ಕೆ.ಬಿ.ಕೋಳಿವಾಡ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು
ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಬೆಂಗಳೂರು: ರಾಜ್ಯ ವಿಧಾನಸಭೆ ಸಚಿವಾಲಯದ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಆರೋಪದ ಮೇಲೆ ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಆರ್ಟಿಐ ಕಾರ್ಯಕರ್ತ ಪ್ರಸನ್ನಕುಮಾರ್ ಎಂಬವರು, ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವಿಧಾನಸಭೆ ಸಚಿವ್ಲಯದಲ್ಲಿ ನಿಯಮಗಳನ್ನು ಪಾಲಿಸದೇ ತರಾತುರಿಯಲ್ಲಿ ಸಂದರ್ಶನ ನಡೆಸಿ 191 ಮಂದಿಯನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿದ್ದು, ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ ಸಂಜಯ್ ಸಹಾಯ್ ಅವರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
2018ರ ವಿಧಾನಸಭೆ ಚುನಾವಣೆಗೆ ಒಂದು ವಾರ ಮುಂಚಿತವಾಗಿ 100ಕ್ಕೂ ಅಧಿಕ ಹುದ್ದೆಗಳನ್ನು ಸೃಷ್ಟಿಸಿ ತರಾತುರಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಈ ಸಂಬಂಧ ಕೆ.ಬಿ.ಕೋಳಿವಾಡ, ಎಸ್.ಮೂರ್ತಿ, ಮತ್ತು ಅಂದಿನ ವಿಶೇಷ ಅಧಿಕಾರಿಯಾಗಿದ್ದ ತಿಪ್ಪೇಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಸನ್ನಕುಮಾರ್ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.