Karnataka Election 2023: ಕರ್ನಾಟಕವನ್ನು ನಂಬರ್ 1 ರಾಜ್ಯ ಮಾಡುತ್ತೇವೆ: ಪಿಎಂ ಮೋದಿ
Karnataka Election 2023: ಕರ್ನಾಟಕದ ಈ ಚುನಾವಣೆ ಕೇವಲ 5 ವರ್ಷದ ಆಡಳಿತಕ್ಕೆ ಸರ್ಕಾರ ಮಾಡುವ ಚುನಾವಣೆ ಅಲ್ಲ. ಇದು ಕರ್ನಾಟಕವನ್ನು ದೇಶದಲ್ಲಿ ನಂಬರ್ 1 ರಾಜ್ಯ ಮಾಡುವ ಚುನಾವಣೆ. ಇದು ವಿಕಸಿತ ಭಾರತಕ್ಕೆ ಕರ್ನಾಟಕದ ಭೂಮಿಕೆಯನ್ನು ತಯಾರು ಮಾಡುವ ಚುನಾವಣೆ ಎಂದು ಪ್ರಧಾನಿ ಮೋದಿ ಹೇಳಿದರು.
ಹುಮನಾಬಾದ್ (ಬೀದರ್) : ಬಡವರ ಸಮಸ್ಯೆಗಳು ಕಾಂಗ್ರೆಸ್‌ಗೆ ಅರ್ಥವೇ ಆಗುತ್ತಿರಲಿಲ್ಲ. ಅವರು ಬಡತನವನ್ನು ನೋಡಿಯೇ ಇಲ್ಲ. ವಿಕಾಸದಲ್ಲೂ ಅವರು ರಾಜಕೀಯ ಮಾಡುತ್ತಾರೆ. ಬಡವರಿಗೆ ಮನೆಗಳನ್ನು ಕಟ್ಟಿ ಕೊಡುವ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕಾಂಗ್ರೆಸ್ ಅವರು ರಾಜಕೀಯ ಮಾಡಿದರು. ತಮ್ಮ ಅವಧಿಯಲ್ಲಿ ಅವರು ಅತ್ಯಂತ ನಿಧಾನಗತಿಯಲ್ಲಿ ಮನೆಗಳನ್ನು ಕಟ್ಟಿ ಬಡವರಿಗೆ ಮನೆಗಳು ಕೈಸೇರದಂತೆ ನೋಡಿಕೊಂಡರು. ಇದನ್ನು ನಿಲ್ಲಿಸಿದ್ದು ಬಿಜೆಪಿ ಸರ್ಕಾರ. ಮನೆಗಳನ್ನು ಕಟ್ಟುವ ವೇಗವನ್ನು ಹೆಚ್ಚಿಸಿ ರಾಜ್ಯದಲ್ಲಿ ಈಗ ಸುಮಾರು 9 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಬೀದರ್ ನಲ್ಲೇ 30 ಸಾವಿರ ಮನೆಗಳು ನಿರ್ಮಾಣವಾಗುತ್ತಿದೆ. ಲಕ್ಷಾಂತರ ಮೌಲ್ಯದ ಆ ಮನೆಗಳನ್ನು ಮಹಿಳೆಯರ ಹೆಸರಲ್ಲಿ ನೋಂದಣಿ ಮಾಡಿಕೊಡಲಾಗುತ್ತೆ ಎಂದು ಪ್ರಧಾನಿ ಮೋದಿ ಹೇಳಿದರು.
40 ಲಕ್ಷ ಮನೆಗಳಿಗೆ ನಲ್ಲಿಯಲ್ಲಿ ನೀರು ಕೊಡುತ್ತಿದ್ದೇವೆ:
ಗ್ರಾಮಗಳಲ್ಲಿ ನಲ್ಲಿಗಳಲ್ಲಿ ಕುಡಿಯುವ ನೀರು ಬರದೇ ಇರುವುದರಿಂದ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರ ದಶಕಗಳ ಸಮಸ್ಯೆಗಳನ್ನು ನಿವಾರಿಸಲು ಪ್ರತಿ ಮನೆಗೆ ನೀರು ಕೊಡುವ ಯೋಜನೆ ಪ್ರಾರಂಭ ಮಾಡಿದೆ. ದೇಶದಲ್ಲಿ 9 ಕೋಟಿಗೂ ಹೆಚ್ಚು ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕರ್ನಾಟಕದಲ್ಲೂ 40 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಈ ಯೋಜನೆ ತಲುಪಿದೆ. ಶೌಚಾಲಯ, ಗ್ಯಾಸ್ ಸಂಪರ್ಕ ಹಾಗೂ ವೈದ್ಯಕೀಯ ಸಲಹೆ ಪಡೆಯುವಲ್ಲಿ ಮಹಿಳೆಯರು ಹೆಚ್ಚು ಸಮಸ್ಯೆಗಳನ್ನು ಅನುಭವಿಸುತ್ತಿದ್ದರು ಎಂದು ಹೇಳಿದರು.
ಇದನ್ನೂ ಓದಿ: ಲೋಕಾಪುರ ಪಟ್ಟಣದ ಬಳಿ 5 ಕೋಟಿ ರೂ. ಹಣ ಜಪ್ತಿ
ಬಡವರನ್ನು ಉದ್ಧಾರ ಮಾಡುವ ಕಾರ್ಯವನ್ನು ಕಾಂಗ್ರೆಸ್ ಅವರು ಇಷ್ಟು ದಶಕಗಳ ಆಡಳಿತದಲ್ಲಿ ಮಾಡಿರಲಿಲ್ಲ. ಆದ್ರೆ ನಿಮ್ಮ ಮಗನಾದ ನಾನು ದೆಹಲಿಯಲ್ಲಿ ಕೂತು ಕೆಲಸ ಮಾಡುತ್ತಿದ್ದಾನೆ. ಮಹಿಳೆಯರ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಅದರಲ್ಲಿ ಸರ್ಕಾರ ಯೋಜನೆಗಳ ಸಹಾಯ ಧನ ನೇರವಾಗಿ ಅವರಿಗೆ ತಲುಪುವ ಹಾಗೆ ಮಾಡಲಾಗಿದೆ. ಗ್ಯಾರಂಟಿ ಇಲ್ಲದೇ ಮುದ್ರಾ ಲೋನ್ ನೀಡಲಾಗುತ್ತಿದೆ. ಬಡವರ ಮನೆಗಳಿಗೆ ರೇಷನ್ ಸಮಸ್ಯೆ ಆಗದಿರುವಂತೆ ಮುಕ್ತ ರೇಷನ್ ಖರೀದಿ ಸೌಲಭ್ಯ ಮಾಡಲಾಗಿದೆ. ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಜಾತಿಮತಗಳ ಹೆಸರಲ್ಲಿ ಕಾಂಗ್ರೆಸ್ ಒಡೆದು ಆಳಿದೆ:
ಬಂಜಾರ ಸಮುದಾಯದ ಏಳಿಗೆ ಕಾಂಗ್ರೆಸ್ ಸರ್ಕಾರಕ್ಕೆ ಬೇಡವಾಗಿತ್ತು. ಆದರೆ ಬಿಜೆಪಿ ಅವರಿಗೆ ಮನೆಗಳ ಹಕ್ಕುಪತ್ರಗಳನ್ನು ನೀಡಿ ರಾಜ್ಯದ ಏಳಿಗೆಯಲ್ಲಿ ಪಾಲದಾರರನ್ನಾಗಿ ಮಾಡಿದೆ. ಆದರೆ ಕಾಂಗ್ರೆಸ್ ಸಮಾಜವನ್ನು ಜಾತಿ ಮತಗಳ ಪಂಥಗಳ ಹೆಸರಲ್ಲಿ ಒಡೆದು ತುಷ್ಟೀಕರಣ ಹೆಚ್ಚು ಮಾಡಿದೆ. ಬಿಜೆಪಿ ಸರ್ಕಾರ ಬಿದರಿ ಕಲೆ ಖ್ಯಾತಿಯ ಶಾ ರಶೀದ್ ಅಹ್ಮದ್ ಖಾದ್ರಿ ಅವರಿಗೆ ಪದ್ಮ ಪುರಸ್ಕಾರ ಕೊಟ್ಟಿದೆ. ಆದ್ರೆ ಕಾಂಗ್ರೆಸ್ ಸರ್ಕಾರ ಅವರಿಗೆ ಬರೇ ನೋವು ನಿರಾಶೆಯೇ ಕೊಟ್ಟಿತ್ತು. ಬೀದರ್ ಒಂದು ತೀರ್ಥಸ್ಥಳ. ಗೋರ್ಟಾದಲ್ಲಿನ ರೈತರ ಬಲಿದಾನ ಕಾಂಗ್ರೆಸ್ ಮರೆತುಹೋಗಿತ್ತು. ಅಲ್ಲಿದ್ದ ಕಲ್ಲಿನ ಸ್ಮಾರಕದ ಧೂಳನ್ನೂ ಸ್ವಚ್ಛ ಮಾಡಿರಲಿಲ್ಲ. ಆದ್ರೆ ಈಗ ಅಲ್ಲಿ ದೊಡ್ಡದೊಂದು ಸ್ಮಾರಕ ಎದ್ದು ನಿಂತಿದೆ ಮತ್ತು ಸದಾ ಕಾಲ ತಿರಂಗ ಹಾರಾಡುತ್ತಿರುತ್ತದೆ ಎಂದು ಹೇಳಿದರು.
ಅಸ್ಥಿರ ಸರ್ಕಾರ ಬರದಿರಲು ಬಿಜೆಪಿಗೆ ಬಹುಮತ ನೀಡಿ:
ಅಸ್ಥಿರ ಸರ್ಕಾರ ಮತ್ತು ಸಮ್ಮಿಶ್ರ ಸರ್ಕಾರ ಬಂದಿದ್ದರ ಪರಿಣಾಮ ಕರ್ನಾಟಕದ ಜನರು ನೋಡಿದ್ದಾರೆ. ಅಸ್ಥಿರ ಸರ್ಕಾರ ಬಂದರೆ ಜನರಿಗೆ ಯಾವುದೇ ಕಾರ್ಯಕ್ರಮ ತಲುಪುವುದಿಲ್ಲ. ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಕಾಂಗ್ರೆಸ್ ದಯೆಯಿಂದ ಸರ್ಕಾರ ನಡೆಯುತ್ತಿದೆ ಎಂದು ಆ ಪಕ್ಷದ ನಾಯಕರು ಹೇಳಿದ್ದರು. ಸಾಮಾನ್ಯ ಮನುಷ್ಯನ ಬಗ್ಗೆ ಮಾತನಾಡಿದರೆ ಅವರನ್ನು ಕಾಂಗ್ರೆಸ್ ದ್ವೇಷಿಸುತ್ತೆ. ಭ್ರಷ್ಟಾಚಾರ ತೋರಿಸುವವರ ಬಗ್ಗೆ ಕಾಂಗ್ರೆಸ್ ದ್ವೇಷ ಖಾಯಂ ಆಗುತ್ತದೆ. ಈ ಚುನಾವಣೆ ಸಂದರ್ಭದಲ್ಲಿ ನನಗೆ ಮತ್ತೆ ಬೈಯುವ ಕೆಲಸವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರು ನನಗೆ ಬೈದಿರುವ ಪಟ್ಟಿ ಇದೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟ ಬುತ್ತಿ : ಸಿಎಂ ಬೊಮ್ಮಾಯಿ ಭವಿಷ್ಯ
ಇದುವರೆಗೂ ನನ್ನನ್ನು 91 ಬಾರಿ ಬೈದಿದ್ದಾರೆ. ನನ್ನನ್ನು ಬೈಯ್ಯುವುದರಲ್ಲೇ ಸಮಯ ವ್ಯರ್ಥ ಮಾಡುವುದರ ಬದಲು ಒಳ್ಳೆಯ ಆಡಳಿತ ಕೊಟ್ಟಿದ್ದರೆ ಇಂದು ಕಾಂಗ್ರೆಸ್ಗೆ ಇಂತಹ ದಯನೀಯ ಸ್ಥಿತಿ ಬರುತ್ತಿರಲಿಲ್ಲ. ಯಾರು ದೇಶಕ್ಕೆ ಮತ್ತು ಬಡವರಿಗೆ ಕೆಲಸ ಮಾಡುತ್ತಾರೆ ಅವರಿಗೆ ಅವಮಾನ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಹಿಂದಿನ ಚುನಾವಣೆಯಲ್ಲಿ ಚೌಕೀದಾರ್ ಚೋರ್ ಎಂದರು. ನಂತರ ಮೋದಿ ಕಳ್ಳ ಎಂದರು. ನಂತರ ಒಬಿಸಿ ಸಮಾಜವೇ ಕಳ್ಳರು ಎಂದರು. ಕರ್ನಾಟಕದಲ್ಲಿ ಈಗ ಚುನಾವಣೆ ಶುರು ಆಗುತ್ತಿದೆ. ಈ ಸಂದರ್ಭದಲ್ಲಿ ಲಿಂಗಾಯಿತರನ್ನು ಕಳ್ಳರು ಎನ್ನುತ್ತಿದ್ದಾರೆ ಎಂದು ಹೇಳಿದರು.
ಮಹಾಪುರುಷರನ್ನು ಕಾಂಗ್ರೆಸ್ ನಿಂದಿಸಿದೆ:
ಕಾಂಗ್ರೆಸ್ ಅವರೇ ಕಿವಿ ಕೊಟ್ಟು ಕೇಳಿ. ನೀವು ಯಾವ ಯಾವಾಗ ಯಾರಿಗೆ ಬೈದಿದ್ದೀರೋ ಅವರು ನಿಮಗೆ ಮತ್ತೆ ಎದ್ದು ನಿಲ್ಲಲಾಗದಂತಹ ಶಿಕ್ಷೆ ಕೊಟ್ಟಿದ್ದಾರೆ. ಈ ಬಾರಿ ಕರ್ನಾಟಕದಲ್ಲೂ ನಮ್ಮ ಸಹೋದರರ ಮರ್ಯಾದೆಯನ್ನು ಪ್ರಶ್ನೆ ಮಾಡಿರುವ ಬೈಗುಳಕ್ಕೆ ಅವರು ತಕ್ಕ ಉತ್ತರ ಮತಗಳ ಮೂಲಕ ನೀಡಲಿದ್ದಾರೆ. ಕಾಂಗ್ರೆಸ್ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನೂ ನಿಂದಿಸದೇ ಬಿಟ್ಟಿಲ್ಲ. ಈ ಬಗ್ಗೆ ಅಂಬೇಡ್ಕರ್ ಅವರೇ ಒಮ್ಮೆ ಸಾರ್ವಜನಿಕವಾಗಿ ಕಾಂಗ್ರೆಸ್ ಅವರು ಬೈಯ್ಯುವುದಾಗಿ ಹೇಳಿದ್ದರು ಎಂದರು.
ಕಾಂಗ್ರೆಸ್ ಅವರು ಅಂಬೇಡ್ಕರ್ ಅವರನ್ನು ರಾಕ್ಷಸ, ರಾಷ್ಟ್ರದ್ರೋಹಿ, ವಂಚಕ ಎಂದೆಲ್ಲಾ ನಿಂದಿಸಿದ್ದಾರೆ. ಆಗಿನಿಂದಲೂ ಕಾಂಗ್ರೆಸ್ ಅವರು ಅಂಬೇಡ್ಕರ್ ಅವರನ್ನು ಅವಮಾನಿಸುತ್ತಲೇ ಬಂದಿದೆ. ಕಾಂಗ್ರೆಸ್ ವೀರ್ ಸಾವರ್ಕರ್ ಅವರಿಗೂ ಬೈಯುತ್ತಿದ್ದಾರೆ. ದೊಡ್ಡ ದೊಡ್ಡ ಮಹಾಪುರುಷರೂ ಅವರ ಬೈಗುಳಕ್ಕೆ ಶಿಕಾರಿಯಾಗಿದ್ದಾರೆ. ನನಗೂ ಅದೇ ರೀತಿ ಬೈಯುತ್ತಿದ್ದಾರೆ. ಕಾಂಗ್ರೆಸ್ ಬೈಯುವುದರಲ್ಲೇ ಸಮಯ ಕಳದರೆ ನಾನು ಜನತಾ ಜನಾರ್ಧನರ ಸೇವೆಯಲ್ಲಿ ತೃಪ್ತಿ ಪಡುತ್ತೇನೆ. ನಾನು ನಿಮಗಾಗಿ ಹಗಲು ರಾತ್ರಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ಮಾಜಿ ಡಿಸಿಎಂ ಪರಮೇಶ್ವರ್ ಗೆ ಕಲ್ಲೇಟು
ನಿಮ್ಮ ಆಶೀರ್ವಾದಿಂದ ಆ ಎಲ್ಲ ಬೈಗುಳಗಳು ಮಣ್ಣಲ್ಲಿ ಮಣ್ಣಾಗಲಿದೆ. ಕಾಂಗ್ರೆಸ್ ಅವರು ಬರೆದಿಟ್ಟುಕೊಳ್ಳಿ. ನೀವೆಷ್ಟು ನನ್ನನ್ನು ಬೈಯುತ್ತೀರೋ ಕಮಲ ಅಷ್ಟೇ ಹೆಚ್ಚು ಅರಳಲಿದೆ. ನಿಮ್ಮ ಆಶೀರ್ವಾದಿಂದ ಕರ್ನಾಟಕದ ಸೇವೆಯನ್ನು ಮಾಡವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕರ್ನಾಟಕದ ವೇಗದ ವಿಕಾಸಕ್ಕೆ ಬಿಜೆಪಿಗೆ ಪೂರ್ಣ ಬಹುಮತದ ಶಕ್ತಿಶಾಲಿ ಅವಶ್ಯಕತೆ ಇದೆ. ಆದ್ದರಿಂದಲೇ ನಾನು ಪದೇ ಪದೇ ಹೇಳುತ್ತೇನೆ, “ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ ಎಂದು ಹೇಳಿದರು.
ನಿಮ್ಮಿಂದ ಹೆಚ್ಚು ಕೆಲಸ ಮಾಡಲು ಪ್ರೇರಣೆ ಸಿಕ್ಕಿದೆ:
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದ ತಾಳಮೇಳ ಸಿಗಲು, ಮೂಲಸೌಕರ್ಯ ಯೋಜನೆಗಳು ವೇಗವಾಗಿ ಪೂರ್ಣಗೊಳ್ಳಲು, ವಿದೇಶೀ ಹೂಡಿಕೆ ಹೆಚ್ಚು ಬರಲು, ಕಾಂಗ್ರೆಸ್ ಸರ್ಕಾರದ ಎಟಿಎಂ ಆಗದೇ ದೇಶದ ಬೆಳವಣಿಗೆಯ ಎಂಜಿನ್ ಆಗಲು, ಕೇಂದ್ರದ ಗರೀಬ್ ಕಲ್ಯಾಣ ಯೋಜನೆ ನಿಮ್ಮನ್ನು ತಲುಪಲು ಡಬಲ್ ಎಂಜಿನ್ ಸರ್ಕಾರ ಬರಬೇಕು. ನನಗೆ ವಿಶ್ವಾಸವಿದೆ, ನೀವೆಲ್ಲರೂ ಮೇ 10 ರಂದು ಚುನಾವಣಾ ಕೇಂದ್ರದಲ್ಲಿ ಕಮಲದ ಗುರುತಿಗೆ ಮತ ಹಾಕುತ್ತೀರಿ. ನಿಮ್ಮೆಲ್ಲರ ಆಶೀರ್ವಾದದಿಂದ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ಸಿಕ್ಕಿದೆ. ಮನೆಮನೆಗೂ ತೆರಳಿ, ಬಿಜೆಪಿ ಸಾಧನೆಗಳನ್ನು ಪ್ರಚಾರ ಮಾಡಿ ಮತದಾನ ಮಾಡಿಸಿ. ನೀವು ನನಗಾಗಿ ಒಂದು ಕೆಲಸ ಮಾಡಿ. ನಿಮ್ಮ ಸೇವಕ ಮೋದಿ ಬೀದರ್ ಗೆ ಬಂದು ನಿಮಗೆ ನಮಸ್ಕಾರ ಮಾಡಿದರು ಎಂದು ಹೇಳಿ. ಇದರಿಂದ ನನಗೆ ಇನ್ನಷ್ಟು ಕೆಲಸ ಮಾಡಲು ಉತ್ಸುಕತೆ ಸಿಗುತ್ತದೆ ಎಂದು ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.