ಬೆಂಗಳೂರು: ನಿನ್ನೆ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಸಂಭವಿಸಿದ ಭೀಕರ ಬಾಂಬ್  ನಂತರ ಕೊಲಂಬೊ ಪ್ರವಾಸದಲ್ಲಿದ್ದ ರಾಜ್ಯ ಜೆಡಿಎಸ್‌ನ 7 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಕೊಲಂಬೊದಲ್ಲಿ ಪ್ರವಾಸದಲ್ಲಿದ್ದ ರಾಜ್ಯದ JDS ನ ಏಳು ಮಂದಿಯ ತಂಡ ಬಾಂಬ್ ಸ್ಫೋಟದ ನಂತರ ಕಾಣೆಯಾಗಿದ್ದಾರೆ. ಇದನ್ನು ಕೇಳಿ ನನಗೆ ಇನ್ನಿಲ್ಲದ ಆಘಾತ ಹಾಗೂ ನೋವಾಗಿದೆ. ಈ ಪೈಕಿ ಇಬ್ಬರು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಕಳೆದು ಹೋಗಿರುವವರ ಪತ್ತೆ ಹಚ್ಚಲು ನಾನು ಭಾರತ ರಾಯಭಾರ ಕಚೇರಿಯೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.



ಶ್ರೀಲಂಕಾದಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಈವರೆಗೂ 290 ಮಂದಿ ಮೃತಪಟ್ಟಿದ್ದು, ಅವರಲ್ಲಿ ಬೆಂಗಳೂರಿನ ಇಬ್ಬರು ಕನ್ನಡಿಗರು ಮೃತಪಟ್ಟಿರುವ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ.


ಮೃತರನ್ನು ಬೆಂಗಳೂರಿನ ಹನುಮಂತರಾಯಪ್ಪ ಮತ್ತು ಎಂ. ರಂಗಪ್ಪ ಎಂದು ಗುರುತಿಸಿರುವುದಾಗಿ ಸುಷ್ಮಾ ಸ್ವರಾಜ್ ಟ್ವೀಟ್ ನಲ್ಲಿ ಹೇಳಿದ್ದಾರೆ.



ಎಪ್ರಿಲ್ 20ರಂದು ಶ್ರೀಲಂಕಾಕ್ಕೆ ತೆರಳಿದ್ದ 7 ಜೆಡಿಎಸ್ ನಾಯಕರು


ಶ್ರೀಲಂಕಾದಲ್ಲಿ ನಡೆದ ಈ ಹೇಯ ಕೃತ್ಯದಲ್ಲಿ ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಹಾಗೂ ಸಂಪರ್ಕಕ್ಕೆ ಸಿಗದೇ ಕಣ್ಮರೆಯಾಗಿರುವ ಕನ್ನಡಿಗರು, ಭಾರತೀಯರು ಶೀಘ್ರವಾಗಿ ಮರಳಿ ಬರುವಂತಾಗಲಿ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಟ್ವೀಟ್ ಮಾಡಿದ್ದಾರೆ.