ಸಿಎಂ ಯಡಿಯೂರಪ್ಪ ಸಂಪುಟಕ್ಕೆ 17 ನೂತನ ಸಚಿವರ ಸೇರ್ಪಡೆ; ಹಳೇ ಮೈಸೂರು ಭಾಗಕ್ಕೆ ಸಿಗದ ಮನ್ನಣೆ
ಬಿಎಸ್ವೈ ಸಂಪುಟದಲ್ಲಿ 7 ಲಿಂಗಾಯತರು, 3 ಒಕ್ಕಲಿಗ, 4 ಪರಿಶಿಷ್ಟ ಜಾತಿ/ಪಂಗಡದವರು, ಇಬ್ಬರು ಹಿಂದುಳಿದ ವರ್ಗದವರು, ಒಬ್ಬರು ಬ್ರಾಹ್ಮಣರಿಗೆ ಸಚಿವ ಸ್ಥಾನ ನೀಡಲಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಕೊನೆಗೂ ನೆರವೇರಿದ್ದು, ಇಂದು 17 ಶಾಸಕರು ರಾಜಭವನದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿಂದು ನಡೆದ ಸರಳ ಪದಗ್ರಹಣ ಕಾರ್ಯಕ್ರಮದಲ್ಲಿ 17 ಶಾಸಕರು ಸಂಪುಟ ದರ್ಜೆ ಸಚಿವರಾಗಿ ಪದಗ್ರಹಣ ಮಾಡಿದರು. ಆದರೆ ಹಳೇ ಮೈಸೂರು ಭಾಗವಾದ ಮೈಸೂರು, ಮಡಿಕೇರಿ, ಹಾಸನ, ಚಾಮರಾಜನಗರ ಭಾಗಗಳಿಂದ ಬಿಜೆಪಿಗೆ ಎಂಟು ಶಾಸಕರು ಆಯ್ಕೆಯಾಗಿದ್ದರೂ ಓರ್ವ ಶಾಸಕನಿಗೂ ಮಂತ್ರಿ ಭಾಗ್ಯ ದೊರೆತಿಲ್ಲ.
ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ಸಿಗುವ ನಿರೀಕ್ಷೆ ಇತ್ತಾದರೂ, ಕಡೆ ಕ್ಷಣದಲ್ಲಿ ಅವರಿಗೂ ಮಂತ್ರಿ ಸ್ಥಾನ ಕೈತಪ್ಪಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಹಳೇ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ನೀಡಲಾಗಿಲ್ಲ, ನೂತನ ಸರ್ಕಾರದಲ್ಲಿ ಮೈಸೂರು, ಮಡಿಕೇರಿ, ಹಾಸನ, ಚಾಮರಾಜನಗರ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಲಕ್ಷ್ಮಣ್ ಸವಧಿ, ಜಗದೀಶ್ ಶೆಟ್ಟರ್, ವಿ. ಸೋಮಣ್ಣ, ಬಸವರಾಜ್ ಬೊಮ್ಮಾಯಿ, ಜೆ.ಸಿ. ಮಾಧುಸ್ವಾಮಿ, ಸಿ.ಸಿ. ಪಾಟೀಲ್, ಶಶಿಕಲಾ ಅಣ್ಣಾಸಾಹೇಬ್ ಜೊಳ್ಳೆ , ಆರ್. ಅಶೋಕ್, ಡಾ. ಅಶ್ವತ್ಥ ನಾರಾಯಣ, ಸಿ.ಟಿ.ರವಿ, ಶ್ರೀರಾಮುಲು, ಗೋವಿಂದ ಕಾರಜೋಳ, ನಾಗೇಶ್, ಪ್ರಭು ಚೌವ್ಹಾಣ್, ಎಸ್.ಈಶ್ವರಪ್ಪ, ಕೋಟಾ ಶ್ರೀನಿವಾಸ್ ಪೂಜಾರಿ, ಸುರೇಶ್ ಕುಮಾರ್ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಿಎಸ್ವೈ ಸಂಪುಟದಲ್ಲಿ 7 ಲಿಂಗಾಯತರು, 3 ಒಕ್ಕಲಿಗ, 4 ಪರಿಶಿಷ್ಟ ಜಾತಿ/ಪಂಗಡದವರು, ಇಬ್ಬರು ಹಿಂದುಳಿದ ವರ್ಗದವರು, ಒಬ್ಬರು ಬ್ರಾಹ್ಮಣರಿಗೆ ಸಚಿವ ಸ್ಥಾನ ನೀಡಲಾಗಿದೆ.