ಬೆಂಗಳೂರು: ಹಿಂದಿ ಹೇರಿಕೆ ವಿರುದ್ಧ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ‘ನಂದಿನಿ ಕನ್ನಡಿಗರ ಸ್ವಾಭಿಮಾನವೇ ಹೊರತು ಅಮುಲ್ ಅಡಿಯಾಳಲ್ಲ’ ಎಂದು ಕಿಡಿಕಾರಿದ್ದಾರೆ.  


COMMERCIAL BREAK
SCROLL TO CONTINUE READING

ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ 'ದಹಿ' ಎಂದು ಮುದ್ರಿಸಿರುವುದು, ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್ ಗೆ ಆದೇಶ ನೀಡಿರುವುದು ತಪ್ಪು.ಇದನ್ನು ಒಪ್ಪಲು ಸಾಧ್ಯವಿಲ್ಲ. ನಂದಿನಿ ಕನ್ನಡಿಗರ ಆಸ್ತಿ, ಕನ್ನಡಿಗರ ಅಸ್ಮಿತೆ ಹಾಗೂ ಕನ್ನಡಿಗರ ಜೀವನಾಡಿ. ಇದು ಗೊತ್ತಿದ್ದರೂ ಹಿಂದಿ ಹೇರಿಕೆಯ ಅಹಂ ತೋರಲಾಗಿದೆ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯದ ಸಭೆಯೊಂದರಲ್ಲಿ, ಗುಜರಾತಿನ ಅಮುಲ್ ಜೊತೆ ನಂದಿನಿಯನ್ನು ವಿಲೀನ ಮಾಡುವುದಾಗಿ ಹೇಳಿದ್ದರು. ಹಿಂದಿ ಪದ ಮುದ್ರಣ ನಂದಿನಿ ಹೈಜಾಕಿನ ಅರಂಭವಾ?’ ಎಂದು ಎಚ್‍ಡಿಕೆ ಪ್ರಶ್ನಿಸಿದ್ದಾರೆ.


‘ಅಮಿತ್ ಶಾ ಅವರ ಹೇಳಿಕೆಯನ್ನು ಕನ್ನಡಿಗರು ಖಂಡಿಸಿದ್ದರು. ನಾನೂ ವಿರೋಧಿಸಿದ್ದೆ. ಆಮೇಲೆ ಸುಮ್ಮನಾಗಿದ್ದ ಬಿಜೆಪಿ ಸರ್ಕಾರ ಈಗ ಆಹಾರ ಸುರಕ್ಷತಾ ಪ್ರಾಧಿಕಾರದ ಮೂಲಕ ಹಿಂಬಾಗಿಲಿನಿಂದ ಮೊಸರಿನ ಪಕ್ಕ ದಹಿ ಸೇರಿಸಿ ಕನ್ನಡಿಗರ ಸ್ವಾಭಿಮಾನಕ್ಕೆ ಸಡ್ಡು ಹೊಡೆದಿದೆ. ಇದು ಕನ್ನಡಿಗರ ಮೇಲೆ ಬಿಜೆಪಿಯ ದಮ್ಮು ತಾಕತ್ತಿನ ಪ್ರದರ್ಶನವೇ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ZEE NEWS-MATRIZE Opinion Poll: ಕರ್ನಾಟಕದಲ್ಲಿ ಮತ್ತೊಮ್ಮೆ ಅತಂತ್ರ ಸರ್ಕಾರ ..!


‘ಕನ್ನಡಕ್ಕೆ ಕೊಕ್ಕೆ ಹಾಕಿ ಹಿಂದಿಯನ್ನು ಮೆಲ್ಲಗೆ ಹೇರಿ ಇಡೀ ನಂದಿನಿ ಪದಾರ್ಥಗಳನ್ನು ಹಳ್ಳ ಹಿಡಿಸುವುದು ಇದರ ಹಿಂದಿರುವ ಘೋರ ಷಡ್ಯಂತ್ರ. ಆಮೇಲೆ ನಂದಿನಿ ಉತ್ಪನ್ನಗಳು ಮಾರಾಟವಾಗುತ್ತಿಲ್ಲವೆಂದು ಕಥೆ ಕಟ್ಟಿ, ಅದನ್ನು ಉಳಿಸುವ ನಾಟಕವಾಡಿ ನಂದಿನಿಯನ್ನು ಸಲೀಸಾಗಿ ಅಮುಲ್ ಜೊತೆಗೆ ವಿಲೀನ ಮಾಡುವ ಹುನ್ನಾರವಷ್ಟೇ ಇದು. ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿದ್ದೇವೆ ಎಂದರೆ ಇಷ್ಟ ಬಂದಹಾಗೆ ಒಳ ನುಸುಳುವುದಲ್ಲ, ಸೌಮ್ಯವಾಗಿದ್ದೇವೆ ಎಂದರೆ ಸುಮ್ಮನಿದ್ದೇವೆ ಎಂದಲ್ಲ. ನಂದಿನಿ ಕನ್ನಡಿಗರ ಸ್ವಾಭಿಮಾನವೇ ಹೊರತು ಅಮುಲ್ ಅಡಿಯಾಳಲ್ಲ. ಕರ್ನಾಟಕ ಭಾರತ ಗಣರಾಜ್ಯದ ಒಂದು ಭಾಗವೇ ಹೊರತು ಗುಜರಾತಿನ ವಸಾಹತುವಲ್ಲ’ ಎಂದು ಕಿಡಿಕಾರಿದ್ದಾರೆ.



‘ಈಚೆಗೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಬ್ಬರೂ ಕರ್ನಾಟಕಕ್ಕೆ ಬಲು ಬಿಡುವಾಗಿ ಬಂದರು ಎಂದರೆ, ಕೇವಲ ಚುನಾವಣೆ ಉದ್ದೇಶಕ್ಕೇ ಎಂದುಕೊಂಡಿದ್ದೆ. ಆದರೆ ಕರ್ನಾಟಕದಲ್ಲಿ ನಡೆದ ಅವರಿಬ್ಬರ ಶೋಗಳ ಸವಾರಿ ನಮ್ಮ ನಂದಿನಿಯ ಹೆಸರಿಗೇ ಕುತ್ತು ತರುತ್ತದೆ ಎಂದು ಭಾವಿಸಿರಲಿಲ್ಲ. ಆರೂವರೆ ಕೋಟಿ ಕನ್ನಡಿಗರ ಮನೋಭಾವಕ್ಕೆ ವಿರುದ್ಧವಾಗಿ ದಹಿ ಎನ್ನುವ ಪದವನ್ನು ಮುದ್ರಿಸಿದ್ದೇ ಕೆಎಂಎಫ್ ಮಾಡಿರುವ ದೊಡ್ದ ತಪ್ಪು. ಇದು ರಾಜ್ಯ ಬಿಜೆಪಿ ಸರ್ಕಾರದ ಗಮನಕ್ಕೆ ಬಾರದೆ ಆಗಿರುವ ಕೃತ್ಯವಲ್ಲ. ಕಾಣದ ಕೈಗಳ ಕಳ್ಳಾಟ ಇಲ್ಲಿ ಸ್ಪಷ್ಟ’ ಎಂದು ಟೀಕಿಸಿದ್ದಾರೆ.


‘ಇಲ್ಲಿ ಹಿಂಬಾಗಿಲಿನಿಂದ ಅಲ್ಲ, ನೇರವಾಗಿಯೇ ಹಿಂದಿ ಹೇರಿಕೆ ಆಗಿದೆ. ಅದನ್ನು ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಹಾಗೂ ಅದರ ಕೀಲುಗೊಂಬೆ ಕೆಎಂಎಫ್ ಸದ್ದಿಲ್ಲದೆ ಒಪ್ಪಿಕೊಂಡಿವೆ. ಇದು ಕನ್ನಡ ವಿರೋಧಿ ಕೆಲಸ. ತಕ್ಷಣವೇ ದಹಿ ಪದ ಮುದ್ರಿಸುವುದನ್ನು ನಿಲ್ಲಿಸಬೇಕು. ಯಶವಂತಪುರದಲ್ಲಿ ಪಂಚರತ್ನ ರಥಯಾತ್ರೆ ನಡೆಯುವ ವೇಳೆ ಅಭಿಮಾನಿಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತರು ‘ನಂದಿನಿ ಉಳಿಸಿ’ ಎಂದು ಮೊಸರು, ಹಾಲಿನ ಹಾರ ಹಾಕಿ ನನ್ನ ಗಮನ ಸೆಳೆದಿದ್ದರು. ನಂದಿನಿಗೆ ಕುಣಿಕೆ ಬಿಗಿಯುವ ಯಾವುದೇ ದುಷ್ಕೃತ್ಯ ಸಹಿಸುವ ಪ್ರಶ್ನೆಯೇ ಇಲ್ಲ’ವೆಂದು ಎಚ್‍ಡಿಕೆ ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: ಕಾರ್ಯನಿರತ ಪತ್ರಕರ್ತರಿಗೆ ಅಂಚೆ ಮತದಾನ ಮಾಡಲು ಅವಕಾಶ ನೀಡಿದ ಚುನಾವಣಾ ಆಯೋಗ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.