5 ಲಕ್ಷ ರೈತರಿಗೆ 3807 ಕೋಟಿ ರೂ. ಸಾಲ: ಸಚಿವ ಎಸ್.ಟಿ. ಸೋಮಶೇಖರ್
ರೈತರಿಗೆ ಹೆಚ್ಚಿನ ಸಾಲ ಸಿಗಬೇಕು. ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆಯಾಗಬಾರದು ಎಂಬುದು ಮಾನ್ಯ ಮುಖ್ಯಮಂತ್ರಿಗಳ ಆಶಯ- ಸಚಿವ ಎಸ್. ಟಿ. ಸೋಮಶೇಖರ್
ಕಲಬುರಗಿ: ರಾಜ್ಯದಲ್ಲಿ ಈವರೆಗೆ 5,42,991 ರೈತರಿಗೆ 3,807 ಕೋಟಿ ರೂಪಾಯಿ ಹಣವನ್ನು ರೈತರಿಗೆ ಕೃಷಿ ಸಾಲವಾಗಿ ವಿತರಣೆ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ (ST Somashekhar) ತಿಳಿಸಿದರು.
ಸಹಕಾರ ಇಲಾಖೆ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮಕ್ಕೆ ಚೆಕ್ ವಿತರಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಸೋಮಶೇಖರ್, ರೈತರಿಗೆ ಸಾಲ ಕೊಡುವ ಸಂಬಂಧ ಪ್ರಸಕ್ತ ಸಾಲಿನಲ್ಲಿ 1750 ಕೋಟಿ ರೂ. ಸಾಲವನ್ನು ಅಪೆಕ್ಸ್ ಬ್ಯಾಂಕಿಗೆ ನಬಾರ್ಡ್ ಕೊಟ್ಟಿದೆ. ಕಳೆದ ಬಾರಿ ರೈತರಿಗೆ 13,577 ಕೋಟಿ ರೂಪಾಯಿಯನ್ನು ಕೊಡಲಾಗಿತ್ತು. ಈ ಬಾರಿ 14,500 ಕೋಟಿ ರೂಪಾಯಿ ಬೆಳೆ ಸಾಲ ನೀಡಲು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ರೈತರಿಗೆ (Farmers) ಹೆಚ್ಚಿನ ಸಾಲ ಸಿಗಬೇಕು. ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆಯಾಗಬಾರದು ಎಂಬುದು ಮಾನ್ಯ ಮುಖ್ಯಮಂತ್ರಿಗಳ ಆಶಯವಾಗಿದ್ದು, ಅವರ ನಿರ್ದೇಶನದಂತೆ ಹೊಸ ರೈತರಿಗೆ ಸಾಲ ನೀಡಲು ಎಲ್ಲ ಜಿಲ್ಲಾ ಸಹಕಾರ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಕಲಬುರಗಿ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್:
ಕಲಬುರಗಿ ಡಿಸಿಸಿ ಬ್ಯಾಂಕನ್ನು ಸೂಪರ್ ಸೀಡ್ ಮಾಡಲಾಗಿದ್ದು, ನಬಾರ್ಡ್ ಅನುಮತಿಗಾಗಿ ಕಳುಹಿಸಲಾಗಿದೆ. ಅಲ್ಲಿಂದ ಒಪ್ಪಿಗೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.