ಬೆಂಗಳೂರು : ದೇಶದಲ್ಲಿಯೇ ಅತಿ ಹೆಚ್ಚು ನ್ಯಾಯಮೂರ್ತಿಗಳ ಹುದ್ದೆ ಕರ್ನಾಟಕ ಹೈಕೋರ್ಟ್ ನಲ್ಲಿ ಖಾಲಿ ಇದ್ದು, ಕೂಡಲೇ ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. 


COMMERCIAL BREAK
SCROLL TO CONTINUE READING

ಕರ್ನಾಟಕ ಹೈಕೋರ್ಟ್ ನಲ್ಲಿ 62 ನ್ಯಾಯಮೂರ್ತಿಗಳ ಹುದ್ದೆ ಇದ್ದು, ಕೇವಲ 25 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ 47 ಹುದ್ದೆಗಳು ಖಾಲಿ ಇವೆ. ಹೀಗಿರುವಾಗ ಕೇವಲ ಶೇ.38 ನ್ಯಾಯಾಧೀಶರೊಂದಿಗೆ ಸಕಾಲಕ್ಕೆ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಹೈಕೋರ್ಟ್ ಗೆ ಹೀಗೆ ಸಾಧ್ಯ? ಎಂದು ತಾವು ಬರೆದಿರುವ ಪತ್ರದಲ್ಲಿ ಸಿದ್ದರಾಮಯ್ಯ ಪ್ರಧಾನಿ ಅವರನ್ನು ಪ್ರಶ್ನಿಸಿದ್ದಾರೆ. 


ಬೆಂಗಳೂರು, ಧಾರವಾಡ ಮತ್ತು ಕಲ್ಬುರ್ಗಿ ಪೀಠಗಳೂ ಸೇರಿದಂತೆ ಕರ್ನಾಟಕ ಹೈಕೋರ್ಟ್ನಲ್ಲಿ ಒಟ್ಟು 2,50,000 ಲಕ್ಷ ಪ್ರಕರಣಗಳು ಬಾಕಿ ಇದ್ದು, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆಯಾದರೂ, ನ್ಯಾಯಾಧೀಶರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣಗಳ ಇತ್ಯರ್ಥದಲ್ಲಿ ವಿಳಂಬವಾಗುತ್ತಿದ್ದು, ರಾಜ್ಯದಲ್ಲಿ ವಕೀಲರು ಪ್ರತಿಭಟನೆ ಆರಂಭಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. 


ಕರ್ನಾಟಕ ಹೈಕೋರ್ಟ್ ಗೆ 45 ನ್ಯಾಯಾಧೀಶರನ್ನು ಕೊಲಿಜಿಯಂ ಶಿಪಾರಸು ಮಾಡಿದ್ದರೂ, 2016ರಿಂದ 12 ಕ್ಕಿಂತ ಹೆಚ್ಚು ನ್ಯಾಯಮೂರ್ತಿಗಳ ನೇಮಕವಾಗಿಲ್ಲ. ಈ ಮಧ್ಯೆ 12 ನ್ಯಾಯಮೂರ್ತಿಗಳು ನಿವೃತ್ತಿಯಾಗಿದ್ದಾರೆ. 2017ರಲ್ಲಿ ಕೇವಲ ಇಬ್ಬರು ನ್ಯಾಯಮೂರ್ತಿಗಳ ನೇಮಕವಾಗಿದೆ. ಹೀಗಾಗಿ ಕೇಂದ್ರ ಈ ಬಗ್ಗೆ ಗಮನಹರಿಸಿ ನ್ಯಾಯಮೂರ್ತಿಗಳ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಬರೆದಿರುವ ಪತ್ರದಲ್ಲಿ ಪ್ರಧಾನಿಗೆ ಮನವಿ ಮಾಡಿದ್ದಾರೆ. 



ನ್ಯಾಯಮೂರ್ತಿಗಳ ನೇಮಕಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ಬೆಂಗಳೂರು ಹೈಕೋರ್ಟ್ ಮುಂದೆ ಕಳೆದ ಎರಡು ದಿನಗಳಿಂದ ವಕೀಲರ ಸರಣಿ ಉಪವಾಸ ಸತ್ಯಾಗ್ರಹ ಮುಂದುವರೆದಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಧಾನಿಗೆ ಪತ್ರ ಬರೆದಿದ್ದಾರೆ.