Karnataka Assembly Elections 2023: ಚಿನ್ನದ ನಾಡು ಕೋಲಾರದಲ್ಲಿ ಹೇಗಿದೆ ಪಕ್ಷಗಳ ಬಲಾಬಲ?
ಕೋಲಾರ ಕುರುಕ್ಷೇತ್ರ
ಚಿನ್ನದ ನಾಡು ಕೋಲಾರಿನಲ್ಲಿ ಆರು ಕ್ಷೇತ್ರಗಳಿದ್ದು, ಅದರಲ್ಲಿ ಶ್ರೀನಿವಾಸಪುರ,ಮುಳಬಾಗಿಲು ಮತ್ತು ಕೋಲಾರ ಹೈವೋಲ್ಟ್ ಕ್ಷೇತ್ರಗಳಾಗಿದ್ದರೆ, ಕೆಜಿಎಫ್ ಮಾಲೂರು ಮತ್ತು ಬಂಗಾರ ಪೇಟೆ ಕ್ಷೇತ್ರಗಳೂ ಕೂಡ ಸಾಕಷ್ಟು ಕುತೂಹಲ ಕೆರಳಿಸಿವೆ. ಅದರಲ್ಲಿ ಬಂಗಾರಪೇಟೆಯ SC ಮೀಸಲು ಕ್ಷೇತ್ರದಲ್ಲಿ ಸ್ಪೃಶ್ಯರದ್ದೇ ಮೇಲುಗೈ ಇದ್ದರೆ, ಮುಸ್ಲಿಂ ಬಾಹುಳ್ಯದ ಕೋಲಾರ ಕ್ಷೇತ್ರದಲ್ಲಿ ಯಾವುದೇ ಮುಸ್ಲಿಂ ಪ್ರಾತಿನಿಧ್ಯ ಇಲ್ಲ,ಇನ್ನೂ ಮಾಲೂರು ಕ್ಷೇತ್ರದಲ್ಲಿ ನಾಲ್ವರಲ್ಲಿ ಯಾರು ಗೆಲ್ಲಬಹುದು ಎಂದು ಹೇಳುವುದು ಈಗಲೇ ಕಷ್ಟ ಸಾಧ್ಯ ಇನ್ನೂ ಶ್ರೀನಿವಾಸಪುರದಲ್ಲಿ ರೆಡ್ಡಿ v/s ಸ್ವಾಮಿ ಕದನವಂತೂ ಚುನಾವಣೆಯನ್ನು ಕಾವೇರುವಂತೆ ಮಾಡಿದೆ.
ಕೋಲಾರ ಜಿಲ್ಲಾ ಕುರುಕ್ಷೇತ್ರ
ಅಭ್ಯರ್ಥಿ- ಕ್ಷೇತ್ರ- ಪಕ್ಷ - 2018 ರ ಮತ
ಎಚ್ ನಾಗೇಶ್ ಮುಳಬಾಗಿಲು IND
ರಮೇಶ್ ಕುಮಾರ್ ಶ್ರೀನಿವಾಸಪುರ INC
ಶ್ರೀನಿವಾಸಗೌಡ ಕೋಲಾರ JDS 81,487
ರೂಪಾ ಶಶಿಧರ್ ಕೆಜಿಎಫ್ INC 71,151
ನಂಜೇಗೌಡ ಮಾಲೂರು INC 75,677
ನಾರಾಯಣಸ್ವಾಮಿ ಬಂಗಾರಪೇಟೆ INC 71,171
---------
--------------
ಮುಳಬಾಗಿಲು ಕುರುಕ್ಷೇತ್ರ
ಕ್ಷೇತ್ರ ಪರಿಚಯ
- ಕರ್ನಾಟಕ-ಆಂಧ್ರಪ್ರದೇಶ ರಾಜ್ಯಗಳ ಗಡಿಯ ಕ್ಷೇತ್ರ
- ಮುಗ್ಲಿಬೆಟ್ಟಗಳ ಶ್ರೇಣಿಯಿಂದ ಮೂಡಣ ಬಾಗಿಲು..ಈಗ ಮುಳಬಾಗಿಲು
- ಹಾಲು, ರೇಷ್ಮೆಯ ನಾಡಿನಲ್ಲಿ‘ಆಪರೇಷನ್ ಕಮಲ’ದ ರಾಜಕಾರಣ
- ಪಿಂಗಾಣಿ ಸಾಮಾಗ್ರಿ ತಯಾರಿಕೆಗೆ ಬಿಳಿ ಜೇಡಿ ಮತ್ತು ಕೆಂಪುಜೇಡಿ ಮಣ್ಣು
- ದಲಿತ, ಒಕ್ಕಲಿಗ ಮತ್ತು ಮುಸ್ಲಿಂ ಮತದಾರರೇ ನಿರ್ಣಾಯಕ ಸ್ಥಾನ
ಇದುವರೆಗೂ ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿರುವ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 15 ಚುನಾವಣೆಗಳು ನಡೆದಿದ್ದು, ಅದರಲ್ಲಿ 7ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಶಾಸಕರಾದರೆ, ಪಕ್ಷೇತರರು ಐದು ಸಲ ಗೆಲುವು ಸಾಧಿಸಿ ಶಾಸಕರಾಗಿರುವುದು ವಿಶೇಷ. ಇನ್ನುಳಿದಂತೆ ಜೆಡಿಎಸ್ ಎರಡು ಬಾರಿ ಮತ್ತು ಸಿಪಿಎಂ ಪಕ್ಷದವರು ಒಮ್ಮೆ ಶಾಸಕರಾಗಿದ್ದಾರೆ. ಪಕ್ಷೇತರರಾಗಿ ಗೆದ್ದು, ನಂತರ ಆಪರೇಷನ್ ಕಮಲದ ಮೂಲಕ ಬಿಜೆಪಿ ಪಾಲಾಗಿದ್ದ ನಾಗೇಶ್‌ಗೆ ಕ್ಷೇತ್ರದಲ್ಲಿ ನೆಲೆಯೇ ಇರಲಿಲ್ಲ. ಕೊತ್ತೂರು ಮಂಜುನಾಥ್ ಬೆಂಬಲದಿಂದ ಅವರು ಚುಣಾವಣೆಯಲ್ಲಿ ಗೆದ್ದರು; ಬಿಜೆಪಿ ಸರ್ಕಾರದಲ್ಲಿ ಅಬಕಾರಿ ಸಚಿವರಾದರು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದರು.ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ತಿರುಪತಿಗೆ ಹೋಗುವ ಮಾರ್ಗದಲ್ಲಿ ಕರ್ನಾಟಕ-ಆಂಧ್ರಪ್ರದೇಶ ರಾಜ್ಯಗಳ ಗಡಿಯಲ್ಲಿದೆ. ಮುಗ್ಲಿಬೆಟ್ಟಗಳ ಶ್ರೇಣಿಯಲ್ಲಿರುವುದರಿಂದ ಅದನ್ನು ಮೂಡಣ ಬಾಗಿಲು ಎಂದು ಕೂಡ ಕರೆಯುತ್ತಾರೆ. ಪಿಂಗಾಣಿ ಸಾಮಾನು ತಯಾರಿಕೆಗೆ ಉಪಯುಕ್ತವಾಗುವ ಬಿಳಿ ಜೇಡಿ ಮತ್ತು ಕೆಂಪುಜೇಡಿ ಮಣ್ಣು ಈ ಪ್ರದೇಶದಲ್ಲಿದೆ. ಇದು ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶವಾಗಿದೆ.
ಮೈಸೂರು ಪ್ರಾಂತ್ಯದ ಭಾಗವಾಗಿದ್ದ ಮುಳಬಾಗಿಲು ಎರಡು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿತ್ತು. ಅದರಲ್ಲಿ ಒಂದು ಸಾಮಾನ್ಯ ಕ್ಷೇತ್ರ ಇನ್ನೊಂದು ಎಸ್ ಸಿ ಮೀಸಲು ಕ್ಷೇತ್ರವಾಗಿತ್ತು. 1952ರಲ್ಲಿ ಕಾಂಗ್ರೆಸ್ ಪಕ್ಷದಿಂದ ಎಸ್ ಸಿ ಮೀಸಲು ಕ್ಷೇತ್ರದಲ್ಲಿ ಹಿರಿಯ ದಲಿತ ಮುಖಂಡ ಟಿ ಚಿನ್ನಯ್ಯ ಮತ್ತು ಸಾಮಾನ್ಯ ಮೀಸಲು ಕ್ಷೇತ್ರದಿಂದ ಜಿ ನಾರಾಯಣಗೌಡ ಅವರು ಅವಿರೋಧವಾಗಿ ಶಾಸಕರಾಗಿ ಆಯ್ಕೆಯಾದರು. 1957ರಲ್ಲಿ ಸ್ವತಂತ್ರ ಅಭ್ಯರ್ಥಿ ಬಿ ಎಲ್ ನಾರಾಯಣಸ್ವಾಮಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿ ನಾರಾಯಣಪ್ಪ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಮುಳಬಾಗಿಲು ವಿಧಾನಸಭಾ ಕ್ಷೇತ್ರ
ಇಬ್ಬರು ಸದಸ್ಯರನ್ನು ಹೊಂದಿರುವ ಮುಳಬಾಗಿಲು ಕ್ಷೇತ್ರ 1962ರಲ್ಲಿ ಏಕಸದಸ್ಯ ಕ್ಷೇತ್ರವಾಗಿ ಎಸ್ ಸಿ ಮೀಸಲು ಕ್ಷೇತ್ರವಾಯಿತು. ಆಗ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೆ ನಾರಾಯಣಪ್ಪರವರು ಸ್ವತಂತ್ರ ಅಭ್ಯರ್ಥಿ ಪಿ ಮುನಿಯಪ್ಪ ಅವರನ್ನು ಸೋಲಿಸಿ ಶಾಸಕರಾದರು. 1967ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಟಿ.ಚಿನ್ನಯ್ಯನವರು ಸ್ವತಂತ್ರ ಅಭ್ಯರ್ಥಿ ಪಿ ಮುನಿಯಪ್ಪನವರನ್ನು ಸೋಲಿಸಿ ಎರಡನೆಯ ಬಾರಿಗೆ ಶಾಸಕರಾದರು. 1972ರಲ್ಲಿ ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಪಿ.ಮುನಿಯಪ್ಪನವರು ಸ್ಪರ್ಧಿಸಿ ಸಂಸ್ಥಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬುಚ್ಚಪ್ಪ ಅವರನ್ನು ಮಣಿಸಿ ಸತತ ಎರಡು ಸೋಲುಗಳ ನಂತರದ ಮೂರನೇ ಪ್ರಯತ್ನದಲ್ಲಿ ಶಾಸಕರಾಗಿ ಆಯ್ಕೆಯಾದರು.
1978ರಷ್ಟೊತ್ತಿಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಹೋಗಿ ಸಾಮಾನ್ಯ ಕ್ಷೇತ್ರವಾಯಿತು. ಆಗ ಇಂದಿರಾ ಕಾಂಗ್ರೆಸ್‌ನಿಂದ ಜೆ ಎಂ ರೆಡ್ಡಿ ಅವರು ಸ್ಪರ್ಧಿಸಿ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ಬೀರೇಗೌಡರನ್ನು ಸೋಲಿಸಿ ಶಾಸಕರಾದರೆ, 1983ರಲ್ಲಿ ಬೀರೇಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್ ಪಕ್ಷದ ಜೆ ಎಂ ರೆಡ್ಡಿಯವರ ವಿರುದ್ಧ ಗೆಲುವು ಸಾಧಿಸಿದರು.
1985ರ ಚುನಾವಣೆಯಲ್ಲಿ ಸಿ ಪಿ ಎಂ ಪಕ್ಷದಿಂದ ಆರ್ ವೆಂಕಟರಾಮಯ್ಯನವರು ಕಣಕ್ಕಿಳಿದು 42,712 ಮತಗಳನ್ನು ಪಡೆದು ಕಾಂಗ್ರೆಸ್ ನ ಅಭ್ಯರ್ಥಿಯಾಗಿರುವ ಎಂ ವಿ ಪ್ರಮೀಳಮ್ಮನವರನ್ನು 22,104 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಪಕ್ಷದಿಂದ ಶಾಸಕರಾಗುವ ಮೂಲಕ ಸಿಪಿಎಂ ಖಾತೆಯನ್ನು ತೆರೆದರು. ಅದು ಆದ ನಂತರ ಮತ್ತೆ ಅ ಪಕ್ಷ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
1989ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ ವಿ ವೆಂಕಟಪ್ಪನವರು ಜನತಾ ಪಕ್ಷದ ಕೆ ವಿ ಶಂಕರಪ್ಪ ಅವರನ್ನು ಸೋಲಿಸಿದರು. 1994ರಲ್ಲಿ ಜನತಾ ದಳದಿಂದ ಕಣಕ್ಕಿಳಿದ ಆರ್ ಶ್ರೀನಿವಾಸ ಕಾಂಗ್ರೆಸ್ ನ ಎಂ ವಿ ವೆಂಕಟಪ್ಪನವರ ವಿರುದ್ಧ ಗೆಲ್ಲುವ ಮೂಲಕ ಆಗಿನ ದೇವೆಗೌಡರ ಸರ್ಕಾರದಲ್ಲಿ ಸಚಿವರೂ ಆದರು.
1999ರಷ್ಟೊತ್ತಿಗೆ ಜನತಾ ದಳ ಜೆಡಿಎಸ್ ಮತ್ತು ಜೆಡಿಯು ಆಗಿ ಇಬ್ಭಾಗವಾಯಿತು. ಆಗ ಜೆಡಿಎಸ್‌ನಲ್ಲಿದ್ದ ಆರ್ ಶ್ರೀನಿವಾಸ ಅವರ ವಿರುದ್ಧ ಕಾಂಗ್ರೆಸ್‌ನ ಎಂ ವಿ ವೆಂಕಟಪ್ಪ ಅವರು ಗೆಲ್ಲುವ ಮೂಲಕ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಆರ್ ಶ್ರೀನಿವಾಸರವರು ಬಿಜೆಪಿ ಪಕ್ಷದ ಅಭ್ಯರ್ಥಿ ಸುರೇಂದ್ರ ವೈ ಅವರನ್ನು ಮಣಿಸಿ ಎರಡನೇ ಬಾರಿಗೆ ವಿಧಾನಸೌಧ ಪ್ರವೇಶ ಪಡೆದರು. ಬಿಜೆಪಿ ಪಕ್ಷ ಈ ಚುನಾವಣೆಯಲ್ಲಿ ಎರಡನೆಯ ಸ್ಥಾನ ಪಡೆದದ್ದು ಬಿಟ್ಟರೆ ಮತ್ತೆಂದೂ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಲಿಲ್ಲ.
ನಂತರ 2008ರಲ್ಲಿ ಮುಳಬಾಗಿಲು ಕ್ಷೇತ್ರ ಮತ್ತೆ ಪ.ಜಾತಿ ಮೀಸಲು ಕ್ಷೇತ್ರವಾಗಿ ಬದಲಾಯಿತು. ಆಗ ಕಾಂಗ್ರೆಸ್‌ನ ಅಮರೇಶ ಅವರು 31,254 ಮತಗಳನ್ನು ಪಡೆದು ಜೆಡಿಎಸ್‌ನ ಎನ್ ಮುನಿನಂಜಪ್ಪ ಅವರನ್ನು 1,854 ಮತಗಳ ಅಂತರದಿಂದ ಸೋಲಿಸಿ ಶಾಸಕರಾದರು. 2013ರಲ್ಲಿ ಸ್ವತಂತ್ರ ಅಭ್ಯರ್ಥಿ ಕೊತ್ತೂರು ಮಂಜುನಾಥ ಅವರು 73,146 ಮತಗಳನ್ನ ಪಡೆಯುವ ಮೂಲಕ ಜೆಡಿಎಸ್‌ನ ಅದೇ ಎನ್ ಮುನಿನಂಜಪ್ಪ ಅವರನ್ನು 33,734 ಭಾರೀ ಮತಗಳ ಅಂತರದಿಂದ ಸೋಲಿಸಿದರು.
ಪಕ್ಷೇತರರಾಗಿ ಸ್ಪರ್ಧಿಸಿ ಶಾಸಕರಾಗಿ ಜನರ ಪ್ರೀತಿ ಗಳಿಸಿರುವ ಯುವ ನಾಯಕ ಕೊತ್ತೂರು ಮಂಜುನಾಥ ಅವರು 2018ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಆ ಪಕ್ಷದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿ ನಾಮಪತ್ರವೂ ಸಲ್ಲಿಸಿದ್ದರು. ಅಷ್ಟರಲ್ಲಿ ಕೊತ್ತೂರು ಮಂಜುನಾಥ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆಂದು ಅವರ ವಿರುದ್ಧ ದೂರು ದಾಖಲಾಗಿ ಹೈಕೋರ್ಟ್ ಅದನ್ನು ಅಸಿಂಧು ಎಂದು ಘೋಷಿಸಿತು. ನಂತರ ಚುನಾವಣಾಧಿಕಾರಿಗಳು ಜಾತಿ ಪ್ರಮಾಣ ಪತ್ರವನ್ನು ಪರಿಶೀಲಿಸಿ ನಾಮಪತ್ರವನ್ನು ತಿರಸ್ಕರಿಸಿದರು.
ಕೊತ್ತೂರು ಮಂಜುನಾಥ್ ಅನಿವಾರ್ಯವಾಗಿ ಚುನಾವಣೆಯಿಂದ ಹೊರಗುಳಿಯಬೇಕಾಗಿ ಬಂತು. ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್.ನಾಗೇಶ್ ಅವರಿಗೆ ಬೆಂಬಲ ಘೋಷಿಸಿ ಅವರನ್ನು ಗೆಲ್ಲಿಸಿಕೊಂಡರು. ಪ್ರಬಲ ಪೈಪೋಟಿ ನೀಡಿದ್ದ ಜೆಡಿಎಸ್‌ನ ಸಮೃದ್ಧ ಮಂಜುನಾಥ 6,715 ಮತಗಳ ಅಮತರದಿಂದ ಸೋಲಬೇಕಾಯಿತು. ಕಾಂಗ್ರೆಸ್ ಟಿಕೆಟ್‌ನಿಂದ ವಂಚಿತರಾದ ಅಮರೇಶ್ ಬಿಜೆಪಿ ಪಕ್ಷಕ್ಕೆ ಸೇರಿ ಅ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ 8,411 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿ ಉಳಿದರು.
ಎಚ್ ನಾಗೇಶ್ ಅವರಿಗೆ ಆಕಸ್ಮಿಕವಾಗಿ ಒಲಿದು ಬಂದ ಶಾಸಕ ಸ್ಥಾನದಿಂದ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅಬಕಾರಿ ಸಚಿವರೂ ಆದರು. ಅ ನಂತರ ಆಪರೇಷನ್ ಕಮಲದ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿ ಅಲ್ಲಿಯೂ ಮಂತ್ರಿಯಾದರು. ನಂತರ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅಂಬೇಡ್ಕರ್ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿತು.
ಜಾತಿವಾರು ಲೆಕ್ಕಾಚಾರ
ಮುಳಬಾಗಿಲು ಕುರುಕ್ಷೇತ್ರ
ಮತ-ಜಾತಿವಾರು ಲೆಕ್ಕ
ಒಟ್ಟು ಮತದಾರರು : 2,16,563
ಪುರುಷರು: 1,07,534 ಮಹಿಳೆಯರು: 1,09,018
ಪರಿಶಿಷ್ಟ ಜಾತಿ : 30 ಸಾವಿರ
ಪರಿಶಿಷ್ಟ ಪಂಗಡ : 31 ಸಾವಿರ
ಒಕ್ಕಲಿಗ : 50 ಸಾವಿರ
ಮುಸ್ಲಿಂ :35 ಸಾವಿರ
ಹಿಂದುಳಿದ ವರ್ಗ : 50 ಸಾವಿರ
ಇತರೆ : 15 ಸಾವಿರ
2023ರ ಸ್ಪರ್ಧಾಳುಗಳು
INC ಆದಿ ನಾರಾಯಣ
BJP ಶೀಗೇಹಳ್ಳಿ ಸುಂದರ್
JDS ಸಮೃದ್ಧಿ ಮಂಜುನಾಥ್
ಮುಳಬಾಗಿಲು ಕ್ಷೇತ್ರದಲ್ಲಿ ಅಂದಾಜು ಜಾತಿವಾರು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ದಲಿತರಿದ್ದಾರೆ. ಎಸ್‌ಸಿ, ಎಸ್‌ಟಿ ಮತಗಳು ಸುಮಾರು 60,000 ದಷ್ಟಿದ್ದರೆ, ಒಕ್ಕಲಿಗ ಮತಗಳು 50,000 ದಷ್ಟಿವೆ. ಮುಸ್ಲಿಮರು 35,000ಕ್ಕೂ ಹೆಚ್ಚಿನ ಮತಗಳನ್ನು ಹೊಂದಿದ್ದಾರೆ. ಇನ್ನು ಹಿಂದುಳಿದ ವರ್ಗಗಳ ಮತದಾರರು 50,000 ಮತ್ತು ಉಳಿದ ಸಮುದಾಯಗಳ ಮತದಾರರು 10,000 ಇದ್ದಾರೆ ಎನ್ನಲಾಗುತ್ತಿದೆ.
------
------------
ಕೆಜಿಎಫ್ ಪರಿಚಯ
-ಚಿನ್ನದ ಗಣಿಯ ನಾಡಿನಲ್ಲಿ ತಮಿಳರ ರಾಜಕಾರಣ
-ತಮಿಳುನಾಡಿನ AIADMK, RPI, CPI ಪಕ್ಷಗಳ ಅಸ್ವಿತ್ವ
-ಹೆಚ್ಚಿನ ಪ್ರಮಾಣದಲ್ಲಿ ದಲಿತರು, ಕಾರ್ಮಿಕರು ನೆಲೆಸಿದ ಊರು
ದ್ರಾವಿಡ ಚಳವಳಿಗಾರರಾದ ಪೆರಿಯಾರ್, ಪಂಡಿತ್ ಅಯೋತಿದಾಸ್ ಮೊದಲಾದವರ ಹೋರಾಟಗಳ ಪ್ರಭಾವವು ಕೆಜಿಎಫ್‌ನಲ್ಲಿದೆ. ಇದು ಕರ್ನಾಟಕದಲ್ಲಿದ್ದರೂ ತಮಿಳರು ಹೆಚ್ಚಾಗಿರುವುದರಿಂದ ತಮಿಳು ಭಾಷಿಕರ ಪ್ರಭಾವವಿದೆ. ಹಾಗಾಗಿ ಬ್ರಿಟಿಷರ ಆಳ್ವಿಕೆಯ ನಂತರ 1952 ರಿಂದ 2008 ರವರೆಗೂ ಈ ಕ್ಷೇತ್ರದಲ್ಲಿ ತಮಿಳರೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಂದು ಕಾಲದಲ್ಲಿ ಇಲ್ಲಿ ತಮಿಳುನಾಡಿನ ಎಐಎಡಿಎಂಕೆ ಪಕ್ಷ ಅಸ್ತಿತ್ವ ಕಂಡುಕೊಂಡಿತ್ತು. ಆ ಪಕ್ಷದಿಂದ ಮೂರು ಬಾರಿ ಶಾಸಕರು ಕೂಡ ಆಯ್ಕೆ ಆಗಿದ್ದಾರೆ. ಕಾರ್ಮಿಕರು ಹೆಚ್ಚು ಇರುವುದರಿಂದ ಆರ್‌ಪಿಐ, ಸಿಪಿಐ, ಸಿಪಿಎಂನಂಥ ಪರ್ಯಾಯ ರಾಜಕಾರಣದ ಪಕ್ಷಗಳು ಇಲ್ಲಿ ಅಭ್ಯರ್ಥಿಗಳನ್ನು ಹಾಕಿ, ಅವುಗಳ ಪೈಕಿ ಕೆಲವರು ಗೆದ್ದು ಶಾಸಕರಾಗಿ ವಿಧಾನಸೌಧದ ಮೆಟ್ಟಿಲು ಹತ್ತಿರುವುದೂ ಇದೆ.
ಕೆಜಿಎಫ್ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಕೋಲಾರ ಚಿನ್ನದ ಗಣಿ. ಇದು ಹೆಚ್ಚಿನ ಪ್ರಮಾಣದಲ್ಲಿ ದಲಿತರು, ಕಾರ್ಮಿಕರು ನೆಲೆಸಿದ ಊರು. ಇಲ್ಲಿ ಬ್ರಿಟಿಷರ ಕಾಲದಲ್ಲಿ ಚಿನ್ನದ ಗಣಿಗಾರಿಕೆ ಪ್ರಾರಂಭವಾಗಿತ್ತು. ಇಂದಿಗೂ ಬ್ರಿಟಿಷ್ ಆಡಳಿತದ ಪಳೆಯುಳಿಕೆಗಳನ್ನು, ಕಟ್ಟಡಗಳನ್ನು ನಾವು ಇಲ್ಲಿ ನೋಡಬಹುದು. ಕಾರ್ಮಿಕ ಚಳವಳಿ ಪ್ರಥಮವಾಗಿ ಹುಟ್ಟಿಕೊಂಡ ಜಿಲ್ಲೆಯಿದು. ಚಿನ್ನದ ಗಣಿಗಳಲ್ಲಿ ದುಡಿಯುವ ಶ್ರಮಿಕರು, ಕಾರ್ಮಿಕರು ಒಗ್ಗೂಡಿ ಹೋರಾಟಗಳನ್ನು ರೂಪಿಸಿದ್ದರು. ಅಷ್ಟೇ ಅಲ್ಲದೆ ಡಾ. ಬಿಆರ್ ಅಂಬೇಡ್ಕರ್‌ರವರು ಅವರು ಇಲ್ಲಿಗೆ ಬಂದು ಹೋಗಿದ್ದಾರೆ.
ಮೈಸೂರು ಪ್ರಾಂತ್ಯಕ್ಕೆ ಒಳಪಟ್ಟಿದ್ದ ಕೆಜಿಎಫ್‌ನಲ್ಲಿ ಮೊದಲ ಚುನಾವಣೆ 1952ರಲ್ಲಿ ನಡೆಯುತ್ತೆ. ಆಗ ಮೊದಲ ಚುನಾವಣೆಯಲ್ಲಿ ಅಂಬೇಡ್ಕರ್‌ರವರು ಸ್ಥಾಪಿಸಿದ್ದ ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್ (ಎಸ್‌ಸಿಎಫ್) ಪಕ್ಷದಿಂದ ಪಿ ಎಂ ಸ್ವಾಮಿ ದೊರೈರವರು ಸ್ಪರ್ಧಿಸಿ 19,911 ಮತಗಳನ್ನು ಪಡೆದು ಮೊದಲ ಶಾಸಕರಾಗಿ ಆಯ್ಕೆಯಾಗುತ್ತಾರೆ. ಸಿಪಿಐ ಪಕ್ಷದಿಂದ ಸ್ಪರ್ಧಿಸಿದ್ದ ಕೆ ಎಸ್ ವಾಸನ್‌ರವರು 18,029 ಪಡೆದು 1,882 ಮತಗಳ ಅಂತರದಿಂದ ಸೋಲುತ್ತಾರೆ.
1957ರಲ್ಲಿ ನಡೆದ ಚುನಾವಣೆಯಲ್ಲಿ ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್ ಪಕ್ಷದ ಮೇರು ನಾಯಕ ಸಿ.ಎಂ ಆರ್ಮುಗಂ ವಿರುದ್ಧ ಸಿಪಿಐ ಪಕ್ಷದ ಎಂ.ಸಿ ನರಸಿಂಹನ್ ಅವರು 19,973 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗುತ್ತಾರೆ. 1962ರ ಚುನಾವಣೆಯಲ್ಲಿ ಅಷ್ಟೊತ್ತಿಗೆ ಎಸ್‌ಸಿಎಫ್ ಪಕ್ಷವು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‍ಪಿಐ) ಆಗಿ ಮರುನಾಮಕರಣಗೊಂಡಿತ್ತು. ಆ ಚುನಾವಣೆಯಲ್ಲಿ ಸಿಪಿಐ ಪಕ್ಷದ ಎಸ್ ರಾಜಗೋಪಾಲ್ ಮತ್ತು ಆರ್‌ಪಿಐ ನಾಯಕ ಸಿ.ಎಂ ಆರ್ಮುಗಂ ಇವರಿಬ್ಬರ ನಡುವಿನ ಕಾಳಗದಲ್ಲಿ ರಾಜಗೋಪಾಲ್‌ರವರು 128 ಮತಗಳ ಅಂತರದಿಂದ ಗೆದ್ದು ಶಾಸಕರಾದರು.
1967 ರ ಚುನಾವಣೆಯಲ್ಲಿ ಎಸ್ ರಾಜಗೋಪಾಲ್ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆರ್‌ಪಿಐ ಪಕ್ಷದ ಸಿ.ಎಂ.ಆರ್ಮುಗಂ ಅವರನ್ನು 4,763 ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾದರೆ 1972 ರಲ್ಲಿ ಸಿ ಎಂ ಆರ್ಮುಗಂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಕೆ ಸೆಲ್ವರಾಜ್ ಅವರನ್ನು ಸೋಲಿಸಿ ಶಾಸಕರಾಗತ್ತಾರೆ. 1978 ರ ಚುನಾವಣೆಯಲ್ಲಿ ಮತ್ತೆ ಆರ್‌ಪಿಐ ಪಕ್ಷದಿಂದ ಸ್ಪರ್ಧಿಸಿ ಆಗ ಜನತಾ ಪಕ್ಷದಲ್ಲಿದ್ದ ಎಸ್ ರಾಜಗೋಪಾಲ್ ಅವರನ್ನು ಸೋಲಿಸಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ.
1983 ರಲ್ಲಿ ಮೊದಲ ಬಾರಿಗೆ ಎಐಎಡಿಎಂಕೆ ಪಕ್ಷದಿಂದ ಎಂ.ಭಕ್ತವತ್ಸಲಂ ಅವರು ಸ್ಪರ್ಧಿಸಿ ಸಿಪಿಎಂ ಪಕ್ಷದ ಟಿ.ಎಸ್ ಮಣಿಯವರನ್ನು 1,380 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಅ ಪಕ್ಷದ ಶಾಸಕರಾಗಿ ಆಯ್ಕೆಯಾದರು. ನಂತರ ಎರಡು ವರ್ಷದಲ್ಲೇ 1985ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಸಿಪಿಎಂ ಪಕ್ಷದ ಟಿ.ಎಸ್.ಮಣಿಯವರು ಆಗ ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಂ.ಭಕ್ತವತ್ಸಲಂ ಅವರನ್ನು ಸೋಲಿಸಿ ಶಾಸಕರಾದರು. 1989 ರ ಚುನಾವಣೆಯಲ್ಲಿ ಮತ್ತೆ ಇವರಿಬ್ಬರೇ ಎದುರಾಳಿಗಳಾದರು. ಎಂ.ಭಕ್ತವತ್ಸಲಂ ಅವರು ಎಐಎಡಿಎಂಕೆ ಪಕ್ಷದಿಂದ ಸ್ಪರ್ಧಿಸಿ ಸಿಪಿಎಂ ನ ಟಿ ಎಸ್ ಮಣಿಯವರನ್ನು ಸೋಲಿಸಿದರು.
1994 ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಪಕ್ಷದಿಂದ ಎಸ್ ರಾಜೇಂದ್ರನ್ ಅವರು 27,271 ಮತಗಳನ್ನು ಪಡೆದು ಎರಡು ಭಾರಿ ಶಾಸಕರಾಗಿದ್ದ ಎಂ ಭಕ್ತವತ್ಸಲಂ ಅವರನ್ನು 9,409 ಮತಗಳ ಅಂತದಿಂದ ಸೋಲಿಸಿ ಶಾಸಕರಾದರೆ 1999 ರ ಚುನಾವಣೆಯಲ್ಲಿ ಎಂ ಭಕ್ತವತ್ಸಲಂ ಅವರು ಎಸ್ ರಾಜೇಂದ್ರನ್ ಅವರನ್ನು ಸೋಲಿಸಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2004 ರಲ್ಲಿ ನಡೆದ ಚುನಾವಣೆಯಲ್ಲಿ ಎಂ ಭಕ್ತವತ್ಸಲಂ ಅವರನ್ನು ಸೋಲಿಸಿ ಎರಡನೇ ಬಾರಿಗೆ ಎಸ್.ರಾಜೇಂದ್ರನ್ ಶಾಸಕರಾಗಿ ಆಯ್ಕೆಯಾದರು.
ಕ್ಷೇತ್ರದಲ್ಲಿ ಇದುವರೆಗೂ ತಮಿಳು ಭಾಷಿಗರು ಹೆಚ್ಚು ಚುನಾಯಿತರಾಗಿ ಆಯ್ಕೆಯಾಗಿದ್ದಾರೆ. ಆದರೆ, ಮೊಟ್ಟಮೊದಲ ಬಾರಿಗೆ ಆ ಪರಂಪರೆಯನ್ನು ತುಂಡರಿಸಿದ್ದು ವೈ ಸಂಪಂಗಿ. 2008 ರ ಚುನಾವಣೆಯಲ್ಲಿ ಎಸ್ ರಾಜೇಂದ್ರನ್ ಅವರ ವಿರುದ್ಧ ವೈ.ಸಂಪಂಗಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ 3,320 ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಖಾತೆಯನ್ನು ತೆರೆದರು. ಬಿಜೆಪಿ ಪಕ್ಷ ಎನ್ನುವುದಕ್ಕಿಂತ ಸಂಪಂಗಿಯವರ ಛಾರ್ಮ್ ಮೇಲೆ ಗೆದ್ದಿದ್ದರು.
ನಂತರ 2013ರ ಚುನಾವಣೆಯ ಹೊತ್ತಿಗೆ ವೈ.ಸಂಪಂಗಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರೆಂದು ದೂರು ಪಡೆದಿದ್ದ ಲೋಕಾಯುಕ್ತ ಅಧಿಕಾರಿಗಳು ಶಾಸಕರ ಭವನಕ್ಕೆ ನುಗ್ಗಿ ರೆಡ್ ಹ್ಯಾಂಡ್ ಆಗಿ ಹಿಡಿದು ಸಂಪಂಗಿ ವಿರುದ್ಧ ಪ್ರಕರಣ ದಾಖಲಿಸಿದರು. ಈ ಪ್ರಕರಣದಿಂದಾಗಿ ಮುಂದಿನ ಎರಡು ಚುನಾವಣೆಗಳಲ್ಲಿ ಸಂಪಂಗಿ ಸ್ಪರ್ಧಿಸುವುದು ಸಾಧ್ಯವಾಗಲಿಲ್ಲ. ಅ ಕಾರಣದಿಂದ 2013 ರ ಚುನಾವಣೆಯಲ್ಲಿ ಅವರು ತಮ್ಮ ತಾಯಿ ವೈ ರಾಮಕ್ಕ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು. ಅಷ್ಟೊತ್ತಿಗೆ ಎಐಡಿಎಂಕೆಯನ್ನು ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಂ ಭಕ್ತವತ್ಸಲಂ 28,992 ಮತಗಳನ್ನು ಪಡೆದರೆ ವೈ ರಾಮಕ್ಕವರು 55,014 ಮತಗಳನ್ನು ಪಡೆದು 26,022 ಮತಗಳ ಅಂತರದಿಂದ ಜಯ ಸಾಧಿಸಿದರು.
ಈ ಹಿಂದಿನ 2018 ರಲ್ಲಿ ನಡೆದ ಚುನಾವಣೆಯಲ್ಲಿ ಸಂಪಂಗಿ ತನ್ನ ಮಗಳನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ, ಅತ್ತ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಕೆ ಎಚ್ ಮುನಿಯಪ್ಪ ಅವರ ಮಗಳಾದ ರೂಪಕಲಾ ಶಶಿಧರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು. ಈ ಚುನಾವಣೆಯಲ್ಲಿ ನಾಲ್ಕು ಜನರ ಪೈಪೋಟಿಯಲ್ಲಿ ರೂಪಕಲಾ ಶಶಿಧರ್ ಅವರು 71,151 ಮತಗಳನ್ನು ಪಡೆದು 40,827 ಭಾರಿ ಮತಗಳ ಅಂತರದಿಂದ ಗೆದ್ದು ಶಾಸಕರಾದರು. ಈ ಮೂಲಕ ಐದು ದಶಕಗಳ ನಂತರ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಇಲ್ಲಿ ಮರುಜನ್ಮ ಪಡೆಯಿತು. ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಂಪಂಗಿ 3,0324 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕಿಳಿದರೆ ಮೂರನೆಯ ಸ್ಥಾನದಲ್ಲಿ ಆರ್‌ಪಿಐ ಪಕ್ಷದ ಎಸ್ ರಾಜೇಂದ್ರನ್ ಮತ್ತು ಜೆಡಿಎಸ್ ಅಭ್ಯರ್ಥಿ ಎಂ.ಭಕ್ತವತ್ಸಲಂ ನಾಲ್ಕನೇ ಸ್ಥಾನದಲ್ಲಿ ಉಳಿದರು.
ಮತ-ಜಾತಿವಾರು ಲೆಕ್ಕ
SC-ST :
ಕ್ರೈಸ್ತ :
ಮುಸ್ಲಿಂ : 15 ಸಾವಿರ
ಒಕ್ಕಲಿಗ :
ರೆಡ್ಡಿ ಒಕ್ಕಲಿಗ :
ಹಿಂದುಳಿದ ವರ್ಗ : 50 ಸಾವಿತ
ಇತರೆ : 15 ಸಾವಿರ
ಈ ಕ್ಷೇತ್ರದಲ್ಲಿ ಜಾತಿವಾರು ಮತಗಳನ್ನು ನೋಡುವುದಾದರೆ ದಲಿತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಎಸ್‌ಸಿ, ಎಸ್‌ಟಿ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರ ಮತಗಳು ಎಲ್ಲಾ ಸೇರಿ ಅಂದಾಜು ಒಂದು ಲಕ್ಷದಷ್ಟಿವೆ. ಇನ್ನು 15 ಸಾವಿರ ಮುಸ್ಲಿಂ ಮತಗಳಿದ್ದರೆ, ಒಕ್ಕಲಿಗರು ಮತ್ತು ರೆಡ್ಡಿಗಳು ಸೇರಿ 30,000 ದಷ್ಟು ಮತಗಳಿವೆ. ಉಳಿದ ಇತರೆ ಹಿಂದುಳಿದ ವರ್ಗಗಳ ಸುಮಾರು 50,000 ಮತಗಳಿದ್ದು, ಇತರರದ್ದು 15,000 ಮತಗಳಿವೆ ಎಂದು ಹೇಳಲಾಗುತ್ತಿದೆ.
2023ರ ಸ್ಪರ್ಧಾಳುಗಳು
INC : ರೂಪಕಲಾ
BJP : ಅಶ್ವಿನಿ ಸಂಪಂಗಿ
JDS :
IND
-------
-------------
ಬಂಗಾರಪೇಟೆ ಕುರುಕ್ಷೇತ್ರ
ಕ್ಷೇತ್ರ ಪರಿಚಯ
- ಮೈಸೂರು ರಾಜ್ಯದ ಮೊದಲ ಸಿಎಂ ನೀಡಿದ ಕ್ಷೇತ್ರ
- ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಸ್ಪೃಶ್ಯರದ್ದೇ ಮೇಲುಗೈ
- ಭೋವಿ ಸಮುದಾಯದ ವ್ಯಕ್ತಿಗಳೇ ಶಾಸಕರಾಗುತ್ತಿದ್ದಾರೆ
- ಛಲವಾದಿ, ಮಾದಿಗ ಮತ ಹೆಚ್ಚಿದ್ದರೂ ಶಾಸಕರಾಗಿಲ್ಲ..!
- ಪಕ್ಷ, ಜಾತಿ ಬಿಟ್ಟು ವ್ಯಕ್ತಿಗಳ ಮೇಲೆ ಚುನಾವಣೆ ನಡೆಯುತ್ತಿದೆ
ಬಂಗಾರಪೇಟೆ ಮೀಸಲು ಕ್ಷೇತ್ರವಾಗಿದ್ದರೂ ಇಲ್ಲಿ ಸ್ಪೃಶ್ಯ ಎಸ್‌ಸಿ -ಅಸ್ಪೃಶ್ಯ ಎಸ್‌ಸಿ ಎನ್ನುವ ಅಂಶ ಮಾತ್ರ ಚುನಾವಣೆಯಲ್ಲಿ ಬಹಳಷ್ಟು ಕೆಲಸ ಮಾಡುತ್ತದೆ. ಇದುವರೆಗೂ 10ರಿಂದ12 ಸಾವಿರ ಮತದಾರರು ಇರುವ ಭೋವಿ ಸಮುದಾಯದ ವ್ಯಕ್ತಿಗಳೇ ಇಲ್ಲಿ ಶಾಸಕರಾಗುತ್ತಿದ್ದಾರೆ. ಆದರೆ, 50-60 ಸಾವಿರದಷ್ಟಿರುವ ಛಲವಾದಿ ಮತ್ತು ಮಾದಿಗ ಸಮುದಾಯಗಳಿಂದ ಯಾರೂ ಶಾಸಕರಾಗಿಲ್ಲ. ಅಸ್ಪೃಶ್ಯರೆನ್ನುವ ಕಾರಣಕ್ಕೆ ಮತ್ತು ಇವರಲ್ಲಿ ಒಗ್ಗಟ್ಟಿಲ್ಲದ ಕಾರಣಕ್ಕೆ ಮೇಲ್ಜಾತಿಯವರೆಲ್ಲ ಸ್ಪೃಶ್ಯರೆನ್ನುವ ಕಾರಣಕ್ಕೆ ನಿರ್ಣಾಯಕ ಸಮುದಾಯಗಳು ಭೋವಿ ಸಮುದಾಯದ ವ್ಯಕ್ತಿಗಳನ್ನು ಬೆಂಬಲಿಸುತ್ತ ಬಂದಿವೆ.
ಎರಡು ಬಾರಿ ಕ್ಷೇತ್ರ ಮರುವಿಂಗಡಣೆ ಮಾಡಿಕೊಂಡ ಮತ್ತು ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯನ್ನು ನೀಡಿದ ವಿಧಾನಸಭಾ ಕ್ಷೇತ್ರ ಬಂಗಾರಪೇಟೆ.
ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಮೊದಲ ಚುನಾವಣೆ 1952 ರಲ್ಲಿ ನಡೆಯುತ್ತದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ ಸಿ ರೆಡ್ಡಿಯವರು ಸ್ಪರ್ಧಿಸಿದರೆ ಎಸ್ ಪಿ ಪಕ್ಷದಿಂದ ಬಿ ನಾಗಭೂಷಣ ಗೌಡ ಅವರು ಸ್ಪರ್ಧಿಸಿ 9,100 ಮತಗಳ ಅಂತರದಿಂದ ಸೋಲುತ್ತಾರೆ. ಆಗ ಕ್ಷೇತ್ರದ ಮೊದಲ ಶಾಸಕರಾಗಿ ಕೆ ಸಿ ರೆಡ್ಡಿಯವರು ಆಯ್ಕೆಯಾಗಿ ಆಗಿನ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯೂ ಆಗುತ್ತಾರೆ. ಮುಂದೆ ನೆಹರೂ ಅವರ ಮಂತ್ರಿಮಂಡಲದಲ್ಲಿ ಸದಸ್ಯರಾಗಿ ನಂತರ ಮಧ್ಯಪ್ರದೇಶದ ಗವರ್ನರ್ ಆಗಿಯೂ ಕೂಡ ಅವರು ಸೇವೆ ಸಲ್ಲಿಸುತ್ತಾರೆ. ಇವರು ಬಂಗಾರಪೇಟೆ ತಾಲೂಕಿನ ಕ್ಯಾಸಂಬಳ್ಳಿ ಊರಿನವರು. ರೆಡ್ಡಿಯವರು ಮೊದಲಿನಿಂದಲೂ ಸ್ವಾತಂತ್ರ್ಯ ಹೋರಾಟದಲ್ಲಿ ಇದ್ದು, ವಿದುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.
ಬಂಗಾರಪೇಟೆ ವಿಧಾನಸಭಾ ಕ್ಷೇತ್ರ
ಸಾಮಾನ್ಯ ಕ್ಷೇತ್ರವಾಗಿದ್ದ ಬಂಗಾರಪೇಟೆಯಲ್ಲಿ 1952 ಮತ್ತು 1962 ರ ಎರಡು ಚುನಾವಣೆಗಳಲ್ಲಿ ಇ.ನಾರಾಯಣಗೌಡ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 1952 ರಲ್ಲಿ ಡಿ.ವೆಂಕಟರಾಮಯ್ಯ ಮತ್ತು 1962 ರಲ್ಲಿ ಕೆ.ವಿ.ನಾರಾಯಣರೆಡ್ಡಿಯವರನ್ನು ಸೋಲಿಸಿ ಸತತ ಎರಡು ಬಾರಿ ಶಾಸಕರಾದರು. ನಂತರ 1967 ರಲ್ಲಿ ಬೇತಮಂಗಲ ಕ್ಷೇತ್ರವಾಗಿ (ಬೇತಮಂಗಲ, ಕ್ಯಾತಂಬಳ್ಳಿ ಹೋಬಳಿಗಳನ್ನು ಒಳಗೊಂಡು) ಬದಲಾಯಿತು. ಕಸಬಾ ಹೋಬಳಿ ಕೋಲಾರ ಕ್ಷೇತ್ರಕ್ಕೆ ಸೇರಿತು. ಅಲ್ಲಿವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದ ಬೇತಮಂಗಲ ವಿಧಾನಸಭಾ ಕ್ಷೇತ್ರವು 1972 ರಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಮೀಸಲು ಕ್ಷೇತ್ರವನ್ನಾಗಿ ಘೋಷಿಸಲಾಯಿತು. ನಂತರ 2008 ರಲ್ಲಿ ಅದೇ ಮೀಸಲು ಕ್ಷೇತ್ರವಾಗಿ ಮರುವಿಂಗಡಣೆಯಾಗಿ ಬಂಗಾಪೇಟೆ ಮೀಸಲು ಕ್ಷೇತ್ರವಾಗಿ ಘೋಷಿಸಲಾಯಿತು. ಆಗ ಬೇತಮಂಗಲ ಹೋಬಳಿ ಕೆಜಿಎಫ್‌ಗೆ ಸೇರ್ಪಡೆ ಮಾಡಿ, ಕಸಬಾ ಹೋಬಳಿಯನ್ನು ಬಂಗಾರಪೇಟೆ ಕ್ಷೇತ್ರಕ್ಕೆ ಸೇರಿಸಿ ಇಡೀ ಕ್ಷೇತ್ರವನ್ನು ಮರುವಿಂಗಡಣೆ ಮಾಡಲಾಯಿತು.
ಈ ಕ್ಷೇತ್ರದಲ್ಲಿ ಮೊದಲಿಂದಲೂ ಪಕ್ಷ, ಜಾತಿಯನ್ನು ಬಿಟ್ಟು ವ್ಯಕ್ತಿಗಳ ಮೇಲೆ ಚುನಾವಣೆ ನಡೆಯುತ್ತಾ ಬಂದಿದೆ. ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯಲ್ಲಿ ಬರುವ ಉಪಜಾತಿಗಳಾದ ಛಲವಾದಿ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮೀಸಲು ಕ್ಷೇತ್ರ ಆದನಂತರ ಭೋವಿ ಸಮುದಾಯದವರೇ ಮೂರು ಪಕ್ಷಗಳ ಅಭ್ಯರ್ಥಿಗಳಾಗಿ ಅಧಿಕಾರ ಹಿಡಿಯುತ್ತಾ ಬಂದಿದ್ದಾರೆ. ಆದರೆ 2004ರಲ್ಲಿ ಸಾಕಷ್ಟು ರಾಜಕೀಯ ಬದಲಾವಣೆಗಳಾಗಿ ಪಿ ಬಿ ವೆಂಕಟಮುನಿಯಪ್ಪನವರು ಕಾಂಗ್ರೆಸ್ ಟಿಕೆಟ್‌ನಿಂದ ವಂಚಿತರಾಗಿ ರಾಮಚಂದ್ರಪ್ಪ ನವರು ಕಾಂಗ್ರೆಸ್ನಿಂದ ಸ್ಪರ್ಧಿಸಿದರೆ, ಸ್ವತಂತ್ರ ಅಭ್ಯರ್ಥಿಯಾಗಿ ಎಂ ನಾರಾಯಣಸ್ವಾಮಿಯವರು ಸ್ಪರ್ಧಿಸುತ್ತಾರೆ. ಇವರಿಬ್ಬರ ಕಾಳಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ ಪಿ ವೆಂಕಟಮುನಿಯಪ್ಪ ಬಹಳ ಕಡಿಮೆ ಅಂತರದಲ್ಲಿ ಗೆದ್ದು ಮೊದಲ ಬಾರಿಗೆ ಬಿಜೆಪಿಯನ್ನು ಕ್ಷೇತ್ರದಲ್ಲಿ ಅಧಿಕಾರಕ್ಕೆ ತರುತ್ತಾರೆ. ಇದು ಮೀಸಲು ಕ್ಷೇತ್ರವಾಗಿದ್ದರೂ ಇಲ್ಲಿ ಸ್ಪೃಶ್ಯ ಎಸ್‌ಸಿ -ಅಸ್ಪೃಶ್ಯ ಎಸ್‌ಸಿ ಎನ್ನುವ ಅಂಶ ಮಾತ್ರ ಚುನಾವಣೆಯಲ್ಲಿ ಬಹಳಷ್ಟು ಕೆಲಸ ಮಾಡುತ್ತದೆ.
ಇದುವರೆಗೂ 10ರಿಂದ12 ಸಾವಿರ ಮತದಾರರು ಇರುವ ಭೋವಿ ಸಮುದಾಯದ ವ್ಯಕ್ತಿಗಳೇ ಇಲ್ಲಿ ಶಾಸಕರಾಗಿದ್ದಾರೆ. ಆದರೆ, 50-60 ಸಾವಿರದಷ್ಟಿರುವ ಛಲವಾದಿ ಮತ್ತು ಮಾದಿಗ ಸಮುದಾಯಗಳಿಂದ ಯಾರೂ ಶಾಸಕರಾಗಲಿಲ್ಲ. ಅಸ್ಪೃಶ್ಯರೆನ್ನುವ ಕಾರಣಕ್ಕೆ ಮತ್ತು ಇವರಲ್ಲಿ ಒಗ್ಗಟ್ಟಿಲ್ಲದೆ ಮೇಲ್ಜಾತಿಯವರೆಲ್ಲ ಸ್ಪೃಶ್ಯರೆನ್ನುವ ಕಾರಣಕ್ಕೆ ಭೋವಿ ಸಮುದಾಯದ ವ್ಯಕ್ತಿಗಳನ್ನು ಬೆಂಬಲಿಸುತ್ತ ಬಂದಿದ್ದಾರೆ.
ಈ ಹಿಂದೆ ಜನತಾ ದಳದಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿ ಕಳೆದ ಚುನಾವಣೆಯಲ್ಲಿ ಜನತಾ ದಳದಿಂದ ಹೊರಬಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಕಡಿಮೆ ಮತಗಳ ಅಂತರದಿಂದ ವೆಂಕಟಮುನಿಯಪ್ಪ ಅವರ ವಿರುದ್ಧ ಸೋಲನ್ನು ಕಂಡಿದ್ದ ಎಂ.ನಾರಾಯಣಸ್ವಾಮಿ ನಂತರ 2008 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಪಿ ಬಿ ಮುನಿವೆಂಕಟಪ್ಪ ವಿರುದ್ಧ ಕಣಕ್ಕಿಳಿದು ಅವರನ್ನು ಸೋಲಿಸಿ ಜಯಗಳಿಸಿ ಮೂರನೇ ಬಾರಿಗೆ ಶಾಸಕರಾಗುತ್ತಾರೆ. ನಂತರ ಆಪರೇಷನ್ ಕಮಲಕ್ಕೆ ಒಳಗಾಗಿ ಅಲ್ಲಿಂದ ಹೊರಬಂದು ಮತ್ತೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ನಾಲ್ಕನೇ ಬಾರಿ ವಿಧಾನಸೌಧದ ಮೆಟ್ಟಿಲು ಹತ್ತಿದರು.
2013 ರ ಚುನಾವಣೆಯಲ್ಲಿ ಈ ಹಿಂದೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಪರಾಭವಗೊಂಡಿದ್ದ ಎಸ್ ಎನ್ ನಾರಾಯಣ ಸ್ವಾಮಿ ಅವರು ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಮತ್ತೆ ಬಿಜೆಪಿಯಿಂದ ಎಂ ನಾರಾಯಣಸ್ವಾಮಿಯವರು ಸ್ಪರ್ಧಿಸುತ್ತಾರೆ. ಆದರೆ, ಈ ಬಾರಿ ಮಾತ್ರ ಕ್ಷೇತ್ರದ ಜನ ಆಪರೇಷನ್ ಕಮಲಕ್ಕೆ ಹೋಗಿ ಪಕ್ಷಾಂತರ ಮಾಡಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡು ಉಪಚುನಾವಣೆಯಲ್ಲಿ ಸೋತಿದ್ದ ಎಸ್ ಎನ್ ನಾರಾಯಣಸ್ವಾಮಿಯವರನ್ನು ಆಯ್ಕೆ ಮಾಡಿ ಮೊದಲ ಬಾರಿಗೆ ವಿಧಾನಸೌಧಕ್ಕೆ ಕಳಿಸುತ್ತಾರೆ. ನಂತರ 2018ರಲ್ಲಿ ಕೂಡ ಮರು ಆಯ್ಕೆಯಾಗಿ ಸತತ ಎರಡನೆಯ ಬಾರಿಗೆ ಶಾಸಕರಾಗುತ್ತಾರೆ.
2008 ರಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ಎಂ ನಾರಾಯಣಸ್ವಾಮಿ ಅವರು 49556 ಮತಗಳನ್ನು ಪಡೆದು ಜಯಭೇರಿಯಾದರೆ ಬಿಜೆಪಿ ಅಭ್ಯರ್ಥಿ ಪಿ ಬಿ ವೆಂಕಟಮುನಿಯಪ್ಪ ಅವರು 42,051 ಮತಗಳನ್ನು ಪಡೆದು 7,505 ಮತಗಳ ಅಂತರದಿಂದ ಸೋತಿದ್ದರು. ನಂತರ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ್ದ ಎಂ ನಾರಾಯಣಸ್ವಾಮಿ 2,011 ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 56,824 ಮತಗಳನ್ನು ಪಡೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್ ಎನ್ ನಾರಾಯಣಸ್ವಾಮಿ ಅವರನ್ನು 4,043 ಮತಗಳ ಅಂತರದಿಂದ ಸೋಲಿಸಿದರು. 2013 ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್–ಬಿಜೆಪಿ ಮಧ್ಯೆ ಪೈಪೋಟಿ ನಡೆದು ಕಾಂಗ್ರೆಸ್ ಪಕ್ಷದಿಂದ ಎಸ್ ಎನ್ ನಾರಾಯಣಸ್ವಾಮಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 71,570 ಮತಗಳನ್ನು ಪಡೆದು ಬಿಜೆಪಿಯ ಎಂ.ನಾರಾಯಣಸ್ವಾಮಿಯನ್ನು 28,377 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾಗುತ್ತಾರೆ. ಇಲ್ಲಿವರೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನಡೆದಿದ್ದ ಚುನಾವಣೆಗಳು 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್ ಎನ್ ನಾರಾಯಣಸ್ವಾಮಿ 71,171 ಮತಗಳು ಪಡೆದರೆ ಜೆಡಿಎಸ್ ಅಭ್ಯರ್ಥಿ ಎಂ ಮಲ್ಲೇಶಬಾಬು 49,300 ಮತಗಳನ್ನು ಪಡೆಯುತ್ತಾರೆ. ಈ ಇಬ್ಬರ ಮಧ್ಯೆ ಪೈಪೋಟಿ ನಡೆದು 21,871 ಮತಗಳ ಅಂತರದಿಂದ ಎಂ.ಮಹೇಶಬಾಬು ಅವರನ್ನು ಸೋಲಿಸಿ ಎಸ್ ಎನ್ ನಾರಾಯಣಸ್ವಾಮಿ ಎರಡನೆಯ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ. ಇಲ್ಲಿವರೆಗೂ ನಡೆದ ಚುನಾವಣೆಗಳು ಪಕ್ಷಗಳಿಗಿಂತ ವ್ಯಕ್ತಿಗಳ ಮೇಲೆ ಸದ್ದು ಮಾಡಿದೆ.
ಈ ಬಾರಿ ಮುಂದಿನ 2023ರ ಚುನಾವಣೆಯೂ ಪಕ್ಷಗಳಿಗಿಂತ ವ್ಯಕ್ತಿಗಳ ಮೇಲೆ ಬಾರಿ ಸದ್ದು ಮಾಡುತ್ತಿದೆ. ಕಾಂಗ್ರೆಸ್‌ನಿಂದ ಎಸ್ ಎನ್ ನಾರಾಯಣಸ್ವಾಮಿ ಬಿಟ್ಟರೆ ಬೇರೆ ವ್ಯಕ್ತಿ ಇಲ್ಲ. ಹಾಗಾಗಿ ಇವರೇ ಸುಪ್ರೀಮ್ ಇಲ್ಲಿ. ಇನ್ನು ಜೆಡಿಎಸ್ ವಿಚಾರಕ್ಕೆ ಬಂದರೆ ಎಂ ಮಹೇಶ್ ಬಾಬು ಅವರಿಗೆ ಟಿಕೆಟ್ ಅಂತಿಮ. ಆದರೆ, ಬಿಜೆಪಿಯಲ್ಲಿ ಮೂರು ಜನರ ಮಧ್ಯೆ ಟಿಕೆಟ್ ಪೈಪೋಟಿ ನಡೆದಿದೆ. ಅದರಲ್ಲಿ ಮಹೇಶ್ ಜಿ.ಪಂ.ಮಾಜಿ ಸದಸ್ಯರು, ಸಾಮಾಜಿಕ ಕಾರ್ಯಕರ್ತ ಶೇಷು ಮತ್ತು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಈ ಮೂರು ಜನರಲ್ಲಿ ಈ ಬಾರಿ ಹೈಕಮಾಂಡ್ ಯಾರ ಕೈಗೆ ಬಿ ಫಾರ್ಮ್ ನೀಡುತ್ತೆ ಅನ್ನುವುದರ ಮೇಲೆ ಚುನಾವಣೆ ಕಾಳಗ ಶುರುವಾಗಲಿದೆ. ಈಗ ಸದ್ಯಕ್ಕೆ ಮೂರು ಪಕ್ಷಗಳ ಸಮಬಲದ ಮೇಲೆ ನಿಂತಿದೆ. ಬಿಜೆಪಿ ಟಿಕೆಟ್ ಮಹೇಶ್‌ಗೆ ಬಿ.ಫಾರ್ಮ್ ಕೊಟ್ಟರೆ ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಮೂರು ಜನರ ಬಲಾಬಲ ಆಗಲಿದೆ. ಶೇಷು ಮತ್ತು ನಾರಾಯಣಸ್ವಾಮಿಗೆ ನೀಡಿದರೆ ಕಾಂಗ್ರೆಸ್-ಜೆಡಿಎಸ್ ಎದುರಾಳಿಗಳು ಆಗಲಿವೆ. ಒಟ್ಟಿನಲ್ಲಿ ಈ ಬಾರಿಯ ಚುನಾವಣೆ ಪಕ್ಷಗಳಿಗಿಂತ ವ್ಯಕ್ತಿಗಳ ಮೇಲೆ ಆಗಲಿದೆ ಕ್ಷೇತ್ರದ ಜನ ಯಾರ ಕೈ ಹಿಡಿಯುತ್ತಾರೆ ಅಂತ ಕಾದು ನೋಡಬೇಕಿದೆ. ಇಡೀ ಕ್ಷೇತ್ರದಲ್ಲಿ ದಲಿತ ಮತದಾರರನ್ನು ಹೊಂದಿರುವ ಈ ಕ್ಷೇತ್ರ 80 ಸಾವಿರ ದಲಿತ ಮತದಾರರಿದ್ದರೆ, 40 ಸಾವಿರ ಒಕ್ಕಲಿಗರಿದ್ದಾರೆ. ಇನ್ನು 25 ಸಾವಿರ ಮುಸ್ಲಿಮರಿದ್ದು, ಗೆಲ್ಲುವ ಅಭ್ಯರ್ಥಿಯನ್ನು ನಿರ್ಣಯಿಸುವುದು ಮಾತ್ರ ಇತರ ಮೇಲ್ಜಾತಿಯವರೇ ಆಗಿದ್ದಾರೆ.
ಮತ-ಜಾತಿವಾರು ಲೆಕ್ಕಾಚಾರ
ಒಟ್ಟು ಮತದಾರರು:2,05,070
ಪುರುಷ:1,02,135 ಮಹಿಳೆ:1,02,895
SC-ST :
ಕ್ರೈಸ್ತ :
ಮುಸ್ಲಿಂ :
ಒಕ್ಕಲಿಗ :
ರೆಡ್ಡಿ ಒಕ್ಕಲಿಗ :
ಹಿಂದುಳಿದ ವರ್ಗ :
ಇತರೆ :
2023ರ ಸ್ಪರ್ಧಾಳುಗಳು
INC : ಎನ್.ಎಸ್.ನಾರಾಯಣಸ್ವಾಮಿ
BJP : ಎಂ.ನಾರಾಯಣಸ್ವಾಮಿ
JDS : ಎಂ.ಮಲ್ಲೇಶ್ ಬಾಬು
------
-----------
ಕೋಲಾರ ಕುರುಕ್ಷೇತ್ರ
ಕ್ಷೇತ್ರ ಪರಿಚಯ
-ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಕಾಣದ ಮುಸ್ಲಿಂ ಪ್ರಾತಿನಿಧ್ಯ
-ಇಲ್ಲಿ ದಲಿತರು ಮತ್ತು ಒಕ್ಕಲಿಗರು ನಿರ್ಣಾಯಕ ಮತದಾರರು
-
ಕೋಲಾರ ಮುಸ್ಲಿಂ ಬಾಹುಳ್ಯದ ಕ್ಷೇತ್ರ. ಕೋಲಾರ ನಗರ ಸೇರಿದಂತೆ ಈ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ 60000 ದಷ್ಟಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತದಾರರ ನಂತರ ಇಲ್ಲಿ ಮುಸ್ಲಿಮರದ್ದೇ ಎರಡನೇ ದೊಡ್ಡ ಸಂಖ್ಯೆ. ಆದರೆ, ಒಂದು ರಾಜಕೀಯ ಶಕ್ತಿಯಾಗಿ ಮುಸ್ಲಿಮರು ಇಲ್ಲಿ ಬೆಳೆಯಲೇ ಇಲ್ಲ. ಅಥವಾ ಅವರನ್ನು ಬೆಳೆಯಲು ಇತರರು ಬಿಡಲಿಲ್ಲ. ಇಲ್ಲಿ ಮುಸ್ಲಿಮರು ಸಂಖ್ಯೆಯಲ್ಲಿ ಎರಡನೆಯ ಸ್ಥಾನದಲ್ಲಿದ್ದರೂ ದಲಿತರು ಮತ್ತು ಒಕ್ಕಲಿಗರು ನಿರ್ಣಾಯಕ ಮತದಾರರಾಗಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 15 ಬಾರಿ ಚುನಾವಣೆಗಳು ನಡೆದಿದ್ದು, ಅವುಗಳ ಪೈಕಿ ಕೇವಲ ಮೂರು ಬಾರಿ ಮಾತ್ರ ಮುಸ್ಲಿಂ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಕೋಲಾರ ಚಿನ್ನದ ನಾಡು; ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಗೆ ಹೊಂದಿಕೊಂಡ ಜಿಲ್ಲೆ. ರಾಜ್ಯದ ಮೊದಲ ಮುಖ್ಯಮಂತ್ರಿ ಕೆ ಸಿ ರೆಡ್ಡಿಯವರು, ಸಂವಿಧಾನ ರಚನಾ ಸಮಿತಿ ಸದಸ್ಯರಾಗಿದ್ದ ಟಿ.ಚನ್ನಯ್ಯನವರು, ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ ಗುಂಡಪ್ಪ, ಮೈಸೂರು ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ, ಶಿಕ್ಷಣ ತಜ್ಞರಾದ ಡಾ.ಎಚ್ ನರಸಿಂಹಯ್ಯ, ದಲಿತ ಚಿಂತಕ ಕೋಟಗಾನಹಳ್ಳಿ ರಾಮಯ್ಯ, ವಿಜ್ಞಾನಿಗಳಾದ ಸಿ ಎನ್ ಆರ್ ರಾವ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಗೋಪಾಲಗೌಡರು ಹೀಗೆ ಹಲವಾರು ಸಾಧಕರನ್ನು ನಾಡಿಗೆ ಪರಿಚಯಿಸಿದ್ದು ಅವಿಭಜಿತ ಕೋಲಾರ ಜಿಲ್ಲೆ.
ಕೋಲಾರ ಗಂಗರ ರಾಜಧಾನಿಯಾಗಿತ್ತು. ಇದನ್ನು ಕುವಲಾಲಪುರ ಅಂತಲೂ ಕರೆಯುತಿದ್ದರು. ಗಂಗರು ಕಟ್ಟಿಸಿದ ಹಲವಾರು ಸ್ಥಳಗಳು, ದೇವಾಲಯಗಳು ಕೋಲಾರದಲ್ಲಿವೆ. ಅದರಲ್ಲಿ ಕೋಲಾರಮ್ಮನ ದೇವಾಲಯವು ಪ್ರಸಿದ್ಧಿ ಪಡೆದಿದೆ. ಮೈಸೂರು ಹುಲಿ ಎಂದು ಪ್ರಸಿದ್ಧಿ ಪಡೆದ ಟಿಪ್ಪು ಸುಲ್ತಾನ್ ಅವರ ತಂದೆ ಹೈದರ್ ಅಲಿ ಜನಿಸಿದ್ದು ಕೂಡ ಇದೇ ಜಿಲ್ಲೆಯಲ್ಲಿ ಎನ್ನುವುದು ಇತಿಹಾಸದಲ್ಲಿ ನೋಡುತ್ತೇವೆ. ಅಂತರಗಂಗೆ ಬೆಟ್ಟದ ಶಿವಗಂಗೆಯಲ್ಲಿ ನೆಲಸಂಸ್ಕೃತಿಗಳ ರಂಗಚಟುವಟಿಕೆಗಳ ‘ಆದಿಮ ಸಂಸ್ಥೆ’ ಇದೆ. ದಲಿತ ಚಳವಳಿ ಮತ್ತು ಅಹಿಂದ ಚಳವಳಿಗೆ ಭದ್ರ ಬುನಾದಿ ಹಾಕಿ ಹೋರಾಟದ ಚಳುವಳಿಗಳು ಹುಟ್ಟಿಕೊಂಡಿದ್ದು ಇಲ್ಲಿಂದಲೇ ಎನ್ನುವುದನ್ನು ಮರೆಯುವಂತಿಲ್ಲ. ಇನ್ನು ಮಿಲ್ಕ್ ಅಂಡ್ ಸಿಲ್ಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಹೂವು, ಹಣ್ಣು ತರಕಾರಿ ಬೆಳೆದು ಬೆಂಗಳೂರಿನ ಹೊಟ್ಟೆ ತುಂಬಿಸುವ ಈ ಜಿಲ್ಲೆಯು ರಾಜ್ಯದಲ್ಲಿ ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಪಡೆದಿದೆ.
ಕೋಲಾರ ವಿಧಾನಸಬಾ ಕ್ಷೇತ್ರ
ಕೋಲಾರ ವಿಧಾನಸಭಾ ಕ್ಷೇತ್ರದ ಮೊದಲ ಸಾರ್ವತ್ರಿಕ ಚುನಾವಣೆ 1952ರಲ್ಲಿ ನಡೆಯಿತು. ಆಗ ಕೆ ಪಟ್ಟಾಭಿರಾಮನ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 5,793 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ ಎಮ್ ಹುಸೇನಸಾಬ್ ಅವರನ್ನು 2835 ಮತಗಳ ಅಂತರದಿಂದ ಸೋಲಿಸಿ ಮೊದಲ ಶಾಸಕರಾಗಿ ಆಯ್ಕೆಯಾದರು.
1957ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಡಾ.ಅಬ್ದುಲ್ ರಶೀದ್‌ರವರು ಸ್ವತಂತ್ರ ಅಭ್ಯರ್ಥಿ ಪಿ ವೆಂಕಟಗಿರಿಯಪ್ಪನವರನ್ನು 2,714 ಮತಗಳ ಅಂತರದಲ್ಲಿ ಸೋಲಿಸಿ ಶಾಸಕರಾದರು. ನಂತರದ 1962 ಮತ್ತು 1967ರ ಸತತ ಎರಡು ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಪಿ ವೆಂಕಟಗಿರಿಯಪ್ಪನವರು ಕಾಂಗ್ರೆಸ್‌ನ ಡಾ. ಅಬ್ದುಲ್ ರಶೀದ್‌ರವರನ್ನು ಸೋಲಿಸಿ ಎರಡು ಬಾರಿ ವಿಧಾನಸಭೆ ಪ್ರವೇಶಿಸಿದರು.
1972ರ ಚುನಾವಣೆಯಲ್ಲಿ ಡಿ.ವೆಂಕಟರಾಮಯ್ಯನವರು ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿ ಪಿ ವೆಂಕಟಗಿರಿಯಪ್ಪ ಅವರನ್ನು 1,492 ಮತಗಳ ಅಂತರದಿಂದ ಸೋಲಿಸಿದರು. ಇದುವರೆಗೆ ನಾಲ್ಕು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಿ ವೆಂಕಟಗಿರಿಯಪ್ಪನವರು 1978ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಇಂದಿರಾ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ಎಂ ಅಬ್ದುಲ್ ಲತೀಫ್ ಅವರ ವಿರುದ್ಧ ಸ್ಪರ್ಧಿಸಿ 394 ಮತಗಳ ಅಂತರದಿಂದ ಸೋಲುಂಡರು. ನಂತರದಲ್ಲಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.
ನಂತರ 1983ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಕಣಕ್ಕಿಳಿದ ಕೆ ಆರ್ ಶ್ರೀನಿವಾಸಯ್ಯನವರು ಕಾಂಗ್ರೆಸ್‌ನ ನಸೀರ್ ಅಹಮದ್ ಅವರನ್ನು 19,755 ಮತಗಳ ಅಂತದಿಂದ ಸೋಲಿಸಿ ಶಾಸಕರಾದರು. 1985ರಲ್ಲಿಯೂ ಸಹ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಅಬ್ದುಲ್ ರಹೀಮ್ ಅವರನ್ನು ಸೋಲಿಸಿ ಎರಡನೆಯ ಬಾರಿಗೆ ಶಾಸಕರಾಗಿ ಅಯ್ಕೆಯಾದರು. ಸತತ ಎರಡು ಬಾರಿ ಮುಸ್ಲಿಮರಿಗೆ ಟಿಕೆಟ್ ನೀಡಿ ಸೋಲುಂಡ ಕಾಂಗ್ರೆಸ್ ಪಕ್ಷ ಈ ಬಾರಿ ಅಂದರೆ, 1989ರ ಚುನಾವಣೆಯಲ್ಲಿಯೂ ಸಹ, ಮತ್ತೆ ಮುಸ್ಲಿಂ ಅಭ್ಯರ್ಥಿ ಕೆ ಎ ನಿಸ್ಸಾರ್ ಅಹಮ್ಮದ್ ಅವರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿತು. ಆಗ ಜನತಾ ದಳದಿಂದ ಸ್ಪರ್ಧಿಸಿದ್ದ ಕೆ ಆರ್ ಶ್ರೀನಿವಾಸಯ್ಯನವರನ್ನು 6,064 ಮತಗಳ ಅಂತರದಿಂದ ಸೋಲಿಸಿ ಕೆ ಎ ನಿಸಾರ್ ಅಹಮ್ಮದ್ ಅವರು ಶಾಸಕರಾದರು. ಅವರು ಕೋಲಾರ ಕ್ಷೇತ್ರದಿಂದ ಮುಸ್ಲಿಂ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ ಮೂರನೇ ಮತ್ತು ಕೊನೆಯ ವ್ಯಕ್ತಿಯಾದರು.
1994ರಷ್ಟೊತ್ತಿಗೆ ಜನತಾ ದಳವು ದೇವೇಗೌಡರ ನೇತೃತ್ವ ಪಡೆದುಕೊಂಡಿತ್ತು. ಆಗ ಜನತಾ ದಳದಿಂದ ಕೆ.ಶ್ರೀನಿವಾಸಗೌಡ ಅವರನ್ನು ಕಣಕ್ಕಿಳಿಸಿ ಕಾಂಗ್ರೆಸ್ನ ಕೆ ಎ ನಿಸಾರ್ ಅಹಮ್ಮದ್ ಅವರನ್ನು 12,822 ಮತಗಳ ಅಂತರದಿಂದ ಸೋಲಿಸಿ ಶಾಸಕರಾದರು. 1999ರಲ್ಲಿ ಕೆ.ಶ್ರೀನಿವಾಸಗೌಡ ಜೆಡಿಯು ಪಕ್ಷ ಸೇರ್ಪಡೆಯಾಗಿ ಅದೇ ಪಕ್ಷದಿಂದ ಕಣಕ್ಕಿಳಿದು ಕಾಂಗ್ರೆಸ್‌ನ ನಸೀರ್ ಅಹಮದ್ ಅವರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಮತ್ತೆ 2004ಲ್ಲಿ ಕೆ ಶ್ರೀನಿವಾಸಗೌಡ ಜೆಡಿಯು ಪಕ್ಷ ತೊರೆದು ಕಾಂಗ್ರೆಸ್ ಸೇರಿದರು.
ಅದೇ ಪಕ್ಷದ ಅಭ್ಯರ್ಥಿಯಾಗಿ ಬಿಜೆಪಿಯ ಆನಂದ ಎಂ.ಎಸ್. ಅವರನ್ನು ಸೋಲಿಸಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಮೂರನೆಯ ಬಾರಿ ವಿಧಾನಸಭೆ ಪ್ರವೇಶಿಸಿದರು. ಶ್ರೀನಿವಾಸಗೌಡರು ಮೂರು ಬಾರಿ ಮೂರು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಆಯ್ಕೆಯಾಗಿರುವುದು ವಿಶೇಷ.
2008ರ ಚುನಾವಣೆಯೊತ್ತಿಗೆ ವರ್ತೂರು ಪ್ರಕಾಶ ಅವರು ಕ್ಷೇತ್ರದಲ್ಲಿ ಪ್ರವೇಶ ಪಡೆದಿದ್ದರು. ಆಗ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 66,446 ಮತಗಳನ್ನು ಪಡೆದು ಕಾಂಗ್ರೆಸ್‌ನ ಕೆ ಶ್ರೀನಿವಾಸಗೌಡ ಅವರನ್ನು 21,029 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ನಂತರ ಜವಳಿ ಸಚಿವರಾದರು. 2013ರ ಚುನಾವಣೆಯಲ್ಲಿ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 62,957 ಮತಗಳನ್ನು ಪಡೆದು ಆಗ ತಾನೆ ಜೆಡಿಎಸ್ ಸೇರಿದ್ದ ಕೆ.ಶ್ರೀನಿವಾಸಗೌಡ ಅವರನ್ನು 12,591 ಮತಗಳ ಅಂತರದಿಂದ ಸೋಲಿಸಿ ಎರಡನೆಯ ಬಾರಿಗೆ ಶಾಸಕರಾಗಿ ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಸೂಚಿಸಿ ನಂತರ ಕಾಂಗ್ರೆಸ್ ಸೇರಿದರು. ಅನಂತರ ಅಲ್ಲಿಂದಲೂ ಹೊರಬಂದು “ನಮ್ಮ ಕಾಂಗ್ರೆಸ್“ ಎಂಬ ಪಕ್ಷವನ್ನು ಸ್ಥಾಪಿಸಿದರು. ಈಗ ಅದನ್ನು ಬಿಟ್ಟು ಬಿಜೆಪಿ ಪಕ್ಷ ಸೇರಿದ್ದಾರೆ.
2018ರ ಚುನವಣೆಯೊತ್ತಿಗೆ ಕ್ಷೇತ್ರ ಸಾಕಷ್ಟು ಬದಲಾವಣೆಗಳೊಂದಿಗೆ ಚರ್ಚೆಯಲ್ಲಿತ್ತು. ಹೌದು 2015ರಲ್ಲಿ ಜನಪ್ರಿಯ ಜಿಲ್ಲಾಧಿಕಾರಿಯಾಗಿದ್ದ ಡಿ ಕೆ ರವಿಯವರ ಆತ್ಮಹತ್ಯೆಯಾಗಿತ್ತು. ಆಗ ಬಿಜೆಪಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಸುಳ್ಳು ಸುದ್ದಿ ಎಬ್ಬಿಸಿತು. ಇದು ಕ್ಷೇತ್ರದ ಮೇಲೆ ಪ್ರಭಾವ ಬೀರಿತು. ಆಗ ಡಿ ಕೆ ರವಿ ಅವರ ತಾಯಿ ಗೌರಮ್ಮ ಆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 2,085 ಮತಗಳನ್ನು ಪಡೆದರು. ಆಗ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೆ ಶ್ರೀನಿವಾಸಗೌಡರು 81,487 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿಯಾದ ಸೈಯದ್ ಜಮೀರ್ ಪಾಶ ಅವರು 35,537 ಮತಗಳನ್ನು ಪಡೆದು 42,950 ಮತಗಳ ಅಂತರದಿಂದ ಸೋತು ಎರಡನೆಯ ಸ್ಥಾನದಲ್ಲಿ ಉಳಿದರು. ಇನ್ನು ಇತ್ತ ವರ್ತೂರು ಪ್ರಕಾಶ್ ಕೇವಲ 35,544 ಮತಗಳಿಸಿ ಮೂರನೇ ಸ್ಥಾನಕ್ಕೆ ಕುಸಿದರು.
ಮತ-ಜಾತಿವಾರು ಲೆಕ್ಕಾಚಾರ
ಒಟ್ಟು ಮತದಾರರು:
ಪುರುಷ: ಮಹಿಳೆ:
SC-ST : 70 ಸಾವಿರ
ಮುಸ್ಲಿಂ : 60 ಸಾವಿರ
ಒಕ್ಕಲಿಗ : 40 ಸಾವಿರ
ಕುರುಬ : 24 ಸಾವಿರ
ಬಲಿಜಗರು : 10 ಸಾವಿರ
ಹಿಂದುಳಿದ ವರ್ಗ : 12 ಸಾವಿರ
2023ರ ಸ್ಪರ್ಧಾಳುಗಳು
INC : ಕೊತ್ತೂರು ಮಂಜುನಾಥ
BJP : ವರ್ತೂರು ಪ್ರಕಾಶ್
JDS : CMR ಶ್ರೀನಾಥ್
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜಾತಿವಾರು ಮತಗಳನ್ನು ನೋಡೋದಾದರೆ ದಲಿತ ಸಮುದಾಯದ ಮತಗಳೇ ಮೊದಲನೇ ಸ್ಥಾನದಲ್ಲಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತದಾರರು 70,000 ಇದ್ದು ಮುಸ್ಲಿಂ ಮತದಾರರು ಎರಡನೇ ಸ್ಥಾನದಲ್ಲಿದ್ದು 60,000 ದಷ್ಟಿದ್ದಾರೆ. ಒಕ್ಕಲಿಗರು 40,000 ದಷ್ಟಿವೆ. ಇನ್ನು ಕುರುಬರು 24,000, ಬಲಿಜಗರು 10,000 ಇದ್ದರೆ ಇನ್ನುಳಿದ ಕ್ಷತ್ರಿಯರು, ಮರಾಠರು, ಕುಂಬಾರರು ಎಲ್ಲ ಮತದಾರರು ಸೇರಿ 10,000 ದಷ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿ ಮುಸ್ಲಿಮರು ಎರಡನೆಯ ಸ್ಥಾನದಲ್ಲಿದ್ದರೂ ನಿರ್ಣಾಯಕ ಮತದಾರರು ಮಾತ್ರ ದಲಿತರು ಮತ್ತು ಒಕ್ಕಲಿಗರಾಗಿದ್ದಾರೆ.
-----
-----------
ಮಾಲೂರು ಕುರುಕ್ಷೇತ್ರ
ಕ್ಷೇತ್ರ ಪರಿಚಯ
-ಅಬ್ಬರಿಸಿ ಬೊಬ್ಬಿರಿದಿದ್ದ ಕೃಷ್ಣಯ್ಯ ಶೆಟ್ಟಿ ಅವನತಿ
-ಕೃಷ್ಣಯ್ಯ ಶೆಟ್ಟಿ ತಿರುಪತಿ ಲಡ್ಡು, ಗಂಗಾಜಲ ರಾಜಕಾರಣ ಪತನ
-ಸಾಹಿತಿಗಳಾದ ಎಂ.ಎಸ್.ಎನ್, ಗೋವಿಂದರೆಡ್ಡಿ, ಡಾ.ಕೆ.ವೈ.ಎನ್
-ಜ್ಞಾನಪೀಠ ಗೌರವ ತಂದು ಕೊಟ್ಟ ಮಾಸ್ತಿ ವೆಂಕಟೇಶ್ ಅಯ್ಯಂಗಾರ್
-ಕೆತ್ತನೆಯ ಶಿಲ್ಪಗಳಿಗೆ ಇಲ್ಲಿನ ಶಿವಾರಪಟ್ಟಣ..ಹೆಂಚು, ಇಟ್ಟಿಗೆ ಕಾರ್ಖಾನೆ ಹೆಚ್ಚು
-ಈ ಪ್ರದೇಶದ ತರಕಾರಿ ಮತ್ತು ಹೂಗಳು ಬೆಂಗಳೂರು ನಗರದಲ್ಲೂ ಮನೆಮಾತು
ಚುನಾವಣೆಯ ಹಿನ್ನೆಲೆಯಲ್ಲಿ ಜನರಿಗೆ ತಿರುಪತಿಯಿಂದ ಲಡ್ಡು ತರಿಸಿ ಹಂಚುವುದಕ್ಕೆ ರಾಜ್ಯದಲ್ಲಿ ಪ್ರಸಿದ್ಧರಾಗಿದ್ದವರು ಮಾಲೂರಿನ ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ. ಅದರ ಜೊತೆಗೆ ಕಾಶಿಯಿಂದ ಗಂಗಾಜಲವನ್ನು ತರಿಸಿ ಹಂಚುತ್ತಿದ್ದರು. ತಿರುಪತಿ, ಧರ್ಮಸ್ಥಳ ಮುಂತಾದ ಕ್ಷೇತ್ರಗಳಿಗೆ ಜನರನ್ನು ಉಚಿತವಾಗಿ ಕರೆದುಕೊಂಡು ಹೋಗಲು ಬಸ್ ವ್ಯವಸ್ಥೆ ಮಾಡುತ್ತಿದ್ದರು. ಹೀಗೆ ನಾನಾ ರೀತಿ ದೇವರ ಮೂಲಕ, ಪ್ರಸಾದದ ಮೂಲಕ ಜನರ ಮನವೊಲಿಸಿ ಗೆದ್ದು ಶಾಸಕರಾದ ಮೇಲೆ ಕೃಷ್ಣಯ್ಯ ಶೆಟ್ಟಿ ಹಲವು ಅವ್ಯವಹಾರ, ಅಕ್ರಮಗಳಲ್ಲಿ ಪಾಲ್ಗೊಂಡ ಆರೋಪಕ್ಕೆ ಗುರಿಯಾದರು. ಜೈಲಿಗೂ ಹೋಗಿಬಂದರು. ಇದು ವ್ಯಕ್ತಿಯೊಬ್ಬರ ರಾಜಕೀಯ ಮಾದರಿ ಎನ್ನುವುದಕ್ಕಿಂತಲೂ ಒಂದು ಸಿದ್ಧಾಂತದ ಮಾದರಿ. ಹೆಚ್ಚು ಕಾಲ ಅದರಿಂದ ಜನರನ್ನು ಮರಳು ಮಾಡಲಾಗದು ಎನ್ನುವುದಕ್ಕೆ ಮಾಲೂರು ಕ್ಷೇತ್ರವೇ ನಿದರ್ಶನ.
ರಾಜ್ಯದ ರಾಜಧಾನಿ ಬೆಂಗಳೂರು ನಗರಕ್ಕೆ ಅಂಟಿಕೊಂಡಿರುವ, ಬಯಲುಸೀಮೆ ಕೋಲಾರ ಜಿಲ್ಲೆಗೆ ಸೇರಿರುವ ಮಾಲೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವಾಗಿದೆ. ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಹಾಸ್ಯ ಸಾಹಿತಿಗಳಾದ ಎಂ ಎಸ್ ನರಸಿಂಹಮೂರ್ತಿ ಹಾಗೂ ಸಿ ಎಂ ಗೋವಿಂದರೆಡ್ಡಿ, ಆರ್ ವಿಜಯರಾಘವನ್, ಸ ರಘುನಾಥ ಮತ್ತು ಡಾ. ಕೆ ವೈ ನಾರಾಯಣಸ್ವಾಮಿ ಮುಂತಾದವರು ಈ ಕ್ಷೇತ್ರದವರಾಗಿದ್ದಾರೆ. ಮಾಸ್ತಿಯವರ ಮೂಲಕ ನಾಡಿಗೆ ನಾಲ್ಕನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕ್ಷೇತ್ರವಿದು.
ಕೆತ್ತನೆಯ ಶಿಲ್ಪಗಳಿಗೆ ಇಲ್ಲಿನ ಶಿವಾರಪಟ್ಟಣ ಹೆಸರುವಾಸಿಯಾಗಿದೆ. ಇಲ್ಲಿ ದೊರೆಯುವ ವಿಶೇಷ ಜೇಡಿ ಮಣ್ಣು ಹಾಗೂ ನೀಲಗಿರಿ ಉರುವಲುಗಳಿಂದಾಗಿ ಇಲ್ಲಿನ ಹೆಂಚು ಮತ್ತು ಇಟ್ಟಿಗೆ ಕಾರ್ಖಾನೆಗಳು ಪ್ರಸಿದ್ಧವಾಗಿವೆ. ಈ ಕಾರ್ಖಾನೆಗಳು ಬೇರೆ ಬೇರೆ ರಾಜ್ಯಗಳಾದ ಬಿಹಾರ, ಒರಿಸ್ಸಾ, ಆಂಧ್ರ ಮತ್ತು ತಮಿಳುನಾಡಿನ ಅನೇಕ ಕಾರ್ಮಿಕರಿಗೆ ಆಶ್ರಯ ನೀಡಿವೆ. ಇಲ್ಲಿ ತಯಾರಾಗುವ ಹೆಂಚುಗಳಿಗೆ ರಾಜ್ಯ ಅಲ್ಲದೇ ತಮಿಳುನಾಡು, ಆಂಧ್ರಪ್ರದೇಶದಿಂದ ಬೇಡಿಕೆ ಇದೆ. ಈ ಪ್ರದೇಶದ ತರಕಾರಿ ಮತ್ತು ಹೂಗಳು ಬೆಂಗಳೂರು ನಗರದಲ್ಲೂ ಮನೆಮಾತಾಗಿವೆ.
ಮಾಲೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂದೆ ಖ್ಯಾತಿ ಪಡೆದಿದೆ. ಈ ಕ್ಷೇತ್ರದಲ್ಲಿ 1952ರಿಂದ 2018ರವರೆಗೆ 15 ವಿಧಾನಸಭಾ ಚುನಾವಣೆಗಳು ನಡೆದಿವೆ. ಅದರಲ್ಲಿ ಕಾಂಗ್ರೆಸ್ 8 ಬಾರಿ ಜಯ ಗಳಿಸಿದರೆ, ಜನತಾ ಪಕ್ಷ, ಜನತಾ ದಳ, ಜೆಡಿಎಸ್, ಇಂದಿರಾ ಕಾಂಗ್ರೆಸ್ ತಲಾ ಒಂದೊಂದು ಬಾರಿ ಗೆಲುವು ಸಾಧಿಸಿವೆ, ಬಿಜೆಪಿ ಎರಡು ಬಾರಿ ಜಯ ಕಂಡರೆ, ಒಂದು ಬಾರಿ ಸ್ವತಂತ್ರ ಅಭ್ಯರ್ಥಿ ಗೆಲುವು ಕಂಡಿದ್ದಾರೆ. ಆರು ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಎರಡನೆಯ ಸ್ಥಾನ ತಲುಪಿರುವುದು ಈ ಕ್ಷೇತ್ರದ ವಿಶೇಷ.
1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ಎಚ್.ಸಿ.ಲಿಂಗಾರೆಡ್ಡಿ ಅವರು 6,560 ಮತಗಳನ್ನು ಪಡೆದು ಸ್ವತಂತ್ರ ಅಭ್ಯರ್ಥಿಯಾಗಿದ್ದ ಸಿ.ಕೆ.ವೆಂಕಟರಾಮಪ್ಪ ಅವರನ್ನು 1,888 ಮತಗಳ ಅಂತರದಿಂದ ಸೋಲಿಸಿ ಮೊದಲ ಶಾಸಕರಾಗಿ ಆಯ್ಕೆಯಾದರು. 1957ರಲ್ಲಿ ಮತ್ತೆ ಎಂ ಎ ಕೃಷ್ಣಪ್ಪ ಅವರನ್ನು ಸೋಲಿಸಿ ಎರಡನೆಯ ಬಾರಿಗೆ ಗೆಲುವು ಸಾಧಿಸಿದರು. ಎರಡು ಬಾರಿ ಸತತ ಗೆಲುವು ಕಂಡಿದ್ದ ಎಚ್ ಸಿ ಲಿಂಗಾರೆಡ್ಡಿ 1962ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಎಸ್ ವಿ ರಾಮೇಗೌಡ ಅವರ ವಿರುದ್ಧ ಸೋತರು.
1967ರಲ್ಲಿ ಸ್ವತಂತ್ರ ಅಭ್ಯರ್ಥಿ ಎಂ ಆರ್ ರಾಮಣ್ಣ ಅವರ ವಿರುದ್ಧ ಎಚ್ ಸಿ ಲಿಂಗಾರೆಡ್ಡಿ ಗೆಲವು ಸಾಧಿಸಿ ಮೂರನೆಯ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1972ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎ ವಿ ಮುನಿಸ್ವಾಮಿಯವರಿಗೆ ಟಿಕೆಟ್ ನೀಡಿತು. ಇದರಿಂದ ಅಸಮಾಧಾನಗೊಂಡ ಹೆಚ್ ಸಿ ಲಿಂಗಾರೆಡ್ಡಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಎ ವಿ ಮುನಿಸ್ವಾಮಿ ವಿರುದ್ಧ ಸೋತರು. ನಂತರ 1978ರಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದಿಂದ ಪಿ ಎನ್ ರೆಡ್ಡಿಯವರು ಸ್ಪರ್ಧಿಸಿ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ಲಕ್ಷಿದೇವಿ ರಾಮಣ್ಣ ಅವರನ್ನು ಸೋಲಿಸಿ ಜಯ ಸಾಧಿಸಿದರು. ನಂತರ 1983ರಿಂದ 1999ರವರೆಗೆ ನಡೆದ 5 ಚುನಾವಣೆಗಳು ಎ ನಾಗರಾಜ ಮತ್ತು ಎಚ್ ಬಿ ದ್ಯಾವರಪ್ಪ ಇವರಿಬ್ಬರ ಮಧ್ಯೆ ನಡೆದು ಒಮ್ಮೆ ಅವರು ಒಮ್ಮೆ ಇವರು ಶಾಸಕರಾಗಿ ಆಯ್ಕೆಯಾಗಲು ಕಾರಣವಾಯಿತು.
1983ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ ನಾಗರಾಜ ಅವರು ಎಚ್ ಬಿ ದ್ಯಾವರಪ್ಪರವನ್ನು ಸೋಲಿಸಿ ಶಾಸಕರಾದರು. ಆದರೆ ಎರಡು ವರ್ಷದಲ್ಲಿ ನಡೆದ 1985ರ ಚುನಾವಣೆಯಲ್ಲಿ ಎಚ್ ಬಿ ದ್ಯಾವರಪ್ಪನವರು ಜನತಾ ಪಕ್ಷದಿಂದ ಸ್ವರ್ಧಿಸಿ ಎ ನಾಗರಾಜ ಅವರ ವಿರುದ್ಧ ಗೆದ್ದು ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದರು. 1989ರಲ್ಲಿ ಜನತಾ ದಳದ ಬಿ ಎಂ ಕೃಷ್ಣಪ್ಪ ಅವರ ವಿರುದ್ಧ ಎ ನಾಗರಾಜ ಅವರು ಜಯ ಕಂಡರೆ 1994ಲ್ಲಿ ಎಚ್ ಬಿ ದ್ಯಾವರಪ್ಪ ಕಾಂಗ್ರೆಸ್‌ನ ಎ ನಾಗರಾಜ ಅವರನ್ನು ಮಣಿಸಿ ಜಯ ಸಾಧಿಸಿದರು.1999ರಲ್ಲಿ ಸ್ವತಂತ್ರ ಅಭ್ಯರ್ಥಿ ಎಸ್ ಎನ್ ರಘುನಾಥ ಅವರನ್ನು ಮಣಿಸಿ ಮತ್ತೆ ಎ.ನಾಗರಾಜು ಗೆಲುವು ಸಾಧಿಸಿ ಮೂರನೇ ಬಾರಿಗೆ ಶಾಸಕರಾದರು.
2004ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಎಸ್ ಎನ್ ಕೃಷ್ಣಯ್ಯ ಶೆಟ್ಟಿ 69,120 ಮತಗಳನ್ನು ಪಡೆದು ಕಾಂಗ್ರೆಸ್‌ನ ಎ ನಾಗರಾಜ ಅವರನ್ನು 26,856 ಮತಗಳ ಅಂತರದಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿ ಖಾತೆಯನ್ನು ತೆರೆದರು. ನಂತರ 2008ರ ಚುನಾವಣೆಯಲ್ಲಿಯೂ ಜೆಡಿಎಸ್‌ನ ಆರ್ ಪ್ರಭಾಕರ್ ವಿರುದ್ಧ 78,280 ಮತಗಳನ್ನು ಪಡೆದು 52,401 ಮತಗಳ ಭಾರೀ ಅಂತರದಿಂದ ಗೆಲ್ಲುವ ಮೂಲಕ ಸತತ ಎರಡನೆಯ ಬಾರಿಗೆ ಶಾಸಕರಾಗಿ ಮುಜರಾಯಿ ಇಲಾಖೆಯ ಸಚಿವರೂ ಆದರು. ನಂತರ ಅವರು ಕೆ ಆರ್ ಪುರಂ ಬಳಿಯ ರಾಚೇನಹಳ್ಳಿಯಲ್ಲಿ ಬಿಡಿಎ ವಶಪಡಿಸಿಕೊಂಡ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪದ ಮೇಲೆ ಯಡಿಯೂರಪ್ಪನವರೊಂದಿಗೆ ಜೈಲು ಸೇರಿದ್ದರು.
ನಂತರ ಜೈಲಿನಿಂದ ಬಿಡುಗಡೆಯಾಗಿ 2013ರಲ್ಲಿ ಕೃಷ್ಣಯ್ಯಶೆಟ್ಟಿನವರಿಗೆ ಬಿಜೆಪಿ ಟಿಕೆಟ್ ನೀಡಲು ಸ್ವಲ್ಪ ಸತಾಯಿಸಿತಾದರೂ ಕೊನೆಯ ಕ್ಷಣದಲ್ಲಿ ಬಿ ಫಾರಂ ನೀಡಿತು. ಅದನ್ನು ನಿರಾಕರಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು 38,876 ಮತಗಳನ್ನು ಪಡೆದು ಜೆಡಿಎಸ್ ಪಕ್ಷದ ಕೆ ಮಂಜುನಾಥಗೌಡ ವಿರುದ್ದ 18,769 ಮತಗಳ ಅಂತರದಿಂದ ಸೋತರು. ಆದರೆ, ಈ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆ.ವೈ.ನಂಜೇಗೌಡ 75,677 ಮತಗಳನ್ನು ಪಡೆದರೆ ಜೆಡಿಎಸ್‌ನ ಕೆ ಮಂಜುನಾಥಗೌಡ 57,762 ಮತಗಳನ್ನು ಪಡೆಯುವ ಮೂಲಕ ಎರಡನೆಯ ಸ್ಥಾನ ಪಡೆದುಕೊಂಡರು ಬಿಜೆಪಿಯ ಕೃಷ್ಣಯ್ಯಶೆಟ್ಟಿಯವರು ಮೂರನೆ ಸ್ಥಾನಕ್ಕಿಳಿದರು. ಮೂವರ ಮಧ್ಯೆ ನಡೆದ ತ್ರಿಕೋಣ ಸ್ಪರ್ಧೆಯಲ್ಲಿ ಕಾಂಗ್ರೆಸ್‌ನ ಕೆ ವೈ ನಂಜೇಗೌಡ ಗೆಲುವು ಸಾಧಿಸಿದರು.
ಮತ-ಜಾತಿವಾರು ಲೆಕ್ಕಾಚಾರ
ಒಟ್ಟು ಮತದಾರರು :
ಪುರುಷ : ಮಹಿಳೆ :
ಒಕ್ಕಲಿಗ : 60 ಸಾವಿರ
ಕುರುಬ :
ತಿಗಳ :
ಮುಸ್ಲಿಂ : 15 ಸಾವಿರ
SC-ST : 65 ಸಾವಿರ
OBC : 50 ಸಾವಿರ
2023ರ ಸ್ಪರ್ಧಾಳುಗಳು
INC ನಂಜೇಗೌಡ
BJP ಮಂಜುನಾಥಗೌಡ
JDS ರಾಮೇಗೌಡ
IND ಹೂಡಿ ವಿಜಯ್ (BJP ಬಂಡಾಯ)
ಕ್ಷೇತ್ರದ ಜಾತಿವಾರು ಅಂದಾಜು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ದಲಿತರಿದ್ದು ಎಸ್‌ಸಿ-ಎಸ್‌ಟಿ ಮತಗಳು ಅಧಿಕವಾಗಿದ್ದು 65,000ದಷ್ಟಿವೆ. ಒಕ್ಕಲಿಗ ಸಮುದಾಯದ ಮತಗಳು 60,000ದಷ್ಟಿವೆ. ಕುರುಬರು, ತಿಗಳರು, ಇನ್ನು ಹಿಂದುಳಿದ ವರ್ಗದವರು ಎಲ್ಲಾ ಸೇರಿ 50,000 ಮತಗಳಿದ್ದರೆ, ಮುಸ್ಲಿಮರು 15,000ಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ.
------
-----------
ಶ್ರೀನಿವಾಸಪುರ ಕುರುಕ್ಷೇತ್ರ
ಕ್ಷೇತ್ರ ಪರಿಚಯ
-ರಕ್ತಪಾತಕ್ಕೆ ಹೆಸರಾದ ನೆಲದಲ್ಲಿ ರೆಡ್ಡಿ ವರ್ಸಸ್ ಸ್ವಾಮಿ ಕದನ
-ರಮೇಶ್‌ಕುಮಾರ್ ಮತ್ತು ಜಿ ಕೆ ವೆಂಕಟಶಿವಾರೆಡ್ಡಿ ಮಧ್ಯೆ ಕದನ
-ರಾಜ್ಯದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ಪ್ರದೇಶ ಇದಾಗಿದೆ
-
ಶ್ರೀನಿವಾಸಪುರದ ರಾಜಕಾರಣ ಅಂದರೆ, ಅದು ಕೆ ಆರ್ ರಮೇಶ್‌ಕುಮಾರ್ ಮತ್ತು ಜಿ ಕೆ ವೆಂಕಟಶಿವಾರೆಡ್ಡಿ ನಡುವಿನ ಕದನ ಎಂದೇ ಅರ್ಥೈಸಲಾಗುತ್ತದೆ. 1978ರಿಂದಲೂ ಇದು ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಕ್ಷೇತ್ರದಲ್ಲಿ ಇವರಿಬ್ಬರನ್ನು ಬಿಟ್ಟರೆ ಮೂರನೇ ವ್ಯಕ್ತಿಗೆ ಪೈಪೋಟಿ ಕೊಡಲು ಇದುವರೆಗೂ ಸಾಧ್ಯವಾಗಿಲ್ಲ. 45 ವರ್ಷಗಳಿಂದ ಇಬ್ಬರ ಮಧ್ಯೆಯೇ ಪೈಪೋಟಿ ನಡೆಯುತ್ತಿದ್ದು, ಮೂರನೆಯವರು ಸ್ಪರ್ಧಿಸಿದರೂ ಅವರ್ಯಾರೂ 10 ಸಾವಿರ ಮತಗಳನ್ನು ದಾಟಲು ಸಾಧ್ಯವಾಗಿಲ್ಲ. ದಲಿತ ಮತದಾರರು ಹೆಚ್ಚಾಗಿರುವ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ರಮೇಶಕುಮಾರ್ ಆರು ಬಾರಿ ಶಾಸಕರಾಗಿದ್ದರೆ, ಒಕ್ಕಲಿಗ ರೆಡ್ಡಿ ಸಮುದಾಯದ ವೆಂಕಟಶಿವಾರೆಡ್ಡಿ ನಾಲ್ಕು ಬಾರಿ ಶಾಸಕರಾಗಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕಳೆದ 40-50 ವರ್ಷಗಳಿಂದ ಮಾವು ಬೆಳೆಗೆ ಪ್ರಸಿದ್ಧವಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ಪ್ರದೇಶ ಇದಾಗಿದೆ. ಇಲ್ಲಿ ರೈತರು ಬೆಳೆಯುವ ಮಾವಿನ ಹಣ್ಣುಗಳು ಬೇರೆ ಬೇರೆ ರಾಜ್ಯಗಳಿಗೂ ರಫ್ತಾಗುತ್ತವೆ. ಇದು ಬಯಲು ಸೀಮೆ ಪ್ರದೇಶವಾಗಿದ್ದರೂ ಹನಿ ನೀರಾವರಿ ಮೂಲಕ ಸಾವಿರಾರು ಹೆಕ್ಟೇರ್‌ಗಳಲ್ಲಿ ಮಾವು ಕೃಷಿ ಮಾಡುತ್ತಾ, ಜೊತೆಗೆ ಆಡು, ಕುರಿ ಸಾಕಾಣಿಕೆ ಮಾಡಿ ಬದುಕು ನಡೆಸುತ್ತಿದ್ದಾರೆ ಇಲ್ಲಿನ ರೈತರು.
1967ರಲ್ಲಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರವಾಗಿ ಚಾಲ್ತಿಗೆ ಬಂತು. ಇದಕ್ಕಿಂತ ಮುಂಚೆ 1952ರಲ್ಲಿ ಇದು ಮುಳುಬಾಗಿಲು ಕ್ಷೇತ್ರವಾಗಿತ್ತು. ಇದುವರೆಗೂ ಇಲ್ಲಿ 13 ಚುನಾವಣೆಗಳು ನಡೆದಿವೆ. ಅದರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಎಂಟು ಬಾರಿ ಗೆದ್ದು ಶಾಸಕರಾಗಿದ್ದಾರೆ. ಸಂಸ್ಥಾ ಕಾಂಗ್ರೆಸ್, ಪಕ್ಷೇತರ, ಜನತಾ ಪಕ್ಷ, ಜನತಾ ದಳ, ಜಾತ್ಯತೀತ ಜನತಾ ದಳದ ಅಭ್ಯರ್ಥಿಗಳು ತಲಾ ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೆಚ್ಚಾಗಿ ಕಾಂಗ್ರೆಸ್ ಪಕ್ಷದವರೇ ಶಾಸಕರಾಗಿದ್ದರಿಂದ ಈ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಎಂತಲೇ ಹೇಳಬಹುದು.
ಈ ಕ್ಷೇತ್ರವು ಪಕ್ಷ ಮತ್ತು ಜಾತಿ ರಾಜಕೀಯಕ್ಕಿಂತ ವ್ಯಕ್ತಿಗತ ರಾಜಕೀಯದ ಮೇಲೆ ಕೇಂದ್ರೀಕೃತವಾಗಿದೆ. ಯಾಕೆಂದರೆ 1983 ರಿಂದ 2018ರವರೆಗೆ ಸತತವಾಗಿ 9 ಚುನಾವಣೆಗಳಲ್ಲಿ ಕೇವಲ ಇಬ್ಬರ ನಡುವೆಯೇ ನಡೆದಿವೆ. ಕೆ ಆರ್ ರಮೇಶಕುಮಾರ್ ವರ್ಸಸ್ ಜಿ ಕೆ ವೆಂಕಟಶಿವಾರೆಡ್ಡಿ ಇವರಿಬ್ಬರ ನಡುವಿನ ಪೈಪೋಟಿಗೆ ಈ ಕ್ಷೇತ್ರ ಸಾಕ್ಷಿಯಾಗಿದೆ.
2018ರ ಚುನಾವಣೆ ಹೊರತುಪಡಿಸಿದರೆ ಉಳಿದ ಯಾವ ಚುನಾವಣೆಯಲ್ಲಿಯೂ ಯಾರೂ ಸಹ ಸತತ ಎರಡನೇ ಬಾರಿಗೆ ಶಾಸಕರಾಗಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷದ, ಹಾಲಿ ಶಾಸಕರಾದ ಕೆ ಆರ್ ರಮೇಶಕುಮಾರ್‌ರವರು 2013 ಮತ್ತು 2018ರಲ್ಲಿ ಎರಡು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆಯಾಗುವ ಮೂಲಕ 40 ವರ್ಷಗಳಿಂದ ನಡೆದು ಬಂದ ಸಂಪ್ರದಾಯವನ್ನು ಮುರಿದಿದ್ದರು.
1962ರಲ್ಲಿ ನಡೆದ ಕ್ಷೇತ್ರದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಜಿ ನಾರಾಯಣಗೌಡ ಅವರು ಪಕ್ಷೇತ್ರರಾಗಿ ಸ್ಪರ್ಧಿಸಿದ್ದ ಬಿ ಎಲ್ ನಾರಾಯಣಸ್ವಾಮಿ ಅವರನ್ನು ಸೋಲಿಸಿ ಕ್ಷೆತ್ರದ ಮೊದಲ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. 1967ರಲ್ಲಿ ಸ್ವತಂತ್ರ ಅಭ್ಯರ್ಥಿ ಜಿ ನಾರಾಯಣಗೌಡ ಅವರು ಕಾಂಗ್ರೆಸ್ ಪಕ್ಷದ ಎಸ್ ಬಿ ರೆಡ್ಡಿಯವರನ್ನು ಸೋಲಿಸಿ ಶಾಸಕರಾದರೆ, 1972 ರಲ್ಲಿ ಸಂಸ್ಥಾ ಕಾಂಗ್ರೆಸ್ ಪಕ್ಷದಿಂದ ಎಸ್ ಬಾಚಿರೆಡ್ಡಿ ಅವರು ಸ್ಪರ್ಧಿಸಿ ಆಗಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್ ಸೈಯದ್ ಅಬ್ದುಲ್ ಅಲೀಂ ಅವರನ್ನು ಸೋಲಿಸಿ ಶಾಸಕರಾಗುತ್ತಾರೆ.
ನಂತರ 1978ರಷ್ಟೊತ್ತಿಗೆ ಕ್ಷೇತ್ರದಲ್ಲಿ ಕೆ ಆರ್ ರಮೇಶ್ ಕುಮಾರ್ ಅವರ ಪ್ರವೇಶವಾಗುತ್ತೆ. ಅಲ್ಲಿವರೆಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಹಲವಾರು ಹೋರಾಟಗಳಲ್ಲಿ ಭಾಗಿಯಾಗುವುದರ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ರಮೇಶ್ ಕುಮಾರ್ ದೇವರಾಜ ಅರಸು ಅವರ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆಯುತ್ತಾರೆ. ಅದರ ನಂತರ 1978ರಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ರಾಷ್ಟ್ರೀಯ ಕಾಂಗ್ರೆಸ್‌ನ ಆರ್ ಜಿ ನಾರಾಯಣರೆಡ್ಡಿಯವರನ್ನು 19,800 ಮತಗಳ ಅಂತರದಿಂದ ಸೋಲಿಸುವುದರ ಮೂಲಕ 29ನೇ ವಯಸ್ಸಿನಲ್ಲೇ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸುತ್ತಾರೆ.
1983ರ ಚುನಾವಣೆಯಲ್ಲಿ ಕೆ ಆರ್ ರಮೇಶ್ ಕುಮಾರ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಜಿ ಕೆ ವೆಂಕಟಶಿವಾರೆಡ್ಡಿ ಯವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತಾರೆ. ಈ ಇಬ್ಬರ ಪೈಪೋಟಿಯಲ್ಲಿ ರಮೇಶ್ ಕುಮಾರ್ ಅವರು 642 ಮತಗಳ ಅಂತರದಿಂದ ಸೋಲುತ್ತಾರೆ. ಇಲ್ಲಿಂದ ನಡೆದ ಎಲ್ಲ ಚುನಾವಣೆಗಳು ರೆಡ್ಡಿ ವರ್ಸಸ್ ‘ಸ್ವಾಮಿ’ ಎಂದೇ ಪರಿಗಣಿಸಲ್ಪಟ್ಟವು.
ರಮೇಶ್ ಕುಮಾರ್ ಅವರನ್ನು ಜಿಲ್ಲೆಯಲ್ಲಿ ‘ಸ್ವಾಮಿ’ ಎಂದೇ ಕರೆಯಲಾಗುತ್ತದೆ. 1983 ರಿಂದ 2018ರ ಚುನಾವಣೆವರೆಗೂ ಇವರಿಬ್ಬರೂ 9 ಬಾರಿ ಮುಖಾಮುಖಿಯಾಗಿದ್ದಾರೆ. ಅದರಲ್ಲಿ ಕೆ ಆರ್ ರಮೇಶಕುಮಾರ್ ಅವರು ಆರು ಬಾರಿ ಶಾಸಕರಾದರೆ ಜಿ ಕೆ ವೆಂಕಟಶಿವಾರೆಡ್ಡಿಯವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಕ್ಷಗಳು ಬದಲಾಗುತ್ತಾ ಬಂದರೂ ವ್ಯಕ್ತಿಗಳು ಮಾತ್ರ ಹಾಗೇ ಇದ್ದು, ಇವರಿಬ್ಬರೇ ಎದುರಾಳಿಗಳಾಗಿದ್ದಾರೆ. ಪ್ರತಿ ಚುನಾವಣೆಯ ಸಮಯದಲ್ಲೂ ಈ ಕ್ಷೇತ್ರದಲ್ಲಿ ರಕ್ತಪಾತ, ಹಿಂಸೆ ನಡೆಯುವುದು ಕೂಡ ಸಹಜ ಎನ್ನುವಂತಾಗಿಬಿಟ್ಟಿದೆ.
1985ರ ಚುನಾವಣೆ ಹೊತ್ತಿಗೆ ಕೆ.ಆರ್.ರಮೇಶ ಕುಮಾರ್ ಅವರು ಜನತಾ ಪಕ್ಷಕ್ಕೆ ಸೇರ್ಪಡೆಯಾಗಿ ಆ ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆಗ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಜಿ.ಕೆ.ವೆಂಕಟಶಿವಾರೆಡ್ಡಿಯವನ್ನು ಸೋಲಿಸಿ ಎರಡನೆಯ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1990ರಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ರಮೇಶಕುಮಾರ್ ಅವರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ವೆಂಕಟಶಿವಾರೆಡ್ಡಿಯವರು ಗೆಲ್ಲುತ್ತಾರೆ. 1994ರಲ್ಲಿ ಜನತಾ ದಳದಲ್ಲಿದ್ದ ರಮೇಶ್‌ಕುಮಾರ್‌ರವರು ವೆಂಕಟಶಿವಾರೆಡ್ಡಿಯವರನ್ನು ಸೋಲಿಸಿ ಶಾಸಕರಾಗಿ, ಅಂದಿನ ಜನತಾ ದಳ ಸರ್ಕಾರದಲ್ಲಿ ವಿಧಾನಸಭೆಯ ಸ್ಪೀಕರ್ ಆಗುತ್ತಾರೆ. 1999 ರಲ್ಲಿ ರಮೇಶ್‌ಕುಮಾರ್ ಅವರು ಜನತಾ ದಳ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ವೆಂಕಟಶಿವಾರೆಡ್ಡಿಯವರ ವಿರುದ್ಧ ಸೋಲು ಅನುಭವಿಸಿದರು.
2004ರ ಚುನಾವಣೆಯಲ್ಲಿ ರಮೇಶ್ ಕುಮಾರ್ ಅವರು ಜನತಾ ದಳ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಇದುವರೆಗೂ ಕಾಂಗ್ರೆಸ್‌ನಲ್ಲಿದ್ದ ವೆಂಕಟಶಿವಾರೆಡ್ಡಿಯವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷವನ್ನು ಸೇರಿದರು. ಈ ಬಾರಿ ಪಕ್ಷಗಳು ಬೇರೆಯಾದರೂ ಅವರೇ ಎದುರಾಳಿಗಳಾಗಿದ್ದರು. ಕಾಂಗ್ರೆಸ್‌ನಿಂದ ರಮೇಶ್ ಕುಮಾರ್ ಸ್ಪರ್ಧಿಸಿದರೆ ಬಿಜೆಪಿಯಿಂದ ವೆಂಕಟಶಿವಾರೆಡ್ಡಿ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ರಮೇಶ್ ಕುಮಾರ್ ಅವರು 8,610 ಮತಗಳ ಅಂತರದಿಂದ ಗೆಲ್ಲುವ ಮೂಲಕ ನಾಲ್ಕನೇ ಬಾರಿಗೆ ವಿಧಾನಸೌಧ ಪ್ರವೇಶಿಸಿದರು. 2008ರಲ್ಲಿ ವೆಂಕಟಶಿವಾರೆಡ್ಡಿ ಬಿಜೆಪಿ ತೊರೆದು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ರಮೇಶ್ ಕುಮಾರ್ ಅವರನ್ನು 3,669 ಮತಗಳ ಅಂತರದಿಂದ ಸೋಲಿಸಿ ಜೆಡಿಎಸ್ ಪಕ್ಷದಿಂದ ಶಾಸಕರಾದರು.
2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಮೇಶ್‌ಕುಮಾರ್ ಅವರು ಜೆಡಿಎಸ್‌ನ ವೆಂಕಟಶಿವಾರೆಡ್ಡಿಯವರನ್ನು 3893 ಮತಗಳ ಅಂತರದಿಂದ ಸೋಲಿಸಿ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ 2016ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಮಂತ್ರಿಮಂಡಲದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಂತ್ರಿಯೂ ಆದರು. 2018ರ ಚುನಾವಣೆಯಲ್ಲಿ ಮತ್ತೆ ಇವರಿಬ್ಬರೇ ಪರಸ್ಪರ ಎದುರಾಳಿಗಳಾಗಿ, ಇದುವರೆಗೂ 40 ವರ್ಷಗಳಿಂದ ಎಂಟು ಚುನಾವಣೆಗಳಲ್ಲಿ ಒಬ್ಬರ ನಂತರ ಒಬ್ಬರು ಶಾಸಕರಾಗುತ್ತ ಬಂದಿದ್ದ ಸಂಪ್ರದಾಯಕ್ಕೆ ರಮೇಶ್‌ಕುಮಾರ್ ಅವರು ಕೊನೆ ಹಾಡಿದರು. ವೆಂಕಟಶಿವಾರೆಡ್ಡಿಯವರನ್ನು 10,552 ಮತಗಳ ಅಂತರದಿಂದ ಸೋಲಿಸಿದರು.
ಮತ-ಜಾತಿ ಲೆಕ್ಕಾಚಾರ
ಒಟ್ಟು ಮತದಾರರ ಸಂಖ್ಯೆ
ಪುರುಷ: ಮಹಿಳೆ:
SC-ST : 70 ಸಾವಿರ
ರೆಡ್ಡಿ-ಒಕ್ಕಲಿಗ : 60 ಸಾವಿರ
ಮುಸ್ಲಿಂ : 16 ಸಾವಿರ
ಕುರುಬ : 18 ಸಾವಿರ
OBC : 32 ಸಾವಿರ
ಬ್ರಾಹ್ಮಣ-ವೈಶ್ಯ: 10 ಸಾವಿರ
ಇತರೆ :
2023ರ ಸ್ಪರ್ಧಾಳುಗಳು
INC ರಮೇಶ್ ಕುಮಾರ್
JDS ವೆಂಕಟಶಿವಾರೆಡ್ಡಿ
JDS
ಜಾತಿವಾರು ಮತಗಳನ್ನು ನೋಡುವುದಾದರೆ, ಶ್ರೀನಿವಾಸಪುರ ಕ್ಷೇತ್ರದಲ್ಲಿ ದಲಿತ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಎಸ್‌ಸಿ ಮತ್ತು ಎಸ್‌ಟಿ ಸೇರಿ 70,000 ಮತಗಳಿದ್ದರೆ, ರೆಡ್ಡಿ ಮತ್ತು ಒಕ್ಕಲಿಗರ ತಲಾ 30,000 ಮತದಾರರಿದ್ದಾರೆ. 16,000ದಷ್ಟು ಮುಸ್ಲಿಂ ಮತಗಳಿವೆ. ಇನ್ನುಳಿದಂತೆ ಕುರುಬ, ಬಲಿಜ, ತಿಗಳರು ಇತ್ಯಾದಿ ಹಿಂದುಳಿದ ವರ್ಗದವರು 50,000ದಷ್ಟಿದ್ದಾರೆ ಇನ್ನುಳಿದ ಬ್ರಾಹ್ಮಣರು, ಆರ್ಯ ವೈಶ್ಯರು ಸೇರಿ 5 ರಿಂದ10 ಸಾವಿರ ಮತದಾರರು ಇದ್ದಾರೆ ಎನ್ನಲಾಗುತ್ತಿದೆ. ಈ ಕ್ಷೇತ್ರದಲ್ಲಿ ಜಾತಿ ರಾಜಕೀಯಕ್ಕಿಂತ ವ್ಯಕ್ತಿ ರಾಜಕೀಯವೇ ಕೇಂದ್ರಿತವಾಗಿದೆ. ಹಾಗಾಗಿ ಕಡಿಮೆ ಮತದಾರರನ್ನು ಹೊಂದಿರುವ ಬ್ರಾಹ್ಮಣ ಸಮುದಾಯದ ರಮೇಶಕುಮಾರ್ ಅವರು 6 ಬಾರಿ ಶಾಸಕರಾದರೆ ರೆಡ್ಡಿ ಸಮುದಾಯದ ವೆಂಕಟಶಿವಾರೆಡ್ಡಿಯವರು 4 ಬಾರಿ ಶಾಸಕರಾಗುವ ಮೂಲಕ ಜಾತಿ, ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎನ್ನುವುದು ಸಾಬೀತು ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.