ಬಳ್ಳಾರಿ: ಬಳ್ಳಾರಿ  ಜಿಲ್ಲೆಯ  ಹರಪ್ಪನಹಳ್ಳಿ  ತಾಲೂಕಿನ  ಮಾಚಿಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ  ಉಪಮುಖ್ಯಮಂತ್ರಿಳಾದ ಗೋವಿಂದ ಎಂ ಕಾರಜೋಳ(Govinda M Karajola) ಅವರು ಸೋಮವಾರ ರಾತ್ರಿ  ದಿಡೀರ್ ಭೇಟಿ ನೀಡಿ ವಿದ್ಯಾರ್ಥಿ ನಿಲಯದಲ್ಲಿದ್ದ ಕೊಳೆತ ತರಕಾರಿ , ಸ್ವಚ್ಚತೆ ಇಲ್ಲದೇ ರುಚಿಕರವಾಗಿಲ್ಲದ ಊಟವನ್ನು ಪರಿಶೀಲಿಸಿ ವಾರ್ಡನ್ ಅವರನ್ನು ಅಮಾನತು ಮಾಡಲು ಸೂಚಿಸಿದರು.


COMMERCIAL BREAK
SCROLL TO CONTINUE READING

ಪರಿಶಿಷ್ಟ ಜಾತಿ‌ ಮತ್ತು ಪಂಗಡದ ವಿದ್ಯಾರ್ಥಿ ನಿಲಯಗಳ ಉತ್ತಮ ನಿರ್ವಹಣೆಗೆ ಸರ್ಕಾರ ಸಾಕಷ್ಟು ಅನುದಾನ ನೀಡಿದರೂ ಕಳಪೆ ಗುಣಮಟ್ಟದ ಊಟ ನೀಡಿ ಸ್ವಚ್ಚತೆಯನ್ನು ಕಾಪಾಡದೇ ವಿದ್ಯಾರ್ಥಿಗಳಿಗೆ ರೋಗ ರುಜನಗಳು ಬರುವಂತೆ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.


ಪ್ರತಿ ದಿನ ಇಂತಹುದೇ ಊಟ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು‌ ತಿಳಿಸಿದ‌ ಕೂಡಲೇ ಕೂಲಂಕುಶವಾಗಿ ವಿಚಾರಿಸಿದರು. ಅಡುಗೆ ಭೇಟಿ ನೀಡಿದ ಡಿಸಿಎಂ ಕೊಳೆತ ತರಕಾರಿ,  ರುಚಿಕರವಾಗಿಲ್ಲದ ಅಡುಗೆಯನ್ನು ಗಮನಿಸಿದರು. ವಿದ್ಯಾರ್ಥಿ ನಿಲಯದ ಅವ್ಯವಸ್ಥೆಗೆ ಕಾರಣರಾಗಿರುವ ವಾರ್ಡನ್ ಅವರನ್ನು ಕೂಡಲೇ  ಅಮಾನತು ಮಾಡುವಂತೆ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹ ಅಧಿಕಾರಿ ರಾಘವೇಂದ್ರ ಅವರಿಗೆ  ಸೂಚಿಸಿದರು.


ರಾಜ್ಯದಲ್ಲಿ ಒಟ್ಟು 4 ಲಕ್ಷ ವಿದ್ಯಾರ್ಥಿಗಳು ವಸತಿ ನಿಲಯ ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ‌. ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆ, ತಾಲೂಕು,  ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಊಟ ಮಾಡಿ ಊಟ ಹಾಗೂ ಸೌಲಭ್ಯಗಳನ್ನು ಪರಿಶೀಲಿಸಬೇಕು. ಯಾವುದೇ ವಿದ್ಯಾರ್ಥಿಗೂ ಕಳಪೆ ಗುಣಮಟ್ಟದ ಊಟ ಹಾಗೂ ಕಳಪೆ ಗುಣಮಟ್ಟದ  ಸೌಲಭ್ಯ ನೀಡಬಾರದು. ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಊಟೋಪಚಾರ ನೀಡುವುದರ ಜೊತೆಗೆ ಉತ್ತಮ ಪರೀಕ್ಷಾ ಫಲಿತಾಂಶ ಬರುವಂತೆ ಪಾಠ ಪ್ರವಚನ ನಡೆಸಬೇಕು. ವಿಶೇಷ ತರಗತಿಗಳನ್ನು ನಡೆಸಲು ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು.


ವಿದ್ಯಾರ್ಥಿ ನಿಲಯಗಳಲ್ಲಿ  ವಾರ್ಡನ್ ಹಾಗೂ ಶಿಕ್ಷಕರ ಪಾತ್ರ ಮಹತ್ತರವಾದುದು. ಜವಾಬ್ದಾರಿಯನ್ನರಿತು ಕಾರ್ಯನಿರ್ವಹಿಸಬೇಕು ಎಂದವರು ಇದೇ ವೇಳೆ ತಿಳಿಸಿದರು.