ಬಳ್ಳಾರಿ: ಜಿಲ್ಲಾವಾರು ಗರ್ಭಿಣಿಯರ ವಿವರ ದಾಖಲಿಸುವಂತಹ ಆರ್‍ಸಿಹೆಚ್ ಪೋರ್ಟಲ್‍ನಲ್ಲಿ ಕೇವಲ ಆಧಾರ್‍ಕಾರ್ಡ್ ಮಾತ್ರ ಮಾನ್ಯತೆ ಅಲ್ಲ, ಬದಲಾಗಿ ಜನನ ಪ್ರಮಾಣ ಪತ್ರ ಮತ್ತು ಶಾಲಾ ದೃಢೀಕರಣ ಪ್ರಮಾಣ ಪತ್ರ ಪರಿಗಣಿಸಬೇಕು ಎಂದು ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಸ್ಪಷ್ಟಪಡಿಸಿದರು.


COMMERCIAL BREAK
SCROLL TO CONTINUE READING

ಶನಿವಾರದಂದು, ನಗರದ ಜಿಲ್ಲಾ ಪಂಚಾಯತ್ ನಜೀರ್ ಸಭಾಂಗಣದಲ್ಲಿ ಮಕ್ಕಳ ರಕ್ಷಣೆ ವ್ಯವಸ್ಥೆ ಕುರಿತು ವಿವಿಧ ಇಲಾಖೆಗಳ ಸಹ ಭಾಗೀದಾರರೊಂದಿಗೆ ಶನಿವಾರ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.


ಆರ್‍ಸಿಹೆಚ್ ಪೋರ್ಟಲ್‍ನಲ್ಲಿ ಗರ್ಭೀಣಿಯರ ಮಾಹಿತಿಯನ್ನು ನೋಂದಾಯಿಸುವಲ್ಲಿ ಎಲ್ಲಾ ದಾಖಲೆಗಳನ್ನು ಪರಿಗಣಿಸಬೇಕು ಹಾಗೂ ತಪ್ಪಿಲ್ಲದಂತೆ ನಮೂದಿಸಬೇಕು ಎಂದು ಅವರು ತಿಳಿಸಿದರು.


ಬಾಲ್ಯವಿವಾಹ ನಡೆಯುವುದು ಕಂಡುಬಂದಲ್ಲಿ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳ ಪರಸ್ಪರ ಸಮನ್ವಯದೊಂದಿಗೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದರು.


ರಾಜ್ಯದಲ್ಲಿ ಶೇ.30 ರಷ್ಟು ಭ್ರೂಣಹತ್ಯೆ ಪ್ರಕರಣಗಳು ಕಂಡುಬಂದಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿಯವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ, ಜಿಪಂ ಸಿಇಒಗಳೊಂದಿಗೆ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದರಂತೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ನೋಂದಣಿ ಫಲಕ, ಹೊರರೋಗಿಗಳ ನೋಂದಣಿ ಪುಸ್ತಕ ವಹಿ, ಸ್ಕ್ಯಾನಿಂಗ್ ದರ ಹಾಗೂ ಇತರೆ ಮಾಹಿತಿಯನ್ನು ಫಲಕ ಅಥವಾ ಪೋಸ್ಟರ್ ಮೂಲಕ ಪ್ರದರ್ಶಿಸಬೇಕು ಎಂದು ಸೂಚಿಸಿದರು.


ಜಿಲ್ಲೆಯಲ್ಲಿ 2022-23ರಲ್ಲಿ 387, 2023-24ರಲ್ಲಿ 322 ಶಿಶುಗಳು ಮರಣ ಹೊಂದಿದ್ದರೆ, 2022-23ರಲ್ಲಿ 76, 2023-24ರಲ್ಲಿ 78 ತಾಯಿಯಂದಿರು ಹೆರಿಗೆ ಸಮಯದಲ್ಲಿ ಮರಣ ಹೊಂದಿದ್ದಾರೆ.


ಜಿಲ್ಲೆಯಲ್ಲಿ ಈವರೆಗೆ (19 ವರ್ಷ ಒಳಗಿನ) ಒಟ್ಟು 7936 ಬಾಲ ಗರ್ಭಿಣಿಯರು ಕಂಡುಬಂದಿದ್ದಾರೆ. 2021-22 ನೇ ಸಾಲಿನಲ್ಲಿ 2706, 2022-23 ನೇ ಸಾಲಿನಲ್ಲಿ 2881 ಮತ್ತು 2023-24 ಸಾಲಿನಲ್ಲಿ 2349 ಜನ ಬಾಲ ಗರ್ಭೀಣಿಯಾಗಿದ್ದಾರೆ ಎಂದು ತಿಳಿಸಿದರು.


ಜಿಲ್ಲೆಯಲ್ಲಿ ಒಟ್ಟು 76 ಸ್ಕ್ಯಾನಿಂಗ್ ಸೆಂಟರ್‍ಗಳಿದ್ದು, ಕಳೆದ ಮೂರು ತಿಂಗಳಲ್ಲಿ 74 ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಭೇಟಿ ನೀಡಿ ಅಲ್ಲಿನ ನ್ಯೂನ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರತಿ ತಿಂಗಳಿಗೊಮ್ಮೆ ಜಿಲ್ಲಾ ಆರೋಗ್ಯ ಸಮನ್ವಯ ಸಭೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ ಅವರು ಸಭೆಗೆ ತಿಳಿಸಿದರು.


ಇದನ್ನೂ ಓದಿ: ಅಸಮಾನತೆ ಹೋಗಲಾಡಿಸದೆ ಶೋಷಿತ ಸಮುದಾಯಗಳ ಏಳಿಗೆ ಸಾಧ್ಯವಿಲ್ಲ: ಸಿ.ಎಂ.ಸಿದ್ದರಾಮಯ್ಯ 


ಜಿಲ್ಲೆಯಲ್ಲಿ 18 ವರ್ಷದೊಳಗಿನ 64 ಮಕ್ಕಳಲ್ಲಿ ಎನ್‍ಎಸ್1 ಪಾಸಿಟವ್ ಆಗಿದ್ದು, ಅದರಲ್ಲಿ 58 ಮಕ್ಕಳು ಗುಣಮುಖರಾಗಿದ್ದಾರೆ. ಇನ್ನುಳಿದ 6 ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್‍ಬಾಬು ಅವರು ತಿಳಿಸಿದರು.


ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಮಾತನಾಡಿ, ಶಾಲೆ, ಅಂಗನವಾಡಿ ಕೇಂದ್ರ ಹಾಗೂ ವಸತಿನಿಲಯಗಳಲ್ಲಿ ಡೆಂಗ್ಯೂ ಕುರಿತಾಗಿ ಜಾಗೃತಿ ನೀಡಬೇಕು. ಲಾರ್ವಾ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು, ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು.


ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಡಿ ಬರುವ ಎಲ್ಲಾ ವಸತಿನಿಲಯಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098, ಪೊಲೀಸ್ ಸಹಾಯವಾಣಿ ಸಂಖ್ಯೆ 112 ಪ್ರದರ್ಶಿಸಬೇಕು. ದೂರು ಪಟ್ಟಿಗೆಗಳನ್ನು ಅಳವಡಿಸಬೇಕು. ಮಕ್ಕಳ ರಕ್ಷಣಾ ಸಮಿತಿ ರಚನೆ ಮಾಡಬೇಕು. ಮಕ್ಕಳ ಹಕ್ಕುಗಳ ಸಭೆ ಹಾಗೂ ಸಂಸತ್ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಜಿಲ್ಲೆಯಲ್ಲಿ ಅನಧೀಕೃತವಾಗಿ ತೆರೆದಿರುವ ಕೋಚಿಂಗ್ ಸೆಂಟರ್ ಹಾಗೂ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುವ ವಸತಿ ಶಾಲೆಗಳಿಗೆ ನೋಟಿಸ್ ಜಾರಿ ಮಾಡಬೇಕು. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆ ತರುವ ಕೆಲಸವಾಗಬೇಕು ಎಂದರು.


ಜಿಲ್ಲೆಯಲ್ಲಿ 153 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಅದರಲ್ಲಿ 110 ಮಕ್ಕಳನ್ನು ಗುರುತಿಸಿ ಪೋಷಕರ ಮನವೊಲಿಸಿ ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು. ಇದಕ್ಕೆ ಅವರು, ವಿದ್ಯಾರ್ಥಿಗಳ ಶಾಲಾ ಹಾಜರಾತಿ ಕಡ್ಡಾಯವಾಗಿ ನಿರ್ವಹಿಸಬೇಕು ಮತ್ತು ದೃಢೀಕರಣ ಮಾಡಿ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.


ಶಾಲೆಗೆ ಸಂಚರಿಸುವ ಮಕ್ಕಳ ಸುರಕ್ಷತೆಗಾಗಿ ರಾಜ್ಯ ಸರ್ಕಾರವು ‘ಸ್ಕೂಲ್ ಕ್ಯಾಬ್’ ಎಂಬ ಸುತ್ತೋಲೆ ಹೊರಡಿಸಿದ್ದು, ಶಾಲೆಗೆ ಕರೆದೊಯ್ಯುವ ವಾಹನ ಚಾಲಕರ ವಾಹನ ನೋಂದಣಿ, ಇತರೆ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ಇದಕ್ಕಾಗಿ ಕರ್ನಾಟಕ ಮೋಟಾರು ವಾಹನ ಸಾರಿಗೆ ಕಾಯ್ದೆ 2012 ತಿದ್ದುಪಡಿ 2024 ರನ್ವಯ ಸಮಿತಿಯನ್ನು ರಚಿಸಲಾಗುತ್ತದೆ. ವಾಹನ ಚಾಲಕರು ಸಮಿತಿಯಲ್ಲಿ ಒಳಗೊಂಡಿರುತ್ತಾರೆ. ಈ ಕುರಿತು ಮಾಹಿತಿ ಒದಗಿಸುವ ಕಾರ್ಯ ಮಾಡಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ತಾಲ್ಲೂಕು ತಹಶೀಲ್ದಾರರ ನೇತೃತ್ವದಲ್ಲಿ ಕಾರ್ಮಿಕ ಇಲಾಖೆ ಹಾಗೂ ಇತರೆ ಸಂಬಂಧಿಸಿದ ಅಧಿಕಾರಿಗಳ ತಂಡವು ತಿಂಗಳಲ್ಲಿ 2 ಬಾರಿ ಅನಿರೀಕ್ಷಿತ ದಾಳಿ ನಡೆಸಿ ಕಾರ್ಮಿಕ ಮಕ್ಕಳನ್ನು ಗುರುತಿಸಿ ಮುಖ್ಯ ವಾಹಿನಿಗೆ ತರಲು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.


ಜಿಲ್ಲೆಯಲ್ಲಿ ಕಳೆದ 2022 ರಲ್ಲಿ 30 ಪೋಕ್ಸೋ ಪ್ರಕರಗಳು, 2023 ರಲ್ಲಿ 52 ಮತ್ತು 2024 ರಲ್ಲಿ 29 ಪ್ರಕರಣ ಸೇರಿ ಒಟ್ಟು 119 ಪ್ರಕರಣಗಳು ದಾಖಲಾಗಿವೆ. ಪೋಕ್ಸೋ ಪ್ರಕರಣ ದಾಖಲಿಸಲು ಸಿಡಿಪಿಒ ಅವರು ಮಾಹಿತಿ ನೀಡುವುದಾಗಿದೆ. ಪ್ರಕರಣ ದಾಖಲಿಸಿ ಪರಿಶೀಲಿಸುವುದು ಪೊಲೀಸ್ ಇಲಾಖೆಯ ಅಧಿಕಾರಿಗಳ ಕರ್ತವ್ಯವಾಗುತ್ತದೆ ಎಂದು ತಿಳಿಸಿದರು.


ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗು ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮೀ ಮೈದೂರು, ಬಳ್ಳಾರಿ ನಗರ ಡಿವೈಎಸ್ಪಿ ನಂದಾರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಜಲಾಲಪ್ಪ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.