ಬೆಂಗಳೂರು: ಕರ್ನಾಟಕದಲ್ಲಿ ಏಪ್ರಿಲ್ 2013ರ ರಿಂದ ನವೆಂಬರ್ 2017ರ ನಡುವೆ 3,515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿರುವ ರಾಜ್ಯ ಕೃಷಿ ಇಲಾಖೆ, ಇದರಲ್ಲಿ 2,525 ರೈತರು ಬರ ಮತ್ತು ಬೆಳೆ ವಿಫಲತೆಯಿಂದಾಗಿ ಆತ್ಮಹತ್ಯೆ ಮಾಡಿರುವುದಾಗಿ ತಿಳಿಸಿದೆ. 


COMMERCIAL BREAK
SCROLL TO CONTINUE READING

"ಏಪ್ರಿಲ್ 2013 ರಿಂದ ನವೆಂಬರ್ 2017 ವರೆಗೆ 3,515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ ಮತ್ತು ಏಪ್ರಿಲ್ 2008 ರಿಂದ ಏಪ್ರಿಲ್ 2012 ರವರೆಗೆ 1,125 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ'' ಎಂದು ಕೃಷಿ ಇಲಾಖೆ ವರದಿ ಮಾಡಿದೆ. 


ಏಪ್ರಿಲ್ 2015 ರಿಂದ ಏಪ್ರಿಲ್ 2017 ವರೆಗೆ 2,514 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1,929 ಪ್ರಕರಣಗಳು ಅಂಗೀಕರಿಸಲ್ಪಟ್ಟಿದೆ.


ಏಪ್ರಿಲ್ 2017 ರಿಂದ ನವೆಂಬರ್ 2017 ರವರೆಗೆ, ರಾಜ್ಯದಲ್ಲಿ ಸಾಕಷ್ಟು ಮಳೆಯಾಗಿದ್ದರೂ ಸುಮಾರು 624 ಆತ್ಮಹತ್ಯಾ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ, 416 ಪ್ರಕರಣಗಳನ್ನು ಇಲಾಖೆ ಅಂಗೀಕರಿಸಿರುವುದಾಗಿ ತಿಳಿಸಿದೆ. 


2013 ರಿಂದ ರಾಜ್ಯ ಸರ್ಕಾರದ ಸಮಿತಿಯ ಅನುಮೋದನೆಗಾಗಿ ಇನ್ನೂ 112 ಆತ್ಮಹತ್ಯಾ ಪ್ರಕರಣಗಳು ಬಾಕಿ ಉಳಿದಿವೆ ಎಂದು ಕೃಷಿ ನಿರ್ದೇಶಕ ಬಿ.ವೈ.ಶ್ರೀನಿವಾಸ್ ಪಿಟಿಐಗೆ ತಿಳಿಸಿದ್ದಾರೆ.


"ಈ ವರ್ಷ ನವೆಂಬರ್ ವರೆಗೆ 105 ಪ್ರಕರಣಗಳು ಬಾಕಿ ಉಳಿದಿದ್ದು, ಹಿಂದಿನ ವರ್ಷದ ಏಳು ಪ್ರಕರಣಗಳಿವೆ" ಎಂದು ಅವರು ಹೇಳಿದ್ದಾರೆ. 


2015-16ರ ಅವಧಿಯಲ್ಲಿ ಅತಿ ಹೆಚ್ಚು ಆತ್ಮಹತ್ಯೆ (1,483) ಪ್ರಕರಣಗಳು ವರದಿಯಾಗಿದ್ದು, 2013-14ರ ಅವಧಿಯಲ್ಲಿ ಅತಿ ಕಡಿಮೆ (106) ವರದಿಯಾಗಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.


"ಆತ್ಮಹತ್ಯೆ ಮಾಡಿಕೊಂಡವರ ಪಟ್ಟಿಯಲ್ಲಿ ರಾಜ್ಯದ ಕಬ್ಬು ಬೆಳೆಗಾರರು ಮೊದಲ ಸ್ಥಾನದಲ್ಲಿದ್ದು, ಹತ್ತಿ ಮತ್ತು ಭತ್ತದ ಬೆಳೆಗಾರರು ನಂತರದ ಸ್ಥಾನದಲ್ಲಿದ್ದಾರೆ'' ಎಂದು ಅವರು ಹೇಳಿದರು.


ರೈತರ ಆತ್ಮಹತ್ಯೆಯನ್ನು ತಡೆಯುವ ಉದ್ದೇಶದಿಂದ, ಪರಿಹಾರ ಕ್ರಮವಾಗಿ ರೈತರಿಗೆ ಸಾಲ ಮರುಪಾವತಿಸಲು ಒತ್ತಡ ಹೇರದಂತೆ ರಾಜ್ಯ ಸರ್ಕಾರ ಬ್ಯಾಂಕ್ಗಳಿಗೆ ಸೂಚನೆ ನೀಡಿತ್ತು. ಅಲ್ಲದೆ, ರೈತರ ಸಣ್ಣ ಮತ್ತು ಮಧ್ಯಮ ಬೆಳೆ ಸಾಲವನ್ನು ದೀರ್ಘಾವಧಿ ಬೆಳೆ ಸಾಲಕ್ಕೆ ಪರಿವರ್ತಿಸುವಂತೆಯೂ ಸರ್ಕಾರ ಬ್ಯಾಂಕ್ಗಳಿಗೆ ಆದೇಶ ನೀಡಿತ್ತು. 


ಆದರೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಹೆಚ್ಚು ಮಂದಿ ಶೇ.30 ರಿಂದ 40 ಬಡ್ಡಿ ದರಕ್ಕೆ ಸಾಲದಾತರಿಂದ ಸಾಲ ಪಡೆದವರಾಗಿದ್ದರು. ಹಾಗಾಗಿ ಕಳೆದ ಮೂರು ವರ್ಷಗಳಲ್ಲಿ 585 ಖಾಸಗಿ ಸಾಲದಾತರನ್ನು ಬಂಧಿಸಿದ್ದು, ಸುಮಾರು 1,332 ಖಾಸಗಿ ಹಣದ ಸಾಲ ನೀಡುವವರ ವಿರುದ್ಧ ಸರ್ಕಾರ ಪ್ರಕರಣಗಳನ್ನು ದಾಖಲಿಸಿದೆ ಎಂದು ಕೃಷಿ ಅಧಿಕಾರಿ ಕುಮಾರಸ್ವಾಮಿ ತಿಳಿಸಿದ್ದಾರೆ. 


ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ  ಸರ್ಕಾರ 1 ಲಕ್ಷ ರೂ.ದಿಂದ ರೂ 5 ಲಕ್ಷರೂ.ಗಳಿಗೆ ಪರಿಹಾರವನ್ನು ಹೆಚ್ಚಿಸಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2015 ರಲ್ಲಿ ರಾಣಿಬೆನ್ನೂರು ತಾಲೂಕಿನ ಸಾರ್ವಜನಿಕ ಸಭೆಗೆ ಮುನ್ನ ಈ ಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.