ನಾ ಮಾಡಿರುವ ಕೆಲಸಕ್ಕಿಂತ ನಿಮ್ಮ ಪ್ರೀತಿ ವಿಶ್ವಾಸ ದೊಡ್ಡದಿದೆ – ಸಿಎಂ ಬೊಮ್ಮಾಯಿ
ಶಾಸಕನಿಂದ ಮುಖ್ಯಮಂತ್ರಿ ಆಗಿ ಬಡ್ತಿ ಕೊಟ್ಟಿದ್ದೀರಿ. ನಾನು ಮಾಡಿರುವ ಕೆಲಸಕ್ಕಿಂತ ನಿಮ್ಮ ಪ್ರೀತಿ ವಿಶ್ವಾಸ ದೊಡ್ಡದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಹಾವೇರಿ, ಮೇ 6: ಶಾಸಕನಿಂದ ಮುಖ್ಯಮಂತ್ರಿ ಆಗಿ ಬಡ್ತಿ ಕೊಟ್ಟಿದ್ದೀರಿ. ನಾನು ಮಾಡಿರುವ ಕೆಲಸಕ್ಕಿಂತ ನಿಮ್ಮ ಪ್ರೀತಿ ವಿಶ್ವಾಸ ದೊಡ್ಡದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಅವರು ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದ ಹುನಗುಂದ ಮತ್ತು ಹಳೇ ಬಂಕಾಪುರದಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ನಾನು ಬಂದಾಗೆಲ್ಲಾ ನೀವು ಪ್ರೀತಿ ವಿಶ್ವಾಸ ತೋರಿಸಿದ್ದೀರಿ. ಮಾಡಿದ ಒಳ್ಳೆಯ ಕೆಲಸವನ್ನು ನೆನಪು ಮಾಡಿ ಕೊಟ್ಟು ಮುಂದಿನ ಜವಾಬ್ದಾರಿಯನ್ನೂ ನೆನಪಿಸುತ್ತೀರಿ. ಹುನಗುಂದ ಗ್ರಾಮದ ಕೆರೆ ಹೂಳೆತ್ತುವ ಸಮಯದಲ್ಲಿ ನೀವು ನಿಮ್ಮ ನಿಮ್ಮ ಹೊಲಗಳಿಗೆ ಮಣ್ಣು ಹಾಕಿಸಿ ಸಹಕಾರ ನೀಡಿದಿರಿ. ಮಳೆಯ ಪ್ರವಾಹದಿಂದ ಕೆರೆಯ ಏರಿ ಒಡೆಯುವ ಸಮಯದಲ್ಲಿ ಇಡೀ ಊರಿನ ಜನ ರಾತ್ರೋ ರಾತ್ರಿ ಅದನ್ನು ನಿಲ್ಲಿಸಿದ್ದೀರಿ. ಇದರಿಂದ ಊರಿನ ಒಗ್ಗಟ್ಟಿನ ಶಕ್ತಿ ತಿಳಿಯುತ್ತದೆ. ಒಗ್ಗಟ್ಟಿನಿಂದ ಇದ್ದಾಗ ಊರಿನಲ್ಲಿ ಸುಖ ಶಾಂತಿ ಇರುತ್ತದೆ ಇದು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಬಂದ್ ಮಾರ್ಗ ಬಿಟ್ಟು ಪರ್ಯಾಯ ಮಾರ್ಗ ಬಳಸಲು ಪೊಲೀಸರ ಸೂಚನೆ
ಶಿಗ್ಗಾಂವಿಯಲ್ಲಿ ಕಮಲ ಅರಳಿಸಿ
ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಹಾವೇರಿ ಕ್ಷೇತ್ರದ 136 ಗ್ರಾಮಗಳ ಎಲ್ಲ ಮನೆಗಳಿಗೆ 438 ಕೋಟಿ ವೆಚ್ಚದಲ್ಲಿ ನಲ್ಲಿ ಅಳವಡಿಸಿ ಅದರ ಮೂಲಕ ಕುಡಿಯುವ ನೀರು ಒದಗಿಸಲಾಗ್ತಿದೆ. ಇದು ತಾಯಂದಿರು ಅನುಭವಿಸುತ್ತಿರುವ ಕಷ್ಟ ತಪ್ಪಿಸಲು ನಮ್ಮ ಪ್ರಧಾನಿ ಮಾಡಿದ ಮಹತ್ವದ ಯೋಜನೆ. ಶಿಗ್ಗಾಂವ್-ಸವಣೂರು ತಾಲ್ಲೂಕು ಅಭಿವೃದ್ಧಿ ಆಗಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿ ಕೆಲಸ ಮಾಡುತ್ತಿದ್ದೇನೆ. ಇದರ ಶ್ರೇಯ ನಿಮಗೇ ಸಲ್ಲಬೇಕು. ಇಲ್ಲಿ ಕಮಲವನ್ನು ಅರಳಿಸಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತದೆ. ಇದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹಳೇ ಬಂಕಾಪುರ ಈಗ ಹೊಸ ಬಂಕಾಪುರ ಆಗಿದೆ
ಒಂದೇ ವರ್ಷದಲ್ಲಿ ಬಂಕಾಪುರದಲ್ಲಿ ಸುಮಾರು 165 ಮನೆಗಳು ಮಂಜೂರಾತಿ ಆಗಿ ನಿರ್ಮಾಣ ಆಗ್ತಿದೆ. ನಮ್ಮದೇ ಆದ ಒಂದು ಸೂರು ಮಾಡಿಕೊಳ್ಳಬೇಕು ಎಂದು ಬಡವರ ಕನಸಾಗಿರುತ್ತದೆ. ಬಡವರ ಬಹಳ ವರ್ಷದ ಕನಸು ನನಸಾಗುತ್ತಿದೆ. ಪ್ರವಾಹ ಬಂದಾಗ ಈ ಹಿಂದೆ ಯಾವ ಸರ್ಕಾರವೂ ಸಹಾಯ ಧನ ಕೊಟ್ಟಿರಲಿಲ್ಲ. ಆದರೆ ನೀವು ಆರಿಸಿ ಕಳಿಸಿರುವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದರಿಂದ ಪ್ರವಾಹದಿಂದ ನಾಶವಾದ ಮನೆಗೆ 3-5 ಲಕ್ಷ ರೂ ಸಹಾಯ ಧನ ಸಿಗುತ್ತಿದೆ. ಬಡವರಿಗೆ ಸೂರು ಕಲ್ಪಿಸುವುದು ನಮ್ಮ ಕರ್ತವ್ಯ. ಇದಕ್ಕಾಗಿ ಹಲವು ಯೋಜನೆಗಳನ್ನು ಮಾಡಿ ನೆರವು ನೀಡುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ, ಸ್ವಚ್ಛ ಭಾರತ್ ಯೋಜನೆ, ಬೆಳಕು ಯೋಜನೆ, ಜಲಜೀವನ್ ಮಿಶನ್ ಅಡಿಯಲ್ಲಿ ಎಲ್ಲ ಮನೆಗಳಿಗೆ ಮೂಲಭೂತ ಸೌಕರ್ಯ ಕೊಡುವ ಕೆಲಸ ಮಾಡುತ್ತಿದ್ದೇವೆ.. ಇದಕ್ಕೆ ನಿಮ್ಮ ಆಶೀರ್ವಾದದಿಂದಲೇ ಆಗುತ್ತಿರುವ ಕೆಲಸ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ರಾಹುಲ್ ಗಾಂಧಿಯಿಂದ ಚಿಕ್ಕೋಡಿಯಲ್ಲಿ ಭರ್ಜರಿ ಕ್ಯಾಂಪೇನ್
ಅಭಿವೃದ್ಧಿ ಕೆಲಸ ನಿಂತಿಲ್ಲ
ಊರಿಗೆ ಬೇಕಿರುವ ರಸ್ತೆ, ಮನೆಗಳು, ಕೆರೆಗಳು, ಸಭಾ ಭವನಗಳು ಎಲ್ಲವನ್ನೂ ಕೊಟ್ಟಿದ್ದೇವೆ. ಈ ಅಭಿವೃದ್ಧಿ ಕೆಲಸ ಮುಂದುವರಿಯಬೇಕು. ಈ ಬಾರಿಯ ಚುನಾವಣೆಯಲ್ಲಿ ನಾವು ಅಭಿವೃದ್ಧಿಯ ಆಧಾರದಲ್ಲಿ ಮತ ಕೇಳುತ್ತಿದ್ದೇವೆ. ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯ ಅಭಿವೃದ್ಧಿ ಹೊಂದುತ್ತಿದೆ. ರಾಜ್ಯದ 47 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ಬೀಜ ಗೊಬ್ಬರ ಖರೀದಿಗೆ 10 ಸಾವಿರ ಸಹಾಯ ಧನ, ಯಶಸ್ವಿನಿ ಯೋಜನೆ, ರೈತರಿಗೆ ಜೀವವಿಮೆ ಯೋಜನೆ, ವಿದ್ಯಾನಿಧಿ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್, ಯುವತಿಯರಿಗೆ ಸರ್ಕಾರಿ ಕಾಲೇಜಿನಲ್ಲಿ ಫೀಸ್ ಇಲ್ಲದೇ ಉಚಿತ ಶಿಕ್ಷಣ ಸೌಲಭ್ಯ, ದೀನ ದಲಿತರಿಗೆ 75 ಯೂನಿಟ್ ಕರೆಂಟ್ ಉಚಿತ, ಜಮೀನು ಖರೀದಿಗೆ ಸಹಾಯ ಧನ ಕೊಡುವಂತಹ ಯೋಜನೆಗಳನ್ನು ನಾವು ಜಾರಿಗೆ ತಂದಿದ್ದೀವಿ. ಈಗಾಗಲೇ ಹೈಸ್ಕೂಲು ಕಟ್ಟಡ ಕಾರ್ಯಾರಂಭ ಆಗಿದೆ. 2 ವರ್ಷದಲ್ಲಿ ಪಿಯುಸಿ ಕಾಲೇಜನ್ನೂ ಕೊಡುತ್ತೇನೆ. ಜನ ಕಲ್ಯಾಣಕ್ಕೆ ಇದೇ ಸಾಕ್ಷಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅಭಿವೃದ್ಧಿಗೆ ಕಮಲಕ್ಕೆ ಮತ ನೀಡಿ
ಕ್ಷೇತ್ರದಲ್ಲಿ ನಿರಂತರ ಅಭಿವೃದ್ಧಿ ಆಗಲು, ಇನ್ನಷ್ಟು ಸೌಲಭ್ಯಗಳು ಸಿಗಲು ಬಿಜೆಪಿಗೆ ಆಶೀರ್ವಾದ ಮಾಡಿ. ಕೆಲಸ ಮಾಡುವವರಿಗೆ ಮತ ಹಾಕಿ. ಈ ಬಾರಿ ಜಾತಿ ಮತ ಮೀರಿ ಅತಿ ಹೆಚ್ಚು ಜನ ಬೆಂಬಲ ನೀಡುತ್ತಿದ್ದಾರೆ. ಇದರಿಂದ ಇನ್ನಷ್ಟು ಕೆಲಸ ಮಾಡುವ ಹುಮ್ಮಸ್ಸು ನನ್ನಲ್ಲಿ ತುಂಬಿದ್ದೀರಿ. ನಾ ಮಾಡಿರುವ ಕೆಲಸಕ್ಕಿಂತ ನಿಮ್ಮ ಪ್ರೀತಿ ವಿಶ್ವಾಸ ದೊಡ್ಡದಿದೆ. ಜೀವನ ಇರುವ ವರೆಗೆ ನಿಮ್ಮ ಸೇವೆ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.