ಬೆಳಗಾವಿ : ಮಹದಾಯಿ ನದಿ ನೀರು ಹಂಚಿಕೆ ವಿವಾದ ತಾರಕಕ್ಕೇರಿದ್ದು, ಪ್ರತಿಭಟನೆಗಳು, ಹೋರಾಟಗಳು ಕರ್ನಾಟಕದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಇಂದು ಗೋವಾ ಸ್ಪೀಕರ್ ನೇತೃತ್ವದ ನಿಯೋಗ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿರುವ ಕಣಕಂಬಿಯಲ್ಲಿರುವ ಮಹದಾಯಿ ಕೊಳ್ಳಕ್ಕೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 


COMMERCIAL BREAK
SCROLL TO CONTINUE READING

ಗೋವಾ ಸ್ಪೀಕರ್‌ ಪ್ರಮೋದ್‌ ಸಾವಂತ್‌, ಡ್ಯೆಪುಟಿ ಸ್ಪೀಕರ್‌ ಮೈಕಲ್‌ ಲೋಬೋ, ಶಾಸಕರಾದ ಪ್ರಸಾದ್‌ ಗಾಂವ್ಕರ್‌, ರೆನಾಲ್ಡ್‌ ಲಾರೆನ್ಸ್‌, ಎನ್‌ಜಿಟಿಸಿ ಸಮಿತಿಯ ಸದಸ್ಯರು ಮತ್ತು ಅಧಿಕಾರಿಗಳು ಗೋವಾ ಭಾಗದಲ್ಲಿರುವ ನದಿ ಪಾತ್ರದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಬಳಿಕ ಕಣಕಂಬಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  


ಕೆಲ ದಿನಗಳ ಹಿಂದೆ ಗೋವಾ ನೀರಾವರಿ ಸಚಿವ ವಿನೋದ್‌ ಪಾಲೇಕರ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದರ ಬೆನ್ನಲ್ಲೇ ಗೋವಾ ಸ್ಪೀಕರ್ ನೇತೃತ್ವದ ಅಧಿಕಾರಿಗಳ ತಂಡದ ದಿಢೀರ್‌ ಭೇಟಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆದರೆ ಒಂದೆಡೆ ಮಹದಾಯಿ ನೀರಿಗಾಗಿ ಪ್ರತಿಭಟನೆಗಳ ನಡೆಯುತ್ತಿದ್ದರೆ ಇನ್ನೊಂದೆಡೆ ಗೋವಾ ಅಧಿಕಾರಿಗಳ ತಂಡ ಕೊಳ್ಳದಲ್ಲಿ ಪರಿಶೀಲನೆ ನಡೆಸಿರುವುದು ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. 


ಈ ಮಧ್ಯೆ ಮಾತನಾಡಿದ ಗೋವಾ ಡೆಪ್ಯುಟಿ ಸ್ಪೀಕರ್ ಮಯ್ಕಲ್ ಲೋಬೊ, ಕರ್ನಾಟಕ ಮಹದಾಯಿ ಟ್ರಿಬ್ಯುನಲ್ ಆದೇಶವನ್ನು ಉಲ್ಲಂಘಿಸಿ ಗೋವಾಗೆ ಹರಿದು ಹೋಗುವ ನೀರನ್ನು ತಡೆಯಲು ಯತ್ನಿಸಿದೆ. ಇದರಿಂದ ಗೋವಾ ರಾಜ್ಯಕ್ಕೆ ನೀರಿನ ಸಮಸ್ಯೆಯಾಗಲಿದೆ ಎಂದು ಆರೋಪಿಸಿದ್ದಾರೆ. 


ಗೋವಾ ನಿಯೋಗಕ್ಕೆ ಸಹಕರಿಸುವಂತೆ ಅಧಿಕಾರಿಗಳಿಗೆ ಸೂಚನೆ-ಸಿಎಂ ಸಿದ್ದರಾಮಯ್ಯ
ಮಹದಾಯಿ ವಿಚಾರದಲ್ಲಿ ನಾವು ಯಾವುದೇ ರಾಜಕೀಯ ಮಾಡುತ್ತಿಲ್ಲ. ಹಾಗೆಯೇ ನಾವು ನಾವು ಯಾವುದೇ ಕಾಮಗಾರಿಯನ್ನು ಮುಂದುವರೆಸಿಲ್ಲ. ಹಾಗಾಗಿ ಶಿಷ್ಟಾಚಾರದ ಪ್ರಕಾರ ಅವರಿಗೆ ಪರಿಶೀಲನೆಗೆ ಸಹಕರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವರು ಪರಿಶೀಲನೆ ನಡೆಸಿಕೊಂಡು ಹೋಗಲಿ. ಆದರೆ ಗೋವ ನಿಯೋಗ ಬರುವ ಬಗ್ಗೆ ನಮಗೆ ಮಾಹಿತಿ ನೀಡಿರಲಿಲ್ಲ. ಕಣಕಂಬಿಯಲ್ಲಿ ಅವರು ವೀಕ್ಷಣೆ ಮಾಡಿ ಹೋಗಲಿ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದಾರೆ. 


ಗೊವಾ ತಂಡದ ಭೇಟಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ  ಬಿ.ಎಸ್.ಯಡಿಯೂರಪ್ಪ ನಿರಾಕರಿಸಿದ್ದಾರೆ.