`ನಾಯಕರನ್ನು ಸೃಷ್ಟಿಸುವವನು ನಿಜವಾದ ನಾಯಕನೇ ಹೊರತು, ಹಿಂಬಾಲಕರನ್ನು ಸೃಷ್ಟಿಸುವವರಲ್ಲ`
ನಾಯಕರನ್ನು ಸೃಷ್ಟಿಸುವವನು ನಿಜವಾದ ನಾಯಕನೇ ಹೊರತು, ಹಿಂಬಾಲಕರನ್ನು ಸೃಷ್ಟಿಸುವವರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಬೆಂಗಳೂರು: ನಾಯಕರನ್ನು ಸೃಷ್ಟಿಸುವವನು ನಿಜವಾದ ನಾಯಕನೇ ಹೊರತು, ಹಿಂಬಾಲಕರನ್ನು ಸೃಷ್ಟಿಸುವವರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಇಂದು ರಾಜ್ಯ ಹಾಗೂ ದೇಶದ ಪಾಲಿಗೆ ಪವಿತ್ರ ದಿನ. ಧೀಮಂತ ನಾಯಕರನ್ನು ಕೊಟ್ಟ ದಿನ. 20 ವರ್ಷಗಳ ಹಿಂದೆ ಅರಮನೆ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಸೇರಿದಂತೆ ಭಾರತ ಕ್ರಿಕೆಟ್ ತಂಡದ ಸದಸ್ಯರನ್ನು ಕರೆಸಿ ರಾಜೀವ್ ಯುವ ಸಂಘಟನೆಯನ್ನು ಸರ್ಕಾರದ ಪರವಾಗಿ ಆರಂಭಿಸಿದ್ದೆವು.
ದೇವರಾಜ ಅರಸು ಹಾಗೂ ರಾಜೀವ್ ಗಾಂಧಿ ಅವರು ಈ ದೇಶ ಹಾಗೂ ರಾಜ್ಯಕ್ಕೆ ನೀಡಿರುವ ಕೊಡುಗೆಗಳನ್ನು ಮೆಲಕು ಹಾಕುತ್ತಿದ್ದೇವೆ.ರಾಜೀವ್ ಗಾಂಧಿ ಅವರಿಗೆ ಬಹಳ ಚಿಕ್ಕ ವಯಸ್ಸಿನಲ್ಲೇ ಪ್ರಧಾನ ಮಂತ್ರಿ ಸ್ಥಾನ ಆಕಸ್ಮಿಕವಾಗಿ ಸಿಕ್ಕಿತು. ಅವರಿಗೆ ಬೆಂಗಳೂರಿನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ಸಿಗುವ ಮೂಲಕ ರಾಜಕೀಯ ಬದುಕು ಆರಂಭವಾಯಿತು. ಆಗ ನಾವು ಯುವ ಕಾಂಗ್ರೆಸ್ ಪದಾಧಿಕಾರಿಗಳಾಗಿದ್ದೆವು.
ಇದನ್ನೂ ಓದಿ : ವ್ಯಕ್ತಿ ಮಾಡಿದ ತಪ್ಪಿನಿಂದ ಬಾಂಬ್ ನಂತೆ ಬ್ಲಾಸ್ಟ್ ಆಯ್ತು Xiaomi ಫೋನ್: ಈ ತಪ್ಪನ್ನು ನೀವು ಮಾಡ್ತಿದ್ದೀರಾ?
73 ಹಾಗೂ 74 ನೇ ತಿದ್ದುಪಡಿ ಬಗ್ಗೆ ಹಲವರು ಮಾತನಾಡಿದ್ದಾರೆ. ಆಗ ನಾನು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ಜಯಪ್ರಕಾಶ್ ನಾರಾಯಣ್ ಅವರ ಹೆಸರಿನ ತರಬೇತಿ ಕೇಂದ್ರದಲ್ಲಿ ದಕ್ಷಿಣ ಭಾರತದ ಎಲ್ಲ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಪಾಲಿಕೆ ಸದಸ್ಯರುಗಳನ್ನು ಕರೆಸಿದ್ದರು. ಆಗಷ್ಟೇ ರಾಜ್ಯಪಾಲರ ಆಡಳಿತ ಹೇರಲಾಗಿತ್ತು. ಪಕ್ಷಾತೀತವಾಗಿ ಎಲ್ಲರನ್ನು ಕರೆಯಲಾಗಿತ್ತು.
ರಾಜ್ಯದಲ್ಲಿನ ವ್ಯವಸ್ಥೆ ಅಧ್ಯಯನ ಮಾಡಲು ರಾಜೀವ್ ಗಾಂಧಿ ಅವರು ಆಗಮಿಸಿದ್ದರು. ಆಗ ನಾನು ನಮ್ಮಲ್ಲಿ ಈಗಾಗಲೇ ಈ ವ್ಯವಸ್ಥೆ ಇದೆ. ಆದರೆ ಈ ತಿದ್ದುಪಡಿ ಅಗತ್ಯವೇನು ಎಂದು ಪ್ರಶ್ನೆ ಮಾಡಿದ್ದೆ. ಆಗ ಅವರು ಹೇಳಿದರು. ಈಗ ವಿದ್ಯಾರ್ಥಿ ಚುನಾವಣೆ ನಿಲ್ಲಿಸಲಾಗಿದೆ. ಈಗ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರುಗಳು ಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ನಾಯಕರನ್ನು ತಯಾರು ಮಾಡಲು ಈ ತಿದ್ದುಪಡಿ ಅಗತ್ಯ. ನಾಯಕರನ್ನು ಸೃಷ್ಟಿಸುವವನು ನಿಜವಾದ ನಾಯಕನೇ ಹೊರತು, ಹಿಂಬಾಲಕರನ್ನು ಸೃಷ್ಟಿಸುವವರಲ್ಲ ಎಂದು ತಿಳಿಸಿದರು.ಆಗ ನನಗೆ, ವಿನಯ್ ಕುಮಾರ್ ಸೊರಕೆ, ರೇವಣ್ಣ, ರಾಮಲಿಂಗಾರೆಡ್ಡಿ ಸೇರಿದಂತೆ 65 ಯುವ ನಾಯಕರಿಗೆ ಟಿಕೆಟ್ ಕೊಟ್ಟರು. ಅದರಿಂದ ನಾವು ಇಲ್ಲಿಯವರೆಗೂ ಬೆಳೆದಿದ್ದೇವೆ.ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನೆಹರೂ ಅವರು ಎಂಟು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದರು. ನಿಮ್ಮ ಪಕ್ಷದ ಯಾವುದಾದರೂ ನಾಯಕ ಜೈಲುವಾಸ ಅನುಭವಿಸಿದ್ದರೇ? ಇಂದಿರಾ ಗಾಂಧಿ ಅವರು ಜೈಲು ವಾಸ ಅನುಭವಿಸಿರಲಿಲ್ಲವೇ? ಅವರು ಈ ದೇಶದ ಐಕ್ಯತೆ, ಸಮಗ್ರತೆ ಶಾಂತಿಗಾಗಿ 33 ಗುಂಡುಗಳನ್ನು ತಿಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ನಂತರ ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಯಾದರು. ಅವರು ಕೂಡ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು.
ಇದನ್ನೂ ಓದಿ : ಅಥಣಿಯಲ್ಲಿ ಭೀಕರ ಅಪಘಾತ ಪ್ರಕರಣ : ಸ್ಥಳಕ್ಕೆ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಭೇಟಿ
ರಾಜೀವ್ ಅವರು ಪ್ರಾಣತ್ಯಾಗ ಮಾಡಿದ ನಂತರ ಸೋನಿಯಾ ಗಾಂಧಿ ಅವರಿಗೆ ಈ ಪಕ್ಷದ ನೇತೃತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿದರು. ಆಗ ಅವರು ನರಸಿಂಹರಾವ್ ಅವರನ್ನು ಪ್ರಧಾನಿ ಮಾಡಿದರು. ನಂತರ ಯುಪಿಎ ಅಧಿಕಾರಕ್ಕೆ ಬಂದಾಗ 10 ವರ್ಷ ಪ್ರಧಾನಮಂತ್ರಿ ಆಗುವ ಅವಕಾಶವಿತ್ತು. ಆದರೂ ತ್ಯಾಗ ಮಾಡಿದರು. ಇಂತಹ ತ್ಯಾಗ ಬಲಿದಾನ ಮಾಡಿದ ಕುಟುಂಬದ ಇತಿಹಾಸ ಕಿತ್ತುಹಾಕಲು ಹೊರಟಿದ್ದೀರಲ್ಲಾ ಇದು ನಿಮ್ಮಿಂದ ಸಾಧ್ಯವಿಲ್ಲ ಬೊಮ್ಮಾಯಿ ಅವರೇ.
ಇಂದು ನಾವೆಲ್ಲರೂ ದೇವರಾಜ ಅರಸು ಅವರನ್ನು ಸ್ಮರಿಸುತ್ತಿದ್ದೇವೆ. ಅವರು ರಾಜ್ಯದಲ್ಲಿ ಮಾಡಿದ ಭೂ ಸುಧಾರಣಾ ಕಾಯ್ದೆ ಆಧರಿಸಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಬಡವರಿಗೆ ಭೂಮಿ ಹಂಚಲು ನಿರ್ಧರಿಸಿದರು. ಆಗ ರಾಜ್ಯದಲ್ಲಿ 8 ಲಕ್ಷ ಜನರಿಗೆ ಭೂಮಿ ಹಂಚಲಾಯಿತು. ಬ್ಯಾಂಕ್ ಗಳ ರಾಷ್ಟ್ರೀಕರಣ ಮಾಡುವ ಮೂಲಕ ದೇಶದ ಆರ್ಥಿಕತೆಗೆ ಉತ್ತೇಜನ ತುಂಬಿದರು. ಇಂದು ದೊಡ್ಡ ಉದ್ದಿಮೆದಾರರಿಗೆ ಕೋಟ್ಯಂತರ ರೂಪಾಯಿಯಿಂದ ರೈತರವರೆಗೂ ಎಲ್ಲರಿಗೂ ಸಾಲಸೌಲಭ್ಯ ಸಿಗುತ್ತಿದೆ ಎಂದರೆ ಅದಕ್ಕೆ ಕಾರಣ ಬ್ಯಾಂಕುಗಳ ರಾಷ್ಟ್ರೀಕರಣ.
ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ವಿಧಾನಸೌಧದಲ್ಲಿ ಸಾರ್ಕ್ ಸಭೆ ಮಾಡಿದರು. ಆದರೆ ಇಂದು ಭಾರತ ದೇಶ ಶ್ರೀಲಂಕಾ, ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಗಳ ನಡುವಣ ಸಂಬಂಧ ಹೇಗಿದೆ? ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಒಗ್ಗಟ್ಟಿನಿಂದ ಬದುಕುತ್ತಿದ್ದ ನೆರೆ ರಾಷ್ಟ್ರಗಳ ಬಾಂದವ್ಯವೂ ಚೂರಾಗಿದೆ. ದೇಶದೊಳಗೆ ಸಮಾಜಗಳು ಕೂಡ ಚೂರಾಗಿವೆ.
ಬಿಬಿಎಂಪಿ ಚುನಾವಣೆ ಅವಧಿ ಮುಗಿದು 2 ವರ್ಷ ಆಗಿದೆ. ಬಿಜೆಪಿಯವರಿಗೆ ಗೆಲ್ಲುವ ವಿಶ್ವಾಸ ಇದ್ದಿದ್ದರೆ ಅವರು ಚುನಾವಣೆ ಮಾಡುತ್ತಿದ್ದರು. ಈಗ ತರಾತುರಿಯಲ್ಲಿ ಮೀಸಲಾತಿ ಮಾಡಿಕೊಂಡಿದ್ದಾರೆ. ಡಬಲ್ ಇಂಜಿನ್ ಸರ್ಕಾರ, ಉತ್ತಮ ಆಡಳಿತ, ಯೋಜನೆ ನೀಡಿದ್ದರೆ ಚುನಾವಣೆ ಮಾಡಬೇಕಿತ್ತು.
ಇನ್ನು ಈ ಸರಕಾರದ ಕಮಿಷನ್ ವಿಚಾರವಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆ ಪತ್ರ ಬರೆದರು. ಇನ್ನು ಯುವಕರ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ಸರ್ಕಾರಿ ಶಾಲೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ನಾವು ಕಟ್ಟಿ ಬೆಳೆಸಿದ್ದನ್ನು ಅವರು ಮಾರುತ್ತಿದ್ದಾರೆ. ಇಂತಹ ಅನೇಕ ಆಸ್ತಿಗಳನ್ನು ಕಾಂಗ್ರೆಸ್ ಕಟ್ಟಿದೆ. ಬಿಜೆಪಿ ಸರ್ಕಾರ ಇಂತಹ ಆಸ್ತಿಗಳನ್ನು ನಿರ್ಮಿಸುವ ಬದಲು ಮಾರಾಟ ಮಾಡಲು ಹೊರಟಿದೆ.
ಕಳೆದ ಬಾರಿ ಪಾಲಿಕೆ ಆಸ್ತಿಗಳನ್ನು ಅಡ ಇಟ್ಟಿದ್ದರು. ನಾವು ಬಂದ ನಂತರ ಅವುಗಳನ್ನು ಬಿಡಿಸಿಕೊಂಡಿದ್ದೆವು. ಈಗ ಮಾರಾಟ ಮಾಡುತ್ತಿದ್ದಾರೆ. ಬಿಜೆಪಿ ಬಂದ ನಂತರ ವಿಮಾನ, ರೈಲು, ಬಂದರು, ಬಿಹೆಚ್ ಎಲ್, ಬ್ಯಾಂಕುಗಳು, ಬಿಇಎಲ್ ಎಲ್ಲವನ್ನು ಮಾರಾಟ ಮಾಡುತ್ತಿದ್ದಾರೆ. ಇದು ನಿಮ್ಮ ನೀತಿಯೇ?
ಇಂದಿರಾ ಗಾಂಧಿ ಅವರು ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಸಂಬಂಧ ಹೊಂದಿದ್ದರು. ಆದರೆ ನೀವು ಬೇರೆ ದೇಶಕ್ಕೆ ಹೊಗಿ ಅಲ್ಲಿ ಚುನಾವಣೆಯಲ್ಲಿ ಪ್ರಚಾರ ಮಾಡುತ್ತೀರಿ. ನಿಮಗೂ ಅದಕ್ಕೂ ಏನು ಸಂಬಂಧ? ಇದೇನಾ ನಿಮ್ಮ ಅಂತಾರಾಷ್ಟ್ರೀಯ ನೀತಿ? ಕಾಂಗ್ರೆಸ್ ನ ಅವಧಿಯಲ್ಲಿ ಭಾರತ ಎಂದಾದರೂ ಬೇರೆ ದೇಶಗಳ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿತ್ತೇ? ಇಲ್ಲ. ಗಾಂಧಿಜಿ, ನೆಹರು, ಇಂದಿರಾ ಗಾಂಧಿ ಅವರ ವಿದೇಶಾಂಗ ನೀತಿಯಿಂದ ಬಲಿಷ್ಠ ರಾಷ್ಟ್ರವಾಗಿತ್ತು.
ದೇವರಾಜ ಅರಸು ಅವರು ಕೂಡ ಯುವಕರಿಗೆ ಆದ್ಯತೆ ನೀಡಿದರು. ಅವರ ಚಿಂತನೆಯೇ ರಾಜೀವ್ ಗಾಂಧಿ ಅವರ ಚಿಂತನೆ ಆಗಿತ್ತು. ನೀವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ, ನಿನ್ನೆ ಬಿಜೆಪಿ ನಾಯಕರೊಬ್ಬರು ಸಿಕ್ಕಿದ್ದರು. ನಮ್ಮ ಪಕ್ಷ ಆಂತರಿಕ ಸಮೀಕ್ಷೆಯಲ್ಲಿ 66ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿಲ್ಲ ಎಂದು ಹೇಳುತ್ತಿದ್ದರು. ನೀವು ವಿಧಾನಸೌಧದಲ್ಲಿ ಕಾಂಗ್ರೆಸ್ ಹೆಸರು ಹೇಳಿಕೊಡು ಜನಸೇವೆ ಮಾಡಬೇಕು. ಇದು ನಿಮ್ಮ ಸಂಕಲ್ಪ ಆಗಬೇಕು.
ಬಿಜೆಪಿಯವರು ದೇಶವನ್ನು ಇಬ್ಭಾಗ ಮಾಡುತ್ತಿದ್ದು, ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಕಾರ್ಯಕ್ರಮದ ಮೂಲಕ ದೇಶವನ್ನು ಒಗ್ಗೂಡಿಸಲು ಮುಂದಾಗಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ಅವರು ರಾಜ್ಯದಲ್ಲಿ 21 ದಿನಗಳ ಕಾಲ ಪಾದಯಾತ್ರೆ ಮಾಡಲಿದ್ದು, ಒಂದೊಂದು ಜಿಲ್ಲೆಗೆ ಒಂದೊಂದು ದಿನ ನಿಗದಿ ಮಾಡಲಿದ್ದು, ಆ ಜಿಲ್ಲೆಯವರು ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಬೇಕು.
ಮಾಧ್ಯಮ ಪ್ರತಿಕ್ರಿಯೆ:
ಸಿದ್ದರಾಮಯ್ಯ ಅವರ ವಿರುದ್ಧದ ಪ್ರತಿಭಟನೆ ವಿಚಾರವಾಗಿ ಮಾಧ್ಯಮದವರು ಪ್ರಶ್ನೆ ಕೇಳಿದಾಗ, ‘ಸಿದ್ದರಾಮಯ್ಯ ಅವರು ಕೇವಲ ನಮ್ಮ ಪಕ್ಷದ ನಾಯಕರಲ್ಲ. ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಹಕ್ಕಿನಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ನೀಡಲಾಗಿದೆ. ಅವರ ಯಾವುದಾದರೂ ಹೇಳಿಕೆ ಸರಿ ಇಲ್ಲ ಎನಿಸಿದ್ದಲ್ಲಿ ಅದನ್ನು ಟೀಕೆ ಮಾಡಬಹುದು. ಇದು ಪ್ರಜಾಪ್ರಭುತ್ವದ ಭಾಗ. ಆದರೆ ನೆರೆ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಸರ್ಕಾರದ ಕಣ್ಣು ತೆರೆಸಲು ಹಾನಿ ಪ್ರದೇಶಕ್ಕೆ ಭೇಟಿ ನೀಡುವುದು ಅವರ ಕರ್ತವ್ಯ. ಅವರು ಅದನ್ನು ಮಾಡಿದ್ದಾರೆ’ ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.