ನನ್ನ ಭೇಟಿಗೆ ಯಾರೂ ಸಮಯ ಕೇಳಿರಲಿಲ್ಲ, 11 ಶಾಸಕರಿಂದ ರಾಜೀನಾಮೆ ಸಲ್ಲಿಕೆ: ಸ್ಪೀಕರ್ ರಮೇಶ್ ಕುಮಾರ್
ನಾಳೆ ಭಾನುವಾರ ಇದೆ. ಕಚೇರಿಗೆ ರಜೆ ಇರುವುದರಿಂದ ಸೋಮವಾರ ಶಾಸಕರ ರಾಜೀನಾಮೆ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು: ನನ್ನನ್ನು ಭೇಟಿ ಮಾಡಲು ಯಾರೂ ಸಮಯ ಕೇಳಿರಲಿಲ್ಲ. ಶಾಸಕರು ಬರುವ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಶಾಸಕರೂ ನನ್ನನು ಭೇಟಿ ಮಾಡಲು ಅನುಮತಿ ಪಡೆದಿರಲಿಲ್ಲ. ನಾನು ಅನ್ಯ ಕಾರ್ಯ ನಿಮಿತ್ತ ಹೊರಗಡೆ ತೆರಳಿದ್ದೆ. ಶಾಸಕರಿಂದ ರಾಜೀನಾಮೆ ಪತ್ರ ಪಡೆದು ಸ್ವೀಕೃತಿ ನೀಡಲು ಆಪ್ತ ಕಾರ್ಯದರ್ಶಿಗೆ ತಿಳಿಸಿದ್ದೆ. ಅದರಂತೆ 11 ಶಾಸಕರು ರಾಜೀನಾಮೆ ಸಲ್ಲಿಸಿ ಸ್ವೀಕೃತಿ ಪಡೆದಿದ್ದಾರೆ. ನಾಳೆ ಭಾನುವಾರ ಇದೆ. ಕಚೇರಿಗೆ ರಜೆ ಇರುವುದರಿಂದ ಸೋಮವಾರ ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ" ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಇದೇ ವೇಳೆ ನನಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ, ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ಪತನಕ್ಕೆ ಪೂರ್ವ ಸಿದ್ಧತೆ ನಡೆಸಿರುವ ಅತೃಪ್ತ ಶಾಸಕರಲ್ಲಿ ಶಿವರಾಮ್ ಹೆಬ್ಬಾರ್, ರಮೇಶ್ ಜಾರಕಿಹೊಳಿ, ಗೋಪಾಲಯ್ಯ, ಮಹೇಶ್ ಕುಮಠಳ್ಳಿ, ಎಚ್. ವಿಶ್ವನಾಥ್ ಸೇರಿ ಒಟ್ಟು 11 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ.