Karanataka Assembly Election 2023: ಇಷ್ಟು ದಿನ ಉದ್ಯಮಿಯಾಗಿ, ಪ್ರಗತಿಪರ ರೈತನಾಗಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ರಾಮಚಂದ್ರಗೌಡ ಉರ್ಫ್ ಸೀಕಲ್‌ ರಾಮಚಂದ್ರಗೌಡ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.  ಈ ಕುರಿತಂತೆ ಮಾತನಾಡಿರುವ  ಸೀಕಲ್‌ ರಾಮಚಂದ್ರಗೌಡ, ನೂರಾರು ಕನಸುಗಳನ್ನು ಹೊತ್ತು ಜನರ ಸೇವೆ ಮಾಡಲೆಂದು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಶಿಡ್ಲಘಟ್ಟದಿಂದ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿಯಲಿದ್ದೇವೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಜನರ ಸೇವೆಯೊಂದೇ ನನ್ನ ಗುರಿ ಎಂಬ ಧ್ಯೇಯದೊಂದಿಗೆ ಜನರ ಬಳಿ ಮತ ಯಾಚಿಸುವುದಾಗಿ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ವ್ಯಕ್ತಿ ಪರಿಚಯ: 
ಎಸ್.ವಿ.ರಾಮಚಂದ್ರಗೌಡ ಅವರನ್ನ ಜನ ಸಾಮಾನ್ಯವಾಗಿ ಗುರುತಿಸೋದೇ ಸೀಕಲ್ ರಾಮಚಂದ್ರಗೌಡ ಎಂದು. ಕರುನಾಡಿನ ರಾಜಕೀಯ ಧುರೀಣರ ಚಿರಪರಿಚಿತರು ಹಾಗೂ ಒಡನಾಡಿಯಾಗಿರುವ 49 ವರ್ಷದ ಈ ಯುವ ರಾಜಕಾರಣಿ ಹುಟ್ಟಿದ್ದು ಕೃಷಿ ಪ್ರಧಾನ ಕುಟುಂಬದಲ್ಲಿ. ಸಾಧನೆ ಮಾಡಲು ಹೊರಟರೆ ಸಾಮಾನ್ಯನು ಕೂಡಾ ಅಸಮಾನ್ಯನಾಗಬಹುದು ಎಂದು ತೋರಿಸಿಕೊಟ್ಟ ರಾಮಚಂದ್ರಗೌಡರು ಕೃಷಿ, ಆರೋಗ್ಯ, ಅಭಿವೃದ್ಧಿ ಸೇರಿದಂತೆ ಹಲವು ವಲಯಗಳಲ್ಲಿ ಸಾಧನೆ ಮಾಡಿರುವುದು ಇವರ ಹೆಗ್ಗಳಿಗೆ ಎನ್ನುತ್ತಾರೆ ಸೀಕಲ್ ರಾಮಚಂದ್ರ ಅವರ ಅಭಿಮಾನಿಗಳು. 


ನಾವಿದ್ದ ಜಾಗವಷ್ಟೇ ಸುಂದರವಾಗಿ ಕಾಣಿಸಿಕೊಂಡರೆ ಸಾಲದು. ನಮ್ಮ ಕಣ್ಣು ನೋಡುವ ಜಾಗ ಕೂಡ ಸುಂದರವಾಗಿ ಕಾಣಬೇಕು ಎಂದು ಬಯಸುವ ರಾಮಚಂದ್ರಗೌಡರ ಸೇವೆ ಮೊದಲು ಶುರುವಾಗಿದ್ದೇ ಸಿವಿಲ್ ಕೆಲಸದಲ್ಲಿ. ಚಿಂತಾಮಣಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದು, ಆರ್ಕಿಟೆಕ್ಚರ್ ವಿಭಾಗದಲ್ಲಿ ಗೌರವ ಡಾಕ್ಟರೇಟ್ ಪಡೆದರು. ಬಳಿಕ ಮೊದಲು ಛಾಪು ಮೂಡಿಸಿದ್ದೇ ಸಿವಿಲ್ ಉದ್ಯಮದಲ್ಲಿ. ಅಡ್ವೋಕೇಟ್ ರಾಣೀಗೌಡರನ್ನ ವಿವಾಹವಾಗಿ, ಎರಡು ಮುದ್ದಾದ ಮಕ್ಕಳನ್ನು ಹೊಂದಿರುವ ಸುಂದರ ಕುಟುಂಬ ಸೀಕಲ್ ರಾಮಚಂದ್ರಗೌಡರದ್ದು. ಒಬ್ಬ ರೈತನ ಮಗ ಕೃಷಿಯ ಹೊರತಾಗಿ ಇರಲಾರ ಎಂದು ತೋರಿಸಿಕೊಟ್ಟ ಸೀಕಲ್ ರಾಮಚಂದ್ರಗೌಡರು, ಬತ್ತು ಹೋಗಿದ್ದ ಭೂಮಿಗೆ ಗಂಗೆಯನ್ನ ಧರೆಗಿಳಿಸಿದ ಭಗೀರತನಂತೆ ಸುಮಾರು 15 ಸಾವಿರ ಕೋಟಿಯ ಮಳೆನೀರು ಕೊಯ್ಲು ಮಾಡಿ ತಮ್ಮ ನೆಲವನ್ನ ಹಸಿರಾಗಿಸಿದರು. ತಮ್ಮ ಅಕ್ಕಪಕ್ಕದ ಜಮೀನುಗಳಿಗೂ ನೀರು ನೀಡುವ ಮೂಲಕ ತಾವು ಬೆಳೆಯುವುದರ ಜೊತೆಗೆ ತಮ್ಮ ಜೊತೆಗಿರೋ ರೈತ ಸಮೂಹವನ್ನು ಬೆಳೆಯಲು ಸಹಾಯ ಮಾಡುತ್ತಾ ಬಂದಿದ್ದಾರೆ. ತಾವು ಬೆಳೆದ ತರಕಾರಿ ಸೇರಿದಂತೆ ಹಣ್ಣುಗಳನ್ನ ವಿದೇಶಕ್ಕೆ ರಪ್ತು ಮಾಡುತ್ತಾ ಆದರ್ಶ ಕೃಷಿಕನಾಗಿ ಪ್ರಸಿದ್ಧಿ ಪಡೆದ್ದಾರೆ ಎಂದು ಸೀಕಲ್ ರಾಮಚಂದ್ರಗೌಡರ ಅನುಯಾಯಿಗಳು ಅವರ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ. 


ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬುದು ಸೀಕಲ್ ರಾಮಚಂದ್ರಗೌಡರ ಅಭಿಪ್ರಾಯ. ಹಾಗಾಗಿ ತಮ್ಮನ್ನು ತಾವು ಆರೋಗ್ಯ ಕ್ಷೇತ್ರದಲ್ಲೂ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ 200 ಹಾಸಿಗೆ ವ್ಯವಸ್ಥೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿದ್ದಾರೆ. ಅದರಲ್ಲಿ 28 ಐಸಿಯು, 6 ಆಪರೇಷನ್ ಥಿಯೇಟರ್ ಸೇರಿದಂತೆ ತಜ್ಞ ವೈದರ ತಂಡ ರೋಗಿಗಳಿಗಾಗಿ ಕಾರ್ಯನಿರ್ವಹಿಸುತ್ತಿದೆ. ದಿನದ 24 ಗಂಟೆಗಳ ಸೇವೆಗೆ ತೆರೆದಿರುವ ಔಷಧಾಲಯದ ಪ್ರಯೋಜನವನ್ನ ಹೊರರೋಗಿಗಳು ಸಹ ಪಡೆದುಕೊಳ್ಳುವಂತೆ ಮಾಡಿದ್ದಾರೆ ಎಂಬುದು ಆ ಭಾಗದ ಜನರ ಅಭಿಪ್ರಾಯವಾಗಿದೆ. 


ತಮ್ಮ ಸಾಧನೆಯ ಹಾದಿಯ ಮೊದಲ ಮೆಟ್ಟಿಲನ್ನ ಇಂಟೀರಿಯರ್ ಡಿಸೈನಿಂಗ್ ಮುಖಾಂತರ ಆರಂಭಿಸಿದ ಸೀಕಲ್ ರಾಮಚಂದ್ರಗೌಡರದ್ದು ದೂರದೃಷ್ಟಿ ಹೇಗಿತ್ತು ಎಂದರೆ, ತಮ್ಮನ್ನ ತಾವು ಬರೀ ಉದ್ಯಮಿಯಾಗಿ ಮಾತ್ರ ಗುರುತಿಸಿಕೊಳ್ಳದೆ ಯಶಸ್ವಿ ಕೃಷಿಕನಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಹೈಟೆಕ್ ಕೃಷಿ ಸೇರಿದಂತೆ ಆಗ್ರೋ ಬೇಸಡ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಇದರ ಸದುಪಯೋಗವನ್ನ ಜನರು ಕೂಡಾ ಪಡೆದುಕೊಳ್ಳುವಂತೆ ನೋಡಿಕೊಳ್ಳುತ್ತಿದ್ದಾರೆ.


ತಮ್ಮ ದೂರದೃಷ್ಟಿ ಜೊತೆಗೆ ತಮ್ಮ ಸಿದ್ಧಾಂತ ಮತ್ತು ಧ್ಯೇಯಕ್ಕೆ ಬದ್ಧರಾಗಿರುವ ಸೀಕಲ್ ರಾಮಚಂದ್ರಗೌಡರು, ಇದೀಗ ರಾಜಕೀಯ ವಲಯದ ದಿಕ್ಕನ್ನ ಬದಲಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟಿತ್ತು. ಅಲ್ಲಿ ಹಾಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಎದುರು ತೊಡೆತಟ್ಟಿದ್ದ ಜಿ.ಟಿ.ದೇವಗೌಡರ ಹಿಂದೆ ನಿಂತು ಕೆಲಸ ಮಾಡಿದ್ದು ಇದೇ ಮಾಸ್ಟರ್ ಮೈಂಡ್ ಸೀಕಲ್ ರಾಮಚಂದ್ರಗೌಡ. ಇದೀಗ ತಾವೇ ಆ ರಾಜಕೀಯ ಕಣಕ್ಕೆ ಧುಮುಕಿದ್ದಾರೆ. 


ಈ ಕುರಿತಂತೆ ಮಾತನಾಡಿರುವ ಸೀಕಲ್ ರಾಮಚಂದ್ರ ಅವರು, ತಮ್ಮ ಸಮಾಜ ತನಗೆಲ್ಲವನ್ನು ಕೊಟ್ಟಿದೆ. ಇದೀಗ ಸಮಾಜಕ್ಕೆ ನಾನೇದರೂ ಕೊಡಬೇಕೆಂಬ ಹಂಬಲದೊಂದಿಗೆ ಸದೃಢ ಸಮಾಜದ ನಿರ್ಮಾಣ, ಜನರು ಬಯಸಿದ ರೀತಿಯ ಸಮಾಜದ ನಿರ್ಮಾಣಕ್ಕೆ ಪಣ ತೊಟ್ಟಿರುವ ಯುವ ನೇತಾರನಾಗಿ ಜನರ ಬಳಿಗೆ ಹೋಗಲು ಮುಂದಾಗಿರುವುದಾಗಿ ತಿಳಿಸಿದ್ದಾರೆ. 


ತಮ್ಮ ತಾಲೂಕಿನಿಂದ ಬಡತನವನ್ನ ದೂರಿಡುವ ನಿಟ್ಟಿನಲ್ಲಿ ಬಡವರಿಗೆ ಸೂರು ಕಲ್ಪಿಸುವ ತಮ್ಮದೇ ಸ್ವಂತ ಮನೆ ಹೊಂದುವ ಕನಸನ್ನ ನನಸು ಮಾಡುವುದರ ಜೊತೆಗೆ, ಬಯಲು ಮುಕ್ತ ಶೌಚಾಲಯ ಹಾಗೂ ಸಮರ್ಪಕ ರಸ್ತೆ ಕಲ್ಪಿಸಿಕೊಡುವುದರ ಜೊತೆಗೆ ಶುದ್ಧ ಕುಡಿಯುವ ನೀರು ಹಾಗೂ ಪ್ರತಿ ಮನೆಯ ಮಕ್ಕಳು 12 ತರಗತಿವರೆಗಿನ ಕನಿಷ್ಠ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಅವರು ತಮ್ಮ ಕ್ಷೇತ್ರದ ಜನತೆಗೆ ಭರವಸೆಯನ್ನೂ ನೀಡಿದ್ದಾರೆ. 


ರಾಮಚಂದ್ರಗೌಡರ ಚುನಾವಣಾ ಭರವಸೆಗಳು ಈ ಕೆಳಕಂಡಂತಿವೆ:
ಭರವಸೆಗೆ ಮತ್ತೊಂದು ಹೆಸರು ಎಂಬಂತೆ ಬೆಳೆದು ನಿಲ್ಲುವ, ತನ್ನೊಂದಿಗೆ ತನ್ನವರನ್ನು ಬೆಳೆಸುತ್ತ ಹೊಸ ಅವಕಾಶಗಳ ಹುಡುಕಾಟದಲ್ಲಿ ಅಭಿವೃದ್ಧಿಯಡೆಗೆ ಸಾಗುವ ಬಯಕೆ ಹೊಂದಿರುವ ನಾಯಕ ಸೀಕಲ್ ರಾಮಚಂದ್ರಗೌಡ. 
* ಅಭಿವೃದ್ಧಿಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನ ಉತ್ತೇಜಿಸುವ ನಿಟ್ಟಿನಲ್ಲಿ ಸಾರ್ವಜನಿಕ ಮಾಹಿತಿ ಕೇಂದ್ರದ ಸ್ಥಾಪನೆ ಮಾಡಿ ಜನರಿಗೆ ತನ್ನೂರಿನಲ್ಲಿ ನಡೆಯುತ್ತಿರವ ಅಭಿವೃದ್ಧಿ ಕಾರ್ಯದ ಬಗ್ಗೆ ಮಾಹಿತಿ ಪಡೆಯುವ ಹಕ್ಕನ್ನ ನೀಡುವ ಗುರಿ ನೀಡುವ ಭರವಸೆ.
* ಸರಕಾರದ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನ ಸರಕಾರದ ಅಂಗಗಳ ಮೂಲಕ ಹಳ್ಳಿಯತ್ತ ಕೊಂಡ್ಯೊಯುವುದು. 
* ರೈತ ಬೆಳೆದ ಬೆಳೆಗೆ ವಿಮೆಯ ಜೊತೆ ಜೊತೆಗೆ ಕನಿಷ್ಠ ಬೆಂಬಲ ಬೆಲೆಯನ್ನ ನೀಡುವ ಮುಖಾಂತರ ರೈತ ಪ್ರಕೃತಿ ವಿಕೋಪ ಮತ್ತು ಮಾರುಕಟ್ಟೆಯ ಏರಿಳಿತದಿಂದ ಬಚಾವಾಗುವಂತೆ ನೋಡಿಕೊಳ್ಳುವುದು. 
* ಸಾರ್ವಜನಿಕರನ್ನ ಒಂದೇ ಆರೋಗ್ಯ ವಿಮೆಯ ಕೆಳಗೆ ತರುವುದರ ಮುಖಾಂತರ ಬಡ ಮತ್ತು ಮಧ್ಯಮ ವರ್ಗದವರ ಆರೋಗ್ಯವನ್ನ ಕಾಪಾಡಿ ಸದೃಢ ಮತ್ತು ಆರೋಗ್ಯವಂತ ಸಮಾಜದ ನಿರ್ಮಾಣ ಮಾಡುವುದು. 
* ಎಲ್ಲವನ್ನ (ನಿಮ್ಮ ಮಾಹಿತಿ ಮತ್ತು ಗುರುತನ್ನ) ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವುದರ ಮುಖಾಂತರ ನಕಲಿ ಮಾಹಿತಿ ಸೃಷ್ಟಿಸಿ ಸರಕಾರದ ಪ್ರಯೋಜನಗಳ ದುರುಪಯೋಗ ಆಗದಂತೆ ತಡೆಯುವುದು. 
* ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡುವುದರ ಜೊತೆಗೆ ಕೌಶಲ್ಯ ಅಭಿವೃದ್ಧಿ ಶಿಕ್ಷಣ ನೀಡಿ ವಿದ್ಯಾರ್ಥಿಗಳು ಸ್ವಾಲಂಬಿ ಜೀವನ ಕಟ್ಟಿಕೊಳ್ಳಲು ಅನುವು ಮಾಡಿಕೊಡುವುದು. 
* ಸ್ವಚ್ಚ ಭಾರತ, ಎಲ್ಲ ಕಾಲಕ್ಕೂ ಸಲ್ಲುವಂತಹ ರಸ್ತೆಗಳ ನಿರ್ಮಾಣ. ಅಂಡರ್ ಪಾಸ್ ಮತ್ತು ಫ್ಲೈ ಓವರ್‌ಗಳ ಸರಿಯಾದ ನಿರ್ವಹಣೆಯ ಜೊತೆ ಜೊತೆಗೆ ರಸ್ತೆ ಬದಿ ವ್ಯಾಪಾರಿಗಳಿಗೆ ತಮ್ಮ ಸುತ್ತಮುತ್ತಲಿನ ಜಾಗವನ್ನ ಶುಚಿಯಾಗಿ ಇಟ್ಟುಕೊಳ್ಳುವಂತೆ ಜಾಗೃತಿ ಮೂಡಿಸುವುದು. 
* ಹಳ್ಳಿಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕೆರೆ, ಹಳ್ಳ, ನದಿಗಳ ಪುನರುಜ್ಜೀವನ. 
* ಪ್ರತಿ ತಾಲೂಕು ಮತ್ತು ಹೋಬಳಿಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬರುವಂತಹ ಜಿಮ್ ಮತ್ತು ಯೋಗ ಕೇಂದ್ರಗಳನ್ನ ಒಳಗೊಂಡ ಉದ್ಯಾನವನದ ನಿರ್ಮಾಣ. 
* ಪ್ರತಿ ಹಳ್ಳಿಗಳಲ್ಲು ಒಂದು ಸಮುದಾಯ ಭವನ, 5 ಎಕರೆಯಲ್ಲಿ ಒಂದು ಸಣ್ಣ ಕಾಡಿನ ನಿರ್ಮಾಣದ ಜೊತೆಗೆ ಪ್ರತಿ ಹಳ್ಳಿಗಳ ರುದ್ರಭೂಮಿ ಅಭಿವೃದ್ಧಿ.
* ಅಭಿವೃದ್ಧಿಗೆ ಬೇಕಾದ ಅತ್ಯಾಧುನಿಕ ಮೂಲಸೌಕರ್ಯಗಳನ್ನ ಒದಗಿಸುವುದರ ಜೊತೆಗೆ ಕಣ್ಣಿಗೆ ಕಾಣುವಂತೆ ಅಭಿವೃದ್ಧಿ ಕೆಲಸ ಆಗುವಂತೆ ನೋಡಿಕೊಳ್ಳುವುದು. 
* ಆದಾಯ ವ್ಯವಸ್ಥೆಯಲ್ಲಿ ಬದಲಾವಣೆ ತರುವುದರ ಮುಖಾಂತರ ಆದಾಯ ಹೆಚ್ಚಾಗುವಂತೆ ನೋಡಿಕೊಳ್ಳುವುದು. 


ಇಷ್ಟೆಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಪಣತೊಟ್ಟು ಈ ಬಾರಿ ಶಿಡ್ಲಘಟ್ಟ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದೇನೆ. "ಸೇವೆ ಮಾಡಲೆಂದೇ ಸಕಲ ಸನ್ನದ್ಧನಾಗಿ ಬಂದಿದ್ದೇನೆ. ಅವಕಾಶ ಕೊಡಿ ಎಂದು ಕೇಳುವ ಬದಲು ಅವಕಾಶ ಕೊಟ್ಟು ನೋಡಿ. ನುಡಿದಂತೆ ನಡೆದು ಮತ್ತೆ ನಿಮ್ಮಲ್ಲಿಗೆ ಬರುತ್ತೇನೆ. ನೀವು ಕೊಟ್ಟ ವೋಟನ್ನು ವ್ಯರ್ಥವಾಗಲು ಬಿಡಲಾರೆ'' ಎಂದು ಹೇಳುತ್ತಾರೆ ಸೀಕಲ್ ರಾಮಚಂದ್ರಗೌಡ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.