ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಅತೃಪ್ತ ಶಾಸಕರು ಆರಂಭಿಸಿರುವ ರಾಜೀನಾಮೆ ಆಟ ಬಹಳ ಕ್ಷಿಪ್ರಗತಿಯಲ್ಲಿ ಮುನ್ನಡೆದಿದೆ. ಬೆಳಿಗ್ಗೆಯಿಂದ ರಾಜೀನಾಮೆ ಸಲ್ಲಿಸಲು ವಿಧಾನಸಭೆಯ ಸ್ಪೀಕರ್ ಕಚೇರಿಯಲ್ಲಿ ಕಾದು ಕುಳಿತಿದ್ದ ಅತೃಪ್ತ ಶಾಸಕರು, ಸ್ಪೀಕರ್ ಕಚೇರಿಯಲ್ಲಿ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿ, ಸ್ವಿಕೃತಿ ಪಡೆದು ರಾಜಭವನದತ್ತ ತೆರಳಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಹುಣಸೂರು ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್, ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಶಾಸಕ ಕೆ.ಗೋಪಾಲಯ್ಯ, ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ, ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣ ಗೌಡ, ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್, ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ , ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಬಳಿಕ ರಾಜ್ಯಪಾಲರ ಒಪ್ಪಿಗೆ ಪಡೆಯಲು ರಾಜಭವನಕ್ಕೆ ತೆರಳಿದ್ದಾರೆ ಎನ್ನಲಾಗಿದೆ. 



ಅತೃಪ್ತ ಶಾಸಕರ ರಾಜೀನಾಮೆ ವದಂತಿ ಹಬ್ಬುತ್ತಿದ್ದಂತೆಯೇ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಕೂಡಲೇ ಬೆಂಗಳೂರಿಗೆ ದೌಡಾಯಿಸಿರುವ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ಸ್ಪೀಕರ್ ಕಚೇರಿಗೆ ಆಗಮಿಸಿದ್ದು, ಕೆಲವು ಶಾಸಕರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಶಾಸಕರಾದ ರಾಮಲಿಂಗಾರೆಡ್ಡಿ, ಭೈರತಿ ಬಸವರಾಜು, ಮುನಿರತ್ನ ಮತ್ತು ಎಸ್.ಟಿ.ಸೋಮಶೇಖರ್ ಅವರು ಡಿಕೆಶಿ ಜೊತೆ ಕಾರಿನಲ್ಲಿ ತೆರಳಿದ್ದು, ಉಳಿದ 8 ಶಾಸಕರು ಮಾತ್ರ ರಾಜಭವನಕ್ಕೆ ತೆರಳಿದ್ದಾರೆ.