ಬೆಂಗಳೂರು: ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2018-19ರ ಬಾಕಿ ಪ್ರಸ್ತಾವನೆಗಳು ಹಾಗೂ 2019-20ರ ಅವಧಿಗೆ 2 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಸ್ತಾವನೆಗಳನ್ನು ಕೂಡಲೇ ಜಿಲ್ಲಾಧಿಕಾರಿಗಳಿಗೆ ತುರ್ತಾಗಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಲ್ಲಾ ಶಾಸಕರಿಗೆ ಪತ್ರ ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ 2 ಕೋಟಿ ರೂ. ನೀಡಲಾಗುತ್ತಿದೆ. ಈ ಮೊತ್ತಕ್ಕೆ ಆರ್ಥಿಕ ವರ್ಷದಾರಂಭದಲ್ಲಿಯೇ ಕ್ರಿಯಾ ಯೋಜನೆ ಸಲ್ಲಿಸಿ, ಜೂನ್ ಅಂತ್ಯದೊಳಗೆ ಅಂತಿಮಗೊಳಿಸಿ, ಅನುಮೋದನೆ ಪಡೆದು ಕಾಮಗಾರಿ ಅನುಷ್ಠಾನಗೊಳಿಸಬೇಕಾಗಿರುತ್ತದೆ.


ಆದ್ದರಿಂದ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು ವೈಯಕ್ತಿಕ ಗಮನ ಹರಿಸಿ, 2018-19ನೇ ಸಾಲಿಗೆ ಸಂಬಂಧಿಸಿದಂತೆ ಉಳಿದ ಮೊತ್ತಕ್ಕೆ ಹಾಗೂ 2019-20ನೇ ಸಾಲಿಗೆ 2 ಕೋಟಿ ರೂ. ಗಳ ಕಾಮಗಾರಿಗಳ ಪ್ರಸ್ತಾವನೆಯನ್ನು ತುರ್ತಾಗಿ ಜಿಲ್ಲಾಧಿಕಾರಿಗಳಿಗೆ ನೀಡುವಂತೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.


ಈ ಪೈಕಿ ತಮ್ಮ ಕ್ಷೇತ್ರದಲ್ಲಿ ಅಗತ್ಯವಿರುವ ಅಂಗನವಾಡಿ, ಶಾಲೆ, ಆಸ್ಪತ್ರೆ ಕಟ್ಟಡಗಳು ಮತ್ತು ನೀರು ಸಂಗ್ರಹಣೆ ಮತ್ತು ಪುನಶ್ಚೇತನ ಕಾಮಗಾರಿಗಳನ್ನು ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜೊತೆಗೆ ಕ್ರೋಢೀಕರಿಸಿ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು ತಮ್ಮ ಪತ್ರದಲ್ಲಿ ಶಾಸಕರಿಗೆ ಸಲಹೆ ನೀಡಿದ್ದಾರೆ.