Karnataka Election 2023: ನಾನು ಓಡಿ ಹೋಗುವ ಸಿಎಂ ಅಲ್ಲ ಎಂದ ಬೊಮ್ಮಾಯಿ
Karnataka Assembly Election 2023: ಈ ಚುನಾವಣೆಯಲ್ಲಿ ಬಿಜೆಪಿ 125ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಪಡೆದು ಮತ್ತೊಮ್ಮೆ ಕನ್ನಡನಾಡಿನ ಸೇವೆ ಮಾಡಲು ಬಿಜೆಪಿಗೆ ಜನರು ಆಶೀರ್ವಾದ ಮಾಡುತ್ತಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ(ಶಿಗ್ಗಾವಿ): ನನ್ನನ್ನು ಬೆಳಸಿದವರು ನೀವು, ನನ್ನನ್ನು ಉಳಿಸಿಕೊಳ್ಳುವವರು ನೀವು. ನಾನು ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ. ನನ್ನ ಸಾವಾದರೆ, ನನ್ನನ್ನು ಶಿಗ್ಗಾವಿಯಲ್ಲೇ ಮಣ್ಣು ಮಾಡಬೇಕು. ಇದರಿಂದ ನಾನು ಶಿಗ್ಗಾವಿ ಭೂಮಿ ತಾಯಿಯ ಮಣ್ಣಿನ ಋಣ ತೀರಿಸುವಂತಾಗಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಇಂದು ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಕೆಗೆ ಮುನ್ನ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ‘ಅದ್ಯಾವ ಜನ್ಮದ ಸಂಬಂಧವೊ? ಯಾವ ಋಣಾನುಬಂಧವೊ? ನೀವು 15 ವರ್ಷ ಸತತ ಬೆಂಬಲ ನೀಡಿದ್ದೀರಿ, ನಮ್ಮ-ನಿಮ್ಮ ನಡುವೆ ಯಾವುದೇ ಶಕ್ತಿ ಅಡ್ಡಿ ಬರುವುದಿಲ್ಲ. ನಿಮ್ಮ ಪ್ರೀತಿ-ವಿಶ್ವಾಸಕ್ಕೆ ನಾನು ತಲೆ ಬಾಗಿ, ನನ್ನ ಕೊನೆಯ ಉಸಿರು ಇರುವ ತನಕ ನಿಮ್ಮ ಸೇವೆ ಮಾಡುತ್ತೇನೆಂಬ ಪ್ರತಿಜ್ಞೆ ಮಾಡುತ್ತೇನೆ ಎಂದು ಹೇಳಿದರು.
ಶಿಗ್ಗಾವಿ-ಸವಣೂರಿನ ಅಭಿವೃದ್ಧಿ ನಮ್ಮೆಲ್ಲರ ಕನಸಾಗಿತ್ತು. 2008ರಲ್ಲಿ ನಾನು ಬಂದಾಗ ಒಳ್ಳೆಯ ರಸ್ತೆ ಇರಲಿಲ್ಲ, ರಸ್ತೆಯ ಮಧ್ಯೆ ಹಳ್ಳಗಳಿದ್ದವು. ಕುಡಿಯಲು ನೀರು ಇರಲಿಲ್ಲ. ಕುಡಿಯುವ ನೀರಿಗಾಗಿ ನಮ್ಮ ತಾಯಂದಿರು ರಸ್ತೆಯಲ್ಲಿ ಕೊಡ ಹಿಡಿದುಕೊಂಡು ಸಾಲು ಹಿಡಿದು ನಿಲ್ಲುತ್ತಿದ್ದರು. ಒಂದು ಒಳ್ಳೆಯ ಆಫೀಸ್‍ನ ಕಟ್ಟಡ ಇರಲಿಲ್ಲ. ಜನರ ಕಷ್ಟಕ್ಕೆ ಸ್ಪಂದನೆ ಇರಲಿಲ್ಲ. ಕೆರೆಗಳಿಗೆ ನೀರು ಇರಲಿಲ್ಲ. ಇದರ ಮಧ್ಯೆ ಪ್ರಾರಂಭವಾಗಿರುವ ನಮ್ಮ ಅಭಿವೃದ್ಧಿ ಪಯಣ ಇವತ್ತು 2 ಏತ ನೀರಾವರಿ ಮಾಡಿ 100ಕ್ಕಿಂತ ಹೆಚ್ಚು ಕೆರೆಗಳನ್ನು ತುಂಬಿಸಿರುವ ದಾಖಲೆ ಶಿಗ್ಗಾವಿ-ಸವಣೂರಿನಲ್ಲಿ ಆಗಿದೆ ಎಂದರು.
ಇದನ್ನೂ ಓದಿ: ಬಿಜೆಪಿಯ 40 ಜನ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ; ಸುದೀಪ್ ಹೆಸರು ಮಿಸ್ಸಿಂಗ್!
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಳ್ಳಿಯಿಂದ ಹೊಲಗಳಿಗೆ ಹೋಗುವ 2 ಸಾವಿರ ಕಿಮೀ ಗ್ರಾಮೀಣ ರಸ್ತೆ ನಿರ್ಮಾಣ ಮಾಡಿದ್ದೇವೆ. 15 ವರ್ಷಗಳಲ್ಲಿ ಸುಮಾರು 10 ಸಾವಿರ ಬಡವರಿಗೆ ಮನೆ ನಿರ್ಮಾಣ ಮಾಡಿದ್ದೇವೆ. ಮಳೆಯಿಂದ ಹಾನಿಗೊಳಗಾದ ಜನರಿಗೆ 12 ಸಾವಿರ ಮನೆಗಳನ್ನು ಕಟ್ಟಿರುವ ದಾಖಲೆಯನ್ನು ಮಾಡಿದ್ದೇವೆ. ಬಡತನ ಶಾಪವಲ್ಲ, ಹುಟ್ಟುವಾಗ ಬಡತನ ಇರಬಹುದು. ಆದರೆ ಸಾಯುವವರೆಗೂ ಬಡತನದಲ್ಲಿಯೇ ಇರಬೇಕೆಂದು ಇಲ್ಲ. ತಮ್ಮ ದುಡಿಮೆಯಿಂದ ಪ್ರಾಮಾಣಿಕವಾಗಿ ಮುಂದೆ ಬರುವ ಅವಕಾಶವನ್ನು ಮಾಡಿಕೊಟ್ಟಿದ್ದೇನೆ. ಆದ್ದರಿಂದ ಜನರು ಸ್ವಾಭಿಮಾನದ ಬದುಕಿನಿಂದ ಬಾಳುತ್ತಿದ್ದಾರೆಂದು ಹೇಳಿದರು.
ಶಿಗ್ಗಾವಿ, ಸವಣೂರು, ಬಂಕಾಪುರದಲ್ಲಿ 6 ಸಾವಿರ ಮನೆ ನಿರ್ಮಾಣ ಮಾಡಿದ್ದೇವೆ. ನಗರಗಳ ಸಂಪೂರ್ಣ ಅಭಿವೃದ್ಧಿಯನ್ನು ಮಾಡಿದ್ದೇವೆ. ಪ್ರತಿಯೊಂದು ಗ್ರಾಮಕ್ಕೆ ಇನ್ನು 6 ತಿಂಗಳಲ್ಲಿ ಪ್ರತಿಯೊಂದು ಮನೆಗೆ ನಳದಿಂದ ನೀರು ಕೊಡುವಂತಹ ವ್ಯವಸ್ಥೆ ನಮ್ಮ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಆಗುತ್ತಿದೆ. ನಮ್ಮ ಪ್ರಧಾನಿ ಮೋದಿ, ಜೆ.ಪಿ.ನಡ್ಡಾರ ನೇತೃತ್ವದಲ್ಲಿ ‘ಜಲ ಜೀವನ್ ಮಿಷನ್’ ಅಡಿ ಹಳ್ಳಿ ಹಳ್ಳಿಯ ಪ್ರತಿ ಮನೆಗೂ ನಲ್ಲಿ ನೀರು ಕೊಡಲಾಗುತ್ತಿದೆ ಎಂದರು.
ಜೆ.ಪಿ.ನಡ್ಡಾರ ನೇತೃತ್ವದಲ್ಲಿ ಬಿಜೆಪಿ ಕರ್ನಾಟಕದಲ್ಲಿ ಅತ್ಯಂತ ಸಂಘಟಿತವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ 125ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಪಡೆದು ಮತ್ತೊಮ್ಮೆ ಕನ್ನಡನಾಡಿನ ಸೇವೆ ಮಾಡಲು ಬಿಜೆಪಿಗೆ ಜನರು ಆಶೀರ್ವಾದ ಮಾಡುತ್ತಾರೆ. ಮುಖ್ಯಮಂತ್ರಿಯಾಗಿ ನಾನು ರೈತರಿಗೆ, ಯುವಕರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ವಿದ್ಯಾರ್ಥಿಗಳಿಗೆ ಏನೆಲ್ಲಾ ಕೆಲಸ ಮಾಡಿದ್ದೇನೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದರು.
ಇದನ್ನೂ ಓದಿ: "ಯಾರೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿರುತ್ತಾರೆ ಅಂತಹವರ ಮೇಲೆ ಐಟಿ ದಾಳಿ ಆಗುತ್ತಿದೆ"
ನಾನು ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗುತ್ತೇನೆಂದು ಹೇಳಿದರು. ಆದರೆ ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ, ಏನೇ ಆದರೂ ನನ್ನ ಜನರ ಮುಂದೆ ತೀರ್ಮಾನ ಆಗಬೇಕು. ನೀವೇ ನನ್ನ ಮಾಲೀಕರು, ನಾನು ಕ್ಷೇತ್ರ ಬಿಟ್ಟು ದಾವಣಗೆರೆಗೆ ಹೋಗುತ್ತೆನೆ ಎಂದು ಹಬ್ಬಿಸಿದ್ದರು. ಹಾಗೆ ಯಾರು ಹೇಳಿದ್ದು ಎಂದು ಕೇಳಿದೆ, ಇದು ನನ್ನ ಆತ್ಮಸ್ಥೈರ್ಯ. ಕರ್ನಾಟಕ ಮಾತೆಗೆ, ಕನ್ನಡಿಗರಿಗೆ ಮತ್ತು ಈ ಕ್ಷೇತ್ರದ ಜನರಿಗೆ ನಾನು ಪ್ರಾಮಾಣಿಕ ಸೇವೆ ಮಾಡಿದ್ದೇನೆ. ಅದರಲ್ಲಿ ನನ್ನ ನಂಬಿಕೆಯಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಆರ್ಯುವೇದಿಕ್ ಆಸ್ಪತ್ರೆ, ಶಿಗ್ಗಾವಿ, ಸವಣೂರಿನಲ್ಲಿ 250 ಹಾಸಿಗೆಯ ಆಸ್ಪತ್ರೆ, ಜಿಟಿಟಿಸಿ ಮತ್ತು ಇಂಜಿನಿಯರಿಂಗ್ ಕಾಲೇಜು, 10 ಸಾವಿರ ಜನರಿಗೆ ಉದ್ಯೋಗ ಕೊಡುವ ಟೆಕ್ಸ್ಟೈಲ್ ಪಾರ್ಕ್ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಮಾಡಿದ್ದೇನೆ. ಬಂಕಾಪುರ ತಾಲೂಕು ಆಗಬೇಕೆಂದು ಜನರ ಬೇಡಿಕೆ ಇದೆ. ನಾನು ಇವತ್ತು ಅದಕ್ಕೆ ಎಲ್ಲಾ ಅನುಮತಿ ಕೊಟ್ಟು ಆಜ್ಞೆ ಮಾಡಿದ್ದೇನೆ. ಚುನಾವಣೆ ನೀತಿ ಸಂಹಿತೆ ಅದಕ್ಕೆ ಅಡಚಣೆಯಾಗಿದೆ. ಬರುವ ದಿನಗಳಲ್ಲಿ ಬಂಕಾಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡುತ್ತೇನೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಹಿರಿಯ ನಾಯಕರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.