಾಗಿ ಕಾಣಿಸಿಕೊಂಡಿವೆ.


ಇದನ್ನೂ ಓದಿ: ರಾಜ್ಯದ ಎಲ್ಲೆಡೆ ಮತದಾನಕ್ಕೆ ಸಕಲ ಸಿದ್ಧತೆ: ಬಿಗಿ ಬಂದೋಬಸ್ತ್ ವ್ಯವಸ್ಥೆ


ಕ್ಷೇತ್ರದಲ್ಲಿ ಭೀಮೆ ಹರಿಯುತ್ತಿರುವುದರಿಂದ ಅಫಜಲಪುರ ಮತಕ್ಷೇತ್ರದ ಮಣ್ಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಮತಗಟ್ಟೆ ಸಂಖ್ಯೆ-50ರ ಗೋಡೆಗಳ ಮೇಲೆ ಭೀಮಾ ನದಿಯ ಚಿತ್ರ ಬಿಡಿಸಲಾಗಿದೆ. ಜೇವರ್ಗಿ ಮತಕ್ಷೇತ್ರದ ರಾಸಣಗಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ-37ಕ್ಕೆ ಹತ್ತಿ ಮತ್ತು ತೊಗರಿ ಕೃಷಿ ಉತ್ಪನ್ನದ ಚಿತ್ರ ಬಿಡಿಸಿದರೆ, ನಾಗಾವಿ ನಾಡು ಚಿತ್ತಾಪುರ ಕ್ಷೇತ್ರದ ಗುಂಡಗುರ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತಗಟ್ಟೆ ಸಂ.25ರಲ್ಲಿ ಸನ್ನತ್ತಿಯ ಬೌದ್ಧ ಸ್ತೂಪ ಕಂಗೊಳಿಸುತ್ತಿದೆ.


ರಾಷ್ಟ್ರಕೂಟರ ನಾಡು ಸೇಡಂ ಕ್ಷೇತ್ರದ ಮಳಖೇಡ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂ.77ರ ಮೇಲೆ ಮಳಖೇಡದ ಭವ್ಯ ಕೋಟೆ ಕಾಣಬಹುದಾಗಿದೆ. ಜಿಲ್ಲೆಯಲ್ಲಿಯೇ ಹೆಚ್ಚಿನ ಅರಣ್ಯ ಪ್ರದೇಶ ಹೊಂದಿರುವ ಚಿಂಚೋಳಿ ಕ್ಷೇತ್ರದಲ್ಲಿ ಗೋಟೂರ ಸರ್ಕಾರಿ ಹಿರಿಯ ಪ್ರಾಥಮಿಕ ಸಾಲೆ (ಪೂರ್ವ ಭಾಗ) ಮತಗಟ್ಟೆ ಸಂ.42ರಲ್ಲಿ ಕ್ಷೇತ್ರದ ಐತಿಹಾಸಿಕ ತಾಣಗಳಾದ ಚಂದ್ರಂಪಳ್ಳಿ ಜಲಾಶಯ, ಗೊಟ್ಟಂಗೊಟ್ಟ ಸ್ಥಾನ ಪಡೆದಿವೆ.


ಇದನ್ನೂ ಓದಿ: ಜಿಲ್ಲಾ ಚುನಾವಣಾಧಿಕಾರಿ, ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ- ಪರಿಶೀಲನೆ


ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಕ್ಷೇತ್ರವಾದ ಗುಲಬರ್ಗಾ ಗ್ರಾಮೀಣ ಕ್ಷೇತ್ರದ ಸಂಗೋಳಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ಬಲ ಭಾಗ) ಮತಗಟ್ಟೆ ಸಂ.96 ರಲ್ಲಿ ಜಿ.ಐ. ಟ್ಯಾಗ್ ಹೊಂದಿರುವ “ಕೆಂಬಾಳೆ” ಹೊತ್ತ ಮಹಿಳೆಯ ಚಿತ್ರ ಆಕರ್ಷಣೀಯವಾಗಿದೆ ಬಿಂಬಿಸಲಾಗಿದೆ.


ಗುಲಬರ್ಗಾ ದಕ್ಷಿಣ ಕ್ಷೇತ್ರದ ಕಲಬುರಗಿ ನಗರದ ಸಂಗಮೇಶ್ವರ ಕಾಲೋನಿಯಲ್ಲಿರುವ ಎನ್.ವಿ. ಪದವಿ ಪೂರ್ವ ಕಾಲೇಜು ಮತಗಟ್ಟೆ ಸಂ.138 ಮತ್ತು ಗುಲಬರ್ಗಾ ಉತ್ತರ ಕ್ಷೇತ್ರದಲ್ಲಿ ಬರುವ ಕಪನೂರ ಸರ್ಕರಿ ಪ್ರೌಢ ಶಾಲೆ ಮತಗಟ್ಟೆ ಸಂ.1 ರಲ್ಲಿ ಜಿಲ್ಲೆಯ ಪ್ರಮುಖ ಕೃಷಿ ಬೆಳೆ ತೊಗರಿ ಫಸಲು ಮತ್ತು ಕಲಬುರಗಿ ಕೋಟೆ ಎದ್ದು ಕಾಣುತ್ತಿವೆ. ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಆಳಂದ ಕ್ಷೇತ್ರದ ಮೋಘಾ (ಕೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂ.186ರ ಗೋಡೆಗಳು ತೊಗರಿ ಫಸಲನ್ನೇ ಆವರಿಸಿಕೊಂಡಿವೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.