ಮೈಸೂರಿನಲ್ಲಿ ನಡೆಯಲಿದೆಯೇ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ?
ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗಾಗಿ ಸಾಂಸ್ಕೃತಿಕ ನಗರಿ ಹಾಗೂ ಯೋಗ ಐಕಾನ್ ಎಂದೇ ಗುರುತಿಸಿಕೊಂಡಿರುವ ಮೈಸೂರು ನಗರವನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ ಎನ್ನಲಾಗಿದೆ.
ಮೈಸೂರು: ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗಾಗಿ ಸಾಂಸ್ಕೃತಿಕ ನಗರಿ ಹಾಗೂ ಯೋಗ ಐಕಾನ್ ಎಂದೇ ಗುರುತಿಸಿಕೊಂಡಿರುವ ಮೈಸೂರು ನಗರವನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ ಎನ್ನಲಾಗಿದೆ.
ಕಳೆದ ವರ್ಷ ವಿಶ್ವ ಯೋಗ ದಿನಾಚರಣೆಯಂದು 55 ಸಾವಿರಕ್ಕೂ ಹೆಚ್ಚು ಮಂದಿ ಯೋಗ ಪ್ರದರ್ಶನದಲ್ಲಿ ಭಾಗವಹಿಸಿ ಗಿನ್ನಿಸ್ ದಾಖಲೆ ಮಾಡಿದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಮೈಸೂರಿನೆಡೆ ಒಲವು ತೋರಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಈಗಾಗಲೇ ಕೇಂದ್ರ ಆಯುಷ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಪಿ.ಎನ್. ರಂಜಿತ್ ಕುಮಾರ್, ಉಪ ಕಾರ್ಯದರ್ಶಿ ದಯಾನಂದ್ ಮೀನಾ ಅವರು ಮೈಸೂರಿಗೆ ಭೇಟಿ ನೀಡಿ ಅರಮನೆ ಮೈದಾನ, ರೇಸ್ ಕೋರ್ಸ್ ಸೇರಿ ಹಲವು ಕಡೆ ಪರಿಶೀಲನೆ ನಡೆಸಿದ್ದು, ಜೂನ್ 21 ರಂದು 4ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಮೈಸೂರಿನಲ್ಲೇ ಆಚರಿಸುವ ಸಾಧ್ಯತೆ ಹೆಚ್ಚಾಗಿದೆ.
ಗಿನ್ನಿಸ್ ದಾಖಲೆ ಸೇರಿದ ಮೈಸೂರು ಯೋಗ ಪ್ರದರ್ಶನ
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲು ಸಿದ್ಧಪಡಿಸಿದ್ದ ಪಟ್ಟಿಯಲ್ಲಿ ಮೈಸೂರು, ಜೈಪುರ, ಹೈದರಾಬಾದ್ ಹಾಗೂ ಅಹಮದಾಬಾದ್ ಗಳು ಸ್ಥಾನ ಪಡೆದಿದ್ದವು. ಆದರೆ ಅಂತಿಮವಾಗಿ ಮೈಸೂರು ನಗರಕ್ಕೇ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮೈಸೂರಿನಲ್ಲಿ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನ ನಡೆಯುವುದು ಬಹುತೇಕ ಖಚಿತವಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಆದರೆ, ಅಂತಿಮವಾಗಿ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬಗ್ಗೆ ಕೇಂದ್ರ ಸರ್ಕಾರದ ಅಧಿಕೃತ ಪ್ರಕಟಣೆ ಏನು ಹೇಳಲಿದೆ ಎಂಬುದನ್ನು ಕಾದು ನೋಡಬೇಕಿದೆ.